Select Your Language

Notifications

webdunia
webdunia
webdunia
webdunia

ಹೊರನಾಡ ಕನ್ನಡ ಹರಿಕಾರ ಡಾ | ಅರ್ತಿಕಜೆ

ಪ್ರೊ. ಶ್ರೀಕೃಷ್ಣಭಟ್ ಅರ್ತಿಕಜೆ ಅವರಿಗೆ ಫೆ.10ರಂದು ಚೆನ್ನೈಯಲ್ಲಿ ಆತ್ಮೀಯ ಸನ್ಮಾನ

ಹೊರನಾಡ ಕನ್ನಡ ಹರಿಕಾರ ಡಾ | ಅರ್ತಿಕಜೆ
- ಡಾ| ವಿ. ಗೋಪಾಲಕೃಷ್ಣ
WD
ಹೊರನಾಡಿನಲ್ಲಿ ನೆಲೆಸಿ ಕನ್ನಡ ನಾಡು, ನುಡಿಗೆ ಅಪಾರ ಸೇವೆ ಸಲ್ಲಿಸಿದವರ ಅಗ್ರ ಪಂಕ್ತಿಯಲ್ಲಿ ಮದರಾಸು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ದಿವಂಗತ ಪ್ರೊ. ಎಂ. ಮರಿಯಪ್ಪ ಭಟ್ಟರ ಹೆಸರು ಚಿರಸ್ಥಾಯಿಯಾಗಿ ನಿಂತಿದೆ. ಬಹುಮಟ್ಟಿಗೆ ಅದೇ ದಾರಿಯಲ್ಲಿ ಮಂದುವರೆದು ಈಚೆಗೆ ನಿವೃತ್ತರಾದವರು ಪ್ರೊ. ಶ್ರೀಕೃಷ್ಣಭಟ್ ಅರ್ತಿಕಜೆಯವರು.

ಸುಮಾರು ಮೂರು ದಶಕಗಳ ಕಾಲ ಅವರು ಮದರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಜತೆಯಲ್ಲಿಯೇ ದೇಶದ ಹಲವಾರು ಭಾಗಗಳಲ್ಲಿ ಕನ್ನಡ ಸೇವೆಯನ್ನು ಮಾಡಿದ್ದಾರೆ. ಬಹುಭಾಷಾ ವಿದ್ವಾಂಸರಾದ ಪ್ರೊ. ಅರ್ತಿಕಜೆಯವರಿಗೆ ನಾಡಿನ ಉದ್ದಗಲಕ್ಕೂ ಆತ್ಮೀಯ ಬಂಧು-ಮಿತ್ರರು, ಶಿಷ್ಯರಿದ್ದಾರೆ. ಅನೇಕ ಸಂಘ ಸಂಸ್ಥೆಗಳು ಅವರ ಬಹುಮುಖ ಸೇವೆಯನ್ನು ನೆನಪಿನಲ್ಲಿರಿಸಿಕೊಂಡಿವೆ. ಅವರೆಲ್ಲರೂ ಕಲೆತು ಪ್ರೊ. ಅರ್ತಿಕಜೆಯವರಿಗೆ ಗೌರವ ಹಾಗೂ ಕೃತಜ್ಞತೆಯನ್ನು ಸೂಚಿಸುವ ಸಲುವಾಗಿ ದಿನಾಂಕ 10 ಫೆಬ್ರವರಿ 2008 ರಂದು ಚೆನ್ನೈ ನಗರದಲ್ಲಿ ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲು ತೀರ್ಮಾನಿಸಿದ್ದಾರೆ.

ಅವರ ಅನುಪಮ ನಾಡು, ನುಡಿ ಸೇವೆಯನ್ನು ದಾಖಲಿಸುವ ‘ಅನನ್ಯ’ ಎಂಬ ಬೃಹತ್ ಅಭಿನಂದನ ಗ್ರಂಥವನ್ನು ಅಂದು ಅವರಿಗೆ ಗೌರವ ಪೂರ್ವಕವಾಗಿ ಅರ್ಪಿಸಲಾಗುವುದು. ಪ್ರಖ್ಯಾತ ಸಾಹಿತಿ ಡಾ. ಹಂಪನಾ ಅವರ ಅಧ್ಯಕ್ಷತೆಯಲ್ಲಿ

ಡಾ. ಬಿ.ಎ. ವಿವೇಕ ರೈ ಅವರು ಗ್ರಂಥವನ್ನು ಬಿಡುಗಡೆ ಮಾಡುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕು ಪಡುವನ್ನೂರಿನ ಅರ್ತಿಕಜೆಯಲ್ಲಿ 1945 ರಲ್ಲಿ ಜನಿಸಿದ ಡಾ. ಶ್ರೀ ಕೃಷ್ಣಭಟ್ ಅರ್ತಿಕಜೆಯವರು ಬಾಲ್ಯದಲ್ಲಿಯೇ ತಮ್ಮ ಪ್ರತಿಭೆಯನ್ನು ತೋರಿಸುತ್ತಾ ಬಂದವರು. ಆರ್ಥಿಕ ಸಂಕಷ್ಟದಲ್ಲಿದ್ದ ಕುಟುಂಬದ ಪರಿಸ್ಥಿತಿಯಲ್ಲಿ ಅವರು ಸುಗಮವಾಗಿ ವಿದ್ಯಾಭ್ಯಾಸವನ್ನು ಮುಂದುವರೆಸಲು ಅನುಕೂಲವಿರಲಿಲ್ಲ. ಬಂಧುವರ್ಗದವರ ಮತ್ತು ಎಡನೀರು ಮಠಾಧೀಶರ ಆಶ್ರಯದಲ್ಲಿ ಹೆಚ್ಚು ಶ್ರಮವಹಿಸಿ ವಿದ್ಯಾಭ್ಯಾಸವನ್ನು ಮುಂದುವರೆಸಿದರು.

ಎಂತಹುದೇ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿ ಕೆಲಸವನ್ನು ಸಾಧಿಸುವ ಛಲ ಪ್ರೊ. ಭಟ್ಟರಲ್ಲಿ ವಿದ್ಯಾರ್ಥಿದೆಶೆಯಿಂದಲೂ ಕಂಡುಬರುತ್ತದೆ. ಇದಕ್ಕೆ ಇಂಬು ಕೊಟ್ಟದ್ದು ಅವರಿಗೆ ಎಡನೀರು ಮಠ. ಅಲ್ಲಿ ಅವರ ವ್ಯಕ್ತಿತ್ವ ವಿಕಸನಗೊಳ್ಳಲು ಅನೇಕ ಅವಕಾಶಗಳಿದ್ದುವು. ಶಿಸ್ತಿನ ಜೀವನದ ಜತೆಗೆ ಪೂರ್ವಸಿದ್ದತೆ ಪ್ರಾಮಾಣಿಕತೆ, ಸರಳತೆ, ಪರಿಶುದ್ದತೆ, ತಾಳ್ಮೆ ಮುಂತಾದ ಅನೇಕ ಒಳ್ಳೆಯ ಗುಣಗಳನ್ನು ಅವರು ಮೈಗೂಡಿಸಿಕೊಳ್ಳಲು ಅವರ ಎಡನೀರು ಮಠದ ಜೀವನ ಅನುಕೂಲ ಕಲ್ಪಿಸಿತು. ಸಂಗೀತ, ನಾಟಕ, ಯಕ್ಷಗಾನ ಮುಂತಾದ ಕಲಾಪ್ರತಿಭೆಗಳನ್ನು ಅವರು ಬೆಳೆಸಿಕೊಳ್ಳಲು ಅಲ್ಲಿ ಸದವಕಾಶಗಳಿದ್ದವು. ಹೀಗೆ ಅವರು ತಮ್ಮ ಮುಂದಿನ ಬದುಕಿನಲ್ಲಿ ಸಾಧಿಸಬೇಕಾದ ಮುಖ್ಯ ಗುರಿಯನ್ನು ರೂಪಿಸಿಕೊಳ್ಳುತ್ತಾ ಮುಂದೆ ತಮ್ಮ ಬದುಕನ್ನು ಮತ್ತಷ್ಟು ಗಟ್ಟಿಮಾಡಿಕೊಂಡರು.

ಡಾ. ಶ್ರೀಕೃಷ್ಣಭಟ್ ಅರ್ತಿಕಜೆಯವರು ಅಧ್ಯಾಪಕರಾಗಿ ಔದ್ಯೋಗಿಕ ಜೀವನವನ್ನು ಪ್ರಾರಂಭಿಸಿದ್ದು ತಾವು ಓದಿದ ಪುತ್ತೂರಿನ ಸೈಂಟ್ ಫಿಲೋಮೆನಾ ಕಾಲೇಜಿನಲ್ಲಿ, ಆ ನಂತರ 1975 ರಲ್ಲಿ ಮದರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗವನ್ನೂ ಸೇರಿದ ಅವರು ಹಂತ ಹಂತವಾಗಿ ಮೇಲೇರಿ ಅದೇ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾಗಿ 2005 ರಲ್ಲಿ ನಿವೃತ್ತರಾದರು. ಈ ಮೂವತ್ತು ವರ್ಷಗಳ ಕಾಲ ವಿಶ್ವವಿದ್ಯಾಲಯದ ಸ್ನಾತಕೋತ್ತರ ತರಗತಿಗಳಲ್ಲಿ ಸೇವೆಸಲ್ಲಿಸಿದ ಅವರು ಅನೇಕ ಪ್ರತಿಭಾವಂತ ಕನ್ನಡ ಲೇಖಕರಿಗೆ ವಿದ್ವಾಂಸರಿಗೆ ಕಲಾವಿದರಿಗೆ ಪ್ರೋತ್ಸಾಹ ನೀಡಿ ಕನ್ನಡ ನಾಡುನುಡಿಗೆ ಸೇವೆ ಮಾಡಿದ್ದಾರೆ.

ದೇಶದ ಹಲವು ವಿಶ್ವವಿದ್ಯಾಲಯಗಳಲ್ಲಿರುವ ಕನ್ನಡ ಅಧ್ಯಯನ ಮಂಡಳಿಗಳಲ್ಲಿ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೆಲಸ ನಿರ್ವಹಿಸಿದ್ದಾರೆ. ವಿವಿಧ ಸಾಹಿತ್ಯ ಗೋಷ್ಠಿಗಳನ್ನು ಮದರಾಸು ವಿಶ್ವವಿದ್ಯಾಲಯ ಹಾಗೂ ಕನ್ನಡ ಸಂಘಗಳಲ್ಲಿ ಏರ್ಪಡಿಸಿದ್ದಾರೆ, ಅನೇಕ ವಿದ್ವತ್ ಪ್ರಬಂಧಗಳನ್ನು ಮಂಡಿಸಿದ್ದಾರೆ. ಸೆನೆಟ್, ಅಕಾಡೆಮಿಕ್ ಕೌನ್ಸಿಲ್, ಕೇಂದ್ರ ಸರ್ಕಾರದ ಪಬ್ಲಿಕ್ ಸರ್ವಿಸ್ ಕಮೀಷನ್, ಸೆನ್ಸಾರ್ ಬೋರ್ಡ್ ಮುಂತಾದವುಗಳಲ್ಲಿ ಕನ್ನಡ ಭಾಷೆಯನ್ನು ಪ್ರತಿನಿಧಿಸಿದ್ದಾರೆ. ಮದರಾಸು ವಿವಿ ಪ್ರಾಚ್ಯ ಸಂಶೋಧನ ಸಂಸ್ಥೆಯ ನಿರ್ದೇಶಕರಾಗಿ ಹಾಗೂ ಡ್ರಾವಿಡ ಭಾಷಾ ಅಧ್ಯಯನದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ. ಈ ಎಲ್ಲಾ ಸಂದರ್ಭಗಳಲ್ಲಿ ಪ್ರತಿಭಾವಂತರು ಯಾರೇ ಆಗಿರಲಿ ಅವರು ವಿದ್ಯಾರ್ಥಿಗಳಾಗಿರಲಿ, ಸ್ನೇಹಿತರಾಗಿರಲಿ ಬಂಧುಗಳಾಗಿರಲಿ ಭಾಷಾ ಬೇಧ, ಜಾತಿ ಬೇಧವೆನ್ನದೆ ಸೂಕ್ತವಾಗಿ ಪ್ರೋತ್ಸಾಹ ನೀಡಿದ್ದಾರೆ.

ಕನ್ನಡದಲ್ಲಿ ಶತಕ ಸಾಹಿತ್ಯ ಎಂಬ ವಿಷಯದಲ್ಲಿ ಸಂಶೋಧನೆ ಮಾಡಿ ಪಿಎಚ್.ಡಿ ಪದವಿಯನ್ನು ಪಡೆದಿರುವ ಅವರ ಈ ಕೃತಿ ಉತ್ತಮ ಸಂಶೋಧನಾ ಗ್ರಂಥವೆಂಬ ಹೆಸರನ್ನು ಪಡೆದಿದೆ. ಜಾನಪದ ಜೀವನ, ಹವ್ಯಕ ಗಾದೆಗಳು, ಸಹಸ್ರಾರ್ಧ ತುಳುಗಾದೆಗಳು, ಸಾಹಿತ್ಯ ಸಂಬಂಧ, ನುಡಿಸಂಸ್ಕೃತಿ, ಹವ್ಯಕ ಪಡೆನುಡಿ ಕೋಶ ಮುಂತಾದ ಕೃತಿಗಳನ್ನು ರಚಿಸಿ ಉತ್ತಮ ಸಂಶೋಧಕ, ವಿಮರ್ಶಕ ಹಾಗೂ ಸಂಪಾದಕರೆಂಬ ಹೆಸರನ್ನೂ ಸಾರ್ಥಕಪಡಿಸಿಕೊಂಡಿದ್ದಾರೆ.

ಬಹುಭಾಷಾ ವಿದ್ವಾಂಸರಾದ ಡಾ. ಅರ್ತಿಕಜೆಯವರ ಸಾಹಿತ್ಯಿಕ ಬದುಕು ಬಹುಮುಖವಾದದ್ದು. ಅನ್ಯಭಾಷಾ ವಿದ್ವಾಂಸರೊಂದಿಗೆ ಅನನ್ಯ ಬಾಂಧವ್ಯವನ್ನಿರಿಸಿಕೊಂಡು ವಿಶ್ವವಿದ್ಯಾನಿಲಯದಲ್ಲಿ ಮೆಚ್ಚುಗೆ ಗಳಿಸಿರುವುದರೊಂದಿಗೆ ತಮಿಳು ಮತ್ತು ಮಲಯಾಳಂ ಭಾಷೆಗಳಿಂದ ಕೆಲವು ಪ್ರಸಿದ್ದ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿ ತಂದುಕೊಟ್ಟಿದ್ದಾರೆ. ಯಕ್ಷಗಾನ, ಕರ್ನಾಟಕ ಸಂಗೀತ ಮುಂತಾದ ಕಲೆಗಳನ್ನು ಬೇರೆ ಭಾಷೆಯವರಿಗೆ ವಿವಿಧ ಮಾಧ್ಯಮಗಳ ಮೂಲಕ ಪರಿಚಯ ಮಾಡಿಕೊಟ್ಟಿದ್ದಾರೆ. ಸೃಜನಶೀಲ ಲೇಖಕರಾಗಿ ಕವಿತೆಗಳನ್ನು, ಹಾಡುಗಳನ್ನು ರಚಿಸಿದ್ದಾರೆ. ಸಾಹಿತ್ಯದ ಒಬ್ಬ ಅಧ್ಯಾಪಕನಲ್ಲಿರಬೇಕಾದ ಮುಖ್ಯ ಗುಣಗಳು ಅವರ ಕೃತಿಗಳಲ್ಲಿ, ನಡೆನುಡಿಯಲ್ಲಿ ಎದ್ದು ಕಾಣುತ್ತವೆ.

ಡಾ. ಅರ್ತಿಕಜೆಯವರು ಚೆನ್ನೈ ನಗರದ ಎಲ್ಲಾ ಕನ್ನಡ ಸಂಘಗಳೊಂದಿಗೆ ನಿಕಟ ಸಂಪರ್ಕವನ್ನಿರಿಸಿಕೊಂಡು ಸತತವಾಗಿ ಕನ್ನಡ ಕಾರ್ಯಕ್ರಮಗಳನ್ನು ನಡೆಸಲು ಸಂಘಟನೆ ಮಾಡುತ್ತಿದ್ದಾರೆ. ಅಲ್ಲದೆ ಹವ್ಯಕ ಸಂಘ, ದಕ್ಷಿಣ ಕನ್ನಡ ಬ್ರಾಹ್ಮಣ ಸಂಘ, ಬಂಟರ ಸಂಘ ಮುಂತಾದ ಕನ್ನಡಿಗರ ಇತರ ಸಂಘಗಳಿಗೆ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಬೇರೆ ಊರುಗಳಿಂದ ಚೆನ್ನೈ ನಗರಕ್ಕೆ ಬಂದು ಹೋಗುವ ಕನ್ನಡಿಗರಿಗೆ ಎಲ್ಲಾ ಬಗೆಯ ಅನುಕೂಲಗಳನ್ನು ಒದಗಿಸಿ ಜನಾದರಣೀಯರಾಗಿದ್ದಾರೆ.

ಅವರಿಗೆ ಅರ್ಪಿಸುವ ಅಭಿನಂದನ ಗ್ರಂಥದಲ್ಲಿ ಹಲವು ಹಿರಿಯ ಲೇಖಕರು, ಬಂಧು, ಮಿತ್ರರು ಹಾಗೂ ಅವರ ವಿದ್ಯಾರ್ಥಿಗಳು ಡಾ. ಅರ್ತಿಕಜೆ ಅವರ ಬಗೆಗೆ ಬರೆದಿರುವ ಲೇಖನಗಳ ಶೀರ್ಷಿಕೆಗಳೇ ಸಾಕು ಅವರ ವ್ಯಕ್ತಿತ್ವವನ್ನು ಬಿಂಬಿಸಲು. ಅನುಪಮ ಸಾಧಕ, ದೀಪಸ್ತಂಭ ವಿದ್ಯಾ ವಿನಯ ಸಂಪನ್ನ, ಸ್ನೇಹಜೀವಿ, ಬಹುಜನ ಪ್ರೇಮಿ, ಸೌಜನ್ಯ ಸಾಗರ, ಕನ್ನಡ ತಮಿಳಿನ ಸಾಂಸ್ಕೃತಿಕ ಕೊಂಡಿ, ಮೌನಸಾಧಕ, ಅತಿಥಿ ಸತ್ಕಾರದ ಸಾಕ್ಷಾತ್ಕಾರ, ಪೂರ್ಣಕುಂಭ, ಕುಲುಮೆಯಲ್ಲಿ ಹದಗೊಂಡ ಒಡಹುಟ್ಟು, ನೆನಪಿನ ಓರಿಯಲ್ಲಿ ಮಿನುಗುವ ಹಣತೆ - ಇಂತಹ ಇನ್ನೂ ಅನೇಕ ವಿಶೇಷಣಗಳನ್ನು ಬಳಸಿ ಆತ್ಮೀಯರು ಡಾ. ಅರ್ತಿಕಜೆಯವರ ಬಗೆಗೆ ಮೆಚ್ಚುಗೆಯನ್ನು ಸೂಚಿಸಿರುವುದು ಅರ್ಥಪೂರ್ಣವಾಗಿದೆ.

ಅವರ ಬಹುಮುಖ ಸೇವೆಗೆ ತಕ್ಕ ಸನ್ಮಾನವೂ, ಕೀರ್ತಿಯೂ ಅವರಿಗೆ ದೊರೆತಿದೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಪುರಸ್ಕಾರದ ಜತೆಗೆ ಹಲವಾರು ಉನ್ನತ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿವೆ. ತಮಿಳುನಾಡಿನ ಉರ್ದು ಅಕಾಡೆಮಿಯ ಅತ್ಯುತ್ತಮ ಪ್ರಾಧ್ಯಾಪಕ ಪ್ರಶಸ್ತಿ, ಕಂಚಿ ಕಾಮಕೋಟಿ ಪೀಠದ ವಜ್ರಮಹೋತ್ಸವ ಸನ್ಮಾನ, ಕಲ್ಕತ್ತಾ ರಾಷ್ಟ್ರೀಯ ಹಿಂದಿ ಅಕಾಡೆಮಿಯ ವಿಶಿಷ್ಟ ಹಿಂದಿ ಸೇವಾ ಸನ್ಮಾನ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯವರ ಅಮೃತೋತ್ಸವ ಸನ್ಮಾನ, ಮದರಾಸು ಕನ್ನಡ ಬಳಗದವರ ಸನ್ಮಾನ ಇವು ಆ ಪಟ್ಟಿಯಲ್ಲಿ ಕೆಲವು ಮಾತ್ರ. ಅಲ್ಲದೆ ಪ್ರೊ. ಅರ್ತಿಕಜೆಯವರು ತಮಿಳುನಾಡು ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕ ಅಧ್ಯಕ್ಷರು, ತಮಿಳುನಾಡಿನ ಕನ್ನಡ ಪಠ್ಯ ಪುಸ್ತಕ ರಚನೆಯ ಅಧ್ಯಕ್ಷರೂ ಆಗಿ ಸೇವೆ ಸಲ್ಲಿಸಿದ್ದಾರೆ.

ಏಕೈಕ ಪುತ್ರ ಸಂಗೀತ ವಿದ್ವಾಂಸನಾಗಿ ಬೆಳೆಯುತ್ತಿದ್ದು ನೆಚ್ಚಿನ ಮಡದಿಯೊಂದಿಗೆ ಚಿಕ್ಕದಾದ ಚೊಕ್ಕ ಸಾಂಸಾರಿಕ ಜೀವನವನ್ನು ನಡೆಸುತ್ತಿರುವ ಪ್ರೊ. ಅರ್ತಿಕಜೆಯವರ ಬಂಧು ಮಿತ್ರರ ಬಳಗ ಅಪಾರ; ಎಲ್ಲರೂ ಸೇರಿ ಅವರ ಬಹುಮುಖ ಸೇವೆಯನ್ನು ಮೆಲುಕು ಹಾಕುತ್ತಾ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಆ ಮೂಲಕ ಹೊರನಾಡ ಕನ್ನಡ ಹರಿಕಾರರೊಬ್ಬರಿಗೆ ಗೌರವವನ್ನು ಸಲ್ಲಿಸಲಿದ್ದಾರೆ.

Share this Story:

Follow Webdunia kannada