Select Your Language

Notifications

webdunia
webdunia
webdunia
webdunia

ಪ್ರಥಮ ಬಹುಮಾನ ತಂದ ಆ ಹಾಡು...

ಪ್ರಥಮ ಬಹುಮಾನ ತಂದ ಆ ಹಾಡು...
ರಜನಿ ಭಟ್
ಗಜಮುಖನೆ ಗಣಪತಿಯೇ ನಿನಗೆ ವಂದನೇ
ನಂಬಿದವರ ಬಾಳಿನ ಕಲ್ಪತರು ನೀನೇ....

WD
ಮುಸ್ಸಂಜೆಯ ಹೊತ್ತಲ್ಲಿ ಕೈಕಾಲು ಮುಖ ತೊಳೆದು ದೇವರ ಮುಂದೆ ಕುಳಿತು ನಾನು ಮೊದಲು ಹೇಳುವ ಭಜನೆ ಇದೇ ಆಗಿತ್ತು. ನನಗೆ ಗಣಪತಿಯ ಕುರಿತಾದ ಅನೇಕ ಭಜನೆಗಳು, ಹಾಡುಗಳು ತಿಳಿದಿದ್ದರೂ, ನಾನು ಇದೇ ಹಾಡನ್ನು ಹಾಡುತ್ತಿದ್ದೆ. ಅಂತಹ ಪ್ರೀತಿ ಯಾಕಂತೀರಾ ಈ ಹಾಡಿನ ಮೇಲೆ...

ಅದಕ್ಕೊಂದು ದೊಡ್ಡ ಹಿನ್ನೆಲೆಯೇ ಇದೆ. ನಾನಾಗ ಅಜ್ಜಿ ಮನೆಯಿಂದ ಶಾಲೆಗೆ ಹೋಗುತ್ತಿದ್ದೆ. ನನ್ನ ಅಕ್ಕನವರೂ ನನ್ನ ಜೊತೆ ಶಾಲೆಗೆ ಹೋಗುತ್ತಿದ್ದರು, ಸಣ್ಣ ತರಗತಿಯಲ್ಲಿದ್ದ ನಾನು ಆವಾಗ ಪ್ರಾಥಮಿಕ ಮನಸ್ಥಿತಿಯನ್ನು ಮಾತ್ರ ಹೊಂದಿದ್ದೆ. ಅದೊಂದು ದಿನ ನಮ್ಮ ಶಾಲೆಯಲ್ಲಿ ಚೌತಿ ಹಬ್ಬದ ಪ್ರಯುಕ್ತ ಭಕ್ತಿ ಗೀತೆ ಸ್ಫರ್ಧೆಯನ್ನು ಆಯೋಜಿಸಿದ್ದರು.

ರಜನೀ..., ಈ ಭಾರಿ ಭಕ್ತಿಗೀತೆ ಸ್ಪರ್ಧೆಯಲ್ಲಿ ನೀನೂ ಒಂದು ಹಾಡು ಹೇಳಮ್ಮ ಎಂದು ನನ್ನ ಅಜ್ಜಿ ಒಮ್ಮಿಂದೊಮ್ಮೆಲೆ ಹೇಳಿದಾಗ ನನಗೆ ತುಂಬಾ ಖುಷಿ. ಆದರೆ, ನನಗಾಗ ಯಾವ ಹಾಡೂ ಗೊತ್ತಿರಲಿಲ್ಲ. ನನ್ನ ಅಜ್ಜಿ, ಅಕ್ಕ, ಚಿಕ್ಕಮ್ಮ ಎಲ್ಲರೂ ಭಜನೆ ಹೇಳುವಾಗ ಸುಮ್ಮನೆ ಕುಳಿತಿರುತ್ತಿದ್ದೆನೇ ಹೊರತು ಯಾವುದೇ ಪದ್ಯ ಹೇಳುತ್ತಿರಲಿಲ್ಲ. "ನನಗೆ ಯಾವುದೇ ಪದ್ಯ ಗೊತ್ತಿಲ್ಲ ನಾನು ಹೇಳುದಿಲ್ಲ" ಎಂದಾಗ ನನ್ನ ಅಜ್ಜಿ "ನಾನು ಪದ್ಯ ಕಲಿಸುತ್ತೇನೆ ಎನ್ನುತ್ತಾ ನನ್ನ ಹಾಡು ಹೇಳುವ ಉತ್ಸಾಹಕ್ಕೆ ಮತ್ತಷ್ಟು ಹುರುಪು ತುಂಬಿದ್ದರು.

ಸರಿ. ಯಾವ ಹಾಡು. ಒಬ್ಬೊಬ್ಬರದು ಒಂದೊಂದು ಆಯ್ಕೆ. ಆದರೆ, ನನ್ನ ಅಜ್ಜಿ. ಅವಳಿಗೆ ಗಜಮುಖನೆ ಗಣಪತಿಯೇ ಹೇಳಿಕೊಡುವ ಎಂದು ಹೇಳಿದ್ರು. ಶ್ಯೀ... ನನಗೆ ಅದು ಬೇಡ. ಬೇರೆ ಎಷ್ಟೋ ಚೆಂದದ ಪದ್ಯಗಳಿವೆ ಆದರೆ ನಾನ್ಯಾಕೆ ಈ ಹಾಡನ್ನೇ ಹಾಡಬೇಕು ನಾನು ಬೇರೆ ಪದ್ಯ ಹಾಡುತ್ತೇನೆ ಎಂದು ಒಂದೇ ರೀತಿಯಾಗಿ ಹಠ ಹಿಡಿದು ಕುಳಿತೆ. ಯಾಕೆಂದರೆ ನನ್ನ ಅಕ್ಕನಿಗೆ ನನ್ನ ಚಿಕ್ಕಮ್ಮ ಬೇರೊಂದು ಚಂದವಾದ ಪದ್ಯ ಹೇಳಿಕೊಟ್ಟಿದ್ದರು. ಅವರಿಗೆಲ್ಲಾ ಚಂದಚಂದದ ಪುರಂದರದಾಸರ ಕೀರ್ತನೆ ಎಲ್ಲಾ ಹೇಳಿಕೊಟ್ಟು ನನಗೆ ಮಾತ್ರ ಈ ಪದ್ಯ ಹೇಳು ಅಂತ ಹೇಳ್ತೀರಲ್ವಾ. ಹೀಗೆಲ್ಲಾ ಮಾಡ್ಬಾರ್ದು ಆಯ್ತಾ... ನನ್ನದು ರಾಗ ಹೋಗ್ತಾನೇ ಇತ್ತು...

ಕೊನೆಗೆ ನನ್ನ ಅಜ್ಜಿ ನನ್ನನ್ನು ಕರೆದು ನೋಡು, ಈ ಹಾಡು ಚೆನ್ನಾಗಿಲ್ಲದೇ ಇರಬಹುದು. ಆದರೆ, ಇದು ಗಣಪತಿ ದೇವರ ಹಾಡು. ನೀನು ಇದನ್ನು ರಾಗವಾಗಿ, ಸ್ಪಷ್ಟವಾಗಿ ಖುಷಿಯಿಂದ ಹೇಳಿದರೆ, ಗಣಪತಿಗೆ ಖುಷಿಯಾಗಿ ನಿನಗೆ ಬಹುಮಾನ ಸಿಗುವಂತೆ ಮಾಡುತ್ತಾನೆ. ನೀನು ಇದೇ ಹಾಡು ಹೇಳು ಅಂತ ನನಗೆ ಸಮಾಧಾನದಲ್ಲಿ ಹೇಳಿದರು.

ಹಾಗಾಂತೀರಾ ಅಜ್ಜಿ, ಹಾಗಾದರೇ ಗಣಪತಿ ಪದ್ಯವನ್ನೇ ಹೇಳುತ್ತೇನೆ ಎಂದೆ. ಸರಿ ಹಾಡನ್ನು ದಿವಸಕ್ಕೆ ಹತ್ತು ಸಲ, ಹದಿನೈದು ಸಲ ಹೇಳಿ ಹೇಳಿ ಬಾಯಿಪಾಠ ಮಾಡಿದ್ದೂ ಆಯಿತು. ಸ್ಪರ್ಧೆಯ ದಿನವಂತೂ ಮುಂಜಾನೆ ಎದ್ದು ಪದ್ಯವೊಂದೇ ಹೇಳುವುದು. ಅಕ್ಕಪಕ್ಕದ ಮನೆಯವರಿಗೆಲ್ಲಾ ನಾನು ಸ್ಪರ್ಧೆಗೆ ಯಾವ ಪದ್ಯ ಹೇಳುತ್ತೇನೆ ಅಂತ ಆಗಲೇ ತಿಳಿದು ಹೋಗಿತ್ತು.

ಅಂತೂ ಸ್ಪರ್ಧೆಗೆ ಅತ್ಯಂತ ಹುರುಪಿನಿಂದ ಹೊಸ ಬಟ್ಟೆ ಎಲ್ಲಾ ಹಾಕಿ, ಸ್ವಲ್ಪ ಹೆಚ್ಚೇ ಅಲಂಕಾರ ಮಾಡಿ ಹೋದೆ. ನನ್ನ ಸರದಿ ಬಂದಾಗ ಚೆನ್ನಾಗಿಯೇ ಆ ಪದ್ಯವನ್ನು ಹೇಳಿದ್ದೆ. ಎಲ್ಲರೂ. ಎಷ್ಟು ಚೆನ್ನಾಗಿ ಹಾಡಿದ್ದೀಯಾ ಅಂತ ನನ್ನನ್ನು ಹೊಗಳಿದಾಗ ಖುಷಿಯಿಂದ ಉಬ್ಬಿ ಹೋಗಿದ್ದೆ.

ಸ್ಪರ್ಧೆಯ ಫಲಿತಾಂಶವನ್ನು ಅದೇ ದಿವಸ ಸಂಜೆ ಘೋಷಿಸಿದ್ದರು. ಕಿರಿಯರ ವಿಭಾಗದಲ್ಲಿ ನನಗೇ ಪ್ರಥಮ ಬಹುಮಾನ ಬಂದಿತ್ತು. ನನ್ನ ಸಂತೋಷಕ್ಕಂತೂ ಪಾರವೇ ಇರಲಿಲ್ಲ.

ಅಂದಿನಿಂದ ಈ ಹಾಡಿನ ಮೇಲೆ ಮತ್ತು ಅದಕ್ಕಿಂತಲೂ ಹೆಚ್ಚಾಗಿ ಗಣಪತಿ ದೇವರ ಮೇಲೆ ಏನೋ ಒಂತರಾ ಅಭಿಮಾನ. ಗಣಪತಿಗೆ ನನ್ನ ಹಾಡು ತುಂಬಾ ಇಷ್ಟ ಆಗಿದೆ ಅಂತ ನನ್ನ ಮನಸ್ಸಿನಲ್ಲಿ ಆವಾಗ ಮೂಡಿದ್ದು, ಇಂದಿನವರೆಗೂ ಅಳಿಸಿ ಹೋಗಲೇ ಇಲ್ಲ. ಅಲ್ಲದೆ, ಗಣಪತಿಯನ್ನು ಕಂಡಾಗಲೆಲ್ಲಾ ನನಗೆ ಮೊದಲು ಮನಸ್ಸಲ್ಲಿ ಬರುವುದು ಅದೇ ಪದ್ಯ.

ನಂತರ ನಾನು ಶಾಸ್ತ್ರೀಯ ಸಂಗೀತ ತರಗತಿಗೆ ಸೇರಿದೆ. ಎಷ್ಟೋ ಹೊಸ ಹಾಡುಗಳನ್ನು ಕಲಿತೆ. ಆದರೆ, ಪ್ರತಿದಿನ ದೇವರ ಮುಂದೆ ಕುಳಿತು ಭಜನೆ ಹೇಳುವಾಗ ಗಜಮುಖನೆ ಗಣಪತಿಯೇ ಪದ್ಯವನ್ನೇ ಮೊದಲು ಹೇಳೋದು. ಉಳಿದ ಪದ್ಯಗಳನ್ನೆಲ್ಲಾ ನಂತರ.

ಉದ್ಯೋಗ ನಿಮಿತ್ತ ಚೆನ್ನೈಗೆ ಬಂದ ನಂತರ ಹಾಸ್ಟೆಲ್‌ನಲ್ಲಿ ಭಜನೆ ಹೇಳಲಿಕ್ಕೆ ಆಗದಿದ್ದರೂ, ನನ್ನಷ್ಟಕ್ಕೇ ಈ ಹಾಡನ್ನು ಗುನುಗುತ್ತಿರುತ್ತೇನೆ. ಈ ಹಾಡಿನ ಮೇಲೆ ಅದೆಂತಾ ವ್ಯಾಮೋಹವೋ ನನಗಿನ್ನೂ ತಿಳಿದಿಲ್ಲ.

ಈವಾಗ ಮತ್ತೊಮ್ಮೆ ಚೌತಿ ಬಂದಿದೆ. ಚೆನ್ನೈನಲ್ಲಿ ರಸ್ತೆಬದಿಗಳಲ್ಲಿ ವಿಧವಿಧ ಅಲಂಕಾರದ ಗಣಪತಿ ಮೂರ್ತಿಗಳನ್ನು ನೋಡುವ ಅವಕಾಶ ಮತ್ತೆ ಬರುತ್ತಿದೆ. ನನಗೆ ಮೊದಲ ಬಹುಮಾನ ತಂದುಕೊಟ್ಟ ಗಜಮುಖನೇ ಗಣಪತಿಯೇ ಹಾಡನ್ನು ಮತ್ತೊಮ್ಮೆ ಹಾಡಲಾಗದಿದ್ದರೂ, ನನ್ನಷ್ಟಕ್ಕೇ ನಾನು ಗುನುಗುತ್ತಿದ್ದೇನೆ.... ಆ ದಿನದ ಮಧುರ ನೆನಪಿನೊಂದಿಗೆ...

Share this Story:

Follow Webdunia kannada