Select Your Language

Notifications

webdunia
webdunia
webdunia
webdunia

ಹೃದಯದ ಕ್ಯಾಥಟರೈಸೇಶನ್

ಹೃದಯದ ಕ್ಯಾಥಟರೈಸೇಶನ್
ಚೆನ್ನೈ , ಶನಿವಾರ, 22 ನವೆಂಬರ್ 2014 (11:31 IST)
ಹೃದ್ರೋಗಿಯ ಹೃದಯ ಮತ್ತು ಸುತ್ತಲಿನ ರಕ್ತನಾಳಗಳ ಅಂಗರಚನೆ ಮತ್ತು ಕಾರ್ಯವಿಧಾನವನ್ನು ಅರಿತುಕೊಳ್ಳುವ ನಿಟ್ಟಿನಲ್ಲಿ ಕ್ಯಾಥಟರೈಸೇಶನ್ ಮತ್ತು ಏಂಜಿಯೋಪ್ಲಾಸ್ಟಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಕ್ಯಾಥೆಟರ್ (ಟೊಳ್ಳು ನಳಿಕೆ)ಗಳನ್ನು ಹೃದಯದೊಳಗಿರಿಸುವ ಮೂಲಕ ಈ ಪರೀಕ್ಷೆ ನಡೆಸಲಾಗುತ್ತದೆ. ಹೃದಯದ ಸರ್ಜರಿ ಅಥವಾ ಏಂಜಿಯೋಪ್ಲಾಸ್ಟಿಗೆ ಶಿಫಾರಸು ಮಾಡಲಾದ ಪ್ರತಿಯೊಬ್ಬ ರೋಗಿಗಳ ಮೇಲೂ ಇದನ್ನು ನಡೆಸಲಾಗುತ್ತದೆ ಮತ್ತು ಇದರಿಂದ ಸಾಕಷ್ಟು ಹೃದಯ ಸಂಬಂಧಿತ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ.
 
ಕ್ಯಾಥಟರೈಸೇಶನ್ ಹೇಗೆ ಮಾಡಲಾಗುತ್ತದೆ?
ರೋಗಿಯನ್ನು ಕ್ಯಾಥಟರೈಸೇಶನ್ ಲ್ಯಾಬೊರೇಟರಿಗೆ ಕರೆತರಲಾಗುತ್ತದೆ ಮತ್ತು ವಿಶೇಷ ಪರೀಕ್ಷಾ ಟೇಬಲ್ ಮೇಲೆ ಮಲಗಿಸಲಾಗುತ್ತದೆ. ಸ್ಥಳೀಯ ಅರಿವಳಿಕೆ ನೀಡಿದ ಬಳಿಕ, ತೊಡೆಸಂದು, ಭುಜ ಅಥವಾ ಕುತ್ತಿಗೆ ಭಾಗದ ರಕ್ತನಾಳಗಳಿಗೆ ಕ್ಯಾಥೆಟರ್ ಒಂದನ್ನು ಒಳತೂರಿಸಲಾಗುತ್ತದೆ. (ಪುಟ್ಟ ರಂಧ್ರದ ಮೂಲಕ ಅಥವಾ ನೀಡ್ಲ್-ಸ್ಟಿಕ್ ಮೂಲಕ ಕ್ಯಾಥಟರನ್ನು ಒಳಸೇರಿಸಲಾಗುತ್ತದೆ. ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಕ್ಯಾಥಟರನ್ನು ಒಳಸೇರಿಸಲಾಗುತ್ತದೆ). ಈ ಕ್ಯಾಥಟರನ್ನು ರಕ್ತನಾಳಗಳ ಮೂಲಕ ಹೃದಯದತ್ತ ಮೆದುವಾಗಿ ತಳ್ಳಲಾಗುತ್ತದೆ.
 
ಹೃದಯದೊಳಗೆ ಸೇರಿದ ಬಳಿಕ, ಕ್ಯಾಥಟರನ್ನು ವಿವಿಧ ಭಾಗಗಳಿಗೆ ಚಲಿಸಬಹುದಾಗಿದೆ. ಈ ಕ್ಯಾಥೆಟರನ್ನು ಒತ್ತಡ ಅಳೆಯುವ ಸಾಧನಕ್ಕೆ ಸಂಪರ್ಕಿಸಿದಲ್ಲಿ, ಹೃದಯದ ವಿವಿಧ ಭಾಗಗಳಲ್ಲಿರುವ ಒತ್ತಡವನ್ನು ಅಳೆಯಬಹುದು. ರಕ್ತದಲ್ಲಿನ ಆಮ್ಲಜನಕ ಪ್ರಮಾಣ ತಿಳಿಯುವ ನಿಟ್ಟಿನಲ್ಲಿ ವಿವಿಧ ಭಾಗಗಳಿಂದ ರಕ್ತದ ಸ್ಯಾಂಪಲ್‌ಗಳನ್ನು ತೆಗೆಯಬಹುದು. ಅಲ್ಲದೆ, ಡೈಯನ್ನು ಕ್ಯಾಥಟರ್ ಮೂಲಕ ಇಂಜೆಕ್ಟ್ ಮಾಡಿ, ತ್ವರಿತ ಎಕ್ಸ್-ರೇ ಚಿತ್ರಗಳನ್ನು ದಾಖಲಿಸಬಹುದು, ಹೃದಯದ ಕೋಣೆಗಳಲ್ಲಿ ಅಥವಾ ಹೃದಯದ ಸುತ್ತ ಇರುವ ರಕ್ತನಾಳಗಳಲ್ಲಿ ರಕ್ತ ಪರಿಚಲನೆಯ ಕುರಿತ "ಚಲನಚಿತ್ರ"ವನ್ನು ಕೂಡ ದಾಖಲಿಸಬಹುದು. ಇದನ್ನು ಏಂಜಿಯೋಗ್ರಫಿ ಅಥವಾ ಆರ್ಟೀರಿಯೋಗ್ರಫಿ ಎಂದೂ ಕರೆಯಲಾಗುತ್ತದೆ.
 
ಒಮ್ಮೆ ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ಕ್ಯಾಥಟರ್‌ಗಳನ್ನು ತೆಗೆಯಲಾಗುತ್ತದೆ. ಕ್ಯಾಥಟರೈಸೇಶನ್ ಸ್ಥಳದಲ್ಲಿ 30ರಿಂದ 60 ನಿಮಿಷಗಳ ಕಾಲ ಒತ್ತಡ ಇರಿಸುವ ಮೂಲಕ ಬ್ಲೀಡಿಂಗ್ ನಿಯಂತ್ರಿಸಲಾಗುತ್ತದೆ.
 
ಕ್ಯಾಥಟರೈಸೇಶನ್ ಬಳಕೆ ಯಾಕೆ?
ಒಟ್ಟಾರೆಯಾಗಿ ಹೃದಯದ ಕಾರ್ಯವಿಧಾನ, ನಿರ್ದಿಷ್ಟ ಹೃದಯದ ಕೋಣೆಗಳ ಕೆಲಸ, ಹೃದಯದ ಕವಾಟಗಳ ಬಗ್ಗೆ (ಅವು ಕಿರಿದಾಗಿವೆಯೇ ಅಥವಾ ಸೋರಿಕೆಯಾಗುತ್ತಿವೆಯೇ), ಹೃದಯದೊಳಗಿನ ತೊಂದರೆಗಳು, ಮತ್ತು ಹೃದಯದ ಸ್ನಾಯುವಿಗೆ ರಕ್ತ ಪೂರೈಸುವ ರಕ್ತನಾಳಗಳಲ್ಲಿ ತಡೆ ಎಲ್ಲಿ ಆಗಿದೆ ಮತ್ತು ಅದರ ತೀವ್ರತೆ ಎಷ್ಟು ಎಂಬುದನ್ನು ಕಾರ್ಡಿಯಾಕ್ ಕ್ಯಾಥಟರೈಸೇಶನ್ ಅಥವಾ ಏಂಜಿಯೋಗ್ರಫಿಯಿಂದ ತಿಳಿದುಕೊಳ್ಳಬಹುದಾಗಿದೆ.

Share this Story:

Follow Webdunia kannada