Select Your Language

Notifications

webdunia
webdunia
webdunia
webdunia

ಗಾಂಧಿ ಹತ್ಯೆ ಯೋಜನೆ ರೂಪಿಸಿದ್ದು ಯಾರು?

ಗಾಂಧಿ ಹತ್ಯೆಗೆ 60 ವರ್ಷ

ಗಾಂಧಿ ಹತ್ಯೆ ಯೋಜನೆ ರೂಪಿಸಿದ್ದು ಯಾರು?
WD
ಗಾಂಧೀಜಿಯನ್ನು ಹತ್ಯೆ ಮಾಡಲು ಜಂಟಿ ಯೋಜನೆ ರೂಪಿಸಿದ್ದು ನಾಥೂರಾಮ್ ಗೋಡ್ಸೆ ಮತ್ತು ನಾರಾಯಣ ಅಪ್ಟೆ. ಆದರೆ ಅವರಲ್ಲಿ ಈ ಯೋಚನೆ ಹೊಳೆದದ್ದು ಮೊದಲಿಗೆ ಯಾರಿಗೆ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.

ಇದು ರಾಷ್ಟ್ರಪಿತ ಮಹಾತ್ಮ ಗಾಂಧಿ ಹತ್ಯೆಯ 60ನೇ ವಾರ್ಷಿಕ ದಿನವಾದ ಬುಧವಾರ (ಇಂದು) ಬಿಡುಗಡೆಯಾಗಲಿರುವ ಪುಸ್ತಕವೊಂದರಲ್ಲಿ ಉಲ್ಲೇಖಿಸಲಾಗಿರುವ ಅಂಶ.

ಪಾಕಿಸ್ತಾನಕ್ಕೆ 55 ಕೋಟಿ ರೂಪಾಯಿಯನ್ನು ವರ್ಗಾಯಿಸಬೇಕು ಎಂದು ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುವ ಮಹಾತ್ಮ ಗಾಂಧೀಜಿ ತೀರ್ಮಾನವನ್ನು ಟೆಲಿಪ್ರಿಂಟರ್‌ನಲ್ಲಿ ನೋಡಿದ ತಕ್ಷಣವೇ ಇಬ್ಬರೂ ಈ "ದೊಡ್ಡ ನಿರ್ಣಯ"ವನ್ನು ಕೈಗೊಂಡಿದ್ದರು ಎನ್ನುತ್ತದೆ ಈ ಪುಸ್ತಕ.

ಪೂನಾದಲ್ಲಿ ನಾಥೂರಾಮ್ ಮತ್ತು ಅಪ್ಟೆ ಅವರು ತಮ್ಮ ಪತ್ರಿಕಾ ಕಚೇರಿಯಲ್ಲಿ ಕುಳಿತಿದ್ದರು ಮತ್ತು ಈ ಸುದ್ದಿ ಓದಿದರು. ತಕ್ಷಣವೇ ಗಾಂಧಿಯನ್ನು ಹತ್ಯೆಗೈಯಬೇಕು ಎಂಬ ನಿರ್ಧಾರಕ್ಕೆ ಬಂದರು. ಆದರೆ ಗಾಂಧಿ ಹತ್ಯೆಯ ನಿರ್ಧಾರ ಮೊದಲು ಯಾರ ಮನಸ್ಸಿನಲ್ಲಿ ಮೂಡಿತು ಎಂಬುದು ಯಾರಿಗೂ ಗೊತ್ತಿಲ್ಲ. ಯಾಕೆಂದರೆ ಕೊನೆಯವರೆಗೂ, ಗೋಡ್ಸೆಯೇ ಗಾಂಧಿ ಹತ್ಯೆಗೆ ಕಾರಣ ಎಂಬ ಅಂಶವನ್ನಷ್ಟೇ ಅವರು ಕಾಪಾಡಿಕೊಂಡುಬಂದರು ಎಂದು ಮನೋಹರ್ ಮಲ್ಗಾಂವ್ಕರ್ ಬರೆದಿರುವ 'ದ ಮೆನ್ ಹೂ ಕಿಲ್ಡ್ ಗಾಂಧಿ'ಯ ಹೊಸ ಆವೃತ್ತಿಯಲ್ಲಿ ವಿವರಿಸಲಾಗಿದೆ.

ರೋಲಿ ಬುಕ್ಸ್ ಈ ಕೃತಿಯನ್ನು ಪ್ರಕಟಿಸಿದ್ದು, ಗಾಂಧಿ ಹತ್ಯೆಯ 60ನೇ ವಾರ್ಷಿಕ ದಿನದಂದು (ಜ.30, 2008) ಇದು ಬಿಡುಗಡೆಯಾಗುತ್ತಿದೆ.

94ರ ಹರೆಯದ ಲೇಖಕ ಮಲ್ಗಾಂವ್ಕರ್ ಅವರೊಬ್ಬ ಮಾಜಿ ಸೇನಾಧಿಕಾರಿ ಮತ್ತು ಜನಸೇವಕರೂ ಹೌದು. ಅವರು 'ದ ಮೆನ್ ಹೂ ಕಿಲ್ಡ್ ಗಾಂಧಿ' ಕೃತಿಯನ್ನು 30 ವರ್ಷದ ಹಿಂದೆ, 1978ರಲ್ಲಿ ಮೊದಲ ಬಾರಿ ಪ್ರಕಟಿಸಿದ್ದರು. ಪ್ರಕಾಶಕರು ಹೇಳುವಂತೆ, ಈ ಕೃತಿಯ ಹೊಸ ಆವೃತ್ತಿಯಲ್ಲಿ, ಇದುವರೆಗೆ ಪ್ರಕಟವಾಗದ ಅಪರೂಪದ ಚಿತ್ರಗಳು, ದಾಖಲೆಗಳ ವಿವರ ಇದೆ. ಈ ಇಬ್ಬರು ಮುಂಬಯಿಯಿಂದ ದೆಹಲಿಗೆ ತೆರಳಿದ ವಿಮಾನದ ಟಿಕೆಟ್ ಮತ್ತು ಹೋಟೆಲ್ ಬಿಲ್‌ಗಳ ದಾಖಲೆಯೂ ಇದರಲ್ಲಿದೆ.

ಗಾಂಧಿ ಹತ್ಯೆಗೆ ಸಂಬಂಧಿಸಿ ತಪ್ಪಿತಸ್ಥರು ಎಂದು ಸಾಬೀತಾದ ಆರು ಮಂದಿಯಲ್ಲಿ ಇಬ್ಬರನ್ನು ನೇಣಿಗೇರಿಸಲಾಗಿದೆ. ಸಾಕ್ಷಿದಾರನಾದ ಬಾಡ್ಗೆ ಮತ್ತು ಜೀವಾವಧಿ ಶಿಕ್ಷೆಗೊಳಗಾದ ಇತರ ಮೂವರಾದ ಕರ್ಕಾರೆ, ಗೋಪಾಲ್ ಮತ್ತು ಮದನಲಾಲ್ ನನ್ನ ಜತೆ ಮುಕ್ತವಾಗಿ ಮತ್ತು ಸುದೀರ್ಘವಾಗಿ ಮಾತನಾಡಿದ್ದಾರೆ ಎಂದು ಲೇಖಕರು ತಮ್ಮ ಕೃತಿಯ ಮೊದಲ ಆವೃತ್ತಿಯಲ್ಲಿ ಟಿಪ್ಪಣಿ ಬರೆದಿದ್ದಾರೆ. ಎಲ್ಲಾ ನಾಲ್ಕು ಮಂದಿಯು ಈ ಹಿಂದೆ ಎಂದಿಗೂ ಬಾಯಿಬಿಡದ ಸಂಗತಿಗಳನ್ನು ತನ್ನಲ್ಲಿ ತಿಳಿಸಿರುವುದಾಗಿಯೂ ಅವರು ಹೇಳಿದ್ದಾರೆ.

ಪುಸ್ತಕದಲ್ಲಿರುವ ಕೆಲವು ಅಪರೂಪದ ಛಾಯಾಚಿತ್ರಗಳಲ್ಲಿ ಜಿನ್ನಾ ಮತ್ತು ಗಾಂಧಿ ನಡುವಿನ ವಾಗ್ವಾದದ ದೃಶ್ಯವೂ ಇದೆ. ಗೋಡ್ಸೆ ಒಬ್ಬ ಭಯಂಕರ ಪುಸ್ತಕದ ಹುಳು ಎನ್ನುತ್ತಾರೆ ಮಲ್ಗಾಂವ್ಕರ್. ಹೆಚ್ಚಾಗಿ ಪುರಾಣ ಕಥೆಗಳು, ಪ್ರಾಚ್ಯ ಇತಿಹಾಸ ಮತ್ತು ಮರಾಠಿ ಇತಿಹಾಸ ಗೋಡ್ಸೆ ಆಸಕ್ತಿಯ ವಿಷಯ.

ವಿ.ಡಿ. ಸಾವರ್ಕರ್ ಅವರನ್ನು ಭೇಟಿಯಾದ ಬಳಿಕ ಗೋಡ್ಸೆ ತೀರಾ ಬದಲಾಗಿಬಿಟ್ಟ. ಸಾವರ್ಕರ್ ಅವರು ಯಾರಿಗಾಗಿ, ಯಾವುದಕ್ಕಾಗಿ ಹೋರಾಡುತ್ತಿದ್ದರೋ, ಅದನ್ನೇ ತನ್ನ ಧ್ಯೇಯವಾಗಿಸಿಕೊಂಡಿದ್ದ. ಸಾಮಾಜಿಕ, ರಾಜಕೀಯ, ಧಾರ್ಮಿಕ, ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯ, ಜಾತಿ ಪದ್ಧತಿ ನಿರ್ಮೂಲನೆ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವರನ್ನು ಮರಳಿ ಮಾತೃಧರ್ಮಕ್ಕೆ ಸೇರಿಸುವುದು ಮುಂತಾದವುಗಳ ಬಗ್ಗೆ ಅತ್ಯಂತ ಕಾಳಜಿ ಹೊಂದಿದ್ದ.

31ರಲ್ಲಿದ್ದ ಗೋಡ್ಸೆ ಒಬ್ಬ ಮೌನಿ ಮತ್ತು ಸರಳ ವ್ಯಕ್ತಿ. ಹೆಂಗಸರಿಂದ ಮಾರು ದೂರ ಇರುವ ವ್ಯಕ್ತಿಯಾತ. ಅವನ ಹೆಗ್ಗಳಿಕೆಯೆಂದರೆ ಮೊನಚು ಭಾಷಣದ ಮೂಲಕ ಭಾರೀ ಸಂಖ್ಯೆಯಲ್ಲಿ ಜನರನ್ನು ಸೆಳೆಯಬಲ್ಲ ಶಕ್ತಿ. ಆದರೆ ಆಪ್ಟೆಯದು ತದ್ವಿರುದ್ಧ ಗುಣ. ಯಾವತ್ತೂ ಲೈವ್‌ಲಿಯಾಗಿರುತ್ತಿದ್ದ ಮತ್ತು ತಕ್ಷಣವೇ ಪ್ರತಿಕ್ರಿಯಿಸುತ್ತಿದ್ದ. ದುಬಾರಿ ಉಡುಗೆ ಆತನ ಶೋಕಿ, ಜೀವನವನ್ನು ಯಾವಾಗಲೂ ಎಂಜಾಯ್ ಮಾಡುತ್ತಿದ್ದ. ಕುಡಿಯುತ್ತಿದ್ದ, ಧೂಮಪಾನವನ್ನೂ ಮಾಡುತ್ತಿದ್ದ.

ಇಷ್ಟೊಂದು ತದ್ವಿರುದ್ಧ ಗುಣಗಳಿರುವ ಇಬ್ಬರು ಒಟ್ಟಾಗಿ ಆತ್ಮೀಯರಾಗಿದ್ದು ಅತ್ಯಂತ ಅಸಹಜ ಎನ್ನುತ್ತಾರೆ ಲೇಖಕ.

ಮತ್ತೊಬ್ಬ ಆಪಾದಿತ ಮದನಲಾಲ್ ಪಾಹ್ವಾ. ಪಾಕಿಸ್ತಾನದ ನಿರಾಶ್ರಿತನಾಗಿದ್ದು, ದೌರ್ಜನ್ಯದ ಪ್ರತ್ಯಕ್ಷ ಅನುಭವಿ. ಜನವರಿ 20ರಂದು ಗಾಂಧಿ ಪ್ರಾರ್ಥನೆ ಸಂದರ್ಭ ಬಾಂಬ್ ಎಸೆದ ಆರೋಪ ಆತನ ಮೇಲಿತ್ತು. ಆತ ಕೂಡ ಗೋಡ್ಸೆ ಮತ್ತು ಅಪ್ಟೆ ಸಂಪರ್ಕಕ್ಕೆ ಬಂದದ್ದು ವಿಷ್ಣು ಕರ್ಕಾರೆ ಮೂಲಕ. ನಾಲ್ವರು ಆಪಾದಿತರಲ್ಲೊಬ್ಬನಾದ ದಿಗಂಬರ ಬಾಡ್ಗೆ, ಯಾವತ್ತೂ ಧೈರ್ಯ ತುಂಬುವ ಮನುಷ್ಯ. ಶಸ್ತ್ರ ಭಂಡಾರವೊಂದರ ಮಾಲೀಕನೂ ಹೌದು.

ಗಾಂಧಿಯನ್ನು ಕೊಲ್ಲಲು ನಿರ್ಧಾರ ಮಾಡಿದ ಬಳಿಕ ಇಬ್ಬರೂ ಜನವರಿ 20ರ ದಿನ ನಿಗದಿಪಡಿಸಿದರು. ಬಳಿಕ ಅದೇಕೋ ಯೋಜನೆ ಬದಲಾಯಿತು. ಜನವರಿ 30ರ ದಿನ ನಿಗದಿಪಡಿಸಲಾಯಿತು. ಅಂದು ಬೂದು ಬಣ್ಣದ ಅಂಗಿ ಧರಿಸಿದ್ಯ ವ್ಯಕ್ಯಿಯೊಬ್ಬ ಬಿರ್ಲಾ ಭವನದ ಸರ್ವಿಸ್ ಗೇಟ್ ಮೂಲಕ ಪ್ರವೇಶಿಸಿದಾಗ, ಯಾರೂ ಅವನನ್ನು ತಪಾಸಣೆ ಮಾಡಲಿಲ್ಲ. ಗಾಂಧೀಜಿ ಅವರು ಜನತೆಯತ್ತ ಕೈಬೀಸಿದಾಗ ಗೋಡ್ಸೆ ಕೆಲಸ ಮುಗಿಸಿಬಿಟ್ಟಿದ್ದ ಎಂದಿದ್ದಾರೆ ಲೇಖಕ.

Share this Story:

Follow Webdunia kannada