Select Your Language

Notifications

webdunia
webdunia
webdunia
webdunia

62 ವರ್ಷ ಕಳೆಯಿತು, ಅದೇ ಕಥೆ, ಅದೇ ವ್ಯಥೆ

62 ವರ್ಷ ಕಳೆಯಿತು, ಅದೇ ಕಥೆ, ಅದೇ ವ್ಯಥೆ
WD
WD
ಗುಣವರ್ಧನ ಶೆಟ್ಟಿ
1947, ಆಗಸ್ಟ್ 15 ಬ್ರಿಟಿಷರ ದಾಸ್ಯದಿಂದ ಮುಕ್ತಿ ಪಡೆದ ದಿನ. ದಬ್ಬಾಳಿಕೆಯಿಂದ ಆಳಿದ ಬ್ರಿಟಿಷರನ್ನು ಭಾರತದಿಂದ ತೊಲಗಿಸಿದ ದಿನ. ಅಂದು ಸ್ವಾತಂತ್ರ್ಯ ಗಳಿಸಲು ನೆತ್ತರು ಹರಿಸಿದವರು ಎಷ್ಟೋ ಜನ. ತ್ಯಾಗ, ಬಲಿದಾನ ಮಾಡಿದವರು ಎಷ್ಟೋ ಜನ. ಆಗ ಜನರಲ್ಲಿ ದೇಶಪ್ರೇಮ, ಸ್ವಾಭಿಮಾನ ನೆಲೆಸಿತ್ತು. ನಮ್ಮ ತಾಯ್ನಾಡು, ನಮ್ಮ ತಾಯ್ಡುಡಿಗಳ ಬಗ್ಗೆ ಅಭಿಮಾನ ತುಂಬಿ ತುಳುಕುತ್ತಿತ್ತು.

ನಮ್ಮ ದೇಶ ಸ್ವಾತಂತ್ರ್ಯ ಗಳಿಸಿ 62 ವರ್ಷಗಳು ಗತಿಸಿಹೋಗಿವೆ. 62 ವರ್ಷಗಳಲ್ಲಿ ನಮ್ಮ ಸಾಧನೆಯೇನು? ಅಂದಿನ ದೇಶಪ್ರೇಮದ ಕಿಚ್ಚು ಈಗಲೂ ಹೊಗೆಯಾಡುತ್ತಿದೆಯೇ? ಸ್ವಾತಂತ್ರ್ಯದ ಬಳಿಕ ನಾವು ಗಳಿಸಿದ್ದೆಷ್ಟು?ಉಳಿಸಿದ್ದೆಷ್ಟು? ಸ್ವಾತಂತ್ರ್ಯದ ನಂತರ ದೇಶಕ್ಕುಂಟಾದ ಒಳಿತು, ಕೆಡಕುಗಳೇನು? ಸ್ವಾತಂತ್ರ್ಯದ ನಂತರದ ದೇಶದ ಸ್ಥಿತಿಗತಿಯನ್ನು ಅವಲೋಕಿಸುತ್ತಾ ಹೋದರೆ ಕೆಳಗಿನ ವಾಸ್ತವಿಕ ಚಿತ್ರಣ ಬಿಚ್ಚಿಕೊಳ್ಳುತ್ತದೆ.

ಜನಸಂಖ್ಯಾ ಸ್ಫೋಟ:

ಜನತೆ ನಾ ಮುಂದು ತಾ ಮುಂದು ಎಂದು ಜನಸಂಖ್ಯಾ ಸ್ಫೋಟಕ್ಕೆ ತಮ್ಮದೇ ಆದ ಕೊಡುಗೆ ಸಲ್ಲಿಸಿದ್ದಾರೆ. "ಒಂದು ಬೇಕು, ಎರಡು ಸಾಕು" ಕುಟುಂಬ ಯೋಜನೆ ಮಂತ್ರ ಅತಂತ್ರವಾಯಿತು. ಹೊಟ್ಟೆಗಿಲ್ಲದಿದ್ದರೂ ಕೈಗೊಂದು ಕಾಲಿಗೊಂದು ಮಕ್ಕಳುಮರಿ ಎನ್ನುವಂತಾಗಿದೆ. ಜನಸಂಖ್ಯಾ ಸ್ಫೋಟದಲ್ಲಿ ಗಿನ್ನೆಸ್ ದಾಖಲೆ ಬರೆಯಲು ಭಾರತ ನಾಗಾಲೋಟದಲ್ಲಿ ಮುನ್ನುಗ್ಗಿದೆ. ಸರ್ಕಾರ ಮಾತ್ರ ಜನಸಂಖ್ಯಾ ಸ್ಫೋಟವನ್ನು ಬಿಟ್ಟ ಕಣ್ಣು ಬಿಟ್ಟಂತೆ ಮ‌ೂಕ ಪ್ರೇಕ್ಷಕನಂತೆ ನೋಡುತ್ತಿದೆ.

ಬಡತನ:

ಉಣ್ಣಲು ಕೂಳಿಲ್ಲ. ದುಡಿಯಲು ಕೆಲಸವಿಲ್ಲ, ತಲೆಯ ಮೇಲೊಂದು ಸೂರಿಲ್ಲ, ಮೈಮುಚ್ಚಲು ಬಟ್ಟೆಯಿಲ್ಲ, ಇವೆಲ್ಲ ಇಲ್ಲದವುಗಳ ನಡುವೆ ಇರುವುದೇನೆಂದು ಹುಡುಕಿದರೆ ಸಿಗುವುದು ಅಸ್ಥಿಪಂಜರದ ಬಡಜೀವ. ಪ್ರಧಾನಿ ಹೇಳುತ್ತಾರೆ:ದೇಶ ಪ್ರಗತಿ ಫಥದಲ್ಲಿ ಸಾಗಿದೆ. ಆರ್ಥಿಕ ಅಭಿವೃದ್ಧಿಯತ್ತ ದಾಪುಗಾಲು ಹಾಕಿದೆ. ನಾವು ಕೇಳುತ್ತೇವೆ: ಅಭಿವೃದ್ಧಿಯ ಫಲ ಎಷ್ಟು ಜನರಿಗೆ ಸಿಕ್ಕಿದೆ?

ಮಾಜಿ ಪ್ರಧಾನಿ ನೆಹರೂ ಕೈಗಾರಿಕೋದ್ಯಮಕ್ಕೆ ಆದ್ಯತೆ ನೀಡಿದರು. ನೇಗಿಲಯೋಗಿಯನ್ನು ಮರೆತರು. ಗ್ರಾಮೀಣ ಕೈಗಾರಿಕೆಗೆ ಉತ್ತೇಜನ ನೀಡಿರೆಂಬ ಗಾಂಧೀಜಿಯ ಕೂಗು ಅರಣ್ಯರೋದನವಾಯಿತು. ಅನ್ನದಾತನಿಗೆ ಅನ್ನ ಸಿಗದ ದುಸ್ಥಿತಿ. ನೀರಾವರಿ ರೈತನ ಪಾಲಿಗೆ ಬರಿಯ "ವರಿ". ರಾಮನಿಗಾಗಿ ಕಾದುಕುಳಿತ ಶಬರಿಯಂತೆ ಮಳೆ ನಿರೀಕ್ಷಿಸಿ ರೈತನ ಮುಖ ಆಕಾಶದತ್ತ. ಮಳೆ ಬಂದರೇನೆ ಬಡಜೀವ ಬದುಕೀತು.

ಭ್ರಷ್ಟಾಚಾರ

ಸ್ವಾತಂತ್ರ್ಯದ ನಂತರ ನಮ್ಮ ಪ್ರಭುಗಳು ಉತ್ತು, ಬಿತ್ತು, ಬೆಳೆದು ಪೋಷಿಸಿದ್ದು ಭ್ರಷ್ಟಾಚಾರ. ಅಭಿವೃದ್ಧಿ ಯೋಜನೆಗಳ ಫಲ ಬಡವರಿಗೆ, ರೈತರಿಗೆ ಸಿಕ್ಕಿದ್ದು ಅಷ್ಟಕ್ಕಷ್ಟೇ. ನಾಡಪ್ರಭುಗಳ ಹೊಟ್ಟೆ ಗಾತ್ರ ಮಾತ್ರ ಬೆಳೆಯಿತಷ್ಟೇ. ಲಂಚ ಕೊಟ್ಟರೆ ಮಂಚ ಎನ್ನುತ್ತಿವೆ ಸರ್ಕಾರಿ ಕಚೇರಿಗಳು. ಕೆಳಗಿನಿಂದ ಮೇಲಿನವರೆಗೆ ನುಂಗಣ್ಣಗಳ ನುಂಗುಭಾಕತನ. ನೀನಗಿದ್ದರೆ, ನಾ ನಿನಗೆ ಎನ್ನುವುದು ಸರ್ಕಾರಿ ಅಧಿಕಾರಿಗಳ ಧೋರಣೆ.

ವಿಧಾನಸೌಧದಲ್ಲಿ ಕೆತ್ತಲಾಗಿದೆ- 'ಸರ್ಕಾರಿ ಕೆಲಸ ದೇವರ ಕೆಲಸ'ವೆಂದು. ಸರ್ಕಾರಿ ನೌಕರರು ಹೇಳುತ್ತಾರೆ- ' ತಿನ್ನುವುದು ಮಾತ್ರ ನಮ್ಮ ಕೆಲಸ' ಎಂದು. ಲಂಚ ಕೊಟ್ಟವ ಕೋಡಂಗಿ, ಇಸ್ಕೊಂಡವ ಈರಭದ್ರ ಎಂದುಕೊಳ್ಳಬೇಡಿ. ಕೊಟ್ಟವರು, ಇಸ್ಕೊಂಡವರು ಇಬ್ಬರಿಗೂ ಇಲ್ಲಿ ಲಾಭವಿದೆ. ಆದರೆ ಲುಕ್ಸಾನಾಗುವುದು ಮಾತ್ರ ಸರ್ಕಾರಕ್ಕೆ. ಸರ್ಕಾರವೆಂದರೆ ಜನರಿಂದ ರೂಪಿತವಾದ್ದು. ಜನರು ತೆರುವ ತೆರಿಗೆಯಿಂದ ರೂಪಿತವಾದ್ದು. ಸರ್ಕಾರಕ್ಕೆ ಲುಕ್ಸಾನೆಂದರೆ ಜನರಿಗೆ ಲುಕ್ಸಾನವಾದ ಹಾಗೆ. ಭ್ರಷ್ಟಾಚಾರದಿಂದಲೂ ಸರ್ಕಾರದ ಬೊಕ್ಕಸಕ್ಕೆ ಲುಕ್ಸಾನು.

ನಿರುದ್ಯೋಗ:

ಸ್ವಾತಂತ್ರ್ಯಾನಂತರ ನಮ್ಮ ಅಧಿಕಾರಸ್ಥರ ಕೊಡುಗೆ ನಿರುದ್ಯೋಗ. ನಿರುದ್ಯೋಗದ ಹಿಂದೆಯೇ ಬಡತನವೂ ಮೈಗಂಟಿದ ಶಾಪ. ಉದ್ಯೋಗಗಳ ಸೃಷ್ಟಿಯಲ್ಲಿ ವೈಫಲ್ಯದ ಫಲವೇ ನಿರುದ್ಯೋಗ. ರಟ್ಟೆ ಗಟ್ಟಿಯಿದ್ದರೂ ದುಡಿಯಲು ಕೆಲಸವಿಲ್ಲ. ಹಸಿದ ಕಂಗಳ ಮಕ್ಕಳ ನಿಸ್ತೇಜ ನೋಟ. ಮುಂದಿನ ಬದುಕು ಹೇಗೆಂದು ಆವರಿಸಿದ ಚಿಂತೆಯ ಕಾರ್ಮೋಡ. ವಿದೇಶಗಳಲ್ಲಾದರೆ ಅಷ್ಟೊ ಇಷ್ಟೊ ಸಿಗುವ ನಿರುದ್ಯೋಗ ಭತ್ಯೆಯಿಂದ ಉಸಿರಾಡಬಹುದು. ಆದರೆ ನಮ್ಮ ದೇಶದಲ್ಲಿ ನಿರುದ್ಯೋಗ ಭತ್ಯೆ ನೀಡಲು ಸರ್ಕಾರದ ಬೊಕ್ಕಸದ ಹಣವೂ ಸಾಕಾಗುವುದಿಲ್ಲ. ಅಷ್ಟೊಂದು ಮಂದಿ ನಿರುದ್ಯೋಗಿಗಳ ದಂಡು ತುಂಬಿದೆ.

ದೇಶಾಭಿಮಾನ ಕುಂದಿಲ್ಲ

ದೇಶದಲ್ಲಿ ಇಷ್ಟೆಲ್ಲ ಸಮಸ್ಯೆಗಳಿದ್ದರೂ ನಮ್ಮ ರಾಜಕೀಯ ಪ್ರಭುಗಳ ದೇಶಾಭಿಮಾನ ಕುಂದಿಲ್ಲ. ಪ್ರತಿ ವರ್ಷದ ಸ್ವಾತಂತ್ರ್ಯ ದಿನೋತ್ಸವದಂದು ದೇಶಾಭಿಮಾನ ಅವರ ನರನಾಡಿಗಳಲ್ಲಿ ಉಕ್ಕಿಹರಿಯುತ್ತದೆ. ಸ್ವಾತಂತ್ರ್ಯಕ್ಕಾಗಿ ಆತ್ಮಾರ್ಪಣೆ ಮಾಡಿದ ಹುತಾತ್ಮರ ನೆನಪು ಮಾಡಿಕೊಳ್ಳುತ್ತಾರೆ. ಕಣ್ಣೀರಿನ ಧಾರೆಯನ್ನೇ ಹರಿಸುತ್ತಾರೆ. ಅವರ ದೇಶಭಕ್ತಿ, ದೇಶಾಭಿಮಾನ ಕಂಡು ಜನರೂ ಕಂಬನಿ ಮಿಡಿಯುತ್ತಾರೆ. ಸ್ವಾತಂತ್ರ್ಯ ದಿನಾಚರಣೆ ಮುಗಿಯಿತು. ಮತ್ತದೇ ಬಡತನ, ಮತ್ತದೇ ನಿರುದ್ಯೋಗ, ಮತ್ತದೇ ಜನಸಂಖ್ಯಾ ಸ್ಫೋಟ, ಅದೇ ಕಥೆ, ಅದೇ ವ್ಯಥೆ.

Share this Story:

Follow Webdunia kannada