Select Your Language

Notifications

webdunia
webdunia
webdunia
webdunia

ಮುಂದಿನ ವರ್ಷದ ಸ್ವಾತಂತ್ರ್ಯ ಭರವಸೆ ನನಗಿಲ್ಲ..!

ಮುಂದಿನ ವರ್ಷದ ಸ್ವಾತಂತ್ರ್ಯ ಭರವಸೆ ನನಗಿಲ್ಲ..!
ಭುವನ್ ಪುದುವೆಟ್ಟು

ಹೀಗೆ ಕೂತರೆ ಹಲವಾರು ಯೋಚನೆಗಳು ತಲೆ ತಿನ್ನುತ್ತವೆ. ಹಲವರು ಹೆಂಡತಿ ಬಂದ ಮೇಲೆ ನೆಟ್ಟಗಾಗಿದ್ದನ್ನು, ಇನ್ನು ಕೆಲವರು ಸೊಟ್ಟಗಾಗಿದ್ದನ್ನು ನೋಡಿದ್ದೇನೆ. ನನಗದರಲ್ಲಿ ಯಾವುದು ಕಾದಿದೆ ಅಂತ ಹಲವು ಬಾರಿ ಯೋಚಿಸಿದ್ದಿದೆ. ಇದನ್ನು ಆತಂಕಗಳು ಎಂದು ಬೇಕಾದರೂ ಕರೆಯಿರಿ.

ಹತ್ತಿರದ ಗೆಳೆಯ ರಾಜೇಶ್‌ನನ್ನು ನೋಡಿದ ಮೇಲಂತೂ ಮದುವೆಯಾದ ಮೇಲೆ ಜೀವನದ ರೀತಿ-ನೀತಿಗಳು ಬದಲಾಗುತ್ತವೆ ಎಂಬುದನ್ನು ಅರಿತುಕೊಂಡಿದ್ದೇನೆ. ಅವರು ನಮ್ಮ ಕಣ್ಣ ಮುಂದೇನೇ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದರು. ಅಂದ್ರೆ, ಮೊದಲೆಲ್ಲ ಗೆಳೆಯರ ಜತೆ ಸಿನಿಮಾಕ್ಕೆ ಅಥವಾ ಇನ್ನೆಲ್ಲೋ ಟೊಂಕ ಕಟ್ಟಿ ಬರೋರು. ಮದುವೆ-ಮಕ್ಕಳಾದ ಮೇಲೆ ಆಫೀಸ್ ಬಿಟ್ರೆ ಮನೆ, ಮನೆ ಬಿಟ್ರೆ ಆಫೀಸು. ಹೆಂಡತಿ-ಮಕ್ಕಳನ್ನು ಬಿಟ್ಟು ಬರಕ್ಕಾಗಲ್ಲ ಅನ್ನೋದೇ ಅವರ ಕಂಪ್ಲೇಂಟು.
WD


ಬಹುಶಃ ಇದು ಬಹುತೇಕ ವಿವಾಹಿತರಿಗೆ ಬಾಧಿಸೋ ಕಾಯಿಲೆ (ಮಹಿಳಾವಾದಿಗಳಿಂದ ಕ್ಷಮೆಯಿರಲಿ) ಅಂದ್ಕೋತೀನಿ. ಆಕೇನ ಬಿಟ್ಟು ಕಚೇರಿಯವರ ಜತೆ ಹೋದ್ರೆ ಅವಳನ್ನು ಬಿಟ್ಟು ಹೋದ ಬೇಸರಕ್ಕಿಂತಲೂ ಆ ಟೀಮಲ್ಲಿ ಇನ್ನೂ ಯಾರ‌್ಯಾರು ಇದ್ರು ಅನ್ನೋದೇ ಮಹತ್ವದ ಪ್ರಶ್ನೆಯಾಗಿರುತ್ತೆ. ಆ ಪರಿಯ ಪ್ರೀತಿನೂ ಖುಷಿ ಕೊಡಬಹುದು ಎಂದೆಲ್ಲ ಅಂದ್ಕೊಳ್ಳೋದೂ ಇದೆ.

ಪ್ರೀತಿ ಅಂದ್ರೆ ಹಾಗೆಲ್ಲ ಇರೋದು ಮಾಮೂಲಿ ಅಂತಂದ್ಕಂಡ್ರೂ ಈಗಿರುವಂತೆ ಎಲ್ಲವೂ ಮಾಮೂಲಿಯಾಗಿರದು ಎಂಬುವುದು ದಿಟ. ಈ ಮೊಬೈಲ್ ಬಂದ ಮೇಲಂತೂ ಕರೆನ್ಸಿ ಹೇಗೆ ಖಾಲಿಯಾಗುತ್ತಂತಾನೇ ಗೊತ್ತಾಗಲ್ಲ. ಬರೀ ಮಾತು, ಮಾತು, ಮಾತು ಅಷ್ಟೇ. ಸುಮ್ನೆ ಮಾತಾಡೋಣ ಅನ್ಸತ್ತೆ. ಅದ್ಕೆಲ್ಲ ಹೆಂಡ್ತಿ ಬಿಡ್ತಾಳಾ? ಹೆದ್ರಿಕೆ ಆಗ್ತಿದೆ ಕಣ್ರೀ...

ರಾತ್ರಿಯೆಲ್ಲ ನಿದ್ರೆನೇ ಬರಲ್ಲ. ಹಾಳು-ಮೂಳು ತಿಂದ್ಕೊಂಡು ಇಲ್ಲದ ಹ್ಯಾಬಿಟ್‌ಗಳನ್ನು ಮುಗಿಸಿ ಕಣ್ಮುಚ್ಚುವಾಗ ರಾತ್ರಿ ಹನ್ನೆರಡಾಗುತ್ತೆ. ಯಾರ‌್ಯಾರಿಗೋ ಮೆಸೇಜ್ ಕಳ್ಸೋದು ಮುಂತಾದುವು ಮಾಮೂಲಿ ಬಿಡಿ. ಇದಕ್ಕೆಲ್ಲ ಖಂಡಿತಾ ಅವಳು ಬ್ರೇಕ್ ಹಾಕೇ ಹಾಕ್ತಾಳೆ.

ಏನೋ.. ಮದ್ವೆಯಾದ ಹೊಸತ್ರಲ್ಲಿ ಒಂದಿಷ್ಟು ಪ್ರೀತಿ-ಗೀತಿ ಅಂತ ಉಳಿದೋರನ್ನು ಮರೀಬೋದು. ನಂತರದ ದಿನಗಳನ್ನು ಮರೆಯೋಕೆ ಉಳಿದೋರೇ ಬೇಕಾಗಬಹುದು ಅನ್ನೋದು ನನ್ನ ಬಾಲಿಶ ಯೋಚನೆಯಾಗಿರಬಹುದು!
webdunia
WD


ಮನೆ ಹೊಸ್ತಿಲು ದಾಟಿದ ನಂತರದ 384 ವಾರಗಳಿಂದ ಕನಿಷ್ಠ 200 ಬಾರಿ ವಾರದ ಕರ್ಮವೆಂದೇ ಬೈದುಕೊಳ್ಳುವ ಬಟ್ಟೆ ಒಗೆದು ಹೈರಾಣಾಗಿ ಹೋಗಿದ್ದೇನೆ. ಹೆಂಡತಿ ಹೇಳಿದ ಕೆಲ್ಸಾನೆಲ್ಲಾ ಮಾಡೋಕೆ ಸಿದ್ಧನಿದ್ದೀನಿ -- ಆಕೆ ನಾನು ಹಾಕೋ ಬಟ್ಟೆ ಮಾತ್ರ ಒಗೀಲೇ ಬೇಕು ಎಂಬ ಭಯಂಕರ ನಿರ್ಧಾರಕ್ಕೆ ಯಾವತ್ತೋ ಬಂದಾಗಿದೆ. ಮುಂದೇನಾಗುತ್ತೋ..?

ಆದ್ರೂ ಮದ್ವೆಯಾದ್ಮೇಲೂ ಸುಖವಾಗಿರಬಹುದಾ? ಯಾಕಿರಲ್ಲ ಅಂತೆಲ್ಲ ಮದ್ವೆಯಾದ ಪುರಾತನ ಟೀನ್‌ಗಳು ನನ್ನನ್ನು ದುರುಗುಟ್ಟಿದ್ದುಂಟು. ಏನೋ ಮದ್ವೆಯಾಗೋವಷ್ಟು ಪ್ರಾಯ ಇನ್ನೂ ಆಗಿಲ್ಲಾಂತಾನೇ ಅನ್ಸತ್ತೆ. ಆದ್ರೂ ಸ್ನಾನ ಮಾಡೋವಾಗ, ತಲೆ ಬಾಚೋವಾಗ ಕೂದಲು ಉದುರ್ತಿರೋದನ್ನು ನೋಡಿ (ಖಂಡಿತಾ ಇದು ಪ್ರಾಯ ದೋಷವಲ್ಲ..!) ಬೇಗ ಮದ್ವೆ ಆಗ್ಲೇ ಬೇಕೆಂಬ ಭೀಷ್ಮ ಪ್ರತಿಜ್ಞೆ ಮಾಡಿಯಾಗಿದೆ.

ಮತ್ತೆ ಭಯ. ಅಮ್ಮ ಏನು ಹೇಳ್ತಾಳೋ.. ನಾನು ಮದ್ವೆಯಾಗೋದೂಂದ್ರೆ ಅವಳಿಗೆ ಖುಷಿನೇ. ಆದ್ರೂ ಏನೋ ಒಂದ್ಸಲ್ಪ ನಾಚ್ಕೆ ನಂಗೂ ಆಗತ್ತೆ ಕಣ್ರೀ.. ಎಕ್ಸ್‌ಪೀರಿಯೆನ್ಸ್ ಕೂಡ ನನ್ನ ಬೆನ್ನಿಗಿಲ್ಲ ನೋಡಿ..!

ಆದ್ರೂ ಹೆಂಡ್ತೀಗೆ ಅಷ್ಟೊಂದು ನಿಷ್ಠಾವಂತನಾಗಿ ಎಷ್ಟು ದಿನ ಬಾಳಬಹುದು. ಮದುವೆಯಾದ ಮೇಲೆ ಬೇರೆ ಹುಡುಗೀರನ್ನು ನೋಡ್ಬೇಕೂಂತ ಅನ್ನಿಸೋದೇ ಇಲ್ವ? ಅಂದ್ರೆ ಮದ್ವೆನೇ ಕೊನೆಯ ಸಂತೋಷನಾ? ನಮ್ಮೆಲ್ಲ ಗುಟ್ಟುಗಳನ್ನು ಆಕೆಯಲ್ಲಿ ಬಿಚ್ಚಿಡ್ಬೇಕಾ?
webdunia
WD


ಆಕೆ ಹೇಗಿರ್ತಾಳೋ? ಜಡೆ ಉದ್ದ ಬಿಟ್ಟಿರ್ತಾಳೋ.. ಜಡೇನೇ ಇರಲ್ವೋ? ನಂಗಂತೂ ಲಿಪ್‌ಸ್ಟಿಕ್ ಕಂಡ್ರೆನೇ ಆಗಲ್ಲ. ಅದಿಲ್ಲದೇ ಹೊರಗೆ ಕಾಲಿಡದವಳು ಸಿಕ್ಕಿದ್ರೆ..? ಹುಡುಗಿ ನೋಡೋ ದಿನ ಅದ್ನೆಲ್ಲಾ ಕೇಳಕ್ಕಾಗತ್ತ?

ನಾನು ಅಂದ್ಕೊಂಡಿದ್ದೆಲ್ಲ ಅವಳಲ್ಲಿರತ್ತಾ? ಮನೆಯವರ ಜತೆ ಹೊಂದ್ಕೊಂಡು ಹೋಗ್ತಾಳಾ? ಬೆಡ್ ರೂಂ ಕಿಟಕಿಗೆ ಬಾಗಿಲಿಲ್ಲ ಅಂತ ಕೋಪ ಮಾಡ್ಕೊಂಡ್ರೆ? ಸಂಡೇ ಸಿನಿಮಾಕ್ಕೆ ಹೋಗ್ಲೇಬೇಕೂಂತ ಹಠ ಹಿಡಿದ್ರೆ? ಅದೂ ನನ್ನ ಜೇಬನ್ನೇ ನಂಬ್ಕೊಂಡಿದ್ರೆ? ವಾರಕ್ಕೊಮ್ಮೆ ಅಮ್ಮ ನೆನಪಾಗ್ತಾಳೆ ಅಂದ್ರೆ?

ಹೀಗೆ ಎಲ್ಲರಂತೆ ಸಿಕ್ಕಾಪಟ್ಟೆ ಆತಂಕಗಳು ಬೇಕಾಬಿಟ್ಟಿಯಾಗಿ ನನ್ನಲ್ಲೂ ಮನೆ ಮಾಡಿವೆ. ಆದ್ರೂ ಮದುವೆ ಆಗ್ಲೇ ಬೇಕು. ಏನಾಗುತ್ತೋ ನೋಡೋಣ ಅಂತ ತೀರ್ಮಾನಿಸಿದ್ದೀನಿ.

ಕಾಲೇಜು ಮತ್ತು ನಂತರದ ಜೀವನದಲ್ಲಿ ಅದೆಷ್ಟೋ ಹುಡುಗೀರನ್ನ ಕಂಡು ಸತಾಯಿಸಿದ್ದಿದೆ. ಇವಳೇನಾದ್ರೂ ಸಿಕ್ಕಿದ್ರೆ ನನ್ನನ್ನು ದೇವ್ರೇ ಕಾಪಾಡ್ಬೇಕು ಅಂತ ಹೇಳ್ಕೊಂಡದ್ದೂ ಇದೆ. ಏನ್ ಮಾಡ್ತಾನೋ ಗೊತ್ತಿಲ್ಲ. ಹಾಗಿದ್ದ ಹರುಕು-ಮುರುಕು ಸಂಬಂಧಗಳಿಗೆಲ್ಲ ಅಂದೇ ಶ್ರದ್ಧಾಂಜಲಿ ಅರ್ಪಿಸಬೇಕಾ?

ಈ ವರ್ಷಾಂತೂ ನನಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಹಾಗಾಗಿ ಎಲ್ರೂ ವಿಶ್ ಮಾಡಬಹುದು.

ಮುಂದಿನ ವರ್ಷದ ಬಗ್ಗೆ ಯಾವುದೇ ಆಶಾವಾದಗಳು ನನ್ನಲ್ಲಿಲ್ಲ..!

Share this Story:

Follow Webdunia kannada