ಲೋಕಸಭೆ ಚುನಾವಣೆಯ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಸಂಸದೀಯ ಖಾತೆ ವ್ಯವಹಾರಗಳ ಖಾತೆ ಸಚಿವ ಕಮಲ್‌ನಾಥ್ ಅವರೊಂದಿಗೆ ರಾಷ್ಟ್ರಪತಿ ಭವನಕ್ಕೆ ತೆರಳಿದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ತಮ್ಮ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ಸಲ್ಲಿಸಿದ್ದಾರೆ.
ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವುದಕ್ಕೆ ಒಂದು ದಿನ ಮುನ್ನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ಸೇರಿ 15ನೇ ಲೋಕಸಭೆಯನ್ನು ವಿಸರ್ಜಿಸುವ ಮಸೂದೆಗೆ ಅಂಗೀಕಾರ ನೀಡಲಾಯಿತು. ಪ್ರಧಾನಿ ಮನಮೋಹನ್ ಸಿಂಗ್ ವಿದಾಯದ ಭಾಷಣದಲ್ಲಿ ಬೆಂಬಲ ನೀಡಿದ ದೇಶದ ಜನತೆಗೆ ಅಭಿನಂದಿಸಿದರು.
ಕಳೆದ 10 ವರ್ಷಗಳ ಅವಧಿಯಲ್ಲಿ ನಿಷ್ಪಕ್ಷಪಾತದಿಂದ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದ್ದೇನೆ. ನನಗೆ ಸಹಕಾರ ನೀಡಿದ ನಿಮ್ಮೆಲ್ಲರಿಗೆ ಧನ್ಯವಾದಗಳು. ಮುಂಬರುವ ದಿನಗಳಲ್ಲಿ ಭಾರತ ವಿಶ್ವದ ಭೂಪುಟದಲ್ಲಿ ಉತ್ತಮ ಸ್ಥಾನ ಪಡೆಯುವ ವಿಶ್ವಾಸವಿದೆ ಎಂದರು.
ದೇಶದ ಜನತೆ ಬಿಜೆಪಿ ನೇತೃತ್ವದ ಮೋದಿ ಸರಕಾರವನ್ನು ಬೆಂಬಲಿಸಿ ಮತ ನೀಡಿದ್ದಾರೆ. ಮತದಾರರ ತೀರ್ಪನ್ನು ಗೌರವಿಸುತ್ತೇನೆ. ನನ್ನ ಜೀವನ ತೆರೆದ ಪುಸ್ತಕದಂತಿದೆ. ನನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ದೇಶಕ್ಕೆ ಅಳಿಲು ಸೇವೆ ಸಲ್ಲಿಸಿದ್ದೇನೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ತಿಳಿಸಿದ್ದಾರೆ.