Select Your Language

Notifications

webdunia
webdunia
webdunia
webdunia

ಸ್ವತಂತ್ರ ಭಾರತದ ರೈತ ಮತ್ತು ಗೋಲಿಬಾರ್

ಸ್ವತಂತ್ರ ಭಾರತದ ರೈತ ಮತ್ತು ಗೋಲಿಬಾರ್
ನಾಗೇಂದ್ರ ತ್ರಾಸಿ
WD
ಭಾರತ 61ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದೆ. ಎಲ್ಲೆಂದರಲ್ಲಿ ಭಾಷಣಗಳ ಸುರಿಮಳೆ, ಆಡಳಿತರೂಢ ಸರಕಾರ ಕೂಡ ಅಭಿವೃದ್ದಿಯಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತದೆ. ಸ್ವಾತಂತ್ರ್ಯ ಗಳಿಸಿ ಇಂದಿಗೆ ಆರು ದಶಕಗಳು ಸಂದಿವೆ. ಭಾರತ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಿತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೂ ಸೋಗಲಾಡಿತನದ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಭಾರತ ಎದುರಿಸುತ್ತಿರುವ ಸಮಸ್ಯೆಗಳು ಮಾತ್ರ ಜನರನ್ನು ದಿಗಿಲುಗೊಳಿಸದೆ ಇರಲಾರದು.

ಒಂದೆಡೆ ಭಯೋತ್ಪಾದನೆ ಎಲ್ಲೆಂದರಲ್ಲಿ ತಾಂಡವಾಡುತ್ತಿದ್ದರೆ, ಮಹಾನಗರಗಳಲ್ಲಿನ ಸಾರಿಗೆ ಸಮಸ್ಯೆ, ವಿದ್ಯುತ್, ನಕ್ಸಲೀಸಂ, ಶೌಚಾಲಯ, ಮೂಲಭೂತ ಸೌಕರ್ಯ,ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದೆ ಭಾರತ ನರಳುತ್ತಿದ್ದರೆ, ಮತ್ತೊಂದೆಡೆ ದೇಶದ ಬೆನ್ನೆಲುಬು ಎಂದು ಬಿರುದಾಂಕಿತನಾದ ರೈತರ ಸ್ಥಿತಿ ಮತ್ತೂ ಚಿಂತಾಜನಕವಾಗಿದೆ.

ಕೃಷಿ ಭಾರತದ ಆರ್ಥಿಕತೆಗೆ ಈಗಲೂ ಶೇ.20ರಷ್ಟು ಜಿಡಿಪಿಯನ್ನು ಕಾಣಿಕೆ ನೀಡುತ್ತಿದೆ. ರಾಷ್ಟ್ರದ ಒಟ್ಟು ಶೇ.60ರಷ್ಟು ಮಂದಿ ಕೃಷಿ ವಲಯದಲ್ಲಿ ಇದ್ದಾರೆ. ಅಷ್ಟಾಗಿಯೂ ದೇಶದ ರೈತರ ಗೋಳು ಪರಿಹಾರವಾಗಿಲ್ಲ. ನೆರೆಯ ಕಮ್ಯೂನಿಷ್ಟ್ ಆಡಳಿತದ ಚೀನಾ ಕೃಷಿ ಹಾಗೂ ಕೈಗಾರಿಕೆಯಲ್ಲಿ ಅಗಾಧ ಬೆಳವಣಿಗೆಯನ್ನು ಕಂಡಿದೆ. ಹಾಗಾದರೆ ನಾವು ಕೃಷಿಗೆ ಪ್ರಾಧಾನ್ಯತೆ ಕೊಟ್ಟಿರುವುದಾಗಿ ಹೇಳುತ್ತಾ ಬಂದಿದ್ದರೂ ಕೂಡ,ಅರವತ್ತು ವರ್ಷಗಳ ಬಳಿಕವೂ ಇವತ್ತು ರೈತರ ಸ್ಥಿತಿ ಏನಾಗಿದೆ.
  ಒಂದೆಡೆ ಭಯೋತ್ಪಾದನೆ ಎಲ್ಲೆಂದರಲ್ಲಿ ತಾಂಡವಾಡುತ್ತಿದ್ದರೆ, ಮಹಾನಗರಗಳಲ್ಲಿನ ಸಾರಿಗೆ ಸಮಸ್ಯೆ, ವಿದ್ಯುತ್, ನಕ್ಸಲೀಸಂ, ಶೌಚಾಲಯ, ಮೂಲಭೂತ ಸೌಕರ್ಯ,ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದೆ ಭಾರತ ನರಳುತ್ತಿದ್ದರೆ, ಮತ್ತೊಂದೆಡೆ ದೇಶದ ಬೆನ್ನೆಲುಬು ಎಂದು ಬಿರುದಾಂಕಿತನಾದ ರೈತರ ಸ್ಥಿತಿ ಮತ್ತೂ ಚಿಂತಾಜನಕವಾಗಿ      


ರೈತರ ಸಾಲಮನ್ನಾದ ಘೋಷಣೆಯೊಂದಿಗೆ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ರೈತ ನೇಣಿಗೆ ಶರಣಾಗುತ್ತಿರುವ ಸಂಖ್ಯೆ ದಿನದಿಂದ ದಿನಕ್ಕೆ ಇಮ್ಮಡಿಯಾಗುತ್ತಿದೆ. ಭಾರತದ ಅನೇಕ ಹಳ್ಳಿಗಳಲ್ಲಿ ಇವತ್ತಿಗೂ ವಿದ್ಯುತ್ ಇಲ್ಲ, ವೈಜ್ಞಾನಿಕ ಕೃಷಿ ಪದ್ದತಿಯತ್ತ ಯಾರ ಗಮನವೂ ಇಲ್ಲ. ಇಂತಹ ಕಾರಣಗಳಿಂದಾಗಿಯೇ ಕಳೆದ ಹತ್ತು ವರ್ಷಗಳಿಂದೀಚೆಗೆ ಲಕ್ಷಾಂತರ ಮಂದಿ ರೈತರು ಸಾವಿಗೆ ಶರಣಾಗಿದ್ದಾರೆ. ಆದರೂ ದೇಶದ ಮಹಾನ್ ರಾಜಕಾರಣಿಗಳು ರೈತರ ಆತ್ಮಹತ್ಯೆ ಕೃಷಿ ಸಂಬಂಧಿತ ವಿಷಯದಿಂದಾಗಿಲ್ಲ, ಅದು ಕೌಟುಂಬಿಕ ಕಾರಣಗಳು ಎಂಬುದಾಗಿ ಹಲುಬುತ್ತಾರೆ!!.

ರಾಷ್ಟ್ರದಲ್ಲಿ ಈವರೆಗೆ ಸಂಭವಿಸಿದ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಶೇ.40ರಷ್ಟು ಸಂಭವಿಸಿರುವುದು ಕರ್ನಾಟಕದಲ್ಲಿ ಎಂಬುದನ್ನು ಗಮನಿಸಬೇಕಾಗಿದೆ. ಅದರಲ್ಲೂ ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ 65ಸಾವಿರ ಎಕರೆ ಭೂಮಿಯಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಇದರಿಂದ ಲಕ್ಷಾಂತರ ರೈತರು ಭವಣೆ ಪಡುವಂತಾಗಿದೆ. ನ್ಯಾಯ ಕೇಳಿ ಪ್ರತಿಭಟನೆ ನಡೆಸುವ ರೈತರ ಮೇಲೆ ಗೋಲಿಬಾರ್ ನಡೆಸಲಾಗುತ್ತಿದೆ. ಇದೆಂತಹ ನ್ಯಾಯ?! ಇದು 61ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ನೂತನವಾಗಿ ಅಧಿಕಾರದ ಗದ್ದುಗೆಗೆ ಏರಿ,ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಿಜೆಪಿ ಸರ್ಕಾರ ರಾಜ್ಯ ರೈತರಿಗೆ ನೀಡಿದ ಇನಾಮು!!

ಆ ನಿಟ್ಟಿನಲ್ಲಿ ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ಅವರ ಟಿಪ್ಪಣಿ ಪ್ರಕಾರ ಕೆಲವೊಂದು ಅಂಶಗಳನ್ನು ಗಮನಿಸಿ, ರೈತ ದೇಶದ ಬೆನ್ನೆಲುಬು,ದೇಶದ ಆಧಾರ ಸ್ತಂಭ ಎಂದು ಬೊಬ್ಬಿಡುತ್ತಿರುವ ಭಾರತ ಹಾಗೂ ವಿದೇಶಗಳಲ್ಲಿ ಕೃಷಿಗೆ ನೀಡಿರುವ ಮಹತ್ವ ನಿಮಗೆ ವೇದ್ಯವಾಗುತ್ತದೆ. ವಿದೇಶಗಳಲ್ಲಿ ಪ್ರತಿ ಹಸುವಿನ ಸಾಕಾಣೆಗೆ ಪ್ರತಿದಿನ 150ರೂ.ಸಬ್ಸಿಡಿ ನೀಡಲಾಗುತ್ತದೆ. ಅಲ್ಲದೇ ಅಮೆರಿಕದ ನಿವ್ವಳ ರಾಷ್ಟ್ರೀಯ ಉತ್ಪನ್ನದಲ್ಲಿ ಕೃಷಿ ಪಾಲು ಕೇವಲ ಶೇ.4ರಷ್ಟಿದೆ. ಅಷ್ಟಾದರೂ ಅಮೆರಿಕ ಹತ್ತಿ ಬೆಳೆಗೆ 390ಕೋಟಿ ರೂಪಾಯಿ ಡಾಲರ್ ಸಬ್ಸಿಡಿ ನೀಡುತ್ತದೆ.

ಅಮೆರಿಕದಲ್ಲಿ ತಲಾ ಕೃಷಿಕನಿಗೆ 200ಹೆಕ್ಟೇರ್ ಜಮೀನು ಇದ್ದರೆ, ಭಾರತದಲ್ಲಿ ಇದೀಗ ರೈತರ ಬಳಿ 1.47ಹೆಕ್ಟೇರ್ ಮಾತ್ರ. ಅದರಲ್ಲೂ ವಿಶೇಷ ಆರ್ಥಿಕ ವಲಯ, ಕೈಗಾರಿಕೆಗಳ ಸ್ಥಾಪನೆಯ ಹೆಸರಲ್ಲಿ ರೈತರ ಭೂಮಿಯನ್ನು ವ್ಯವಸ್ಥಿತವಾಗಿ ಕಸಿಯಲಾಗುತ್ತಿದೆ. 2000ದಲ್ಲಿ ಭಾರತದಲ್ಲಿ ಪ್ರತಿ ಹೆಕ್ಟೇರಿಗೆ 20ಕ್ವಿಂಟಾಲ್ ಭತ್ತದ ಇಳುವರಿ ಇದ್ದರೆ, ಥಾಯ್ಲೆಂಡ್‌ನಲ್ಲಿ 32ಕ್ವಿಂಟಾಲ್, ಅದೇ ಅಮೆರಿಕದಲ್ಲಿ 70ಕ್ವಿಂಟಾಲ್. ಅಮೆರಿಕದಲ್ಲಿ ರೈತರ ಕುಟುಂಬ ಪ್ರತಿವರ್ಷ 30ಸಾವಿರ ಡಾಲರ್ ಸಬ್ಸಿಡಿ ಪಡೆಯುತ್ತದೆ.

ಇನ್ನು ಕೃಷಿ ಮತ್ತು ಕೈಗಾರಿಕೆಗೆ ಪ್ರಮುಖ ಪ್ರಾಧಾನ್ಯತೆ ನೀಡಿರುವ ಚೀನಾ ಕೂಡ ಹಿಂದೆ ಬಿದ್ದಿಲ್ಲ, ಇತ್ತೀಚೆಗಷ್ಟೇ ಮಕ್ಕಳ ಪಂಚಾಯತ್ ಅಧ್ಯಕ್ಷೆಯಾಗಿದ್ದ ಕುಂದಾಪುರ ಗ್ರಾಮೀಣ ಪ್ರದೇಶದ ಪಾರ್ವತಿ ಎಂಬ ಯುವತಿ ಚೀನಾ ಅಧ್ಯಯನ ಪ್ರವಾಸಕ್ಕೆ ಹೋಗಿ ಬಂದಿದ್ದಳು, ಪತ್ರಕರ್ತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಆಕೆಯಲ್ಲಿ, ಚೀನಾದ ಕೃಷಿ ವ್ಯವಸ್ಥೆ ಕುರಿತು ಕೇಳಿದಾಗ ಅಲ್ಲಿನ ರೈತರಿಗೆ ಬೇಕಾದ ಸೌಲಭ್ಯ ಹಾಗೂ ಕೃಷಿಗೆ ಅವರು ನೀಡುತ್ತಿರುವ ಪ್ರಾಮುಖ್ಯತೆ ಅದ್ಭುತವಾದದ್ದು ಎಂದು ವಿವರಿಸಿದ್ದಳು. ಅದೇ ರೀತಿ ಭಾರತೀಯ ಸಂಸ್ಕೃತಿ ಬಗ್ಗೆಯೂ ಕುತೂಹಲ ಹೊಂದಿರುವುದಾಗಿ ತಿಳಿಸಿದ್ದಳು.

ಆದರೂ ಚೀನಾ ರೈತರಿಗಾಗಿ 2004ರಲ್ಲಿ ಹಲವಾರು ಯೋಜನೆಗಳನ್ನ ರೂಪಿಸಿತ್ತು. ಅಲ್ಲದೇ ಚೀನಾ ಪ್ರಥಮ ಬಾರಿಗೆ ದೇಶಾದ್ಯಂತ ರೈತರಿಗಾಗಿ ನೇರ ಸಹಾಯಧನ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು.

ನಮ್ಮಲ್ಲಿ....ಬ್ಯಾಂಕಿನಿಂದ ಪಡೆದ ಸಾಲವನ್ನು ಬೆಳೆ ನಷ್ಟದಿಂದ ತೀರಿಸಲಾಗದೆ ರೈತ ಕುಟುಂಬ ಸಾಲು, ಸಾಲುಸಾಲಾಗಿ ಚಿತೆ ಏರುತ್ತಿದೆ. ರಸಗೊಬ್ಬರವನ್ನು ಸಮರ್ಪಕವಾಗಿ ಪೂರೈಸದೆ ರೈತರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿರುವ ಆಡಳಿತವರ್ಗ, ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಬೆಣ್ಣೆಯಂತಹ ಮಾತುಗಳನ್ನಾಡಿ ಜನರಿಂದ ಚಪ್ಪಾಳೆ ಗಿಟ್ಟಿಸುತ್ತವೆ. ಆಂಧ್ರದ ಕರ್ನೂಲ್‌ನಲ್ಲಿ ರೈತರು ಟೊಮೆಟೋಗೆ ಕನಿಷ್ಟ ಬೆಲೆಯೂ ದೊರೆಯದೆ, ಅವುಗಳನ್ನು ರಸ್ತೆಗೆ ಎಸೆದಿದ್ದರು, ಅದರಂತೆ ಉತ್ತರ ಪ್ರದೇಶ, ಹರಿಯಾಣ, ಪಂಜಾಬ್‌ಗಳಲ್ಲೂ ರೈತರು ಆಲೂಗಡ್ಡೆಯನ್ನು ರಸ್ತೆಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

webdunia
PTI
ಹಾಗಾದರೆ ಸ್ವಾತಂತ್ರ್ಯ ಬಂದು ಅರವತ್ತು ವರ್ಷಗಳು ಸಂದರೂ ರೈತರ ಬದುಕು ಹಸನಾಗಿದೆ ಎಂದು ಅನ್ನಿಸುತ್ತಾ? ಕೇವಲ ರೈತರ ಸ್ಥಿತಿ ಮಾತ್ರವಲ್ಲ ಮುಂದಿನ ದಿನಗಳಲ್ಲಿ ವಿದ್ಯುತ್‌ಗಾಗಿ ಹಪಹಪಿಸಬೇಕಾಗುತ್ತೆ, ಖ್ಯಾತ ಪತ್ರಕರ್ತ ಪ್ರೀಡ್‌ಮನ್ ಅವರ ಮಾತಿನಲ್ಲೇ ಹೇಳುವುದಾದರೆ, ಈ ದೇಶಕ್ಕೇನಾದರೂ ದೊಡ್ಡ ಅಪಾಯ ಅಂತ ಇದೆಯಾದರೆ ಅದು ಟ್ರಾಫಿಕ್ ಸಮಸ್ಯೆ. ಬೆಂಗಳೂರು, ಹೈದರಾಬಾದ್, ಮುಂಬೈ, ಕೋಲ್ಕತಾ ಮಹಾನಗರಗಳಲ್ಲಿ ಓಡಾಟ ನಡೆಸಿದರೆ ಸಂಚಾರ ದಟ್ಟಣೆ ಮುಂದಿನ ದಿನಗಳಲ್ಲಿ ಯಾವ ಮಟ್ಟದ ತೊಂದರೆಯನ್ನು ತಂದೊಡ್ಡಬಲ್ಲದು ಎಂಬುದನ್ನು ಊಹಿಸಿಕೊಳ್ಳಬಹುದಾಗಿದೆ.

ಇನ್ನು ವಿದ್ಯುತ್ ವಿಷಯಕ್ಕೆ ಬಂದರೆ, ರಾಜ್ಯದಲ್ಲಿ ಉತ್ಪಾದನೆ ಆಗುತ್ತಿರುವ ವಿದ್ಯುತ್ 5600 ಮೆಗಾವ್ಯಾಟ್, ಬೇಡಿಕೆ ಇರುವುದು 8 ಸಾವಿರ ಮೆಗಾವ್ಯಾಟ್ ಬೇಕಾಗಿದೆ. ಅದರಲ್ಲಿ ಮಳೆ ಕೈಕೊಟ್ಟರೆ, ಅದರಲ್ಲೂ ಖೋತಾ!!. ಈ ಬಗ್ಗೆ ಸರಕಾರ ಮೀಸಲಿಡುವ ಆರ್ಥಿಕ ಪ್ರಮಾಣ ಅಷ್ಟಕಷ್ಟೇ, ಪರ್ಯಾಯ ಮಾರ್ಗ ಕಂಡುಕೊಂಡರೂ ಅಷ್ಟು ಪ್ರಮಾಣದ ವಿದ್ಯುತ್ ಪೂರೈಕೆ ಸಾಧ್ಯವಿಲ್ಲ, ಹಾಗಾದರೆ ದೇಶದ ಒಟ್ಟು ವಿದ್ಯುತ್ ಕೊರೆತೆ ನೀಗಿಸುವ ಮಾತು ದೂರವೆ.

ಇಲ್ಲ ಸ್ವಾಮಿ, ಅಣು ಒಪ್ಪಂದ ಮಾಡಿಕೊಂಡಿರುವುದು ಮತ್ಯಾಕೆ ಎಂದು ನೀವು ಪ್ರಶ್ನಿಸಿದರೂ ಕೂಡ, ಅಣು ಒಪ್ಪಂದದಿಂದಲೂ ನಮ್ಮ ವಿದ್ಯುತ್ ಕೊರತೆ ನೀಗಲಾರದು. ಬದಲಿಗೆ ಅದರಿಂದ ತಗುಲಿಕೊಳ್ಳುವ ಅಪಾಯ ಭಾರತ ಮತ್ತೊಂದು ಚಕ್ರವ್ಯೂಹದಲ್ಲಿ ಸಿಲುಕುತ್ತಿದೆ ಎಂಬುದು ಸ್ಪಷ್ಟ. ಯಾಕೆಂದರೆ ಪಾಶ್ಚಾತ್ಯ ದೇಶಗಳು ಇವತ್ತು ಪರಮಾಣು ವಿದ್ಯುತ್ ಉತ್ಪಾದನೆಯನ್ನು ಕೈಬಿಡುತ್ತಿವೆ. ಸಣ್ಣ ಪ್ರಮಾಣದ ವಿಕಿರಣ ಸೋರುವಿಕೆ ತೀವ್ರ ಆತಂಕ ಸೃಷ್ಟಿಸುತ್ತಿವೆ ಎಂದು ಅಣುಸ್ಥಾವರ ಸ್ಥಾಪನೆಯಿಂದ ದೂರ ಸರಿದಿವೆ.

ಭಾರತದ ಒಡಲೊಳಗೆ ಒಂದೇ, ಎರಡೇ..ಅದೆಷ್ಟು 'ರಾಡಿ'ಗಳು ತುಂಬಿವೆ, ಅವುಗಳಿಗೆ ಸೂಕ್ತ ಚಿಕಿತ್ಸೆ ಮಾಡಬೇಕಿದ್ದರೆ, ನಮ್ಮ ರಾಜಕಾರಣಿಗಳಿಗೆ ಆ ಇಚ್ಚಾಶಕ್ತಿ ಇರಬೇಕು, ದೇಶದ ಮಹಾನ್ ರಾಜಕಾರಣಿಗಳನ್ನು ನೋಡಿದರೆ, ಸಂಸತ್‌ನೊಳಗೆ ನೋಟಿನ ಕಂತೆ ಪ್ರದರ್ಶಿಸುವವರು, ಹಣಕ್ಕಾಗಿ ಖರೀದಿಯಾಗುವ ಸಂಸದರು, ಕೊಲೆ ಪಾತಕರಿಂದ ತುಂಬಿರುವ ಸಂಸತ್, ಇಂತಹವರನ್ನು ಆಯ್ಕೆ ಮಾಡಿಕಳುಹಿಸುವ ನಮ್ಮಂಥ ಮೂರ್ಖ ಮತದಾರರು... ಇಂಥವರಿಂದ ತುಂಬಿ ಹೋಗಿರುವ ಸ್ವತಂತ್ರ ಭಾರತದಿಂದ ಏನನ್ನ ನಿರೀಕ್ಷಿಸಬಹುದು......

Share this Story:

Follow Webdunia kannada