Select Your Language

Notifications

webdunia
webdunia
webdunia
webdunia

ನಿಮ್ಮ ಹೃದಯದ ಬಗ್ಗೆ ತಿಳಿದುಕೊಳ್ಳಿ...

ನಿಮ್ಮ ಹೃದಯದ ಬಗ್ಗೆ ತಿಳಿದುಕೊಳ್ಳಿ...
ಚೆನ್ನೈ , ಶನಿವಾರ, 22 ನವೆಂಬರ್ 2014 (12:11 IST)
ವರ್ಷಕ್ಕೆ 36.5 ದಶಲಕ್ಷ ಬಾರಿ, ದಿವಸಕ್ಕೆ 1 ಲಕ್ಷ ಸಲ, ನಿಮಿಷಕ್ಕೆ ಸುಮಾರು ನೂರು ಸಾರಿ ಬಡಿಯುವ, ಜೀವದ ಬಡಿತವಾಗಿರುವ ನಿಮ್ಮ ಹೃದಯವು ಹೇಗೆ ಕೆಲಸ ಮಾಡುತ್ತದೆ?
 
ರಕ್ತವನ್ನು ಅಭಿದಮನಿ(veins)ಯಿಂದ ಹೃದಯ ಮತ್ತು ಶ್ವಾಸಕೋಶಗಳಿಗೆ ಪಂಪ್ ಮಾಡಿ, ಅಪಧಮನಿ(arteries)ಗಳ ಮೂಲಕ ಆಮ್ಲಜನಕ ತುಂಬಿದ ಶುದ್ಧ ರಕ್ತವನ್ನು ದೇಹದ ಇತರಪೂರೈಕೆ ಮಾಡುವ ಕೆಲಸವನ್ನು ನಿಮ್ಮ ಹೃದಯವು ನಿರ್ವಹಿಸುತ್ತದೆ, ನಿಮ್ಮ ಹೃದಯ ಸಮರ್ಪಕವಾಗಿ ತನ್ನ ಕೆಲಸವನ್ನು ಮಾಡುತ್ತದೆ ಎಂಬುದರ ಸೂಚಕವೇ ಅದರ ಲಬ್ ಡಬ್ ಸದ್ದು.
 
ನಮ್ಮ ಹೃದಯವು ಹೇಗೆ ಕೆಲಸ ಮಾಡುತ್ತದೆ? ಮನುಷ್ಯನ ಹೃದಯವು ನಿಜವಾಗಿಯೂ ಒಂದು ಪಂಪ್‌ನಂತೆ ಕಾರ್ಯನಿರ್ವಹಿಸುತ್ತಿದ್ದು, ಹಿಡಿ ಮುಷ್ಟಿಯಷ್ಟು ದೊಡ್ಡದಾದ ಶಕ್ತಿಯುತವಾದ ಸ್ನಾಯುಗಳು ದೇಹದ ಲಕ್ಷಾಂತರ ಜೀವಕೋಶಗಳಿಗೆ ರಕ್ತವನ್ನು ಪೂರೈಕೆ ಮಾಡುತ್ತದೆ.
 
ಹೃದಯವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ನಾಲ್ಕು ವಿಭಾಗಗಳಲ್ಲಿ ಎರಡು ಹೃತ್ಕರ್ಣಗಳು (ಎಡ ಮತ್ತು ಬಲ) ಹಾಗೂ ಎರಡು ಹೃತ್ಕುಕ್ಷಿಗಳು (ಎಡ ಮತ್ತು ಬಲ). ಎಡ ಮತ್ತು ಬಲ ಭಾಗಗಳು ವಿಭಾಜಕ ಭಿತ್ತಿ(septum)ಯೆಂಬ  ವಿಭಾಜಕ ಗೋಡೆಯಿಂದ ಪ್ರತ್ಯೇಕಿಸಲ್ಪಟ್ಟಿವೆ.
 
ಈ ಎರಡು ಸ್ವೀಕರಣಾ ಕೋಣೆಗಳ ನಡುವೆ ಕವಾಟ(valves)ಗಳಿರುತ್ತವೆ. ಇವು ರಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತವೆ.
 
ಹೃತ್ಕರ್ಣ(atrium) ಮತ್ತು ಹೃತ್ಕುಕ್ಷಿ(ventricle) ನಡುವಿನ ರಕ್ತ ಸಂಚಾರವನ್ನು ಹೃದಯದ ಬಲಬದಿಯಲ್ಲಿರುವ ಟ್ರೈಕಸ್ಪಿಡ್ ಕವಾಟ (tricuspid valve) ಮತ್ತು ಎಡಬದಿಯಲ್ಲಿರುವ ಮಿಟ್ರಲ್ ಕವಾಟ (Mitral valve) ನಿಯಂತ್ರಿಸುತ್ತವೆ.
 
ಬಲ ಹೃತ್ಕುಕ್ಷಿಯಿಂದ ಶ್ವಾಸ ಧಮನಿಗಳ (Pulmonary Arteries) ಮೂಲಕ ಶ್ವಾಸಕೋಶಕ್ಕೆ ಪೂರೈಸುವುದಕ್ಕಾಗಿ ರಕ್ತವನ್ನು ಹರಿಸಲು ಶ್ವಾಸಕೋಶ ಕವಾಟ(pulmonary valve) ಎಂಬ ಬಲ ಕವಾಟವು ಅವಕಾಶ ನೀಡುತ್ತದೆ.
 
ರಕ್ತವು ಎಡ ಹೃತ್ಕುಕ್ಷಿಯಿಂದ ಎಡ ಮಹಾಪಧಮನಿ (aorta)ಗೆ ಹರಿಯುವುದನ್ನು ಎಡಭಾಗದಲ್ಲಿರುವ ಮಹಾಪಧಮನಿ ಕವಾಟ (aortic valve) ನಿಯಂತ್ರಿಸುತ್ತದೆ.
 
ಸಾಮಾನ್ಯ ವ್ಯಕ್ತಿಯ ಹೃದಯವು ಐದು ಲೀಟರಿನಷ್ಟು ರಕ್ತವನ್ನು ಪಂಪ್ ಮಾಡುತ್ತದೆ, ಅದು ನಿರಂತರವಾಗಿ ಇಡೀ ದೇಹದಲ್ಲಿ ಹರಿಯುತ್ತಿರುತ್ತದೆ.
 
ರಕ್ತವು ಹೃದಯದಿಂದ ಅಪಧಮನಿ(Arteries) ಎಂಬ ರಕ್ತನಾಳಗಳಿಗೆ ಸಂಚರಿಸಿ, ನಂತರ ಲೋಮನಾಳ(capillaries)ಗಳೆಂಬ ಸಣ್ಣ ರಕ್ತನಾಳಗಳಿಗೆ ಹರಿದು ಕೊನೆಯಲ್ಲಿ ಅಭಿಧಮನಿಗೆ ಸಂಚರಿಸಿ ಹೃದಯಕ್ಕೆ ಮರಳುತ್ತದೆ.
 
ಸುಮಾರು 60 ಸೆಕೆಂಡುಗಳಲ್ಲಿ ನಡೆದು ಹೋಗುವ ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ರಕ್ತವು ನಮ್ಮ ದೇಹದ ಮೂಳೆಗಳಿಗೆ, ಮಾಂಸಖಂಡಗಳಿಗೆ, ಜೀವಕೋಶಗಳಿಗೆ ಮತ್ತು ಇತರ ಎಲ್ಲಾ ಅವಯವಗಳಿಗೆ ಶುದ್ಧರಕ್ತ ಸಹಿತ ಆಮ್ಲಜನಕದೊಂದಿಗೆ ಸಂಪೂರ್ಣ ಆರೈಕೆಯನ್ನು ನೀಡುತ್ತದೆ.
 
ದೇಹದ ಮೂಲಕ ರಕ್ತವು ಹೇಗೆ ಹರಿಯುತ್ತಿದೆ ಎಂಬುದರ ಸಂಕೀರ್ಣ ಚಿತ್ರಣ ಈ ರೀತಿ ಇದೆ: ರಕ್ತವು ಎಡ ಹೃತ್ಕರ್ಣದಿಂದ(left atrium) ಎಡ ಹೃತ್ಕುಕ್ಷಿ (left ventricle)ಗೆ ಮಿಟ್ರಲ್ ಕವಾಟದ ಮೂಲಕ ರಕ್ತವು ಹರಿಯುತ್ತದೆ. ಎಡ ಹೃತ್ಕುಕ್ಷಿಯು ಸಂಕುಚಿತಗೊಂಡಾಗ, ಅಪಧಮನಿ ಕವಾಟ(aortic valve)ಗಳು ತೆರೆದುಕೊಂಡು ರಕ್ತವು ಎಡ ಹೃತ್ಕುಕ್ಷಿಗೆ(aorta) ಸಾಗಿಸಲ್ಪಟ್ಟು, ಪರಿಧಮನಿಗಳ(coronary arteries) ಮೂಲಕ ಹೃದಯ ಸೇರಿದಂತೆ ದೇಹದ ಎಲ್ಲಾ ಅವಯವಗಳಿಗೆ ರಕ್ತ ಪೂರೈಕೆಯಾಗುತ್ತದೆ.
 
ನಿರಂತರ ಪಂಪಿಂಗ್ ಕಾರ್ಯಕ್ಕಾಗಿ ಆಮ್ಲಜನಕ ಮತ್ತು ಪೌಷ್ಟಿಕಾಂಶವನ್ನು ಹೃದಯದ ಮಾಂಸಖಂಡಗಳಿಗೆ ನಿರಂತರ ಪೂರೈಕೆ ಮಾಡಲು ಈ ಪರಿಧಮನಿಗಳು ಹೃದಯದ ಸುತ್ತ ಸುತ್ತಿಕೊಂಡಿರುತ್ತವೆ.
 
ಅಶುದ್ಧ ಕಣಗಳು ಉತ್ಪನ್ನಗೊಂಡಂತೆಯೇ, ಅವುಗಳು ರಕ್ತದ ಮೂಲಕ ವೀನಾ ಕಾವ (vena cava)ದ ಮೂಲಕ ಬಲ ಹೃತ್ಕರ್ಣಗಳಿಗೆ ತಲುಪುತ್ತವೆ. ಇಲ್ಲಿ ಸೇರಿಕೊಂಡ ರಕ್ತವು ತ್ರ್ಯಗ್ರ ಕವಾಟ(tricuspid valve)ಗಳು ತೆರೆದುಕೊಳ್ಳುವಂತೆ ಪ್ರಚೋದನೆ ಮಾಡಿ, ರಕ್ತವು ಬಲ ಹೃತ್ಕರ್ಣದಿಂದ ಬಲ ಹೃತ್ಕುಕ್ಷಿಗೆ ಸಂಚರಿಸಲು ಅನುವು ಮಾಡಿಕೊಡುತ್ತದೆ.
 
ಕೋಣೆಗಳು ತುಂಬಿದಾಗ ಹೃದಯವು ಸಂಕುಚಿತಗೊಂಡು ಪಪ್ಪುಸ ಕವಾಟ (pulmonary valve)ವು ತೆರೆದುಕೊಳ್ಳುತ್ತದೆ. ನಂತರ ರಕ್ತವು ಬಲ ಹೃತ್ಕುಕ್ಷಿಯಿಂದ ಅಪಧಮನಿಗೆ(pulmonary artery) ಹರಿಯುತ್ತದೆ.
 
ಅಪಧಮನಿಯು (pulmonary artery) ಎರಡು ವಿಭಾಗಗಳನ್ನು ಹೊಂದಿದ್ದು, ಇದು ಬಲ ಮತ್ತು ಎಡ ಶ್ವಾಸಕೋಶಕ್ಕೆ ರಕ್ತವನ್ನು ಸಾಗಿಸುತ್ತದೆ. ಶ್ವಾಸಕೋಶದಿಂದ, ಲೋಮಧಮನಿಯು(capillary vessels) ಶ್ವಾಸಕೋಶದ ಸಣ್ಣ ವಾಯುಚೀಲ ‌(air sacs)ಗಳಾದ್ಯಂತ ರಕ್ತವನ್ನು ಒಯ್ಯುತ್ತದೆ.
 
ಶ್ವಾಸಕೋಶದಲ್ಲಿ ಉಸಿರಾಟ ನಡೆದಾಗ ಆಮ್ಲಜನಕವು ದೇಹದೊಳಗೆ ಪ್ರವೇಶಿಸಿ, ಇಂಗಾಲದ ಡೈ ಆಕ್ಸೈಡ್ ದೇಹದಿಂದ ಹೊರಹೋಗುತ್ತದೆ. ಈ ವರ್ಗಾವಣೆಯು ಉಂಟಾದಾಗ ರಕ್ತವು ನೇರಳೆ ಅಥವಾ ಕಡು ಕೆಂಪು ಬಣ್ಣದಿಂದ ಪ್ರಖರ ಕೆಂಪು ಬಣ್ಣಕ್ಕೆ ಬದಲಾಗುತ್ತದೆ.
 
 
ಶ್ವಾಸಕೋಶದ ಮೂಲಕ ರಕ್ತವು ಸಾಗಿದ ನಂತರ, ಶ್ವಾಸಕೋಶದ ರಕ್ತನಾಳ(pulmonary veins)ದಿಂದ ಎಡ ಹೃತ್ಕರ್ಣ(left atrium)ಕ್ಕೆ ಸಾಗಲ್ಪಡುತ್ತದೆ. ಅಲ್ಲಿಂದ ಎಡ ಹೃತ್ಕುಕ್ಷಿ (left ventricle) ಮತ್ತು ಅಯೋರ್ಟಾ ಮೂಲಕ ರಕ್ತದ ಪರಿಚಲನೆ ಪ್ರಕ್ರಿಯೆ ಪುನಃ ಪ್ರಾರಂಭವಾಗುತ್ತದೆ.

Share this Story:

Follow Webdunia kannada