Select Your Language

Notifications

webdunia
webdunia
webdunia
webdunia

ಓಂಕಾರ ಸ್ವರೂಪಿ ಗಣನಾಯಕ

ಓಂಕಾರ ಸ್ವರೂಪಿ ಗಣನಾಯಕ
ಡಾ| ಆರ್.ಸಿ.ಓಝಾ
WD
ಪರಮತತ್ವ ಓಂಕಾರದ ಸಾಕ್ಷಾತ್ ಸ್ವರೂಪ, ಋದ್ಧಿ-ಸಿದ್ಧಿ ದಾಯಕ ಸಚ್ಚಿದಾನಂದ ಸ್ವರೂಪಿ ಶ್ರೀ ಗಣೇಶನ ಸ್ತುತಿಮಾತ್ರದಿಂದಲೇ ಆತ್ಮವು ಆಧ್ಯಾತ್ಮ ಸುಧಾ ಸಿಂಧುವಿನಲ್ಲಿ ಸ್ನಾನ ಮಾಡಿ ಪಾವನವಾದ ಅನುಭೂತಿಯಾಗುತ್ತದೆ. ಶ್ರೀಗಣೇಶನ ಪುಣ್ಯ ಸ್ಮರಣೆಯು ಜೀವನದಲ್ಲಿ ಆತ್ಮಜ್ಞಾನದ ಮಾರ್ಗವನ್ನು ಸುಗಮವಾಗಿಸುತ್ತದೆ.

ಮಹಾಭಾರತದ ರಚನೆಕಾರ ವೇದವ್ಯಾಸ, ಜ್ಞಾನೇಶ್ವರ, ಏಕನಾಥ, ಸ್ವಾಮಿ ರಾಮದಾಸ ಮುಂತಾದ ಅನೇಕ ಸಂತರು ಶ್ರೀ ಗಣೇಶನ ಓಂಕಾರ ಸ್ವರೂಪದ ಗುಣಗಾನ ಮಾಡಿದ್ದಾರೆ. ಸಂತ ತುಳಸೀದಾಸ ತನ್ನ ಪ್ರಖ್ಯಾತ ಕೃತಿ ಶ್ರೀರಾಮಚರಿತ ಮಾನಸದಲ್ಲಿ ಎಲ್ಲಕ್ಕಿಂತ ಮೊದಲಾಗಿ ಶ್ರೀ ಗಣೇಶನಿಗೇ ವಂದಿಸಿದ್ದಾನೆ.

ಪ್ರತಿಯೊಂದು ಮಂಗಳ ಕಾರ್ಯದ ಆರಂಭದಲ್ಲಿ ಶ್ರೀಗಣೇಶನ ಆವಾಹನೆ, ಸಂಸ್ಥಾಪನೆ ಮತ್ತು ಪೂಜೆ ಮಾಡಲಾಗುತ್ತದೆ. ಮಹಾಭಾರತ ಕಾಲಕ್ಕೂ ಬಹು ಹಿಂದೆಯೇ ಗಣೇಶ ಪೂಜೆ ಅಥವಾ ಗಣೇಶ ಚತುರ್ಥಿ ವ್ರತ ಇತ್ತೆಂಬುದಕ್ಕೆ ಪೌರಾಣಿಕ ಪುರಾವೆಗಳಿವೆ. ಸ್ವಯಂ ಭಗವಾನ್ ಶ್ರೀಕೃಷ್ಣನೇ ಗಣೇಶನ ವ್ರತ ಆಚರಿಸಿದ್ದ ಎಂದೂ ಶಾಸ್ತ್ರ-ಪುರಾಣಗಳು ಹೇಳುತ್ತವೆ.

ಗಣೇಶನು ಮಂಗಳಕಾರಕವೂ ನಿಘ್ನ ನಿವಾರಕನೂ ಆಗಿದ್ದಾನೆ ಮತ್ತು ವಿದ್ಯಾ-ಬುದ್ಧಿಯ ಅಭೀಷ್ಟ ಪ್ರದಾಯಕನೂ ಆಗಿದ್ದಾನೆ. ಭಾದ್ರಪದ ಮಾಸ ಶುಕ್ಲ ಪಕ್ಷದ ಚತುರ್ಥೀ ತಿಥಿಯಂದು ಭಗವಾನ್ ಗಣೇಶನ ಅವತಾರವಾಯಿತು. ಗಣೇಶ ಪುರಾಣದ ಎರಡನೇ ಅಧ್ಯಾಯದಲ್ಲಿ ಇದರ ಉಲ್ಲೇಖವಿದೆ.

ಶ್ರೀ ಗಣೇಶನಿಗೂ ಹಲವು ನಾಮಗಳಿವೆ. ಗಜಾನನ, ವಿನಾಯಕ, ಗಣೇಶ, ಗಣಪತಿ, ಲಂಬೋದರ, ಗಣೇಶ್ವರ, ಗೌರಿಪುತ್ರ, ಸ್ಕಂದಾಗ್ರಜ, ದಶಾಧ್ಯಕ್ಷ, ಗಣಾಧ್ಯಕ್ಷ, ಇಂದ್ರಶ್ರೀ, ಏಕದಂತ, ಸೂರ್ಯಕರ್ಣ, ಹೇರಂಬ, ಪಾಶಾಂಕುಶಧರ, ನಿರಂಜನ, ವರದ, ಸಿದ್ಧಿದಾಯಕ, ಸುಭಗ, ಕಾಂತ, ವಕ್ರತುಂಡ ಮುಂತಾದ 108 ಹೆಸರುಗಳಿಂದ ಶ್ರೀಗಣೇಶನನ್ನು ಸ್ತುತಿಸಲಾಗುತ್ತದೆ.

ಸಂಕಟ ನಿವಾರಣೆಗಾಗಿ ಶ್ರೀಗಣೇಶನ ಸ್ಮರಣೆ ಮಾಡಿದಲ್ಲಿ ಅದು ರಾಮ ಬಾಣದಂತೆ ಕೆಲಸ ಮಾಡುತ್ತದೆ ಎಂಬುದು ಭಗವದ್ಭಕ್ತರ ನಂಬಿಕೆ. ಇದೇ ಕಾರಣಕ್ಕೆ ಸಂಕಷ್ಟಹರ ಚತುರ್ಥಿ ವ್ರತ ಆಚರಿಸಲಾಗುತ್ತದೆ. ಸೂರ್ಯನ ಎದುರು ಚಂದ್ರನು ಹನ್ನೆರಡನೇ ಅಂಶವಾದಾಗ ಒಂದು ತಿಥಿ ಎಂದು ಪರಿಗಣಿಸಲಾಗುತ್ತದೆ. ಇದರ ಪ್ರಕಾರ, ಹುಣ್ಣಿಮೆಯ 48ರಿಂದ 60 ಅಂಶದ ಚಂದ್ರನ ಕಾಲಘಟ್ಟವನ್ನು ಸಂಕಷ್ಟ ಚತುರ್ಥಿ ತಿಥಿ ಎಂದು ತಿಳಿಯಲಾಗುತ್ತದೆ.


webdunia
WD
ಭವಿಷ್ಯ ಪುರಾಣದ ಪ್ರಕಾರ, ಗಣೇಶ ಪೂಜಾ ವ್ರತವು ಅನಾದಿ ಕಾಲದಿಂದಲೂ ಅನೂಚಾನವಾಗಿ ನಡೆದುಕೊಂಡುಬರುತ್ತಿದೆ. ಗಣಪತಿ ಉಪನಿಷತ್ತಿನಲ್ಲಿ ಗಣಪತಿಗೆ ಸಂಬಂಧಿಸಿದ ಧಾರ್ಮಿಕ ಹಬ್ಬಗಳ ಕುರಿತು ವಿಸ್ತೃತವಾದ ವಿವರಣೆ ನೀಡಲಾಗಿದೆ.

ಇಡೀ ಭಾರತದಲ್ಲಿ ವಿಶೇಷವಾಗಿ ಮಹಾರಾಷ್ಟ್ರದಲ್ಲಿ, ಭಾದ್ರಪದ ಶುಕ್ಲ ಮಾಸವಿಡೀ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಶ್ರೀಗಣೇಶನನ್ನು ಆರಾಧಿಸಲಾಗುತ್ತದೆ.

ವೈಷ್ಣವ ಸಂಹಿತೆಯಲ್ಲಿ ಗಣೇಶ ಸಂಹಿತೆಯ ಉಲ್ಲೇಖವೂ ಸಿಗುತ್ತದೆ. ಅದರಲ್ಲಿ ಗಣೇಶನ ಸ್ತುತಿಗಳ ಸಂಗ್ರಹವಿದೆ ಮತ್ತು ಗಣೇಶ ಸ್ತೋತ್ರವೂ ಇದೆ. ವಿಘ್ನೇಶ್ವರನಿಗೆ ಸಂಬಂಧಿಸಿದಂತೆ ಅದೆಷ್ಟೋ ಪುರಾಣ ಕಥೆಗಳು ಚಾಲ್ತಿಯಲ್ಲಿವೆ. ಹಲವು ದಂತ ಕಥೆಗಳೂ ಇವೆ.

ಅವುಗಳಲ್ಲೊಂದು ಕಥೆಯ ಪ್ರಕಾರ, ಮಾತೆ ಪಾರ್ವತಿಗೆ ವಿವಾಹಾನಂತರ ಹಲವು ವರ್ಷ ಸಂತಾನ ಪ್ರಾಪ್ತಿಯಾಗಲಿಲ್ಲ. ಆಕೆ ಭಗವಾನ್ ವಿಷ್ಣುವನ್ನು ಆರಾಧಿಸಿದಳು. ಸ್ವಯಂ ಭಗವಾನ್ ವಿಷ್ಣುವೇ ಗಣೇಶನ ರೂಪದಲ್ಲಿ ಅವತರಿಸಿದ ಎಂದೂ ಹೇಳಲಾಗುತ್ತಿದೆ.

ಇನ್ನೊಂದು ಕಥೆಯ ಪ್ರಕಾರ, ಶನಿ ದೇವನ ದೃಷ್ಟಿಯು ಬಾಲ ಗಣೇಶನ ಮೇಲೆ ಬಿದ್ದುದರಿಂದ, ಗಣೇಶನ ಶಿರವು ಆಕಾಶದಲ್ಲಿ ಅಂತರ್ಧಾನವಾಯಿತು. ನಂತರ ಬಾಲಕ ಗಣಪತಿಗೆ ಆನೆಯ ಶಿರವನ್ನು ಜೋಡಿಸಲಾಯಿತು ಮತ್ತು ಆತ ಗಜಾನನ ಎಂದು ಹಾಡಿ ಹೊಗಳಲ್ಪಟ್ಟ.

ಇನ್ನೂ ಒಂದು ಕಥೆಯ ಪ್ರಕಾರ, ಪಾರ್ವತಿಯು ಸ್ನಾನ ಮಾಡುತ್ತಿದ್ದಾಗ ಮಣ್ಣಿನಿಂದ ಒಂದು ಶಿಶುವಿನ ಮೂರ್ತಿ ಮಾಡಿ, ಅದರಲ್ಲಿ ಪ್ರಾಣ ಪ್ರತಿಷ್ಠೆ ಮಾಡಿದಳು. ಹೀಗೆ ಉದ್ಭವವಾದ ಮಗುವನ್ನು ಸ್ನಾನಗೃಹದ ದ್ವಾರದಲ್ಲಿ ಕಾವಲಿರಿಸಿದಳು. ಅಲ್ಲಿಗೆ ಬಂದ ಭಗವಾನ್ ಈಶ್ವರನನ್ನೇ ಈ ಬಾಲ ಗಣೇಶ ತಡೆದ. ಕ್ರೋಧದಿಂದ ಶಿವನು ಬಾಲಕನ ಶಿರಚ್ಛೇದ ಮಾಡಿದ. ಪಾರ್ವತಿ ಮತ್ತು ಎಲ್ಲ ದೇವತೆಗಳ ಪ್ರಾರ್ಥನೆಯ ಫಲವಾಗಿ, ಈ ಮಗುವಿಗೆ ಆನೆಯ ತಲೆ ಜೋಡಿಸಲಾಯಿತು. ಈ ಕಾರಣಕ್ಕೆ, ಇಂದಿಗೂ ಆನೆಯನ್ನು ಗಣೇಶನ ರೂಪವಾಗಿ ಭಕ್ತಿಭಾವದಿಂದ ನೋಡಲಾಗುತ್ತಿದೆ.

ಇದೇ ಕಥೆಯ ಆಧಾರದಲ್ಲಿ ವಿಶೇಷವಾಗಿ ಭಾದ್ರಪದ ಶುಕ್ಲ ಚತುರ್ಥಿಯಂದು, ಗಣೇಶನ ಮೃಣ್ಮಯ ರೂಪವನ್ನು ಎಲ್ಲೆಡೆಯೂ ಪ್ರತಿಷ್ಠಾಪಿಸಲಾಗುತ್ತದೆ ಮತ್ತು ಅನಂತನ ಚತುರ್ದಶಿಯಂದು ಗಣಪತಿಯನ್ನು ಪಾವನ ಸರೋವರಗಳಲ್ಲಿ ವಿಸರ್ಜಿಸಲಾಗುತ್ತದೆ.

ವೈಜ್ಞಾನಿಕವಾಗಿ, ಧಾರ್ಮಿಕವಾಗಿ ಗಣಪತಿಯ ಮಹಾ ಕಾಯವನ್ನು ವಿಶ್ಲೇಷಿಸಬಹುದಾದರೆ, ಗಣಪತಿಯ ಆನೆ ಕಿವಿಗಳು ಈ ಭಕ್ತಪ್ರಿಯನಾದ ದೇವನು ಭಕ್ತರ ಎಲ್ಲ ಸಂಕಷ್ಟಗಳನ್ನು, ಪ್ರಾರ್ಥನೆಗಳನ್ನು ಆಲಿಸುತ್ತಾನೆ ಎಂಬುದರ ಪ್ರತೀಕ. ಬಾಯಿ ಮೇಲಿನ ಸೊಂಡಿಲು, ವಾಚಾ ತಪಸ್ಸು ಅಥವಾ ವಾಕ್ ನಿಯಂತ್ರಣದ ಸಂದೇಶ ನೀಡುತ್ತದೆ. ಡೊಳ್ಳು ಹೊಟ್ಟೆಯು ಎಲ್ಲರ ಮಾತು ಅರಗಿಸಿಕೊಳ್ಳುವ ಪ್ರತೀಕ. ತಂದೆ ಪರಶಿವನಂತೆ ಶ್ರೀಗಣೇಶನು ಕೂಡ ತ್ರಿನೇತ್ರಧಾರಿಯಾಗಿರುತ್ತಾನೆ ಮತ್ತು ಶಿವನ ಜಟೆಯಲ್ಲಿರುವಂತೆ ಗಣೇಶನ ಲಲಾಟದಲ್ಲಿಯೂ (ಹಣೆಯಲ್ಲಿ) ಚಂದ್ರನು ವಿರಾಜಮಾನನಾಗಿರುತ್ತಾನೆ.

ರಾಕ್ಷಸರ ವಿನಾಶಕ್ಕಾಗಿ ಶ್ರೀ ಗಣೇಸನೂ ರೌದ್ರ ರೂಪ ತಾಳಬಲ್ಲವನಾಗಿದ್ದಾನೆ. ಗಣೇಶನ ಆಧ್ಯಾತ್ಮಿಕ ಸ್ವರೂಪದ ದೃಷ್ಟಿಯಲ್ಲಿ ಆತನ ವಾಹನವಾದ ಇಲಿಯನ್ನು ಕಾಲಸ್ವರೂಪಿ ಎಂದು ಪರಿಗಣಿಸಲಾಗುತ್ತದೆ. ಭಕ್ತರೆಲ್ಲಾ 'ಏಕದಂತ ದಯಾವಂತ ಚತುರ್ಭುಜಧಾರಿ' ಎನ್ನುತ್ತಾ ಗಣಪತಿಯನ್ನು ಆರಾಧಿಸುತ್ತಾರೆ. ಶ್ರೀಗಣೇಶಾಯ ನಮಃ ಎಂಬ ನಾಮೋಚ್ಚಾರಣೆಯಿಂದ ಯಾವುದೇ ಕಾರ್ಯ ಆರಂಭಿಸಿದರೂ ಫಲಪ್ರದವಾಗುತ್ತದೆ.

Share this Story:

Follow Webdunia kannada