Select Your Language

Notifications

webdunia
webdunia
webdunia
webdunia

ಗೌರಿ ಹಬ್ಬ

ಗೌರಿ ಹಬ್ಬ

ಇಳಯರಾಜ

ಕರ್ನಾಟಕದಲ್ಲಿ ಗೌರಿ ಹಬ್ಬ ಮತ್ತು ಗಣೇಶನ ಹಬ್ಬ ಎರಡೂ ಜತೆ ಜತೆಯಲ್ಲಿಯೇ ಆಚರಿಸಲಾಗುತ್ತಿದೆ. ಇದು ದೇವಾರಾಧನೆಯ ಹಬ್ಬವಾದರೂ ಇದರ ಮೂಲ ತತ್ವ ಸಾಂಸ್ಕೃತಿಕ ಹಿನ್ನೆಲೆಯಿಂದ ಕೂಡಿದೆ.

ಮದುವೆಯಾಗಿರುವ ಹೆಣ್ಣು ಮಕ್ಕಳನ್ನು ಪ್ರೀತ್ಯಾದರದಿಂದ ತಂದೆ ತಾಯಿಗಳು ತವರು ಮನೆಗೆ ಬರ ಮಾಡಿಕೊಳ್ಳುವ ಒಂದು ವಿಶೇಷ ಸಡಗರದ ಹಬ್ಬ ಇದಾಗಿದೆ. ಇದನ್ನು ಕರ್ನಾಟಕದ ಹಿಂದೂಗಳು ಮಾತ್ರವಲ್ಲದೆ ಜೈನ ಮತದವರೂ ಆಚರಿಸುತ್ತಾರೆ.

ಮಹಾಮಾತೆ ಪಾರ್ವತೀದೇವಿ ತನ್ನ ತವರು ಮನೆಗೆ ಹೋಗುವ ಸಂಭ್ರಮ ಇಲ್ಲಿ ಸಾಂಕೇತಿಕವಾಗಿದೆ. ಚಾಂದ್ರಮಾನ ಪಂಚಾಂಗದ ಪ್ರಕಾರ ಈ ಹಬ್ಬ ಭಾದ್ರಪದ ತೃತೀಯಾ ದಿನದಂದು ಬರುತ್ತದೆ.ಮೂರನೆಯ ದಿನ ಚೌತಿ ಎಂದರೆ ವಿನಾಯಕ ಚೌತಿ .ಆ ದಿನ ಆಕೆಯ ಮಗ ಗಣಪ(ವಿನಾಯಕ)ಬಂದು ಆಕೆಯನ್ನು ಗಂಡನ ಮನೆಗೆ ಕರೆದೊಯ್ಯುತ್ತಾನೆ ಎಂಬುದು ಪೌರಾಣಿಕ ಹಿನ್ನಲೆ.

ಈ ಹಬ್ಬದ ಆಚರಣೆಗೆ ಮುಂಚಿತವಾಗಿಯೇ ಅನೇಕ ಸಿದ್ಧತೆಗಳು ನಡೆಯುತ್ತವೆ. 'ಬಳಕೆ ತೆಗೆಯುವುದು' ಎಂದರೆ ಮನೆಯನ್ನು ಶುದ್ಧಗೊಳಿಸುವುದು,ಸಿಂಗರಿಸುವುದು ನಡೆಯುತ್ತದೆ. ಹಬ್ಬದ ಹಿಂದಿನ ದಿನ ಯಾವುದಾದರೂ ನದೀ ತೀರಕ್ಕೆ ಅಥವಾ ಕೊಳದ ಬಳಿ ಹೋಗಿ ಗೌರಿಯ ವಿಗ್ರಹವನ್ನು ಸಿದ್ಧಪಡಿಸಿಕೊಂಡು ಮಂಗಳವಾದ್ಯ ಹಾಗೂ ಸುಮಂಗಲಿಯರು ಪೂಜೆ ಮಾಡುತ್ತಾ ಊರಿನ ಮುಖ್ಯ ಸ್ಥಳಕ್ಕೆ ತಂದು ತಳಿರು ತೋರಣಗಳಿಂದ ಅಲಂಕರಿಸಿದ ಸ್ಥಳದಲ್ಲಿ ವಿಗ್ರಹವನ್ನು ಸ್ಥಾಪಿಸುತ್ತಾರೆ.

ಈ ವಿಗ್ರಹವು ಜೇಡಿಮಣ್ಣಿನಿಂದ ತಯಾರಿಸಲಾಗಿದ್ದು ಅದನ್ನು ಅನೇಕ ಬಗೆಯ ವಸ್ತ್ರಾಭರಣಗಳಿಂದ ಅಲಂಕರಿಸಲಾಗುತ್ತದೆ. ಇಂತಹ ಪೂಜೆ ಪ್ರತ್ಯೇಕವಾಗಿ ಮನೆಗಳಲ್ಲಿ,ದೇವಾಲಯಗಳಲ್ಲಿ ಮತ್ತು ಸಾರ್ವಜನಿಕ ಕಲ್ಯಾಣಮಂಟಪಗಳಲ್ಲಿ ವಿಜೃಂಭಣೆಯಿಂದ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಮೂಲಕ ಆಚರಿಲಾಗುತ್ತದೆ.
ಗೌರಿಪೂಜೆಯಲ್ಲಿ ಮುಖ್ಯವಾಗಿ ಮದುವೆಯಾದ ಸುಮಂಗಲಿಯರು ಮುಖ್ಯ ಪಾತ್ರ ವಹಿಸಿದರೂ ಮದುವೆಯಾಗದ ಹೆಣ್ಣು ಮಕ್ಕಳು ಕೂಡ ಭಾಗವಹಿಸುತ್ತಾರೆ.

ವಿವಿಧ ರೀತಿಯ ತಿನಿಸುಗಳನ್ನು ಮಾಡಿ ದೇವಿಗೆ ನೈವೇದ್ಯ ಸಮರ್ಪಿಸಲಾಗುತ್ತದೆ. ದೇವಿಯನ್ನು ಗಂಡನ ಮನೆಗೆ ಕಳುಹಿಸುವ ಸಂಕೇತವಾಗಿ ಹೂವು ,ವೀಳ್ಯದೆಲೆ,ಫಲ,ವಿವಿಧ ಪದಾರ್ಥಗಳನ್ನು ನೀರಿನಲ್ಲಿ ತೇಲಿ ಬಿಡುವ ರೂಢಿ ಇದೆ. ಇದು ಗಂಡನ ಮನೆಗೆ ಕಳುಹಿಸುವ ಒಂದು ಸಂಕೇತ.

ಸುಮಂಗಲಿಯರು ಪರಸ್ಪರ ಬಾಗಿನವನ್ನು ಹಂಚಿಕೊಳ್ಳುತ್ತಾರೆ. ಮೊರದ ಜೊತೆಯಲ್ಲಿ ಫಲ ತಾಂಬೂಲದೊಂದಿಗೆ ಗಾಜಿನ ಬಳೆ,ಕನ್ನಡಿ,ಅರಶಿನ ಕುಂಕುಮ,ಬಿಚ್ಚೋಲೆ,ವಸ್ತ್ರ ಮುಂತಾದವುಗಳನ್ನು ಇರಿಸಿ ಸುಮಂಗಲಿಯ ಸಂಕೇತವಾಗಿ ಪರಸ್ಪರ ಕೊಟ್ಟು ತೆಗೆದುಕೊಳ್ಳುತ್ತಾರೆ. ದೂರದ ಊರಿನಲ್ಲಿರುವ ಹೆಣ್ಣು ಮಕ್ಕಳು ತವರು ಮನೆಗೆ ಬರಲು ಸಾಧ್ಯವಿಲ್ಲದ ಸಂದರ್ಭದಲ್ಲಿ ಮನೆಯಿಂದ ಅವರಿಗೆ ಬಾಗಿನ ಮುಂಚಿತವಾಗಿಯೇ ತಲುಪಿಸುತ್ತಾರೆ. ಹಾಗೆ ಸಾಧ್ಯವಿಲ್ಲದ ಸಂದರ್ಭದಲ್ಲಿ ಹಣವನ್ನು ಕಳುಹಿಸುವ ಮೂಲಕ ತವರು ಮನೆಯ ಬಾಗಿನವನ್ನು ತಲುಪಿಸುತ್ತಾರೆ.

ಮೂರನೆಯ ದಿನ(ಕೆಲವು ಸಂದರ್ಭದಲ್ಲಿ ಅದೇ ದಿನವೇ ಆಗಬಹುದು)ವಿನಾಯಕನ ಆಗಮನವಾಗುತ್ತದೆ.ಸಕಲ ಮರ್ಯಾದೆಯೊಂದಿಗೆ ಹೆಣ್ಣು ಮಗಳನ್ನು ಗಂಡನ ಮನೆಗೆ ಕಳುಹಿಸುವ ಸಂಭ್ರಮ ಅದ್ದೂರಿಯಾಗಿ ನಡೆಯುತ್ತದೆ. ತಾಯಿಯ ಹಾಗೂ ಮಗನ ವಿಗ್ರಹಗಳನ್ನು ಸಾಮಾನ್ಯವಾಗಿ ಹೆಚ್ಚು ನೀರು ಇರುವ ಸ್ಥಳಗಳಲ್ಲಿ ವಿಸರ್ಜನೆ ಮಾಡಲಾಗುತ್ತದೆ.ಇದು ಅದ್ದೂರಿಯಾಗಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಸಾಗುತ್ತದೆ.

ದಾರಿಯುದ್ದಕ್ಕೂ ಮನೆ,ಮಠ,ದೇವಾಲಯ ಮುಂತಾದೆಡೆಯಲ್ಲಿರುವ ಎಲ್ಲಾ ವಿಗ್ರಹಗಳನ್ನು ಒಂದು ಜಾಗದಲ್ಲಿ ವಿಸರ್ಜಿಸುವ ಕಾರ್ಯಕ್ರಮವಿರುತ್ತದೆ. ಈ ಮಧ್ಯ ದಿನಗಳಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.

Share this Story:

Follow Webdunia kannada