Webdunia - Bharat's app for daily news and videos

Install App

ಅಷ್ಟಮಿ ವಿಶೇಷ: ಕೃಷ್ಣಂ ವಂದೇ ಜಗದ್ಗುರುಂ...

Webdunia
ಅವಿನಾಶ್ ಬಿ.
ವೇದಾನುದ್ಧರತೇ ಜಗನ್ನಿವಪಹತೇ ಭೂಗೋಲಮದ್ಭಿಭ್ರತೇ
ದೈತ್ಯ ದಾರಯತೇ ಬಲಿಂಧಲಯತೇ ಕ್ಷತ್ರಕ್ಷಯೇ ಕುರ್ವತೇ
ಪೌಲಸ್ತಂ ಜಿಯತೇ ಹಲಂಕಲಯತೇ ಕಾರುಣ್ಯ ಮಾತನ್ವತೇ
ಮ್ಲೇಚ್ಛಾನ್ ಮಾರ್ದಯತೇ ದಶಾಕೃತಿಕೃತೇ ಕೃಷ್ಣಾಯ ತುಭ್ಯಂ ನಮಃ ||

WD
ಸಾರ: ವೇದಗಳನ್ನು ಉದ್ಧರಿಸಿದ (ಮತ್ಸ್ಯಾವತಾರಿ), ಜಗತ್ತನ್ನು ಹೊತ್ತ (ಕೂರ್ಮಾವತಾರಿ), ಭೂಮಿಯನ್ನು ರಕ್ಷಿಸಿದ (ವರಾಹಾವತಾರಿ), ಹಿರಣ್ಯಕಶಿಪುವೆಂಬ ದೈತ್ಯನನ್ನು ಸಿಗಿದ (ನರಸಿಂಹಾವತಾರಿ), ಬಲಿಯನ್ನು ಪಾತಾಳಕ್ಕೆ ತಳ್ಳಿದ (ವಾಮನಾವತಾರಿ), ಕ್ಷತ್ರಿಯರನ್ನು ಸಂಹರಿಸಿದ (ಪರಶುರಾಮಾವತಾರಿ), ರಾವಣನನ್ನು ಜಯಿಸಿದ (ರಾಮಾವತಾರಿ), ಹಲಧರ ಬಲರಾಮನ ಸಹೋದರ (ಕೃಷ್ಣಾವತಾರಿ), ಕಾರುಣ್ಯಮೂರ್ತಿ (ಬೌದ್ಧಾವತಾರಿ) ಮತ್ತು ಮ್ಲೇಚ್ಛರನ್ನು ಬಡಿದೋಡಿಸುವ (ಕಲ್ಕಿ ಅವತಾರಿ) ಕೃಷ್ಣಾ... ನಿನಗೆ ನಮಸ್ಕಾರಗಳು.

ದಶಾವತಾರಗಳನ್ನು ತಳೆದು "ಯದಾ ಯದಾ ಹಿ ಧರ್ಮಸ್ಯ, ಗ್ಲಾನಿರ್ಭವತಿ ಭಾರತ, ಅಭ್ಯುತ್ಥಾನಂ ಅಧರ್ಮಸ್ಯ, ತದಾತ್ಮಾನಾಂ ಸೃಜಾಮ್ಯಹಂ" ಎನ್ನುತ್ತಾ "ಪರಿತ್ರಾಣಾಯ ಸಾಧೂನಾಂ, ವಿನಾಶಾಯ ಚ ದುಷ್ಕೃತಾಮ್, ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ" (ಎಲ್ಲಿ ಧರ್ಮಕ್ಕೆ ಗ್ಲಾನಿಯಾಗುತ್ತದೋ, ಅಧರ್ಮವು ಹೆಚ್ಚಾಗುತ್ತದೋ, ಸಾಧುಗಳ ಉದ್ಧಾರಕ್ಕಾಗಿ, ದುಷ್ಕೃತ್ಯಗಳ ವಿನಾಶದ ಮೂಲಕ ಧರ್ಮ ಸಂಸ್ಥಾಪನೆಗಾಗಿ ಯುಗ ಯುಗದಲ್ಲೂ ಅವತರಿಸುತ್ತೇನೆ) ಎಂಬ ಗೀತೋಪದೇಶಗೈದ ತುಂಟ ಬಾಲ ಕೃಷ್ಣನಿಗೆ ಇದು ಜನ್ಮಾಷ್ಟಮಿಯ ಸಂಭ್ರಮ.

ಆಡಿಸಿದಳು ಯಶೋದೆ, ಜಗದೋದ್ಧಾರನಾ... ಎಂಬ ಪುರಂದರದಾಸರ ಹಾಡು ಜನಜನಿತ. ಈ ಜಗತ್ತನ್ನೇ ಪೊರೆಯುವ ತುಂಟ ಕೃಷ್ಣನನ್ನು ಆಡಿಸುವ ಯಶೋದೆ ಅದೆಷ್ಟು ಪುಣ್ಯವಂತಳು! ಎಂಬ ಉದ್ಗಾರ ಮನದೊಳಗೆ ಅಭಿವ್ಯಕ್ತವಾಗುವುದರೊಂದಿಗೆ ಈ ಸಾಲುಗಳು ಭಕ್ತಿ ಭಾವವನ್ನು ಸ್ಫುರಿಸುತ್ತವೆ.

ಕೃಷ್ಣಾವತಾರ ವಿವರಿಸುವ ಸ್ತೋತ್ರ
ಜಗತ್ತಿನ ಉದ್ಧಾರಕ್ಕಾಗಿ ಮಹಾವಿಷ್ಣುವು ತಳೆದ ಹತ್ತು ಅವತಾರಗಳಲ್ಲಿ ಶ್ರೇಷ್ಠವೂ, ಜನಜನಿತವೂ, ಮತ್ತು ಎಲ್ಲರ ಬಾಯಲ್ಲಿ ನಲಿದಾಡುತ್ತಲೇ ಇರುವುದೆಂದರೆ ಎಂಟನೇ ಅವತಾರವಾದ ಶ್ರೀಕೃಷ್ಣಾವತಾರ. ದ್ವಾಪರ ಯುಗದಲ್ಲಿ ಶ್ರೀಹರಿಯು ಮಾಡಿದ ಮುಖ್ಯ ಕಾರ್ಯಗಳನ್ನು ಪುಣ್ಯ ಪುರುಷರು ಈ ಕೆಳಗಿನ ಶ್ಲೋಕದಲ್ಲಿ ಸಂಕ್ಷಿಪ್ತವಾಗಿ ವರ್ಣಿಸಿದ್ದಾರೆ.

ಆದೌ ದೇವಕೀ ಗರ್ಭ ಜನನಂ
ಗೋಪೀ ಗೃಹೇ ವರ್ಧನಂ
ಮಾಯಾ ಪೂತನಿ ಜೀವಿತಾಪಹರಣಂ
ಗೋವರ್ಧನೋದ್ಧಾರಣಂ |

ಕಂಸಚ್ಛೇದನ ಕೌರವಾದಿ ಮಥನಂ
ಕುಂತೀ ಸುತಃ ಪಾಲನಂ
ಶ್ರೀಮದ್ಭಾಗವತ ಪುರಾಣ ಪುಣ್ಯ ಕಥಿತಂ
ಶ್ರೀ ಕೃಷ್ಣ ಲೀಲಾಮೃತಂ ||

ಈ ಎಂಟು ಸಾಲುಗಳು ಶ್ರೀಕೃಷ್ಣನ ಎಂಟನೇ ಅವತಾರದ ಲೀಲೆಗಳನ್ನೆಲ್ಲಾ ವಿವರಿಸುತ್ತವೆ.

ಅಧರ್ಮಿಗಳಿಗೆ ಬಂಧು ಮೋಹ ಸಲ್ಲದು...
ಶ್ರೀಕೃಷ್ಣಾವತಾರದಲ್ಲಿ ಗಮನಿಸಬೇಕಾದ ಒಂದು ಮಹತ್ವಪೂರ್ಣ ಅಂಶವೆಂದರೆ ಇಲ್ಲಿ ಮಾನವೀಯ ಸಂಬಂಧಗಳಿಗೆ ಎಡೆಯಿಲ್ಲ, ಅಧರ್ಮ ಮಾಡಿದವರು ಬಂಧುಗಳೇ ಆದರೂ ಅವರಿಗೆ ಶಿಕ್ಷೆ ಶತಃಸಿದ್ಧ ಎಂಬ ಸಂದೇಶ. ಬಹುಶಃ ಕಲಿಯುಗದಲ್ಲಿ ಮಾನವೀಯ ಸಂಬಂಧಗಳು ಸಂಪೂರ್ಣವಾಗಿ ಛಿದ್ರವಿಚ್ಛಿದ್ರವಾಗುವ ಮುನ್ಸೂಚನೆಯೂ ಇದಾಗಿತ್ತೇನೋ ಎಂಬಂತೆಯೂ ವಿಶ್ಲೇಷಿಸಬಹುದಾಗಿದೆ.

ಶ್ರೀಕೃಷ್ಣ ಹುಟ್ಟಿದ್ದು ದೇವಕೀ ಗರ್ಭದಲ್ಲಿ, ಬೆಳೆದದ್ದು ಯಶೋದೆಯ ಮಡಿಲಲ್ಲಿ. ಇಂದಿಗೂ ಕೃಷ್ಣನ ತಾಯಿಯಾಗಿ ಹೆಚ್ಚು ಗುರುತಿಸಲ್ಪಡುವವಳು ಯಶೋದೆ. ಶ್ರೀಕೃಷ್ಣನ ಬಾಲ ಲೀಲೆಗಳೆಲ್ಲವನ್ನೂ ಈ ಮಹಾತಾಯಿ ಯಶೋದೆಯೇ ಸೈರಿಸಿಕೊಂಡು ಬಂದವಳು! ಇಂಥ ಪೋಕರಿ ಪೋರನನ್ನು, ಜಗದೋದ್ಧಾರನನ್ನು ಸಹಿಸಿಕೊಳ್ಳುವುದೆಂದರೆ ಅದೇನು ಸುಲಭದ ಮಾತಾಗಿತ್ತೇ? ಯಾಕೆಂದರೆ ಶ್ರೀಕೃಷ್ಣ ಮಾಡಿದ ಯಾವುದೇ ಕೆಲಸ ಕಾರ್ಯವೂ ವಾದ-ವಿವಾದಕ್ಕೆ ಕಾರಣವಾಗುತ್ತಿದ್ದರೂ, ಅದರ ಹಿಂದೆ ಒಂದು ಉದ್ದೇಶವಂತೂ ಎದ್ದು ಕಾಣುತ್ತಿತ್ತು. ಅದುವೇ ಧರ್ಮದ ಸಂಸ್ಥಾಪನೆ, ಅಧರ್ಮದ ನಿರ್ಮೂಲನೆ.

ಕೃಷ್ಣಾವತಾರದ ಪೂರ್ವಾರ್ಧ
ಇನ್ನು ಕೃಷ್ಣಾವತಾರದ ಪೂರ್ವಭಾಗದಲ್ಲಿ ಶ್ರೀಕೃಷ್ಣನು ಪ್ರಮುಖವಾಗಿ ಗುರುತಿಸಿಕೊಳ್ಳುವುದು ತನ್ನ ಸೋದರ ಮಾವನಾದ, ಮಥುರಾಧಿಪತಿ ಕಂಸನ ವಧೆಗೆ. ಎಂಟನೇ ಅವತಾರದಲ್ಲಿ, ದೇವಕಿಯ ಎಂಟನೇ ಗರ್ಭದಿಂದ ದುಷ್ಟನಾದ ಕಂಸನಿಗೆ ಮರಣ ಎಂಬುದು ನಿಶ್ಚಯವಾಗಿತ್ತು. ಇದರಿಂದಾಗಿ ತನ್ನ ತಂಗಿ ದೇವಕಿಯನ್ನು, ಭಾವನಾದ ವಸುದೇವ ಸಹಿತವಾಗಿ ಸೆರೆಮನೆಗೆ ತಳ್ಳಿದ. ಮೊದಲ ಆರು ಶಿಶುಗಳನ್ನೂ ಹುಟ್ಟಿದ ತಕ್ಷಣವೇ ಕಂಸನು ಸಾಯಿಸಿದ. ಏಳನೇ ಮಗುವಾಗುವ ಹೊತ್ತಿಗೆ ದೇವಕೀ ಗರ್ಭದಲ್ಲಿರುವ ಶೇಷಾಂಶವನ್ನು ಆ ಜಗನ್ನಿಯಾಮಕನ ಇಚ್ಛಾನುಸಾರ ಯೋಗಮಾಯೆಯು ನಂದಗೋಕುಲದಲ್ಲಿ ರೋಹಿಣಿದೇವಿಯ ಗರ್ಭದಲ್ಲಿರಿಸಿದಳು. ರೋಹಿಣಿಯು ಪುತ್ರನಿಗೆ ಜನ್ಮವಿತ್ತಳು. ಆ ಮಗುವಿಗೆ ಬಲರಾಮ ಎಂದು ಹೆಸರಿರಿಸಲಾಯಿತು.

ಎಂಟನೇ ಬಾರಿ ದೇವಕಿಯು ಮಗುವಿಗೆ ಜನ್ಮವಿತ್ತಳು. ಶ್ರೀಮನ್ನಾರಾಯಣನು ಆಕೆಯ ಗರ್ಭದಲ್ಲಿ ಸೇರಿಕೊಂಡ ಬಳಿಕ ವಿಜಯ ಸಂವತ್ಸರದ ಶ್ರಾವಣ ಮಾಸ, ಕೃಷ್ಣ ಪಕ್ಷದ ಅಷ್ಟಮೀ ದಿನದಂದು ಅನರ್ಘ್ಯ ಪುತ್ರ ರತ್ನಕ್ಕೆ ದೇವಕಿ ಜನ್ಮ ನೀಡಿದಳು. ತಕ್ಷಣವೇ ಭಗವಾನ್ ವಿಷ್ಣುವು ವಸುದೇವ-ದೇವಕಿಗೆ ದರ್ಶನ ನೀಡಿ, ಮುಂದೇನು ಮಾಡಬೇಕೆಂದು ಸೂಚಿಸಿದನು. ಆ ಪ್ರಕಾರವಾಗಿ, ಅರ್ಧರಾತ್ರಿ, ಘೋರ ಮಳೆ, ಕಾವಲುಗಾರರೆಲ್ಲರೂ ಭರ್ಜರಿ ನಿದ್ರೆಯಲ್ಲಿದ್ದಾಗ ವಸುದೇವನು ಈ ಶಿಶುವನ್ನು ಹೊತ್ತು ಆದಿಶೇಷನ ಛತ್ರ ರಕ್ಷಣೆಯೊಂದಿಗೆ ನಂದಗೋಕುಲಕ್ಕೆ ತೆರಳಿದ. ನಂದಗೋಪನ ಮನೆಯಲ್ಲಿ ಯಶೋದಾ ದೇವಿಯ ಮಡಿಲಲ್ಲಿದ್ದ ಹೆಣ್ಣು ಮಗುವಿನ ಸ್ಥಾನದಲ್ಲಿ ಶ್ರೀಕೃಷ್ಣನನ್ನಿರಿಸಿದ ವಸುದೇವ, ಆ ಹೆಣ್ಣು ಮಗುವನ್ನು ಮರಳಿ ಮಥುರೆಯ ಕಾರಾಗೃಹಕ್ಕೆ ತಂದ ತಕ್ಷಣ ಹೆಣ್ಣು ಮಗುವಿನ ಧ್ವನಿ ಕೇಳಿತು. ಕಾವಲುಗಾರರು ಮಗು ಹುಟ್ಟಿತೆಂದು ಕಂಸನಿಗೆ ಸುದ್ದಿ ಮುಟ್ಟಿಸಿದರು. ಕಂಸ ಬಂದು ಮಗುವನ್ನು ಕೊಲ್ಲಲೆತ್ನಿಸಿದಾಗ, ಮಗು ರೂಪದಲ್ಲಿರುವ ಯೋಗ ಮಾಯೆ ಮೇಲಕ್ಕೆ ಜಿಗಿದು, ನಿನ್ನನ್ನು ಕೊಲ್ಲುವ ಮಗು ನಂದಗೋಕುಲದಲ್ಲಿ ಬೆಳೆಯುತ್ತಿದೆ ಎಂದು ಹೇಳಿ ಮಾಯವಾಗುತ್ತದೆ.

ಕಂಸನು ಶ್ರೀಕೃಷ್ಣನನ್ನು ಕೊಲ್ಲಲು ಅದೆಷ್ಟೋ ದಾನವರನ್ನು, ದೈತ್ಯರನ್ನು ಕಳುಹಿಸುತ್ತಾನೆ. ಬಕ, ಶಕಟ, ಧೇನುಕ, ತೃಣೀಕೃತ ತೃಣಾವರ್ತ, ಪೂತನಿ ಮುಂತಾದವರೆಲ್ಲರೂ ಶ್ರೀಕೃಷ್ಣನ ಬಾಲ ಲೀಲೆಗಳಿಂದಲೇ ಮೋಕ್ಷ ಮುಖಿಗಳಾದರು. ಆ ಮೇಲೆ ಗೋವರ್ಧನೋದ್ಧಾರ, ಕಾಳೀಯ ಮರ್ದನ, ಗೋಪಿಕಾ ವಸ್ತ್ರಾಪಹರಣ, ಗೊಲ್ಲರೊಂದಿಗೆ ಸೇರಿಕೊಂಡು ಲೀಲಾ ವಿನೋದ, ಚಾಣೂರ-ಮುಷ್ಟಿಕಾಸುರ ಸಂಹಾರ, ಕಂಸ ವಧೆ, ಮಾಗಧ (ಜರಾಸಂಧ) ಸಂಹಾರ, ಕಾಲಯವ ಸಂಹಾರ, ಶಿಶುಪಾಲ-ದಂತವಕ್ತ್ರರಿಗೆ ಮೋಕ್ಷ, ರುಕ್ಮಿಣೀ ವಿವಾಹ, ಶ್ಯಮಂತಕೋಪಾಖ್ಯಾನ, ಮುರಾಸುರ-ನರಕಾಸುರ ವಧೆ, ಹದಿನಾರು ಸಾವಿರ ಸುಂದರಿಯರ ವಿವಾಹ, ಪೌಂಡ್ರಕ ಸಂಹಾರ, ಆನಂತರ ವಿಶ್ವವಿಖ್ಯಾತವಾದ ಮತ್ತು ಪ್ರತಿಯೊಬ್ಬರ ಬಾಯಲ್ಲೂ ಸದಾ ಕುಣಿದಾಡುತ್ತಿರುವ ಮಹಾಭಾರತ ಕಥಾನಕಗಳು ಶ್ರೀಕೃಷ್ಣಾವತಾರದ, ಕಪಟನಾಟಕ ಸೂತ್ರದಾರಿ ಬಿರುದಾಂಕಿತ ಕೃಷ್ಣ ಲೀಲೆಗಳ ಪಕ್ಷಿನೋಟ.

ಮಹಾಭಾರತಾವಧಿಯಲ್ಲಿ ದ್ರೌಪದಿಗೆ ಅಕ್ಷಯ ವಸನವನ್ನಿತ್ತು ಸಲಹಿದ ಶ್ರೀಕೃಷ್ಣ, ದ್ರೌಪದಿಗೆ ಅಕ್ಷಯ ಪಾತ್ರೆಯ ಮಹಿಮೆ ಪ್ರದರ್ಶನ, ವಿದುರನ ಭಕ್ತಿಯಲ್ಲಿ ಮಿಂದು ಹಾಲಿನ ಹೊಳೆ ಹರಿಸಿದ್ದು, ಬಂಧುಗಳನ್ನು ಕೊಲ್ಲಲು ಹಿಂದೇಟು ಹಾಕಿದ ಅರ್ಜುನನಿಗೆ ಗೀತೋಪದೇಶ ಮಾಡಿ, ಕುರುಕ್ಷೇತ್ರ ಯುದ್ಧದ ನಿರ್ವಹಣೆ, ಹಲವು ತಂತ್ರೋಪಾಯಗಳಿಂದ ಎದುರಾಳಿಗಳನ್ನು ಮಟ್ಟ ಹಾಕುವಲ್ಲಿ ಶ್ರೀಕೃಷ್ಣ ಪ್ರದರ್ಶಿಸಿದ ಬುದ್ಧಿಮತ್ತೆ... "ಮಮ ಪ್ರಾಣಾಹಿ ಪಾಂಡವಃ" ಎನ್ನುತ್ತಾ ಧರ್ಮ ಸಂಸ್ಥಾಪನಾರ್ಥವಾಗಿ ಧರ್ಮಭೀರುಗಳಾದ ಪಾಂಡವರ ರಕ್ಷಣೆ... ಇತ್ಯಾದಿಗಳೆಲ್ಲವೂ ಭಾಗವತ ಪುರಾಣ ಪುಣ್ಯಪಠಣದಿಂದ ಈಗಲೂ ಭಕ್ತಿಯ ಹೊಳೆ ಹರಿಸುತ್ತಿದೆ.

ಅದೇ, ಮಾನವೀಯ ಸಂಬಂಧಗಳ ಬಗ್ಗೆ ಬಂದಾಗ, ಶ್ರೀಕೃಷ್ಣನು ತನ್ನ ಮಾವನನ್ನೇ ಕೊಂದಿದ್ದು, ಪಾಂಡವರು ತಮ್ಮ ಸಹೋದರರನ್ನು, ಅಜ್ಜ, ಗುರು ಮತ್ತಿತರ ಬಂಧು ಬಾಂಧವರನ್ನು ಕೊಲ್ಲಲು ಪ್ರೇರಣೆಯಾಗಿದ್ದು, ಅತ್ಯಂತ ಆತ್ಮೀಯರು, ಭಕ್ತರು ಎನಿಸಿಕೊಂಡ ಹನುಮಂತ, ಭೀಮ, ಅರ್ಜುನ... ಮುಂತಾದವರೆಲ್ಲರ ಗರ್ವ ಭಂಗ ಮಾಡಿದ್ದು...ಇವೆಲ್ಲವುಗಳನ್ನು ಗಮನಿಸಿದರೆ, ಧರ್ಮೋದ್ಧಾರವೇ ಏಕೈಕ ಗುರಿಯಾಗಿತ್ತು ಎಂಬುದು ವೇದ್ಯವಾಗುತ್ತದೆ.

ಅಧರ್ಮಿಗಳಿಗೆ ಸರ್ವನಾಶದ ಸಂದೇಶ
ಅಲ್ಲದೆ, ದೇವರು ಏನನ್ನಾದರೂ ಪ್ರೀತಿಯಿಂದ, ಭಕ್ತಿಯಿಂದ ಕೊಟ್ಟರೆ ಸಂಪ್ರೀತನಾಗುತ್ತಾನೆ ಎಂಬುದಕ್ಕೆ ಸುಧಾಮ ಚರಿತ್ರೆಯ ಮೂಲಕ ತೋರಿಸಿಕೊಟ್ಟಿದ್ದಾನೆ ಭಗವಾನ್ ಶ್ರೀಕೃಷ್ಣ. ಮದ-ಮತ್ಸರಾದಿಗಳು, ಅಧರ್ಮ ಅನ್ಯಾಯಗಳು ಹೆಚ್ಚಾದರೆ ಒಂದು ಕುಲವೇ ಸರ್ವವಾಶವಾಗುತ್ತದೆ ಎಂಬುದನ್ನು ಎಚ್ಚರಿಕೆ ನೀಡುವುದಕ್ಕಾಗಿಯೇ, ಯದು ವಂಶವು ಪರಸ್ಪರ ಹುಲ್ಲಿನಿಂದ ಹೊಡೆದಾಡಿಕೊಂಡು ನಾಶವಾಗುವಲ್ಲಿ ಶ್ರೀಕೃಷ್ಣನ ಇಚ್ಛೆಯೂ ಉಲ್ಲೇಖನೀಯ. ಗರ್ಗ ಮುನಿಯಿಂದ ಯದುವಂಶೀಯರು ಶಾಪಗ್ರಸ್ತವಾದವಾದಂತೆ, ಅದೇ ಒನಕೆಯ ಭಾಗವಿದ್ದ ಬಾಣವು ಕಾಲಿಗೆ ತಗುಲಿದ ನೆಪದೊಂದಿಗೆ ಯದುವಂಶಜನಾದ ಶ್ರೀಕೃಷ್ಣ ತನ್ನ ಅವತಾರ ಸಮಾಪ್ತಿಗೊಳಿಸಿದನು.

ಹೀಗೆ, ಒಳ್ಳೆಯ ತುಂಟ ಮಗುವಾಗಿ, ಹೊಣೆಯರಿತ ಅಣ್ಣನಾಗಿ, ಹಿರಿಯರನ್ನು ಗೌರವಿಸುವ ತಮ್ಮನಾಗಿ, ಮಿತ್ರನಿಗಾಗಿ ಏನು ಮಾಡಲೂ ಸಿದ್ಧವಿರುವ ಗೆಳೆಯನಾಗಿ, ರಾಜಕೀಯದಲ್ಲಿ ಚತುರನೂ, ಪರಾಕ್ರಮಿಯೂ ಆಗಿ ಅವತಾರ ಪೂರ್ಣಗೊಳಿಸಿದ ಶ್ರೀಕೃಷ್ಣನ ಉಪದೇಶಗಳು ಇಂದಿಗೂ ಪ್ರಸ್ತುತ. ಭಗವದ್ಗೀತೆಯಲ್ಲಿ ಸಮಾಜದ ಪ್ರತಿಯೊಂದು ಆಗು ಹೋಗುಗಳಿಗೂ, ಸಮಸ್ಯೆಗಳಿಗೂ ಪರಿಹಾರ ದೊರೆಯತ್ತದೆ.

ಇಂತಿಪ್ಪ ಶ್ರೀಕೃಷ್ಣನ ನಾಮಸ್ಮರಣೆಯೊಂದಿಗೆ ಬದುಕು ಮಂಗಳವಾಗುತ್ತದೆ. ಅರ್ಘ್ಯಪ್ರಿಯನಾದ, ಅರಳೆಲೆ ಮಾಂಗಾಯಿ, ಅವಲಕ್ಕಿ ಪ್ರಿಯನಾದ, ನವನೀತ ಚೋರನಾದ ಶ್ರೀಕೃಷ್ಣನನ್ನು ನಮಿಸೋಣ, ಜನ್ಮಾಷ್ಟಮಿ ಸಂಭ್ರಮ ಎಲ್ಲೆಡೆ ಪಸರಿಸಲಿ. ಶ್ರೀಕೃಷ್ಣನ ಆಶಯದಂತೆ ಲೋಕದಲ್ಲಿ ಧರ್ಮ ಸಂಸ್ಥಾಪನೆಯಾಗಲಿ.

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

ತುಳಸಿ ಹಬ್ಬದಂದು ಈ ಸಮಸ್ಯೆ ಇರುವವರು ನೆಲ್ಲಿಕಾಯಿ ಇಟ್ಟು ದೀಪ ಹಚ್ಚಬೇಕು

ದೀಪಾವಳಿ ಹಬ್ಬದ ಮುಹೂರ್ತ ಯಾವ ದಿನ, ಯಾವಾಗ ಇಲ್ಲಿದೆ ಡೀಟೈಲ್ಸ್

ದರೋಡೆಕೋರನಾಗಿದ್ದ ರತ್ನಾಕರ, ವಾಲ್ಮೀಕಿ ಮಹರ್ಷಿಯಾದ ರೋಚಕ ವಿಚಾರ ಇಲ್ಲಿದೆ

ಮಹಾಲಯ ಅಮವಾಸ್ಯೆಯಾದ ಇಂದು ಪಿತೃಗಳಿಗೆ ತರ್ಪಣ ನೀಡಬೇಕು ಯಾಕೆ ಗೊತ್ತಾ

ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಯಾವ ಸಮಯಕ್ಕೆ ಆಚರಿಸಬೇಕು

Show comments