Select Your Language

Notifications

webdunia
webdunia
webdunia
webdunia

ಭಾರತ ಅಂದು - ಇಂದು

ಭಾರತ ಅಂದು - ಇಂದು
, ಶುಕ್ರವಾರ, 15 ಆಗಸ್ಟ್ 2008 (13:54 IST)
ನಾಗರಾಜ್ ಬಿ.ಎನ್

PIB
ಮತ್ತೆ ಆಗಸ್ಟ್ 15 ಬಂದಿದೆ. ಭಾರತ ಬ್ರಿಟಿಷರ ದಾಸ್ಯದಿಂದ ಮುಕ್ತಿಗೊಂಡ ದಿನ. ಇಂದು ಎಲ್ಲ ಶಾಲಾ-ಕಾಲೇಜುಗಳು, ಸರ್ಕಾರಿ ಮುಖ್ಯ ಕಚೇರಿಗಳ ಮೇಲೆ ಭಾರತದ ಧ್ವಜವನ್ನು ಹಾರಿಸಿ ಸಿಹಿ ಹಂಚಿ ಉದ್ದುದ್ದ ಭಾಷಣ ಮಾಡಲು ರಾಜಕೀಯ ನಾಯಕರಿಗೆ, ಸ್ವಯಂ ಘೋಷಿತ ಸಮಾಜ ಸೇವಕರಿಗೆ ಇದೊಂದು ಸುವರ್ಣ ಅವಕಾಶ.


ಭಾರತೀಯರ ಆಂತರಿಕ ಕಚ್ಚಾಟ ಮೇರೆ ಮೀರಿ ಕೇವಲ ವ್ಯಾಪಾರಕ್ಕಾಗಿ ಬಂದ ಯುರೋಪಿಯನ್ನರು ಭಾರತವನ್ನು ರಾಜಕೀಯ ದಾಸ್ಯದಲ್ಲಿ ಇಟ್ಟುಕೊಳ್ಳುವಂತಾಯಿತು. ಜಗತ್ತಿಗೆ ಶಾಂತಿಮಂತ್ರಿ ಬೋಧಿಸಿದ ಭಾರತದ ಮಣ್ಣಿನಲ್ಲಿ ಅಧಿಕಾರ ದಾಹ ಮನೆಮಾಡಿ ನೈತಿಕ ಅಧಃಪತನಕ್ಕೆ ಆದಿಯಾಯಿತು. ಈ ಅವಮಾನಕಾರಿ ಪ್ರಸಂಗ ಮತ್ತೆ ಬಾರದಂತೆ ನಿಜವಾದ ಭಾರತ ಕಟ್ಟಬೇಕಿರುವುದು ನಮ್ಮಗಳ ನಿಜವಾದ ಆತ್ಮಪರಿವರ್ತನೆಯಿಂದ ಎಂಬುದನ್ನು ಭಾರತೀಯರು ಮತ್ತೆ ಮತ್ತೆ ಮನನ ಮಾಡಿಕೊಳ್ಳಬೇಕಿದೆ.

ಬ್ರಿಟಿಷರು ಭಾರತವನ್ನು ವ್ಯವಸ್ಥಿತವಾಗಿ ಕೊಳ್ಳೆ ಹೊಡೆದರು.. ಅವರು ಈ ದೇಶವನ್ನು ಹಾಳು ಮಾಡಿದರು.. ಅವರ ದಾಸ್ಯದಿಂದ ಮುಕ್ತಿ ಪಡೆಯಲು ಹೋರಾಟ ನಡೆಯಿತು.. ಸಾವಿರಾರು ದೇಶಭಕ್ತರು ಪ್ರಾಣತ್ಯಾಗ ಮಾಡಿದರು.. ಅವರೆಲ್ಲ ಗಳಿಸಿಕೊಟ್ಟ ಸ್ವಾತಂತ್ರ್ಯದ ಸಂಭ್ರಮದ ಸವಿಯನ್ನು ಸವಿಯುತ್ತಿದ್ದೇವೆ.

ಆದರೆ, ನಿಜವಾಗಿ ಭಾರತ ಸ್ವಾತಂತ್ರ್ಯ ಪಡೆದ ನಂತರ ದೇಶದಲ್ಲಿ ಅಧಿಕಾರ ನಡೆಸಿದ ರಾಜಕೀಯ ಪಕ್ಷಗಳು ಮತ್ತು ಸಮಾಜ ಸೇವಕರು ಮಾಡಿರುವುದೇನು ಎಂದು ಗಮನಿಸಿದರೆ, ಭಾರತದ ನಿಜವಾದ ಶತ್ರುವಾದ ಜಾತಿವ್ಯವಸ್ಥೆ ಮತ್ತು ವರ್ಗ ಸಂಘರ್ಷಕ್ಕೆ ಮತ್ತಷ್ಟು ನೀರೆರೆದಿರುವುದು ಗೋಚರಿಸುತ್ತದೆ. ಸಮಾಜವನ್ನು ಜಾತಿಯ ಆಧಾರದ ಮೇಲೆ ಗುರುತಿಸಿ ಅದನ್ನು ಬೆಳೆಸುತ್ತೇವೆ ಎಂದ ನಾಯಕಮಣಿಗಳು.. ಬೆಳೆಸಿದ್ದು ಕೇವಲ ಜಾತೀಯತೆಯನ್ನು..

ಸರ್ವಸಮಾನ ನಾಗರಿಕ ಸಮಾಜ ಸ್ಥಾಪಿಸುತ್ತೇವೆ.. ಎಲ್ಲರನ್ನೂ ಸಾಮಾಜಿಕ, ನೈತಿಕ ನಿಯಮಗಳ ಅಡಿ ನಡೆಸಿಕೊಳ್ಳುತ್ತೇವೆ ಎಂದು ಹೇಳಿದ ರಾಜಕೀಯ ಪಕ್ಷಗಳು ಅದನ್ನು ಸಾಧಿಸಲು ವಿಫಲವಾಗಿವೆ. ಇದಕ್ಕೆಲ್ಲ ಕಾರಣ ನಾಯಕರ ಅಧಿಕಾರ ದಾಹ ಮತ್ತು ಭಾರತದ ಪ್ರಜ್ಞಾಶೂನ್ಯ ಪ್ರಜೆಗಳು ಎಂದೇ ಹೇಳಬೇಕು.

ಅದರಲ್ಲೂ ಉದಾರೀಕರಣ, ಜಾಗತೀಕರಣ ಭಾರತಕ್ಕೆ ದಾಂಗುಡಿಯಿಟ್ಟು ಅಟ್ಟಹಾಸ ಮೆರೆಯುತ್ತಿದೆ. ಇವೆರಡರಿಂದ ಭಾರತೀಯ ಸಮಾಜಕ್ಕೆ ಎಷ್ಟು ಒಳಿತಾಗಿರುವುದೋ ಅಷ್ಟೇ ಕೆಡುಕೂ ಆಗಿದೆ. ಭಾರತೀಯರ ಶತಶತಮಾನಗಳ ಸ್ವಾವಲಂಬಿ ಬದುಕಿನ ವ್ಯವಸ್ಥೆಯನ್ನು ಕೆಲವೇ ದಶಕಗಳಲ್ಲಿ ಇವೆರಡೂ ಪ್ರಕ್ರಿಯೆಗಳು ಛಿದ್ರಗೊಳಿಸಿವೆ.
webdunia
PIB


ಮೊದ ಮೊದಲು ನಾಲ್ಕೈದು ವರ್ಷಗಳಿಗೊಮ್ಮೆ ಬರುತ್ತಿದ್ದ ಚುನಾವಣೆಗಳು ಈಗ ವರ್ಷಾನುವರ್ಷ ಬರುತ್ತಿವೆ. ಚುನಾವಣೆ ಸಮಯದಲ್ಲಿ ನಾಯಕರು ಆಡುವ ಮಾತುಗಳು, ತಿಳಿವಳಿಕೆಯುಳ್ಳವರನ್ನು ನಾಚಿಸುತ್ತಿವೆ.. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹರಿದ ಹಣಬಲ.. ನಡೆದ ಜಾತೀಯ ಸಂಘರ್ಷವನ್ನು ನೆನೆಸಿಕೊಂಡರೆ ಭಾರತ ಸ್ವಾತಂತ್ರ್ಯ ಗಳಿಸಿ 60ವರ್ಷಗಳ ಬಳಿಕವೂ ಇಂತಹ ವ್ಯವಸ್ಥೆ ವಿರುದ್ಧವೇ ರೇಜಿಗೆ ಹುಟ್ಟಿಸದೆ ಇರಲಾರದು.

ಇವೆಲ್ಲವನ್ನು ಗಮನಿಸಿದರೆ, ಪಾಶ್ಚಾತ್ಯ ದೇಶಗಳ ಕಪಿಮುಷ್ಟಿಯಿಂದ ಬಿಡುಗಡೆ ಹೊಂದಿದ್ದೇವೆ.. ಎಂದು ಬೊಬ್ಬೆ ಹಾಕುತ್ತಾ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ನಮ್ಮ ವರ್ತನೆ ಅರ್ಥಹೀನವೆನಿಸುತ್ತದೆ. ಆದ್ದರಿಂದ ಕೃತಕ ತೋರಿಕೆಯನ್ನು ಬದಿಗಿರಿಸಿ ನಿಜವಾದ ಭಾರತದ ಅಂತಃಶಕ್ತಿಯನ್ನು ವೃದ್ದಿಸುವ ಕಡೆಗೆ ನಾವೆಲ್ಲರೂ ಸಂಕಲ್ಪ ಮಾಡಿದರೆ ಸ್ವಾತಂತ್ರ್ಯೋತ್ಸವಕ್ಕೆ ಅರ್ಥ ಬರಲು ಸಾಧ್ಯವಿದೆ.

ಗಾಂಧೀಜಿಯವರ `ರಾಮರಾಜ್ಯ' ಕಲ್ಪನೆ ಅಪ್ಪಟ ಸ್ವದೇಶಿ ತತ್ವದ ಮೇಲೆಯೇ ನಿಂತಿದೆ. 'ಸ್ವಾವಲಂಬನೆಯೇ ಜೀವನ-ಪರಾವಲಂಬನೆಯೇ ದಾರುಣ' ಎಂದು ಹೊಸ ಮಂತ್ರದೊಂದಿಗೆ ಭಾರತೀಯರಾದ ನಾವು ಮುಂದಡಿ ಇಡಬೇಕಿದೆ.

`ಒಂದು ದೇಶದ ಆರೋಗ್ಯವಂತ ಸ್ಥಿತಿ ತಿಳಿಯಲು ಅಲ್ಲಿನ ಪ್ರಜೆಯ ಮನಸ್ಸನ್ನು ತಿಳಿದರೆ ಸಾಕು' ಎನ್ನುತ್ತದೆ ದಾರ್ಶನಿಕ ವಾಣಿ. ಇದನ್ನು ನೆನೆದಾಗ ಭಾರತೀಯ ಸಮಾಜದಲ್ಲಿ ನಡೆದಿರುವ ಆಂತರಿಕ ಘರ್ಷಣೆ ಮತ್ತು ಈಗಲೂ ನಡೆಯುತ್ತಿರುವ ಸಾಮಾಜಿಕ ವೈಪರೀತ್ಯಗಳು ಕಣ್ಮುಂದೆ ರಾಚುತ್ತವೆ. ಜಾತಿ ವ್ಯವಸ್ಥೆ,ವರ್ಗ ಸಂಘರ್ಷ,ಕೋಮುವಾದದಂತಹ ಪಿಡುಗುಗಳನ್ನು ಮೆಟ್ಟಿ ನಿಂತಲ್ಲಿ ಭಾರತ ನಿಜವಾದ ಸ್ವಾತಂತ್ರ್ಯ ಗಳಿಸಿಕೊಳ್ಳುವುದು ಸಾಧ್ಯವಾಗುತ್ತದೆ.

Share this Story:

Follow Webdunia kannada