Select Your Language

Notifications

webdunia
webdunia
webdunia
webdunia

ನಾವು ನಿಜವಾಗಿಯೂ ಸ್ವತಂತ್ರರಾ?

ನಾವು ನಿಜವಾಗಿಯೂ ಸ್ವತಂತ್ರರಾ?
ಸ್ನೇಹಾ
ಭಾರತವು ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಹಲವು ಪ್ರಥಮಗಳು ಅದರ ಮಡಿಲಲ್ಲಿದೆ. ಅಂಖೆಸಂಖ್ಯೆಗಳ ರಾಜ ಸೊನ್ನೆಯನ್ನು ಕಂಡು ಹುಡುಕಿದ್ದು ಭಾರತದ ಗಣಿತಶಾಸ್ತ್ರಜ್ಞ ಆರ್ಯಭಟ.

ವಿಶ್ವದ ಪ್ರಥಮ ವಿಶ್ವವಿದ್ಯಾನಿಲಯವು ನಳಂದದಲ್ಲಿ ಕ್ರಿಸ್ತಪೂರ್ವ 700 ರಲ್ಲಿ ಆರಂಭವಾಯಿತು. ಇಲ್ಲಿ ವಿಶ್ವದ ಹತ್ತು ಸಾವಿರಕ್ಕೂ ಅಧಿಕಮಂದಿ 60ಕ್ಕೂ ವಿಷಯಗಳ ಅಧ್ಯಯನ ನಡೆಸಿದ್ದಾರೆ. ನಳಂದ ವಿಶ್ವಾವಿದ್ಯಾಲಯವನ್ನು ಕ್ರಿಸ್ತಪೂರ್ವ ನಾಲ್ಕನೇ ಶತಮಾನದಲ್ಲಿ ನಿರ್ಮಿಸಲಾಗಿತ್ತು. ನಾವು ಆಗಲೇ ಶೈಕ್ಷಣಿಕವಾಗಿ ವಿಶ್ವದಲ್ಲಿ ಪ್ರಮುಖಸ್ಥಾನವನ್ನೇ ಹೊಂದಿದ್ದೆವು.

ND
ಇದೇವೇಳೆಯು ಆಯುರ್ವೇದವು ಆರಂಭಿಕ ವೈದ್ಯಕೀಯ ಶಾಲೆ ಎಂಬ ಹೆಮ್ಮೆ ಇದೆ. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಸಾಕಷ್ಟು ಪ್ರಥಮಗಳಿವೆ. ಇದೇವೇಳೆ ಇನ್ನೊಂದು ಪ್ರಮುಖ ವಿಚಾರವೆಂದರೆ, ಭಾರತ ತನ್ನ ಸಾವಿರ ವರ್ಷಗಳ ಇತಿಹಾಸದಲ್ಲಿ ತಾನಾಗಿ ಯಾರ ಮೇಲೂ ದಂಡೆತ್ತಿ ಹೋಗಿಲ್ಲ.

ನಮ್ಮ ಇತಿಹಾಸವು ಪ್ರಾಚೀನ ಇತಿಹಾಸ, ಮಧ್ಯಕಾಲೀನ ಇತಿಹಾಸ, ಮೊಗಲ್ ಇತಿಹಾಸದ ಬಳಿಕ ಭಾರತ ಕಂಪೆನಿ ಆಡಳಿತದ ಇತಿಹಾಸವನ್ನು ಹೊಂದಿದೆ. ವ್ಯಾಪಾರಕ್ಕಾಗಿ ಬಂದು ಇಲ್ಲಿ ಝಂಡಾಹೂಡಿದ ಫ್ರೆಂಚರು, ಡಚ್ಚರು ಇವರ ಬಳಿಕ ಇಂಗ್ಲೀಷರು ಅತ್ಯಂತ ಸಿರಿವಂತಿಗೆಯಿಂದ ಕೂಡಿದ್ದ ಭಾರತದ ಮೇಲೆ ಪ್ರಾಬಲ್ಯ ಮೆರೆದು ಎಷ್ಟು ಸಾಧ್ಯವೋ ಅಷ್ಟು ದೋಚಿದರು.

ನಮ್ಮ ಪೂರ್ವಜರು ತಮ್ಮ ಧನ ಮಾನ ಪ್ರಾಣ ತ್ಯಾಗಗಳ ಮೂಲಕ ರಾಷ್ಟ್ರಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ನಮ್ಮ ಆಡಳಿತ ವ್ಯವಸ್ಥೆ ನಮ್ಮ ಕೈಗೆ ಬಂದಾಗ ಪ್ರಜಾಪ್ರಭುತ್ವ ಎಂಬ ವ್ಯವಸ್ಥೆಯನ್ನು ಹುಟ್ಟು ಹಾಕಿಕೊಂಡ ನಮ್ಮದು ಪ್ರಜೆಗಳೇ ಪ್ರಭುಗಳಾಗುವ ಅವಕಾಶದ ರಾಷ್ಟ್ರ. ಎಷ್ಟು ಸುಂದರ ಪರಿಕಲ್ಪನೆ.

ವಿಶ್ವಕ್ಕೆ ಮಹಾನ್‌ಮಹಾನ್ ಕೊಡುಗೆ ನೀಡಿರುವ ಭರತಖಂಡ ಸರ್ವಸ್ವತಂತ್ರವಾಗಿ ಆರು ದಶಗಳೇ ಸಂದಿವೆ. ಆದರೆ ಈ ಗಣತಂತ್ರವೆಂಬ ಸ್ವತಂತ್ರ ರಾಷ್ಟ್ರದಲ್ಲಿ ನಾವು ನಿಜವಾಗಿಯೂ ಸ್ವತಂತ್ರವಾಗಿದ್ದೆವೆಯೇ ಎಂಬ ಪ್ರಶ್ನೆ ಏಳುತ್ತಿದೆ. ಒಂದು ಕಾಲದಲ್ಲಿ ಅನುಮಾನದಿಂದಲೂ ನಿರ್ಲಕ್ಷದಿಂದಲೂ ನಮ್ಮನ್ನು ಕಾಣುತ್ತಿದ್ದ ಅಂತಾರಾಷ್ಟ್ರೀಯ ಸಮುದಾಯಗಳಿಂದು ನಮ್ಮ ಪ್ರಗತಿಯನ್ನು ಬೆರಗಿನಿಂದ ನೋಡುತ್ತಿವೆ. ಇದಕ್ಕೆ ನಾವು ಹೆಮ್ಮೆಪಡಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇಷ್ಟು ಸುದೀರ್ಘ ಅವಧಿಗೆ ಹೋಲಿಸಿದರೆ ಅಪಾರವಾದ ಸಂಪನ್ಮೂಲವನ್ನು ಹೊಂದಿರುವ ನಮಗೆ ಇಷ್ಟೇ ಪ್ರಗತಿ ಸಾಕೇ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ.

ನಾವು ಎಷ್ಟರ ಮಟ್ಟಿಗೆ ಸ್ವತಂತ್ರರು?
ಕಳೆದ ನವೆಂಬರ್ ತಿಂಗಳ 26ರಂದು ಭಾರತದ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿದರು. ಈ ಖದೀಮರು ಯಾರು ಎಂಬುದು ವಿಶ್ವಕ್ಕೇ ಗೊತ್ತು. ಆದರೆ ಇವರ ವಿರುದ್ಧ ಕ್ರಮಕೈಗೊಳ್ಳಲು ನಾವು ಸ್ವತಂತ್ರರೇ? ಎಲ್ಲದಕ್ಕೂ ನಾವು ಅಮೆರಿಕದತ್ತ ನೋಡುತ್ತೇವೆ. ಉಗ್ರರನ್ನು ಮಟ್ಟ ಹಾಕಲು ನಮ್ಮ ಪಕ್ಷಗಳು ಸ್ವತಂತ್ರವಾಗಿವೆಯೇ? ಇಲ್ಲ. ಇದಕ್ಕೆ ವೋಟ್ ಬ್ಯಾಂಕ್ ಅಡ್ಡಿಯಾಗುತ್ತದೆ. ಮುಂದೇನು ಮಾಡಬೇಕು ಎಂಬುದಕ್ಕೆ ನಮ್ಮನ್ನು ಆಳುವವರು, ಅವರನ್ನು ಆಳುತ್ತಿರುವ ಅಮೆರಿಕದತ್ತ ದೃಷ್ಟಿ ಬೀರಿ ಕೂರುತ್ತಾರೆ. ನಿಮಗೆ ನೆಪಿರಬಹುದು ಆಗ ಅರುಣ್ ಶೌರಿ ಅವರು "ಪ್ರತಿಯೊಂದಕ್ಕೂ ಮಮ್ಮಿ(ಅಮೆರಿಕ) ಬಳಿ ಓಡೋದನ್ನು ನಿಲ್ಲಿಸಿ" ಎಂದಿದ್ದರು. ಅವರು ವಿರೋಧಪಕ್ಷದಲ್ಲಿದ್ದುಕೊಂಡು ಈ ಮಾತು ಹೇಳಿದ್ದು ಹೌದು. ಆದರೆ ಅದು ಎಷ್ಟೊಂದು ವಾಸ್ತವ? ಅಫ್ ಕೋರ್ಸ್ ನಮ್ಮ ನಡೆಯನ್ನು ಅಂತಾರಾಷ್ಟ್ರೀಯ ಸಮೂಹವು ಎಚ್ಚರಿಕೆಯಿಂದ ಗಮನಿಸುತ್ತಿರುತ್ತದೆ. ಆದರೆ ನಮ್ಮ ರಕ್ಷಣೆಗೆ ನಾವು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೋ ಬೇಡವೋ? ಅಮೆರಿಕದ ವಿಶ್ವವಾಣಿಜ್ಯ ಕೇಂದ್ರದ ಮೇಲೆ ಭಯೋತ್ಪಾದನಾ ದಾಳಿ ಆದಾಗ ಅದರ ನಡೆ ಹೇಗಿತ್ತು. ಆಲ್ಲಿ ಯಾಕೆ ಮತ್ತೆ ದಾಳಿ ಆಗಿಲ್ಲ ಎಂಬುದಾಗಿ ಪ್ರಜೆಗಳು ಎತ್ತುತ್ತಿರುವ ಪ್ರಶ್ನೆ ಸರಿಇಲ್ವೇ?

ಸ್ವಾತಂತ್ರ್ಯದ ವಿಚಾರ ಬಂದಾಗ ನಾವು ಸಾಮಾನ್ಯ ಪ್ರಜೆಗಳು ನಮ್ಮ ಸ್ವಾತಂತ್ರ್ಯವನ್ನು ಸರಿಯಾಗಿ ಬಳಸಿಕೊಳ್ಳುತ್ತಿದ್ದೇವೆಯೇ? ಇದಕ್ಕೆ ಒಂದು ಸಣ್ಣ ಉದಾಹರಣೆ ನೆನಪಿಸೋಣ. ಮತ್ತೆ ಅದೇ ಮುಂಬೈ ದಾಳಿಯ ಸಂದರ್ಭದ ಉದಾಹರಣೆ ನೀಡುವುದಾದರೆ, ಈ ವೇಳೆ ಉಗ್ರವಾದಿಗಳ ದಾಳಿಯಿಂದ ಕಂಗೆಟ್ಟಿದ್ದ ಮುಂಬೈ ಜನತೆ ಬೀದಿಗಿಳಿದರು. ಆ ಧರ್ಮ ಈ ಧರ್ಮ, ಬಡವ ಬಲ್ಲಿದ ಎಂಬ ಹಂಗನ್ನು ತೊರೆದು ಜನರು ಬೀದಿಗಿಳಿದು ತಮ್ಮ ಒಗ್ಗಟ್ಟು ಪ್ರದರ್ಶಿಸಿ ತಮ್ಮ ರಕ್ಷಣೆಗೆ ಒತ್ತಾಯಿಸಿದ್ದರ ಪ್ರತಿಫಲವೇನು ಎಂಬುದನ್ನು ನಾವು ಮರೆತಿಲ್ಲ. ಆಡಳಿತಕ್ಕೆ ಚಳಿ ಹುಟ್ಟಿದ್ದು ದಿಟ. ಕೆಲವು ಮಂತ್ರಿಗಳನ್ನು ಮನೆಗೆ ಕಳುಹಿಸಿದರೆ, ಮತ್ತೆ ಕೆಲವರು ಸ್ವಯಂಪ್ರೇರಣೆಯಿಂದ ಪೀಠಬಿಟ್ಟು ಕೆಳಕ್ಕಿಳಿದರು. ಇಂತಹ ಒಗ್ಗಟ್ಟು ನಮಗೆ ಯಾವಾಗಲೂ ಬೇಡವೇ?

ಮುಂಬೈದಾಳಿಯ ಕ್ಷಣದಿಂದ ಪಾತಕಿ ಪಾಕಿಸ್ತಾನವೇ ಇದಕ್ಕೆ ಕಾರಣ ಎಂದು ನಮ್ಮ ಸ್ವತಂತ್ರ ಭಾರತ ಹೇಳುತ್ತಲೇ ಬಂತು. ಉಗ್ರರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ತನಕ ಮತ್ತು ಇದರ ರೂವಾರಿಗಳನ್ನು ಕಾನೂನಿನ ಕಟಕಟೆಗೆ ಎಳೆದು ತರುವ ತನಕ ಪಾಕಿಸ್ತಾನದದೊಂದಿಗೆ ಯಾವುದೇ ಮಾತುಕತೆ ಇಲ್ಲವೇ ಇಲ್ಲ ಎಂಬುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಬಹುತೇಕ ಎಲ್ಲಾ ಪ್ರಮುಖ ಕೇಂದ್ರ ಸಚಿವರು ಧಿಗಿಣ ಹೊಡೆದಿದ್ದರು.

ಆದರೆ ಅದೇನಾಯಿತೋ, ಈಜಿಫ್ಟ್‌ನಲ್ಲಿ ಶೃಂಗ ಸಮ್ಮೇಳನಕ್ಕೆ ತೆರಳಿದ ವೇಳೆ, ಪ್ರಧಾನಿ ಸಿಂಗ್ ಪಾಕ್ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಮಾತುಕತೆಗೆ ಸಿದ್ಧವೆಂಬ ಮುಕ್ತತೆಯ ಸುಳಿವು ನೀಡಿದರು. ಇದಕ್ಕೂ ಮುಂಚೆ ರಶ್ಯಾ ಸಮ್ಮೇಳನಕ್ಕೆ ತೆರಳಿದ್ದ ವೇಳೆ ಅಮೆರಿಕ ಅಧ್ಯಕ್ಷ ಅಸಿಫ್ ಅಲಿ ಜರ್ಧಾರಿಯವರ ತಲೆ ಕಾಣುತ್ತಲೇ "ನೀವು ಉಗ್ರರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು" ಎಂದು ಎಚ್ಚರಿಕೆ ನೀಡಿದ್ದರು. ಮಾಧ್ಯಮದವರ ಎದುರೇ ನೀಡಿದ ಈ ಎಚ್ಚರಿಕೆ ಜರ್ದಾರಿಗೆ ಇರಿಸುಮುರಿಸುಂಟು ಮಾಡಿತ್ತು. ಇಂತಿಪ್ಪ ನಮ್ಮ ಪ್ರಧಾನಿಗಳು ಕೈರೋದಲ್ಲಿ ಮೆತ್ತಗಾಗಲು ಕಾರಣವೇನು?

ಅಮೆರಿಕ ವಿದೇಶಾಂಗ ಅಧೀನ ಕಾರ್ಯದರ್ಶಿ ವಿಲಿಯಂ ಬರ್ನ್ಸ್ ಅವರು ಭಾರತಕ್ಕೆ ಭೇಟಿ ನೀಡಿದ್ದಾಗ ಒಬಾಮಾ ಸಂದೇಶವಿರುವ ಲಕೊಟೆಯೊಂದನ್ನು ಭಾರತದ ಪ್ರಧಾನಿಗೆ ನೀಡಿದ್ದರು. ಬರ್ನ್ಸ್ ಅವರ ಮಿಕ್ಕೆಲ್ಲ ಕಾರ್ಯಕ್ರಮಗಳ ಕ್ಷಣಕ್ಷಣದ ವರದಿಗಳು ಬಿತ್ತರವಾಗಿದ್ದರೂ, ಆ ಲಕೋಟೆಯೊಳಗೆ ಏನಿತ್ತು ಎಂಬುದು ಯಾರಿಗೂ ಗೊತ್ತಾಗಿಲ್ಲ. ಆದರೆ ಈ ಲಕೋಟೆಯ ಮಹಾತ್ಮೆಯೇ ಭಾರತವು ಪಾಕ್‌ನೊಂದಿಗೆ ಮಾತುಕತೆಗೆ ಮುಕ್ತವಾಗಲು ಕಾರಣ ಎಂಬುದಾಗಿ ಹೇಳಲಾಗುತ್ತಿದೆ. ಅತ್ತ ಆ ಪಾಕಿಸ್ತಾನ, (ಅದೂ ಭಾರತದಿಂದ ಮುರಿದುಕೊಂಡು ಹೋದ ಸ್ವತಂತ್ರ ರಾಷ್ಟ್ರವೇ) ನಮ್ಮ ರಾಷ್ಟ್ರಕ್ಕೂ ನಿಮ್ಮಲ್ಲಿ ನಡೆದ ಮುಂಬೈದಾಳಿಗೂ ಸಂಬಂಧ ಇಲ್ಲವೇಇಲ್ಲ ಎಂಬ ರಾಗ ಎಳೆಯುತ್ತಾ ಬಂದಿದ್ದು, ಬಳಿಕ ದಾಳಿಯ ವೇಳೆ ಜೀವಂತ ಸೆರೆಸಿಕ್ಕಿರುವ ಏಕೈಕ ಉಗ್ರ ಕಸಬ್ ಪಾಕ್ ಪ್ರಜೆ ಎಂದು ಒಪ್ಪಿಕೊಳ್ಳುವಷ್ಟು ಮೆತ್ತಗಾಯಿತು. ಇದೆಲ್ಲಕ್ಕೂ ದೊಡ್ಡಣ್ಣನ ಪ್ರಭಾವ ಕಾರಣವೇ?

ಕೈರೋದಲ್ಲಿ ಪಾಕಿಸ್ತಾನದ ಜತೆ ನೀಡಿದ ಜಂಟಿ ಹೇಳಿಕೆಯಲ್ಲಿ ಬಲೂಚಿಸ್ಥಾನ ಪ್ರಸ್ತಾಪವನ್ನು ಪಾಕಿಸ್ತಾನ ತುರುಕಿದ್ದನ್ನು ಸಮರ್ಥಿಸಿಕೊಳ್ಳಲು ಪ್ರಧಾನಿ ಆಂಡ್ ಕೋ ಹೆಣಗಾಡಿದ್ದನ್ನು ದೇಶಕಂಡಿದೆ. ಇದನ್ನು ಸಮರ್ಥಿಸಿಕೊಳ್ಳುತ್ತಾ ನಮ್ಮನ್ನು ಆಳುವ ನಾಯಕರು ತಮ್ಮ ಸ್ವತಂತ್ರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರಾ? ವೈಯಕ್ತಿಕ ನಿಲುವಿಗಿಂತ ಪಕ್ಷದ ನಿಲುವು ದೊಡ್ಡದು. ಈಗ ಹೇಳಿ ತಮ್ಮ ಆತ್ಮಸಾಕ್ಷಿಯಂತೆ ನಡೆದುಕೊಳ್ಳು ನಮ್ಮ ನಾಯಕರು ಸ್ವತಂತ್ರರೇ?

ದೇಶಸ್ವತಂತ್ರವಾದ ಈ ಉತ್ಸವವನ್ನು ನಾವು ಇತ್ತೀಚಿನ ವರ್ಷಗಳಲ್ಲಿ ಉಗ್ರರ ಬೆದರಿಕೆಯಡಿಯೇ ಆಚರಿಸುತ್ತಿದ್ದೇವೆ. ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿಯವರು ಬಂಧೂಕಿನ ಭದ್ರತೆಯ ಆಶ್ರಯದಲ್ಲೇ ಮಾತನಾಡುತ್ತಾರೆ. ಅಧಿಕಾರ ನಡೆಸುತ್ತಿರುವ ಎಷ್ಟು ನಾಯಕರು ತಮ್ಮ ಆಳ್ವಿಕೆಯ ನೆಲದಲ್ಲಿ ಯಾವುದೇ ಬೆಂಗಾವಲಿಲ್ಲದೆ ಸ್ವತಂತ್ರವಾಗಿ ಓಡಾಡುತ್ತಾರೆ?

ಈ ಬರಹದ ಆರಂಭದಲ್ಲಿ ಸಾವಿರ ವರ್ಷದ ಇತಿಹಾಸದಲ್ಲಿ ತಾನಾಗಿ ಯಾರ ಮೇಲೂ ದಂಡೆತ್ತಿ ಹೊಗಿಲ್ಲ ಎಂದು ಹೇಳಲಾಗಿದೆ. ಈಗ ಕೊನೆಯಲ್ಲಿ ಹೇಳುವುದಾದರೆ, ತನ್ನಮೇಲೆ ದಂಡೆತ್ತಿ ಬಂದವರನ್ನೂ ಭಾರತ ಸರಿಯಾಗಿ ಹತ್ತಿಕ್ಕುತ್ತಿಲ್ಲ ಎಂಬುದು ಪ್ರಜೆಗಳ ಅಭಿಪ್ರಾಯ.

Share this Story:

Follow Webdunia kannada