Select Your Language

Notifications

webdunia
webdunia
webdunia
webdunia

ಭರವಸೆಯ ಸಂಕಲ್ಪದೊಂದಿಗೆ ಹೊಸ ವರ್ಷಕ್ಕೆ....

ಭರವಸೆಯ ಸಂಕಲ್ಪದೊಂದಿಗೆ ಹೊಸ ವರ್ಷಕ್ಕೆ....
ರಮ್ಯ ಶೆಟ್ಟಿ
PTI
ಹೊಸವರ್ಷದ ಹೊಸ್ತಿಲಲ್ಲಿದ್ದೇವೆ ಹಳೆಯದಾದ 2008ರ ಕ್ಯಾಲೆಂಡರ್ ಅನ್ನು ಮುರುಟಿ ಕಸದ ಬುಟ್ಟಿಗೆಸೆದು ಬಿಡುತ್ತೇವೆ, ಅದರಂತೆ 2008 ಇನ್ನೆಂದೂ ಬರದಂತೆ ಕಾಲಗರ್ಭ ಸೇರಿಕೊಂಡು ಬಿಡುತ್ತದೆ. ಹೊಚ್ಚ ಹೊಸ ಕ್ಯಾಲೆಂಡರ್ ನಮ್ಮ ಮನೆಯ ಗೋಡೆಯನ್ನು ಅಲಂಕರಿಸುವುದರೊಂದಿಗೆ 2009ಕ್ಕೆ ನಾವು ಒಂದಷ್ಟು ಕನಸ ಹೊತ್ತುಕೊಂಡು ಕಾಲಿರಿಸುತ್ತೇವೆ. ಲೋಕೊ ಭಿನ್ನ ರುಚಿ ಎಂಬಂತೆ ಹೊಸವರ್ಷದ ಆಚರಣೆಯೂ ಅವರರವರ ರುಚಿಗೆ ತಕ್ಕಂತೆ ವಿವಿಧತೆಯಿಂದ ಕೂಡಿರುತ್ತದೆ. ನಮ್ಮ ದೇಶದಲ್ಲಿ ಆಚರಿಸಲ್ಪಡುವ ನೂರಾರು ಹಬ್ಬಹರಿದಿನಗಳಲ್ಲಿ ಇದೂ ಒಂದೆಂಬಂತೆ ಸೇರಿಕೊಂಡು ಬಿಟ್ಟಿದೆ.

ಸರಿದು ಹೋಗುತ್ತಿರುವ ವರ್ಷದ ಕೊನೆಯ ರಾತ್ರಿ ಮಧ್ಯರಾತ್ರಿಯ ವೇಳೆಗೆ ವಿಶ್ವದ ಹೆಚ್ಚಿನ ಕಡೆ ಪಟಾಕಿಗಳನ್ನು ಸಿಡಿಸಿ, ಬೆಂಕಿ ಉರಿಸಿ ಆಚರಿಸಿಕೊಳ್ಳುತ್ತಾರೆ, ಬೇರೆ ದಿನಗಳಲ್ಲಿ ಇದು ನಿಷಿದ್ಧವಾದರೂ. ನ್ಯೂ ಈಯರ್ ಈವ್ ಎಂದು ಕರೆಯಲ್ಪಡುವ ರಾತ್ರಿಗೆ ವಿಶೇಷ ರಿಯಾಯಿತಿ ಇದೆ. ನಮ್ಮೂರ ಹೊಸ ವರ್ಷದ ಆಚರಣೆಯೆಂದರೆ ಸರಿದುಹೋಗುತ್ತಿರುವ 2008ರ ಪ್ರತೀಕದಂತೆ ಬಟ್ಟೆ ಹುಲ್ಲುಕಡ್ಡಿಗಳಿಂದ ಅಜ್ಜನನ್ನು ತಯಾರಿಸುತ್ತಾರೆ. ಮಧ್ಯರಾತ್ರಿಯವರೆಗೂ ಊರಿಡಿಯ ಕಿವಿಗಡುರುವಂತೆ ಮೈಕುಗಳಲ್ಲಿ ಸಿನಿಮಾ ಹಾಡುಗಳು ಮಾರ್ಧನಿಸುತ್ತಿರುತ್ತದೆ.

ರಾತ್ರಿಯ 12ರ ವೇಳೆ ಕೊನೆಯುಸಿರೆಳೆದ 2008ರ ಅಜ್ಜನನ್ನು ಸುಟ್ಟುಬಿಡುತ್ತಾರೆ. ಇದು ಒಂದು ತರಹ 2008ಕ್ಕೆ ಅಂತ್ಯಸಂಸ್ಕಾರವಿದ್ದಂತೆ ಹಾಗು ನವಜಾತ 2009ಕ್ಕೆ ಹುಟ್ಟಿನ ಸ್ವಾಗತದಂತೆ. ನಂತರ ಗುಂಡು-ತುಂಡುಗಳ ಔತಣವಿರುತ್ತದೆ. ಇದು ನಮ್ಮೂರಿನ ಹೊಸವರ್ಷ ಆಚರಣೆ. ಇನ್ನು ನಗರದ ತಾರಾ ಹೋಟೆಸ್‌‌ಗಳಲ್ಲಿನ ಆಚರಣೆಯ ಪರಿಯೇ ಬೇರೆ, ಸಿನಿಮಾ ತಾರೆಯರ ನರ್ತನ ಹೊಸವರ್ಷದ ರಾತ್ರಿಯನ್ನು ರಂಗೇರಿಸುತ್ತದೆ. ಇದಕ್ಕಾಗಿ ಸಿನಿಮಾ ತಾರೆಯರಿಗೆ ಲಕ್ಷಾಂತರ ರೂಪಾಯಿ ಸಂಭಾವನೆಯನ್ನೂ ಸುರಿಯಲಾಗುತ್ತದೆ. ಈ ಬಾರಿ ಹೊಸ ವರ್ಷದ ರಾತ್ರಿ ಜೆಡಬ್ಲ್ಯೂ ಮಾರಿಯಟ್ ಹೋಟೆಲ್‌ನಲ್ಲಿ ಪ್ರದರ್ಶನ ನೀಡಲು ಬಾಲಿವುಡ್ ಬೆಡಗಿ ಕತ್ರಿನಾ ಕೈಫ್‌ಗೆ ಸಿಗುತ್ತಿರುವ ಸಂಭಾವನೆ ಬರೊಬ್ಬರಿ ಒಂದು ಕೋಟಿ ರೂಪಾಯಿ.

ಇನ್ನೂ ಮಾಧ್ಯಮಗಳು ಡಿಸೆಂಬರ್‌ನ ಕೊನೆಯ ವಾರದಲ್ಲೇ ಹೊಸವರ್ಷದ ಸ್ವಾಗತಕ್ಕೆ ಸಿದ್ಧತೆ ಆರಂಭಿಸುತ್ತವೆ. ಕಳೆದು ಹೋದ ವರ್ಷದ ಅವಲೋಕನಗಳು, ಆಗಲಿದ ಗಣ್ಯರು, ವರ್ಷದ ಮಹತ್ವದ ಬೆಳೆವಣಿಗೆಗಳ ಮೇಲೆ ಬೆಳಕು ಚೆಲ್ಲುತ್ತವೆ. ಹಾಗೇ ಮುಂಬರುವ ವರ್ಷದ ಬಗ್ಗೆ ಒಂದಿಷ್ಟು ಮುನ್ನೋಟ ಹರಿಸುವ ಪ್ರಯತ್ನವನ್ನೂ ನಡೆಸಲಾಗುತ್ತದೆ.

ನಮ್ಮಲ್ಲಿ ಹಲವರು ಹೊಸ ವರ್ಷ ಬಂತೆಂದಾಗ ಮೈ ಕೊಡವಿಕೊಂಡು ಮೇಲೆದ್ದು ಹೊಸ ಚೈತನ್ಯ ತುಂಬಿಕೊಂಡು ಒಂದಷ್ಟು ಸಂಕಲ್ಪಗಳನ್ನು ಮಾಡುತ್ತೇವೆ ಆದರೆ ಒಂದು ತಿಂಗಳೊಳಗೆ ಅವೆಲ್ಲಾ ಮೂಲೆ ಗುಂಪಾಗಿ ಬಿಡುತ್ತವೆ. ತೂಕ ಇಳಿಸಿಕೊಳ್ಳುವುದು, ಧೂಮಪಾನ, ಮಧ್ಯಪಾನ ಬಿಟ್ಟುಬಿಡುವುದು ಮುಂತಾದವುಗಳೆಲ್ಲಾ 15 ದಿನದೊಳಗೆ ಇತಿಹಾಸವೆನಿಸಿಬಿಟ್ಟರೆ ಅಚ್ಚರಿಯಿಲ್ಲ. ವರ್ಷದ ಕೊನೆಯಲ್ಲಿ ತಮ್ಮ ಸಂಕಲ್ಪಗಳಿಗೆ ಅಂಟಿಕೊಂಡೇ ಇರುವವರು ಅತಿ ಕಡಿಮೆ. ಆದರೂ ಹೊಸ ವರ್ಷದ ಸಂಕಲ್ಪಗಳು ಹೊಸ ಸಾಧನೆಗೆ ಇಂಬು ಕೊಡಬಲ್ಲವು. ಕಳೆದು ಹೋದ ಜೀವನದಲ್ಲಿ ಸಾಧಿಸಿದ್ದೆಷ್ಟು ಎಂದು ಯೋಚಿಸಲು ಅವಕಾಶವಾಗಬಲ್ಲುದು ಈ ಹೊಸ ವರ್ಷದ ಸಂದರ್ಭ. ಮುಂಬರುವ ದಿನಗಳಲ್ಲಿ ಇದುವರೆಗೆ ಸಾಧಿಸಲಾಗದ್ದನ್ನು ಸಾಧಿಸುವ ಕನಸು ಕಟ್ಟಿದಾಗಲೇ ಅದು ಪ್ರಯತ್ನಕ್ಕಾದರೂ ಇಳಿದೀತು. ಪ್ರಯತ್ನ ಒಂದಲ್ಲ ಒಂದು ದಿನ ಫಲ ನೀಡದೆ ಇರದು.

Share this Story:

Follow Webdunia kannada