Select Your Language

Notifications

webdunia
webdunia
webdunia
webdunia

ಇವರ ಮನಸ್ಥಿತಿಗೊಂದಿಷ್ಟು....

ಇವರ ಮನಸ್ಥಿತಿಗೊಂದಿಷ್ಟು....
ಕೃಷ್ಣವೇಣಿ ಕುಂಜಾರು
ND
ನಾವು ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸುತ್ತೇವೆ.

ಮೊನ್ನೆ ಕಾಬೂಲ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮೇಲೆ ದಾಳಿ ನಡೆದಾಗ ನಮ್ಮವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿಯವರ ಬಾಯಿಯಿಂದ ಉದುರಿದ ನುಡಿ ಮುತ್ತುಗಳಿವು. ಇದೊಂದೇ ಸಲವಲ್ಲ ಅದೆಷ್ಟು ಬಾರಿ ಭಾರತ ಭಯೋತ್ಪಾದಕರ ದಾಳಿಗೆ ನಲುಗಿತ್ತೋ ಅಷ್ಟೂ ಸಲವೂ ನಮ್ಮ ನಾಯಕರು ಇದೇ ಡೈಲಾಗನ್ನು ರಿಪಿಟೇಷನ್ ಮಾಡ್ತಾನೇ ಇದ್ದಾರೆ. ನಮ್ಮ ದೇಶದ ಮುಗ್ದ ಜನರ ಪ್ರಾಣವನ್ನು ಎಗ್ಗಿಲ್ಲದೆ ರಕ್ತ ಬೀಜಾಸುರರಂತೆ ಹೀರ್ತಾನೇ ಇದ್ದಾರೆ.

ಅವರಿಗೂ ಗೊತ್ತಾಗಿ ಹೋಗಿದೆ ಭಾರತದ ನಾಯಕರು ಯಾವುದರಲ್ಲಿ, ಎಷ್ಟು ದುರ್ಬಲರೆಂದು. ನಮ್ಮ ದೇಶದ ಪ್ರತೀ ಮೂಲೆ ಮೂಲೆಯನ್ನು ನಮಗಿಂತ ಚೆನ್ನಾಗಿ ಭಯೋತ್ಪಾದಕರು ಬಲ್ಲರು.

ಜಿಹಾದ್, ಕಾಶ್ಮೀರವನ್ನು ಸ್ವಾತಂತ್ರ್ಯಗೊಳಿಸುವ ನೆಪದಲ್ಲಿ ಅದೆಷ್ಟು ಮಾರಣ ಹೋಮ ನಡೆದವೋ..ಮೊದಲೆಲ್ಲ ಕಾಶ್ಮೀರಕ್ಕೆ ಮಾತ್ರ ಮೀಸಲಾಗಿದ್ದ ಭಯೋತ್ಪಾದಕ ಕೃತ್ಯಗಳ ಭೀತಿ ಈಗ ಭಾರತದ ಹಳ್ಳಿಗೂ ಹಬ್ಬಿದೆಯೆಂದರೆ ಪರಿಸ್ಥಿತಿ ಎಷ್ಟು ಗಂಭೀರವೆಂದು ಸಣ್ಣ ಮಗುವಿಗೂ ಗೊತ್ತಾಗಿಬಿಟ್ಟಿದೆ. ಆದರೂ ನಮ್ಮನ್ನಾಳುವವರಿಗ್ಯಾಕೆ ಇದೆಲ್ಲ ಸಾಮಾನ್ಯ ಸಂಗತಿಗಳಾಗಿವೆಯೋ ಗೊತ್ತಿಲ್ಲ.

ಹೆಚ್ಚೇಕೆ ನಮ್ಮ ಸಂವಿಧಾನದ ಮಾತ್ರವಲ್ಲ ಇಡಿ ದೇಶದ ಅಭಿಮಾನದ ಪ್ರತೀಕ ಪಾರ್ಲಿಮೆಂಟ್ ಅಂಗಳದಲ್ಲಿ ರಕ್ತಪಿಪಾಸುಗಳು ಗುಂಡಿಕ್ಕಲು ಹೊರಟಾಗಲೂ ನಮ್ಮ ನಾಯಕರದ್ದು ಮತ್ತದೇ ಕೆಲಸಕ್ಕೆ ಬಾರದ ಖಂಡನೆಗಳಿತ್ತಷ್ಟೇ ಹೊರತು ಮತ್ತೇನೂ ಇರಲಿಲ್ಲ. ಇದಿಷ್ಟೂ ಸಾಲದೆಂಬಂತೆ ಅಂದು ಆ ದುಷ್ಕೃತ್ಯವೆಸಗುವಲ್ಲಿ ಪ್ರಧಾನ ಪಾತ್ರವಹಿಸಿದ್ದ ಅಫ್ಜಲ್ ಗುರುವಿನ ಮರಣದಂಡನೆಯನ್ನು ಇನ್ನೂ ಮುಂದೂಡುತ್ತಾ, ಆತನನ್ನೂ ರಕ್ಷಿಸುವ ನಮ್ಮ ರಾಜಕಾರಣಿಗಳ ಮನಸ್ಥಿತಿಗೆ ಏನನ್ನಬೇಕೋ ಗೊತ್ತಿಲ್ಲ. ಅತ್ತ ಪಾಕ್ ಜೈಲಲ್ಲಿ ಶಿಕ್ಷೆ ಅನುಭವಿಸುತ್ತಿರುವ ಸರಬ್ಜಿತ್ ಸಿಂಗ್ ಇವರಿಗೆ ಲೆಕ್ಕಕ್ಕೇ ಇಲ್ಲ.ಎಷ್ಟಾದರೂ ಮನೆಗೆ ಬಂದವ ಶತ್ರುವೇ ಆದರೂ ಅತಿಥಿಯಂತೇ ಸತ್ಕಾರ ಮಾಡಬೇಕೆಂಬ ಭಾರತೀಯ ಪರಂಪರೆಯವರಲ್ಲವೇ ಇವರೂ?

ವಿಷ ಬೀಜ ಮೊಳಕೆಯಲ್ಲೇ ಚಿವುಟದಿದ್ರೇನೇ ಅದು ಮರವಾಗೋದು ಎಂಬ ಸತ್ಯ ನಮ್ಮನ್ನಾಳುವವರಿಗೇಕೆ ಅರ್ಥವಾಗಲಿಲ್ಲ?

ಅಂದು ಬಾಂಗ್ಲಾದೇಶ ಪಾಕಿಸ್ತಾನದ ಕೈಯಲ್ಲಿ ನಲುಗುತ್ತಿದ್ದಾಗ ನಮ್ಮದೇ ದೇಶವೇನೋ ಎಂಬಂತೆ ಸಹಾಯ ಮಾಡಿ ನಿರಾಶ್ರಿತರಿಗೆ ಆಶ್ರಯ ಕೊಟ್ಟ ಭಾರತದ ಮೇಲೆ ಇಂದು ಅದೇ ಬಾಂಗ್ಲಾದ ಉಗ್ರರು ಪಾಕ್ ಉಗ್ರರ ಜತೆ ಸೇರಿ ಭಾರತಕ್ಕೇ ಕೊಳ್ಳಿ ಇಡುವ ಕೆಲಸ ಮಾಡಿದರೂ ನಾವು ಮಾತಾಡಲ್ಲ. ಆದರೆ ಅದೇ ಬಾಂಗ್ಲಾದವರು "ಭಾರತದದಲ್ಲಿ ಪ್ರತಿ ಭಯೋತ್ಪಾದಕ ಕೃತ್ಯ ನಡೆದಾಗಲೂ ಒಂದು ಹರಕೆಯ ಕುರಿ ಬೇಕಾಗುತ್ತದೆ" ಎನ್ನುವಷ್ಟರ ಮಟ್ಟಿಗೆ ಬೆಳೆದು ಬಿಟ್ಟಿದ್ದಾರೆ.

ಇರಾನ್‌ನಂತಹ ಸಣ್ಣ ದೇಶವೂ ಅಮೇರಿಕಾದ ದಾರ್ಷ್ಠ್ಯದ ಮಾತುಗಳಿಗೆ ಸೊಪ್ಪು ಹಾಕೋದಿಲ್ಲ. ಆದರೆ ಅದೇ ನಮ್ಮ ನಾಯಕರು ಅಮೆರಿಕಾಕ್ಕೆ ಯಾಕಷ್ಟು ಅನಗತ್ಯ ದಾಸರಾಗುತ್ತಾರೋ ತಿಳಿಯೋದಿಲ್ಲ. ನಮ್ಮಲ್ಲಿಂದ ರಫ್ತುಗೊಳ್ಳುವ ಮಾವಿನ ಹಣ್ಣುಗಳಲ್ಲಿ ಒಂದು ಗಾಯವಾಗಿದ್ದರೂ ವಹಿವಾಟು ನಿಲ್ಲಿಸುವ ಅಮೇರಿಕಾದ ಉತ್ಪನ್ನಗಳಿಂದ ಗಂಭೀರ ಅನಾರೋಗಕ್ಕೆ ತುತ್ತಾದರೂ ನಾವು ಅಲ್ಲಿನ ವಸ್ತುಗಳನ್ನು ಆಮದು ಮಾಡಿಕೊಳ್ಳೋದನ್ನು ನಿಲ್ಲಿಸೋದಿಲ್ಲ ಯಾಕೆ?

ಭಾರತಕ್ಕೆ ಸ್ವಾತಂತ್ರ್ಯ ಬಂದು ಆರು ದಶಕಗಳ ಮೇಲಾಯಿತು. ಯಃಕಶ್ಚಿತ್ ಉಗ್ರರ ದಾಳಿಯನ್ನು ಹಿಮ್ಮೆಟ್ಟಲು ನಮ್ಮ ನಾಯಕರು ನೀಡುವ ಹೇಳಿಕೆಗಳು, ಪಡಿಪಾಟಲುಗಳನ್ನು ಕಂಡರೆ ನಮ್ಮ ಶಕ್ತಿಯ ಬಗ್ಗೆ ನಮಗೇ ಸಂಶಯಮೂಡುತ್ತದೆ, ಅಲ್ಲ ಮೂಡುವಂತೆ ಮಾಡುತ್ತಾರೆ ಈ ನಾಯಕರುಗಳು. ಸದಾ ಇನ್ನೊಂದು ದೇಶದ, ಗುಂಪಿನ ಭಯದಲ್ಲಿರುವ ನಾವು ಎಷ್ಟರ ಮಟ್ಟಿಗೆ ಸ್ವತಂತ್ರರು? ಯೋಚಿಸಬೇಕಾಗಿದೆ.

ನಮ್ಮ ಸ್ವಾತಂತ್ರ್ಯವನ್ನು ಯಾರೋ ಕಸಿದುಕೊಂಡಿದ್ದಾರೇನೋ ಎಂದೆನಿಸುವುದಿಲ್ಲವೇ ನಿಮಗೆ?

ಯಾವಾಗ ನಮ್ಮನ್ನಾಳುವವರು ಬರೇ 'ಖಂಡನೆ'ಯ ಬೊಗಳೆ ಮಾತನ್ನು ಬಿಟ್ಟು ದೇಶ ಉದ್ಧಾರ ಮಾಡುವತ್ತ ಗಮನಹರಿಸುತ್ತಾರೋ ಆಗಲೇ ನಾವು ಸ್ವತಂತ್ರರಾಗಬಹುದು. ಆದರೆ ಆ ಕಾಲ ಬರುವುದು ಯವಾಗಲೋ? ಇರಲಿ ಏನೇ ಆದರೂ 'ಮೇರಾ ಭಾರತ್ ಮಹಾನ್' ಅಲ್ವಾ?

Share this Story:

Follow Webdunia kannada