Select Your Language

Notifications

webdunia
webdunia
webdunia
webdunia

ಬರಬರುತ್ತಾ ಉದಾರಿಯಾಗುತ್ತಿರುವ ಗಣೇಶ

ಬರಬರುತ್ತಾ ಉದಾರಿಯಾಗುತ್ತಿರುವ ಗಣೇಶ
ವೆಂಕಟ್ ಪೊಳಲಿ
WD
ಅಂತೂ ಇಂತು ಗಣೇಶ ಚತುರ್ಥಿ ಬಂದಿದೆ. ಮುಂದಿನ ಮೂರು ನಾಲ್ಕು ವಾರ ಇನ್ನು ಏನಿದ್ದರೂ ಗಣೇಶನದ್ದೇ ಕಾರುಬಾರು. ದೇಶದ ಮೂಲೆ ಮೂಲೆ, ಗಲ್ಲಿ ಗಲ್ಲಿಗಳಲ್ಲಿ ನಮ್ಮ ಗಣೇಶ ನಾನಾ ಅವತಾರಗಳಲ್ಲಿ ರಾರಾಜಿಸುತ್ತಾನೆ. ಗಣೇಶನ ಆತಿಥ್ಯಕ್ಕಾಗಿ ಮದುಮಗಳಂತೆ ಶೃಂಗಾರಗೊಳ್ಳುವ ನಗರದ ಬಹುತೇಕ ಬಡಾವಣೆಗಳು, ಮುಂದಿನ ಕೆಲ ದಿನ ಸಾಂಸ್ಕೃತಿಕ ಕಾರ್ಯಕ್ರಮ, ಆರ್ಕೆಸ್ಟ್ರಾ ಹೀಗೆ ಮುಂತಾದ ದೂಂದಾಂಗಳಿಗೆ ಸಾಕ್ಷಿಯಾಗುತ್ತದೆ. ಮುಂದಿನ ಮೂರು ನಾಲ್ಕು-ವಾರ ಎಲ್ಲವೂ ಗಣೇಶಮಯವಾಗಿರುತ್ತೆ.

ಏನೇ ಹೇಳಿ ನಮ್ಮ ಗಣೇಶ ಮಾತ್ರ ಫುಲ್ ಲಿಬರಲ್ ದೇವ್ರು! ನಮ್ಮ ಗಣೇಶನ ಮೇಲೆ ಮಾಡುವಷ್ಟು ಎಕ್ಸ್‌ಪರಿಮೆಂಟು ಬೇರೆ ಯಾವುದೇ ದೇವರ ಮೇಲೆ ನಡೆಯೋದಿಲ್ಲ. ಆತನ ಭಂಗಿಯಿಂದ ಹಿಡಿದು ಆತನ ರೂಪ, ಅಲಂಕಾರ, ವಾಹನದವರೆಗೆ ಗಣೇಶನ ಮೇಲೆ ನಾನಾ ರೀತಿಯ ಪ್ರಯೋಗಗಳು ನಡೆಯುತ್ತಾ ಇರುತ್ತೆ. ವರ್ಷ ವರ್ಷ ಗಣೇಶನ ಭಂಗಿಯಲ್ಲಿ, ಆಯುಧಗಳಲ್ಲಿ, ವಾಹಕಗಳಲ್ಲಿ ಬದಲಾವಣೆಗಳಾಗುತ್ತಿರುತ್ತವೆ. ಒಟ್ಟಿನಲ್ಲಿ ಗಣೇಶ ಯಾವುದೇ ರೀತಿಯ ಫೋಸ್‌ ಕೊಡಲು ರೆಡಿಯಾಗಿರುತ್ತಾನೆ. ನೃತ್ಯ ಗಣೇಶ, ವ್ಯಗ್ರ ಗಣೇಶ, ಮುಗ್ದ ಗಣೇಶ ಒಂದೇ ಎರಡೇ ಇದರ ಪಟ್ಟಿ ಮಾಡಿದರೆ ಇನ್ನೊಂದು ವರ್ಷದ ಚೌತಿ ಬರವುದು ಗ್ಯಾರಂಟಿ!. ಇದಕ್ಕೆ ನಮ್ಮ ಗಣೇಶನದ್ದೂ ಸಹಕಾರ ಇದೆ ಬಿಡಿ. ಆತ ಯಾವುದೇ ಭಂಗಿಗೂ ಅಡ್‌ಜಸ್ಟ್ ಆಗ್ತಾನೆ. ಗಣೇಶನಿಗೆ ಯಾವುದೇ ರೂಪ ಕೊಟ್ಟರು ಆತನಿಗೆ ಅದು ಸೂಟ್ ಆಗುತ್ತೆ. ಇದರಲ್ಲಿ ಮಾತ್ರ ನಮ್ಮ ಗಣೇಶ ಇತರ ದೇವರುಗಳಿಗಿಂತ ಹೆಚ್ಚು ಲಿಬರಲ್. ಅಲ್ವೇ!.

ಪ್ರತಿ ವರ್ಷ ಆತನ ಭಂಗಿ ಮಾತ್ರ ಅಲ್ಲ, ಆತನ ವಾಹನವೂ ಚೇಂಜ್ ಆಗ್ತಾ ಇರುತ್ತೆ. ಭಕ್ತರಂತೂ ಗಣೇಶನನ್ನು ವಿಭಿನ್ನ, ಕೆಲವೊಮ್ಮೆ ವಿಚಿತ್ರ ವಾಹನಗಳ ಮೇಲೆ ಕುಳ್ಳಿರಿಸೋಕೆ ತುದಿಗಾಲಲ್ಲಿ ನಿಂತಿರ್ತಾರೆ. ಆದರೆ ಇದಕ್ಕೂ ನಮ್ಮ ಗಣೇಶ ರೆಡಿ. ಮೂಷಕ ವಾಹಕನಾಗಿರುವ ಗಣೇಶ ಭಕ್ತರಿಗಾಗಿ ತಮ್ಮ ನೆಚ್ಚಿನ ವಾಹಕವನ್ನೂ ತ್ಯಜಿಸಲು ಸಿದ್ಧ. ಮೀನು, ಕಾರು, ವಿಮಾನ, ರಾಕೆಟ್, ಹಡಗು ಹೀಗೆ ನಾನಾ ವಿಧದ ವಾಹನಗಳಲ್ಲಿ ಗಣೇಶನನ್ನು ಕುಳ್ಳಿರಿಸುತ್ತಾರೆ. ಈ ಕಡೆ ಗಣೇಶನ ಆಯುಧಗಳೂ ವರ್ಷಂಪ್ರತಿ ಬದಲಾಗುತ್ತಿರುತ್ತದೆ. ನಮ್ಮ ಗಣೇಶ ಉದಾರಿ ಎಂದು ಕೆಲವೊಮ್ಮೆ ಭಕ್ತರು ಅದನ್ನೇ ಮಿಸ್‌ಯೂಸ್ ಮಾಡ್ತಾರೆ. ನಮ್ಮ ಗಣೇಶ ಯಾವುದಕ್ಕೂ ರೆಡಿ ಎಂದು ಕೊಂಡು ಆತನ ಕೈಗೆ ಎಕೆ 47, ಬಾಂಬುಗಳನ್ನು ಕೊಟ್ಟು ಆತನನ್ನು ತೀವ್ರ ಮುಜುಗರಕ್ಕೀಡು ಮಾಡುತ್ತಾರೆ. ಆದರೂ ನಮ್ಮ ಗಣೇಶ ಮಾತ್ರ ಗಪ್ ಚುಪ್!.

ಗಣೇಶ ಚತುರ್ಥಿ ಬಂತೆಂದರೆ ಸಾಕು ಗಣೇಶ ಭಕ್ತರ ವೃಂದ, ಗಣೇಶ ಮಂಡಳಿ ಎಂಬಂತೆ ನಾನಾ ಹೆಸರಿನ ಸಂಘಟನೆಗಳು ಅಚಾನಕ್ ಆಗಿ ಹುಟ್ಟಿಕೊಳ್ಳುತ್ತವೆ. ಈ ಸಂಘಟನೆಗಳು ಹಣ ವಸೂಲಿ ಹೆಸರಿನಲ್ಲಿ ಕೊಡುವ ಟಾರ್ಚರ್‌ರಿಂದ ಆ ವಿಘ್ನನಿವಾರಕ ಗಣೇಶನೇ ನಮ್ಮನ್ನು ಕಾಪಾಡಬೇಕು. ಗಣೇಶ ಚತುರ್ಥಿ ಇನ್ನೇನು ಬರುತ್ತದೆ ಎಂಬಷ್ಟರಲ್ಲಿ ನಾನಾ ಭಕ್ತರ ವೃಂದ ಗಣೇಶನ ಪ್ರತಿಷ್ಠಾಪನೆಗಾಗಿ ತಮ್ಮ ಹಣ ವಸೂಲಿ ಕಾರ್ಯಾಚರಣೆ (ಗೂಂಡಾಗಿರಿ)ಯನ್ನು ಪ್ರಾರಂಭಿಸುತ್ತವೆ. ನಮ್ದು ಈ ಗಣೇಶ ಭಕ್ತರ ವೃಂದ, ನಮ್ದು ಆ ಬಡಾವಣೆ ಗಣೇಶ ಭಕ್ತರ ವೃಂದ ಎಂದು ಹೇಳುತ್ತಾ ಬರುವ ಅಸಂಖ್ಯಾತ ಗಣೇಶ ವೃಂದಗಳಿಂದ ನಗರವಾಸಿಗಳ ಜೇಬಂತೂ ಢಮಾರ್!

ಹಣ ವಸೂಲಿ ಆಯಿತು ಇನ್ನೇನು ಗಣೇಶ ಪ್ರತಿಷ್ಠಾಪನೆ ಮಾಡೋದು, ದಿನಾ ಸಂಜೆ ಒಂದು ಆರ್ಕೆಸ್ಟ್ರಾ ಇಡೋದು, ತುಸು ಹೊತ್ತು ಭಕ್ತಿ ಗೀತೆ, ಉಳಿದಂತೆ ಫಿಲ್ಮ್ ಸಾಂಗ್ಸ್ ಹಾಕಿ ಸಕತ್ ಮಜಾ ಮಾಡುದು. ಅಲ್ಲರೀ... ನಮ್ಮ ಗಣೇಶ ಬೇರೆ ಅಪ್ಪಟ ಬ್ರಹ್ಮಾಚಾರಿ! ಆವರ ಮುಂದೇನೇ ಪಡ್ಡೆ ಹುಡುಗ್ರ ಹೊಸ ಫಿಲ್ಮ್ ಸಾಂಗ್ ಹಾಕ್ತಾರಲ್ಲಪ್ಪೊ ನಮ್ಮ ಗಣೇಶನಿಗೆ ಹೆಂಗಾಗ್ಬೇಡ. ತನ್ನ ಭಕ್ತರ ಹುಚ್ಚಾಟಿಕೆ ನೋಡಿ ನಮ್ಮ ಗಣೇಶ ಮಾತ್ರ ಸಕತ್ ಸುಸ್ತಾಗೋದು ಗ್ಯಾರಂಟಿ!. ಅಲ್ಲರೀ ನಾನೊಬ್ಬ ಸಾದಾ ಬ್ರಮ್ಮಚಾರಿ ನನ್ನ ಮುಂದೆ ಈ ಹುಡುಗಿಯರ ಸಿನಿಮಾ ಹಾಡು ಯಾಕ್ರೀ ಹಾಕ್ತಿರಾ? ಎಂದು ಗಣೇಶ ಒಳಗೊಳಗೆ ಪ್ರಶ್ನಿಸುತ್ತಾನೋ ಏನೊ!. ಒಟ್ಟಿನಲ್ಲಿ ವಿಘ್ನನಿವಾರಕನ ಸಂಕಟ ಆತನಿಗೆ ಗೊತ್ತು ಬಿಡಿ.

ಇಷ್ಟೆಲ್ಲಾ ದಾಂದೂಮ್ ಬಳಿಕ ಕೊನೆಗೆ ಬರೋದು ನಮ್ಮ ಗಣೇಶನ ವಿಸರ್ಜನೆ. ವಾದ್ಯ ಗೋಷ್ಠಿ, ಸುಡು ಮದ್ದುಗಳ ಅಬ್ಬರದೊಂದಿಗೆ ಪೂಜಿತನಾದ ಗಣೇಶನನ್ನು ಮೆರವಣಿಗೆ ಮೂಲಕ ನದಿ ಅಥವಾ ಸನಿಹದ ಕೊಳಕ್ಕೆ ವಿಸರ್ಜನೆಗಾಗಿ ಕೊಂಡೊಯ್ದು, ಗಣೇಶನಿಗೆ ಗುಡ್ ಬಾಯ್ ಹೇಳುತ್ತಾರೆ. ಬಹುಶಃ ನಮ್ಮ ಗಣೇಶ ತನ್ನ ಈ ಭಕ್ತರು ಕೊಡುವ ಟಾರ್ಚರ್‌ನಿಂದ ಕೊನೆಗೂ ಮುಕ್ತಿ ಸಿಕ್ತಾ ಇದ್ಯಲ್ಲಪ್ಪಾ ಎಂದು ಒಳಗೊಳಗೆ ನೆಮ್ಮದಿ ಪಡ್ತಾನೇನೋ, ಅಲ್ವಾ?!

Share this Story:

Follow Webdunia kannada