Select Your Language

Notifications

webdunia
webdunia
webdunia
webdunia

ಅಕ್ಟೋಬರ್ 17 ರಾತ್ರಿ 11.30ಕ್ಕೆ ತಲಕಾವೇರಿ ತೀರ್ಥೋದ್ಭವ

ಅಕ್ಟೋಬರ್ 17 ರಾತ್ರಿ 11.30ಕ್ಕೆ ತಲಕಾವೇರಿ ತೀರ್ಥೋದ್ಭವ
ಚಿತ್ರ, ಲೇಖನ: ಬಿ.ಎಂ.ಲವಕುಮಾರ್
WD
ಅಕ್ಟೋಬರ್ ಬಂತೆಂದರೆ ಕೊಡಗಿನ ಜನರಲ್ಲಿ ಅದೇನೋ ಒಂದು ರೀತಿಯ ಸಂಭ್ರಮ, ಕಾತರ ಮನೆ ಮಾಡಿಬಿಡುತ್ತದೆ. ಕಳೆದ ನಾಲ್ಕೈದು ತಿಂಗಳಿನಿಂದ ಮಳೆ, ಗಾಳಿ, ಚಳಿಯ ಮುಸುಕಿನಲ್ಲಿದ್ದವರು ಅದನ್ನೆಲ್ಲಾ ಕೊಡವಿಕೊಂಡು ಮೇಲೆದ್ದು ಬಿಡುತ್ತಾರೆ. ತಾಯಿ ಕಾವೇರಿ ಮಾತೆಯ ದಿವ್ಯ ದರ್ಶನಕ್ಕಾಗಿ ಹಾತೊರೆಯುತ್ತಾರೆ...

ಕರ್ನಾಟಕದ ಸಿರಿದೇವಿ... ತಮಿಳುನಾಡಿನ ಭಾಗ್ಯಲಕ್ಷ್ಮಿ... ಕೊಡಗಿನ ಕುಲದೇವಿಯಾದ ಮಾತೆ ಕಾವೇರಿ ವರ್ಷಕ್ಕೊಮ್ಮೆ ತುಲಾ ಸಂಕ್ರಮಣದಂದು ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಆವಿರ್ಭವಿಸಿ ಭಕ್ತರಿಗೆ ದರ್ಶನ ನೀಡುತ್ತಾಳೆ. ಈ ಬಾರಿ ಅಕ್ಟೋಬರ್ 17ರಂದು ರಾತ್ರಿ 11.30ಕ್ಕೆ ಮಿಥುನ ಪುಣ್ಯ ಲಗ್ನದಲ್ಲಿ ಮಾತೆ ಕಾವೇರಿಯ ದರ್ಶನ ಭಾಗ್ಯ ಭಕ್ತರಿಗೆ ಲಭಿಸಲಿದೆ.

ನಿಸರ್ಗಸಿರಿಯ ತಲಕಾವೇರಿ
webdunia
WD
ಮಡಿಕೇರಿಯಿಂದ ನಲವತ್ತೆರಡು ಕಿ.ಮೀ. ದೂರದಲ್ಲಿರುವ ತಲಕಾವೇರಿ ಬ್ರಹ್ಮಗಿರಿಯ ಬೆಟ್ಟಶ್ರೇಣಿಯಲ್ಲಿದ್ದು ಸಮುದ್ರ ಮಟ್ಟದಿಂದ ಸುಮಾರು ಐದು ಸಾವಿರ ಅಡಿ ಎತ್ತರದಲ್ಲಿದೆ. ಮನಮೋಹಕ ನಿಸರ್ಗ ಸಿರಿಯನ್ನು ಹೊಂದಿರುವ ತಲಕಾವೇರಿ ಪವಿತ್ರ ಕ್ಷೇತ್ರವಾಗಿಯೂ, ಕೊಡಗಿನ ಪ್ರಮುಖ ಪ್ರವಾಸಿ ತಾಣವಾಗಿಯೂ ಗಮನಸೆಳೆದಿದೆ. ವರ್ಷಕ್ಕೊಮ್ಮೆ ಸೂರ್ಯನು ತುಲಾ ರಾಶಿಗೆ ಪ್ರವೇಶಿಸುವ ಸಂಕ್ರಾಂತಿ ಮುಹೂರ್ತದಲ್ಲಿ (ಅಕ್ಟೋಬರ್ 16 ಅಥವಾ 17ರಂದು) ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಹಾಲು ಉಕ್ಕಿ ಬರುವಂತೆ ಮಾತೆ ಕಾವೇರಿ ತೀರ್ಥರೂಪಿಣಿಯಾಗಿ ಉದ್ಭವಿಸುತ್ತಾಳೆ. ಇದೇ ಕಾವೇರಿ ತೀರ್ಥೋದ್ಭವ. ಜಿಲ್ಲೆ, ರಾಜ್ಯ ಮಾತ್ರವಲ್ಲದೆ, ದೇಶದ ವಿವಿಧ ಕಡೆಗಳಿಂದ ಸಹಸ್ರ ಸಂಖ್ಯೆಯಲ್ಲಿ ಆಗಮಿಸುವ ಭಕ್ತರು ಈ ದಿವ್ಯ ಕ್ಷಣಕ್ಕೆ ಸಾಕ್ಷಿಯಾಗುತ್ತಾರಲ್ಲದೆ, ಕಾವೇರಿ ತೀರ್ಥದಲ್ಲಿ ಸ್ನಾನಮಾಡಿ ಪುನೀತರಾಗುತ್ತಾರೆ.

ಸುದೀರ್ಘ ಯಾತ್ರೆ
ತಲಕಾವೇರಿಯಲ್ಲಿ ಉಗಮವಾಗಿ ಭಾಗಮಂಡಲ, ಬಲಮುರಿ, ಗುಹ್ಯ, ಕಣಿವೆ ಮೂಲಕ ಕೊಡಗಿನಿಂದ ಹೊರ ಹರಿದು ಬಳಿಕ ಕರ್ನಾಟಕದಲ್ಲಿ ಸುಮಾರು 381 ಕಿ.ಮೀ. ಹರಿದು ಆ ನಂತರ ಕೇರಳ, ತಮಿಳುನಾಡು, ಪಾಂಡಿಚೇರಿ ಮೂಲಕ 802 ಕಿ.ಮೀ. ಕ್ರಮಿಸಿ ಕಾವೇರಿ ಪಟ್ಟಣಂನಲ್ಲಿ ಬಂಗಾಳಕೊಲ್ಲಿಯನ್ನು ಸೇರುವುದರೊಂದಿಗೆ ತಾನು ಹರಿದಲ್ಲೆಲ್ಲಾ ಪವಿತ್ರ ಕ್ಷೇತ್ರಗಳನ್ನು ಸೃಷ್ಟಿಸಿ, ಲಕ್ಷಾಂತರ ಮಂದಿಯ ಪಾಲಿಗೆ ಅನ್ನದಾತೆಯಾಗಿರುವ ಕಾವೇರಿ, ತಲಕಾವೇರಿಯಲ್ಲಿ ಹೇಗೆ ಅವತರಿಸಿದಳು ಎಂಬುವುದರ ಕುರಿತು ಸ್ಕಂದ ಪುರಾಣದಲ್ಲಿ ಕಥೆಯಿರುವುದನ್ನು ನಾವು ಕಾಣಬಹುದು.

ಕವೇರನ ಮಗಳು ಕಾವೇರಿ
webdunia
WD
ಅದು ಪೌರಾಣಿಕ ಯುಗದ ದಿನಗಳು. ತಲಕಾವೇರಿ ಸಮೀಪದ ಬ್ರಹ್ಮಗಿರಿ ಬೆಟ್ಟದಲ್ಲಿ ಕವೇರನೆಂಬ ಮುನಿ ವಾಸವಾಗಿದ್ದನು. ಅವನಿಗೊಬ್ಬಳು ಪುತ್ರಿ ಬೇಕೆಂಬ ಅಭಿಲಾಷೆಯುಂಟಾಗಿ ಬ್ರಹ್ಮನನ್ನು ಕುರಿತು ತಪಸ್ಸು ಮಾಡತೊಡಗಿದನು. ತಪಸ್ಸಿಗೆ ಮೆಚ್ಚಿದ ಬ್ರಹ್ಮ ತನ್ನ ಮಾನಸ ಪುತ್ರಿ ಲೋಪಾಮುದ್ರೆಯನ್ನು ದತ್ತು ಮಗಳಾಗಿ ನೀಡಿದನು. ಲೋಪಾಮುದ್ರೆ ಕವೇರ ಮುನಿಯ ಆಶ್ರಮದಲ್ಲಿ ಬೆಳೆಯತೊಡಗಿದಳು. ಹೀಗೆ ಕವೇರ ಮುನಿಯ ಆಶ್ರಮದಲ್ಲಿ ಬೆಳೆದಿದ್ದರಿಂದ ಆಕೆ ಕಾವೇರಿಯಾದಳು.

ಒಂದು ದಿನ ಅಗಸ್ತ್ಯ ಮುನಿಗಳು ಕವೇರನ ಆಶ್ರಮಕ್ಕೆ ಬರುತ್ತಾರೆ. ಅಲ್ಲಿ ಕಾವೇರಿಯನ್ನು ಕಂಡು ಮನಸೋತು ಆಕೆಯನ್ನು ವಿವಾಹವಾಗುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾರೆ. ಇದಕ್ಕೆ ಕವೇರ ಮುನಿಗಳು ಒಪ್ಪಿ ತನ್ನ ಮಾನಸ ಪುತ್ರಿ ಕಾವೇರಿಯನ್ನು ವಿವಾಹ ಮಾಡಿಕೊಡಲು ಮುಂದಾಗುತ್ತಾರೆ. ಆದರೆ ವಿವಾಹವಾಗುವ ಬಯಕೆಯಿಲ್ಲದ ಕಾವೇರಿ ನನಗೆ ಜನಕಲ್ಯಾಣ ಮಾಡುವ ಅಭಿಲಾಷೆಯಿದ್ದು, ನೀವು ಸದಾ ನನ್ನೊಂದಿಗೆ ಇರಬೇಕು. ನನ್ನನ್ನು ನೀವು ಉಪೇಕ್ಷಿಸಿ ಎಲ್ಲೂ ಹೋಗಬಾರದು. ಹಾಗೊಂದು ವೇಳೆ ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋದದ್ದೇ ಆದರೆ ನಾನು ನದಿಯಾಗಿ ಹರಿಯುವುದಾಗಿ ಹೇಳುತ್ತಾಳೆ. ಕಾವೇರಿಯ ಷರತ್ತಿಗೆ ಒಪ್ಪಿದ ಅಗಸ್ತ್ಯ ಮುನಿಗಳು ಆಕೆಯನ್ನು ವಿವಾಹವಾಗಿ ತನ್ನ ಆಶ್ರಮಕ್ಕೆ ಕರೆದೊಯ್ಯುತ್ತಾರೆ.

ಕಾವೇರಿಗೆ ಕೊಟ್ಟ ಮಾತಿನಂತೆ ಅಗಸ್ತ್ಯ ಮುನಿಗಳು ತಮ್ಮ ಆಶ್ರಮದಲ್ಲಿ ಕಾವೇರಿಯೊಂದಿಗೆ ಆನಂದದಿಂದ ದಿನ ಕಳೆಯುತ್ತಿರುತ್ತಾರೆ. ಒಂದು ದಿನ ಅಗಸ್ತ್ಯ ಮುನಿಗಳು ತಾವಿದ್ದ ಆಶ್ರಮದಿಂದ ಬೆಟ್ಟದಾಚೆಗಿರುವ ಕನ್ನಿಕೆ ನದಿಯಲ್ಲಿ ಸ್ನಾನ ಮಾಡಲೆಂದು ಹೊರಡುತ್ತಾರೆ. ಕಾವೇರಿ ನಿದ್ದೆಯಲ್ಲಿರುವುದರಿಂದ ಅವಳು ಎಚ್ಚರವಾಗುವ ವೇಳೆಗೆ ಹಿಂತಿರುಗಿ ಬರಬಹುದೆಂದುಕೊಳ್ಳುತ್ತಾರೆ. ಆದರೆ ಅಗಸ್ತ್ಯ ಮುನಿಗಳು ಅತ್ತ ಸ್ನಾನಕ್ಕೆ ತೆರಳುತ್ತಿದ್ದಂತೆಯೇ ಇತ್ತ ನಿದ್ದೆಯಲ್ಲಿದ್ದ ಕಾವೇರಿಗೆ ಎಚ್ಚರವಾಗುತ್ತದೆ. ಸನಿಹದಲ್ಲಿ ಅಗಸ್ತ್ಯಮುನಿಗಳು ಇಲ್ಲದ್ದನ್ನು ಕಂಡು ಆಕೆಗೆ ಪತಿಯ ಮೇಲೆ ಕೋಪ ಬರುತ್ತದೆ, ಅಲ್ಲದೆ ಷರತ್ತು ಮೀರಿದ ಪತಿಯಿಂದ ದೂರವಾಗಿ ನದಿಯಾಗಿ ಹರಿದು ಲೋಕಕಲ್ಯಾಣ ಮಾಡಲು ಇದು ಸೂಕ್ತ ಸಮಯವೆಂದುಕೊಂಡು ಅಲ್ಲೇ ಇದ್ದ ಕೊಳಕ್ಕೆ ಇಳಿದು ಅಗಸ್ತ್ಯ ಮುನಿಗಳಿಗೆ ತಿಳಿಯದಂತೆ ಅಲ್ಲಿಂದ ಗುಪ್ತಗಾಮಿನಿಯಾಗಿ ಹರಿದು ಭಾಗಮಂಡಲ ಸೇರುತ್ತಾಳೆ. ಅಲ್ಲಿ ಕನ್ನಿಕೆ, ಸುಜ್ಯೋತಿ ನದಿಗಳೊಂದಿಗೆ ಸಂಗಮವಾಗಿ ಮುಂದೆ ಹರಿಯುತ್ತಾಳೆ. ಹೀಗೆ ಲೋಕಕಲ್ಯಾಣಕ್ಕೆ ಹೊರಟ ಕಾವೇರಿ ಪ್ರತಿ ವರ್ಷ ತುಲಾ ಸಂಕ್ರಮಣದಂದು ಭಕ್ತರಿಗೆ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಜಲರೂಪಿಣಿಯಾಗಿ ದರ್ಶನ ನೀಡುತ್ತಾ ಬಂದಿದ್ದಾಳೆ.

ಪರಮಪವಿತ್ರ ತೀರ್
webdunia
WD
ತೀರ್ಥೋದ್ಭವದಂದು ದೂರದೂರುಗಳಿಂದ ಆಗಮಿಸುವ ಭಕ್ತರು ಕಾವೇರಿಯ ಪವಿತ್ರ ಜಲತೀರ್ಥವನ್ನು ಮನೆಗೆ ಕೊಂಡೊಯ್ದು ಪೂಜಿಸುತ್ತಾರೆ.

ತಲಕಾವೇರಿಯಲ್ಲಿ ಬ್ರಹ್ಮಕುಂಡಿಕೆಯ ಪಕ್ಕದಲ್ಲಿಯೇ ಸ್ನಾನ ಕೊಳವಿದ್ದು, ಈ ಸ್ನಾನಕೊಳದಲ್ಲಿ ನೂತನವಾಗಿ ವಿವಾಹವಾದವರು ಕೈಕೈ ಹಿಡಿದುಕೊಂಡು ನೀರಿನಲ್ಲಿ ಮೂರು ಬಾರಿ ಮುಳುಗಿ ತಲೆಗೆ ಪವಿತ್ರ ಜಲವನ್ನು ಹಾಕಿಸಿಕೊಂಡರೆ ಜೀವನ ಪಾವನವಾಗುತ್ತದೆ ಎಂಬ ನಂಬಿಕೆಯಿದೆ. ಇನ್ನು ಇಲ್ಲಿ ಗಣಪತಿ, ಅಗಸ್ತ್ಯೇಶ್ವರ ದೇವಾಲಯ ಹಾಗೂ ಜ್ಯೋತಿ ಮಂಟಪವಿದೆ. ಈ ಕ್ಷೇತ್ರವನ್ನು ಕೆಲವು ವರ್ಷಗಳ ಹಿಂದೆಯಷ್ಟೇ ಜೀರ್ಣೋದ್ಧಾರ ಮಾಡಲಾಗಿದ್ದು, ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ.

webdunia
WD
ಅಗಸ್ತ್ಯೇಶ್ವರ ದೇವಾಲಯದ ಎಡಭಾಗದಲ್ಲಿರುವ ಬ್ರಹ್ಮಗಿರಿ ಬೆಟ್ಟವನ್ನೇರಲು ಸುಮಾರು 500 ಮೆಟ್ಟಿಲುಗಳನ್ನು ನಿರ್ಮಿಸಲಾಗಿದ್ದು, ಈ ಮೆಟ್ಟಿಲೇರಿದರೆ ಬ್ರಹ್ಮಗಿರಿಯ ಬೆಟ್ಟದ ಮೇಲ್ಭಾಗವನ್ನು ತಲುಪಬಹುದು. ಇಲ್ಲಿ ಹಿಂದೆ ಸಪ್ತಮಹರ್ಷಿಗಳು ಯಜ್ಞ ಮಾಡಿದ್ದರು ಎಂದು ಹೇಳಲಾಗುವ ಯಜ್ಞ ಕುಂಡಗಳು ಕಂಡು ಬರುತ್ತವೆ. ಇಲ್ಲಿನ ಕುಂಡದಲ್ಲಿ ನೀರು ಕಂಡು ಬರುತ್ತದೆ. ಇಲ್ಲಿಂದ ನಿಂತು ನೋಡಿದರೆ ಕಂಡು ಬರುವ ನಿಸರ್ಗದ ಸುಂದರ ದೃಶ್ಯ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಅಲ್ಲದೆ ಎದುರಿನ ಬಾಪುರೆ ಬೆಟ್ಟದಲ್ಲಿ ಕೆಟ್ಟು ನಿಂತ ಬೃಹತ್ ಗಾಳಿಯಂತ್ರಗಳು ಸೋಜಿಗವನ್ನುಂಟು ಮಾಡುತ್ತವೆ.

ಇನ್ನು ಭಾಗಮಂಡಲದಿಂದ ತಲಕಾವೇರಿಗೆ ತೆರಳುವ ರಸ್ತೆಯಲ್ಲಿ ಸಿಗುವ ವ್ಯೂ ಪಾಯಿಂಟ್, ಭೀಮನಕಲ್ಲು, ಸಲಾಂಕಟ್ಟೆ ಎಲ್ಲವೂ ಇತಿಹಾಸದ ಕಥೆ ಹೇಳುತ್ತವೆ.

ದಕ್ಷಿಣಕಾಶಿ ಭಾಗಮಂಡ
webdunia
WD

ತಲಕಾವೇರಿಗೆ ಹೋಗುವವರು ಭಾಗಮಂಡಲಕ್ಕೆ ತೆರಳಿ ಭಗಂಡೇಶ್ವರನಿಗೆ ಪೂಜೆ ಮಾಡಿ ಬಳಿಕ ತಲಕಾವೇರಿಗೆ ತೆರಳುತ್ತಾರೆ. ಭಾಗಮಂಡಲವು ತ್ರಿವೇಣಿ ಸಂಗಮವಾಗಿದ್ದು, ಇಲ್ಲಿ ಭಗಂಡೇಶ್ವರ, ಶಿವ, ಸುಬ್ರಹ್ಮಣ್ಯ, ವಿಷ್ಣು, ಗಣಪತಿ ದೇವಾಲಯಗಳಿವೆ. ಭಗಂಡ ಮಹರ್ಷಿ ತಪಸ್ಸು ಮಾಡಿದ ಸ್ಥಳವಾದುದರಿಂದ ಭಾಗಮಂಡಲ ಎಂಬ ಹೆಸರು ಬಂತು ಎನ್ನಲಾಗಿದೆ. ಭಾಗಮಂಡಲವನ್ನು ದಕ್ಷಿಣದ ಕಾಶಿ ಎಂಬುದಾಗಿಯೂ ಕರೆಯುತ್ತಾರೆ.

ಕಾವೇರಿ ತೀರ್ಥೋದ್ಭವದ ಸಮಯದಲ್ಲಿ ಭಾಗಮಂಡಲ ಜನಸಂದಣಿಯಿಂದ ಕೂಡಿರುತ್ತದೆ. ಈ ಸಂದರ್ಭ ಹಿರಿಯರಿಗೆ ಪಿಂಡ ಪ್ರದಾನ ಮಾಡುವ ಕಾರ್ಯವೂ ನಡೆಯುತ್ತದೆ. ತುಲಾ ಸಂಕ್ರಮಣದ ಒಂದು ತಿಂಗಳ ಕಾಲ ಭಗಂಡೇಶ್ವರ ದೇವಾಲಯದ ಕೊಠಡಿಯೊಂದರಲ್ಲಿ ನಂದಾದೀಪ ಉರಿಸಲಾಗುತ್ತದೆ. ಭಕ್ತರು ತಾವು ತರುವ ತುಪ್ಪವನ್ನು ಈ ದೀಪಕ್ಕೆ ಹಾಕುತ್ತಾರೆ. ಹಾಗೆಯೇ ಅಕ್ಕಿಯನ್ನು ಕೂಡ ಇಲ್ಲಿನ ಅಕ್ಷಯ ಭಂಡಾರಕ್ಕೆ ಹಾಕಿ ತಮ್ಮ ಮನೆಯ ಕಣಜದಲ್ಲಿ ಸದಾ ಭತ್ತ ತುಂಬಿರುವಂತೆ ಬೇಡಿಕೊಳ್ಳುತ್ತಾರೆ.

ಕೊಡಗಿನಲ್ಲಿ ಆಚರಿಸಲ್ಪಡುವ ಹಬ್ಬಗಳ ಪೈಕಿ ಕಾವೇರಿ ತೀರ್ಥೋದ್ಭವವಾಗುವ ತುಲಾಸಂಕ್ರಮಣವೂ ಒಂದಾಗಿದೆ. ಇಲ್ಲಿನವರು ಇದನ್ನು ಕಾವೇರಿ ಸಂಕ್ರಮಣವೆಂದು ಕರೆಯುತ್ತಾರೆ. ಅಂದು ಗದ್ದೆಗೆ ಕಾಡಿನಲ್ಲಿ ಸಿಗುವ ಬೆತ್ತು (ಬೆಚ್ಚು) ನೆಟ್ಟು ದೋಸೆಯಿಟ್ಟು ಭೂಮಿ ತಾಯಿಯನ್ನು ಪೂಜಿಸುವ ಸಂಪ್ರದಾಯ ಇಲ್ಲಿ ಕಂಡು ಬರುತ್ತದೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada