Select Your Language

Notifications

webdunia
webdunia
webdunia
webdunia

ಮತ್ತೆ ಕಾಡುತ್ತೇನೆ ಗೆಳೆಯ... ಕಾಯಬೇಡ !

ಮತ್ತೆ ಕಾಡುತ್ತೇನೆ ಗೆಳೆಯ... ಕಾಯಬೇಡ !
ND
ಅಲ್ಲಿ ಕುಳಿತಿದ್ದ ನನಗೆ ನಿನ್ನ ನೆನಪೇ ಇರಲಿಲ್ಲ. ನಿನ್ನಂಥ ಎಷ್ಟೋ ಹುಡುಗರು ನನ್ನ ಹಿಂದೆ ಬಿದ್ದವರಿದ್ದರು. ಯಾರಿಗೂ ಉತ್ತರ ಕೊಡದೆ ಮುಂದೆ ನಡೆಯುತ್ತಾ ಕಳೆದುಕೊಂಡವಳು. ವಯಸ್ಸು ನೆತ್ತಿಗೆ ಬಂದರೂ ಪರಿವೆಯಿರಲಿಲ್ಲ ನನಗೆ. ನನ್ನೊಳಗೆ ಅವಿತಿದ್ದವನ ಹುಡುಕಾಟದಲ್ಲಿ ಕೊನೆಗೂ ವರವಾದವನು ನೀನು. ಮರೆತೇ ಹೋಗಿದ್ದ ಕನಸುಗಳಿಗೆ ಬಣ್ಣ ಮೆತ್ತಿ ಸಿಂಗರಿಸಿದವನು, ರೆಕ್ಕೆ ಕಟ್ಟಿ ಹಾರಿಸಿದವನು, ನೀರೆರೆದು ಪೋಷಿಸಿದವನು ನೀನು. ಅದೇ ಕೊನೆ ಕಣೋ... ಮತ್ತೆಂದೂ ಅವು ಕಂಗೊಳಿಸಿಲ್ಲ.

ನನಗಿನ್ನೂ ವಯಸ್ಸಾಗಿಲ್ಲ ಎಂದೆಲ್ಲಾ ನನ್ನ ಕಿವಿ ತುಂಬಿದ್ದು ಸುಳ್ಳೆಂದು ನನಗೆ ತಿಳಿದರೂ ನೀನು ನನ್ನ ಮನಸ್ಸನ್ನು ಬೆಚ್ಚಗಿರಿಸಲು ಯತ್ನಿಸುತ್ತಿದ್ದುದು ನನಗೆ ಖುಷಿ ಕೊಡುತ್ತಿದ್ದ ದಿನಗಳವು. ಕನ್ನಡಿಯೆದುರು ನಿಂತು ಮುಖದಲ್ಲಿ ಗೆರೆಗಳು ಮ‌ೂಡಿವೆಯೋ ಎಂದು ಹುಡುಕುತ್ತಿದ್ದ ದಿನಗಳಲ್ಲಿ ಮರುಭೂಮಿಯಂತಿದ್ದ ನನ್ನಲ್ಲಿ ಹೂತು ಹೋದ ಪ್ರೀತಿ ನೀನು.. ಮತ್ತೆ ಗಾಳಿ ಬಂದಾಗ ಕಾಣಿಸಬಹುದು ಎಂದುಕೊಂಡಿದ್ದೆ.. ಸುಳ್ಳಾಯಿತು, ಇಂದಿಗೂ.. ಹುಡುಕಾಟದಲ್ಲಿ ಸೋತಿದ್ದೇನೆ. ಗಾಳಿಯೂ ನಿಂತಿದೆ. ಮತ್ತೆ ಮಳೆ ಬರುವ ನಿರೀಕ್ಷೆಗಳು ನನ್ನಲ್ಲೇ ಬತ್ತಿ ಹೋಗಿವೆ..

ಶಿಶಿರ, ವಸಂತ, ವರ್ಷ, ಹೇಮಂತ, ಶರದ್ ಋತುಗಳ ಹೆಸರುಗಳಷ್ಟೇ ನೆನಪಿವೆ... ನನ್ನಲ್ಲಿ ಎಲ್ಲವೂ ಬಂದು ಹೋದವುಗಳೇ.. ಉಳಿದಿರುವುದು ಗ್ರೀಷ್ಮ ಮಾತ್ರ. ನನ್ನ ಹಚ್ಚಹಸುರಿನ ಗೋಡೆಗಳಲ್ಲಿ ನೀನು ಬರೆದ ಚಿತ್ರಗಳು ಮಸುಕಾಗಿವೆ ಗೆಳೆಯ. ಹಿತ್ತಿಲ ಬಾಳೆತೋಟದಲ್ಲೇ ಬತ್ತಲಾಗುವ ಕನಸುಗಳು ಎಲ್ಲಿ ಹೋದವೋ ನಾ ಕಾಣೆ... ನಿನ್ನ-ನನ್ನಂತೆ ಅವು ದೂರವಾಗಿವೆ.

ಅಂದುಕೊಂಡಂತೆ ಎಲ್ಲವೂ ಸಾಗುತ್ತಿದ್ದರೆ ನಾನೀಗ ನಿನ್ನ ತಲೆಯನ್ನು ನೇವರಿಸುತ್ತಿದ್ದೆ. ಯಾವುದೂ ನಡೆಯಲಿಲ್ಲ.. ಬಹುಶಃ ನಡೆಯಲು ನಾನು ಬಿಡಲಿಲ್ಲ. ನನ್ನ ಬೆರಳುಗಳನ್ನು ನೀನು ತೀಡುತ್ತಿದ್ದಾಗಲೆಲ್ಲಾ ಷೋಡಶಿಯಾಗುತ್ತಿದ್ದವಳು ನಾನು.. ಈಗ ಮತ್ತೂ ವಯಸ್ಸಾಗಿದೆ ಕಣೋ.. ದೇಹಕ್ಕಿಂತಲೂ ಮನಸ್ಸಿಗೆ.. ತಿದ್ದುವವರಿಲ್ಲ.. ತೀಡುವವರಿಲ್ಲ, ಬೇಡುವವರಿಲ್ಲ. ಹಸಿವೆ ಮುಗಿದು ಹೋಗಿದೆ. ಬಾಯಾರಿಕೆ ಮರೆತು ಹೋಗಿದೆ.. ದಾಳಿ ಸಾಕಾಗಿದೆ..

ಬದುಕು ತುಕ್ಕು ಹಿಡಿಯುತ್ತಿದೆ. ಮಟ್ಟಸ ಮಧ್ಯಾಹ್ನ ಮುಸ್ಸಂಜೆಯಾದ ದಿನಗಳು ಕಣ್ಣುಗಳ ಬಳಿ ಸುಳಿದಾಡುತ್ತಿವೆ.. ನನ್ನ ಬದುಕೀಗ ಬೆಂಗಾಡು.. ಹೆಜ್ಜೆಗಳೂ ಕಾಣಿಸುತ್ತಿಲ್ಲ.. ಎಲ್ಲವೂ ಬರಡಾಗಿವೆ. ನಿನ್ನ ನೆನಪುಗಳು ಮಾತ್ರ ಅಪರಂಜಿ..

ಅದೇ ಬಟಾಬಯಲು ಕಪ್ಪುಕಲ್ಲಿನ ಗೋಡೆಗೊತ್ತಿ ಗಲ್ಲ ಹಿರಿದು ಉಸುರಿದ ಬೆಚ್ಚನೆ ಮಾತುಗಳಿನ್ನೂ ಗುಣಗುಣಿಸುತ್ತಿವೆ ಗೆಳೆಯಾ... ಏನು ಮಾಡಲಿ. ನನ್ನೊಲವು ನಿನ್ನ ಕಡೆಗಿದೆಯೆಂದು ಹೇಳಲು ನಿಂತಾಗಲೆಲ್ಲಾ ಕಾಲಿನಡಿಯ ಕಸವೂ ಪತರಗುಡುತ್ತಿತ್ತು.. ನಿತ್ರಾಣ ಎದುರಾಗುತ್ತಿತ್ತು. ನೀನಂದುಕೊಂಡದ್ದೆಲ್ಲ ನಡೆಯಬಾರದೆಂದು ನಾನಂದು ಕೊಂಡಿರಲಿಲ್ಲ. ತುಟಿಯಂಚಿನಿಂದ ಹೊರಟ ಮಾತುಗಳಿಗೆ ನಾನ್ಯಾವತ್ತೂ ಬೆರಳಿಟ್ಟವಳಲ್ಲ. ಈಗ ಎಲ್ಲವೂ ಕಣ್ಣೆದುರಿಗೆ ಬರುತ್ತಿದೆ. ಕಾಲ ಮೀರಿ ಹೋಗಿದೆ. ನಡಿಗೆಯ ನೋಡುವವರಿಲ್ಲ, ಮುನಿಸಿಗೆ ಸ್ಪಂದಿಸುವವರಿಲ್ಲ.. ನಾನೇ ಎಲ್ಲ..

ನಾವಂದು ಹೋಗಿದ್ದ ಪಿಕ್‌ನಿಕ್‌ ದಿನ ಮಾತೇ ಆಡದೆ ಮಡಿಲಲ್ಲಿ ಮಲಗಿದ್ದ ನಿನ್ನ ನೆನಪಾಗುತ್ತಿದೆ ಕಣೋ.. ಮನೆಯಲ್ಲಿ ಸುಳ್ಳು ಹೇಳಿ ತಂಗಿ ಕೈಲಿ ಬೈಸಿಕೊಂಡದ್ದು ಊಹುಂ ಮರೆಯಲಾಗದು.. ಮೊನ್ನೆ ಅವನ ಜತೆ ಮರಳುಗಾಡಿನಲ್ಲಿ ಜೋಡಿಯೊಂದನ್ನು ಕಂಡು ನಿನ್ನದೂ ನೆನಪಾಯಿತು. ಛೆ.. ಹಾಳು ಎಂದುಕೊಂಡೆ.. ಆತ ಪಕ್ಕದಲ್ಲೇ ಇದ್ದ, ಸಾಕ್ಷಿಗೆ ಕರುಳ ಬಳ್ಳಿ ಬೇರೆ... ನಾನು ಪಾಪಿ ಎಂದುಕೊಂಡೆ.

ಅದು ನನ್ನದೆಂದು ಮೊದ ಮೊದಲಿಗೆ ಅನ್ನಿಸುತ್ತಲೇ ಇರಲಿಲ್ಲ. ಈಗೀಗ ನಿನ್ನನ್ನು ಆ ಮಗುವಿನಲ್ಲೇ ಕಾಣುತ್ತಿದ್ದೇನೆ. ಮನಸ್ಸು ಮೃದುವಾಗುತ್ತಿದೆ.. ಹಾಳು ಪ್ರೀತಿ ಮರೆಯಲಾಗುತ್ತಿಲ್ಲ. ಯಾಕಾದರೂ ನಿನ್ನನ್ನು ಪ್ರೀತಿಸಿದೆಯೋ ಅನ್ನಿಸುತ್ತಿದೆ.. ನಿಜ ಹೇಳು ನೀನು ಸುಖವಾಗಿದ್ದೀಯಾ..

ಆ ದಿನ ಹತ್ತಿರ ಬರುತ್ತಿದ್ದಂತೆ ನೀ ಕೊಟ್ಟ ಶುಭಾಶಯ ಪತ್ರಗಳನ್ನಿಟ್ಟಿದ್ದ ಪುಸ್ತಕವನ್ನು ಬಿಡಿಸದೆ ಬೆಂಕಿಗೆ ಹಾಕಿದವಳು ನಾನು.. ಇದೀಗ ಬೇಯುತ್ತಿದ್ದೇನೆ. ಮುರಿದ ಮನಸುಗಳ ನಡುವೆ ರಾತ್ರಿಗಳನ್ನು ಬೋರಲಾಗಿ ಕಳೆಯುತ್ತಿದ್ದೇನೆ. ನನಗಿದು ಹೊಸತಲ್ಲ.. ನಿನಗೂ ಮರೆತಿರಲಿಕ್ಕಿಲ್ಲ. ಮಧ್ಯರಾತ್ರಿಯಲ್ಲೂ ನಾವಾಡಿದ ಮಾತುಗಳನ್ನು ಗೋಡೆಗಳೂ ಕೇಳಿಸಿಕೊಂಡಿವೆ ಗೆಳೆಯ.. ಬೆಳಿಗ್ಗೆಯಿಂದ ಸಂಜೆಯವರೆಗೂ ಒಟ್ಟಿಗಿದ್ದರೂ ಮಾತುಗಳಿಗೆ ಬರವಿರದ ದಿನಗಳವು.. ಅವಳ ಸಂಗಡ ಮಾತು ಹೆಚ್ಚಿದಾಗ ಕೋಪ ಮಾಡಿಕೊಂಡವಳು ನಾನು. ಪಾಪಿ.. ಅವಳ ದಾರಿಗೂ ಅಡ್ಡ ಬಂದೆ..! ಹೊಸ ಚೂಡಿಯ ಗುರುತು ಹಿಡಿಯದ ನಿನ್ನ ಮೇಲೆ ಕೋಪಿಸಿಕೊಂಡಿದ್ದೆ... ಆಗ ಬಡವಿ... ಹೃದಯ ಶ್ರೀಮಂತೆ. ಈಗ ಬಡವಿಯಲ್ಲ. ಬಣ್ಣದ ಸೀರೆಗಳಿವೆ, ಹೊಂದುವ ಮನಸ್ಸುಗಳಿಲ್ಲ. ಅಂದು ನನ್ನ ಪಕ್ಕ ನೀನಿರದಿದ್ದರೆ ಕಳೆದು ಹೊಗುತ್ತೀಯ ಎಂದು ಭಯವಾಗುತ್ತಿತ್ತು. ಅಂಥಾ ಭಯ ಈಗ ನನಗಿಲ್ಲ. ಕಳೆದುಕೊಳ್ಳಲು ಏನೂ ಉಳಿದಿಲ್ಲ. ಜೀವದಲ್ಲಿ ಅಂದಿನ ಸೆಲೆಯಿಲ್ಲ.. ಬೇಕೆಂದು ಅನಿಸುತ್ತಲೂ ಇಲ್ಲ.. ನನ್ನನ್ನೇ ಹುಡುಕುತ್ತಿದ್ದೇನೆ, ಮುಗಿದು ಹೋದ ದಾರಿಯಲ್ಲಿ. ಕತ್ತಲಾಗಿದೆ ಗೆಳೆಯ. ಕೈ ಹಿಡಿದು ನಡೆಸುವವರು ಮುಂದೆ ಹೋಗಿದ್ದಾರೆ. ಹಿಂದೆ ಹೋಗುವಷ್ಟು ಧೈರ್ಯ ನನಗಿಲ್ಲ..

ಹಗಲು ರಾತ್ರಿಯೆಲ್ಲಾ ನಾನು ಕೊರಡಾಗಿದ್ದೇನೆ. ಆತನ ಆಕ್ರಮಣಗಳಿಗೆ ಸ್ಪಂದಿಸಲು ನನಗಾಗುತ್ತಿಲ್ಲ. ಕಣ್ಣುಗಳು ಬತ್ತಿ ಹೋಗಿವೆ.. ನಿನ್ನನ್ನು ದೂರಲಾರೆ. ಮಾತು ಕೇಳದೆ ಹಂಚಿ ಹರುಕಾಗಿದ್ದೇನೆ.. ಹೊಸತನದ ಕನಸು ಹುಟ್ಟಿಸುವವರು ಕಾಣೆಯಾಗಿದ್ದಾರೆ. ಬಚ್ಚಿಟ್ಟದ್ದೆಲ್ಲ ರಹಸ್ಯಗಳಲ್ಲ, ಮುಚ್ಚಿಡುವುದಕ್ಕೇನೂ ಇನ್ನು ಉಳಿದಿಲ್ಲ. ಉಳಿಗಾಲವಿಲ್ಲ ನನಗೆ. ಎಲ್ಲಿ ಹೋಗಲಿ, ಮುಂದಿನ ದಿನಗಳು ಮಾಯವಾಗಿಲ್ಲ.. ಗೊತ್ತು.. ಕೈಗೆಟಕುತ್ತಿಲ್ಲ !

ನನಗೆ ಪ್ರೀತಿಯೆಂಬುದು ಈಗೀಗ ಮರೆತೇ ಹೋಗಿದೆ. ಬರೇ ನೀನು ಮಾತ್ರ ನೆನಪಾಗುತ್ತೀಯ... ನೀನಾಡಿದ್ದ ಮಾತುಗಳಿಂದು ಎಲ್ಲವೂ ಮುಗಿದು ಹೋದ ಮೇಲೆ ನೆನಪಾಗುತ್ತಿವೆ. ಕಾಡಿ ಬೇಡಿ ಪಡೆದಿದ್ದ ಪ್ರೀತಿಯನ್ನು ಹಂಚಿ ಹರುಕು ಮಾಡಿಬಿಟ್ಟೆ ಗೆಳೆಯಾ.. ನನ್ನನ್ನು ಸಾಧ್ಯವಾದರೆ ಕ್ಷಮಿಸು.. ಮರೆತು ಹೋಗುವ ಜಾಯಮಾನ ನಿನ್ನದಲ್ಲವೆಂದು ನನಗ್ಗೊತ್ತು. ಮತ್ತೆ ಮುಂದಿನ ವರ್ಷ ಹೊಸ ರೂಪದಲ್ಲಿ ಬರುತ್ತೇನೆ. ಕಾಡದಿರಲು ನನ್ನಿಂದ ಸಾಧ್ಯವಿಲ್ಲ..

ಇಂತೀ ನಿನ್ನ ಪ್ರೀತಿಯ...
-ಭುವನಾ

Share this Story:

Follow Webdunia kannada