Select Your Language

Notifications

webdunia
webdunia
webdunia
webdunia

ತಮಿಳುನಾಡು: ಪುತ್ರ ಅಳಗಿರಿ ಬೆಂಬಲಿಗರಿಗೆ ಕರುಣಾನಿಧಿ ವಾರ್ನಿಂಗ್

ತಮಿಳುನಾಡು: ಪುತ್ರ ಅಳಗಿರಿ ಬೆಂಬಲಿಗರಿಗೆ ಕರುಣಾನಿಧಿ ವಾರ್ನಿಂಗ್
ಚೆನ್ನೈ , ಬುಧವಾರ, 19 ಮಾರ್ಚ್ 2014 (19:16 IST)
PR
ಡಿಎಂಕೆಯ ಉಚ್ಛಾಟಿತ ನಾಯಕ ಅಳಗಿರಿಯನ್ನು ಬೆಂಬಲಿಸುತ್ತಿರುವ ಡಿಎಂಕೆ ಕಾರ್ಯಕರ್ತರ ವಿರುದ್ಧ ಶಿಸ್ತುಕ್ರಮ ನಡೆಸಲಾಗುವುದು ಎಂದು ಡಿಎಂಕೆ ಮುಖ್ಯಸ್ಥ ಮತ್ತು ಅಳಗಿರಿ ಅವರ ತಂದೆ ಕರುಣಾ ನಿಧಿ ಅವರು ಹೇಳಿದ್ದಾರೆ.

ಚೆನ್ನೈನಲ್ಲಿ ಮಾತನಾಡಿದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರು, ಕೆಲ ಕಾರ್ಯಕರ್ತರು ಡಿಎಂಕೆ ಪಕ್ಷದಲ್ಲಿದ್ದು, ಅಳಗಿರಿ ಅವರನ್ನು ಬೆಂಬಲಿಸುತ್ತಿರುವುದು ನನಗೆ ತಿಳಿದಿದೆ. ಇನ್ನು ಮುಂದೆ ಡಿಎಂಕೆ ವಿರುದ್ಧವಾಗಿ ಅಳಗಿರಿ ಅವರನ್ನು ಬೆಂಬಲಿಸುವ ಕಾರ್ಯಕರ್ತರ ವಿರುದ್ಧ ಶಿಸ್ತುಕ್ರಮ ನಡೆಸಲಾಗುವುದು ಎಂದು ಕರುಣಾನಿಧಿ ತಮ್ಮ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದಾರೆ.

ಕಳೆದ ಭಾನುವಾರ ಮಧುರೈ ನಿವಾಸದಲ್ಲಿ ಬೆಂಬಲಿಗರ ಸಭೆ ನಡೆಸಿದ್ದ ಡಿಎಂಕೆ ಉಚ್ಛಾಟಿತ ಮುಖಂಡ ಅಳಗಿರಿ ಅವರು, ನೂತನ ಪಕ್ಷ ಸ್ಥಾಪನೆ ವಿಚಾರವನ್ನು ಅಲ್ಲಗಳೆದಿದ್ದರು. ಆದರೆ ಪರೋಕ್ಷವಾಗಿ ಬೇರೆ ಪಕ್ಷಗಳಿಗೆ ಬೆಂಬಲ ನೀಡುವುದಾಗಿ ಹೇಳಿದ್ದರು. ಅಂದಿನ ಸಭೆಯಲ್ಲಿ ಡಿಎಂಕೆ ಪಕ್ಷದ ಅಳಗಿರಿ ಅವರ ಬೆಂಬಲಿತ ಕಾರ್ಯಕರ್ತರು ಕೂಡ ಸೇರಿದ್ದರು. ಈ ಹಿನ್ನಲೆಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಕರುಣಾನಿಧಿ ಅವರು ಅಳಗಿರಿ ಅವರನ್ನು ಬೆಂಬಲಿಸುವ ಕಾರ್ಯಕರ್ತರಿಗೆ ಶಿಸ್ತುಕ್ರಮದ ಎಚ್ಚರಿಕೆ ನೀಡಿದ್ದಾರೆ.

ತಂದೆಯ ಎಚ್ಚರಿಕೆಯಿಂದ ಮೆತ್ತಗಾದ ಅಳಗಿರಿ

ಈ ನಡುವೆ ಅತ್ತ ಚೆನ್ನೈನಲ್ಲಿ ಕರುಣಾನಿಧಿ ಅವರು ಕಾರ್ಯಕರ್ತರಿಗೆ ಎಚ್ಚರಿಕೆ ನೀಡುತ್ತಿದ್ದಂತೆಯೇ ಇತ್ತ ಮಧುರೈನಲ್ಲಿ ಅಳಗಿರಿ ಅವರು ಯೂಟರ್ನ್ ತೆಗೆದುಕೊಂಡಿದ್ದಾರೆ. ಈ ಹಿಂದೆ ತಾವು ನೂತನ ಪಕ್ಷ ಸ್ಥಾಪಿಸದೇ ಇದ್ದರೂ ಡಿಎಂಕೆಯಲ್ಲಿರುವ ತಮ್ಮ ವಿರೋಧಿಗಳ ವಿರುದ್ಧ ಪರೋಕ್ಷವಾಗಿ ಕೆಲಸ ಮಾಡುವ ಸೂಚನೆ ನೀಡಿದ್ದರು. ಆದರೆ ಇಂದು ತಮ್ಮ ಹೇಳಿಕೆಯನ್ನೇ ಬದಲಿಸಿರುವ ಅವರು, ಯಾವುದೇ ಕಾರಣಕ್ಕೂ ತಾವು ಡಿಎಂಕೆ ವಿರುದ್ಧ ಅಪಪ್ರಚಾರ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಅಲ್ಲದೆ ತಮ್ಮ ವಿರುದ್ಧ ಅಪಪ್ರಚಾರ ಮಾಡುಲಾಗುತ್ತಿದ್ದು, ಅನವಶ್ಯಕವಾಗಿ ಶಿಸ್ತುಕ್ರಮ ಜರುಗಿಸಲಾಗಿದೆ. ತಾವು ಕೇವಲ ಪಕ್ಷದಲ್ಲಿದ್ದ ದ್ವಂದ್ವ ಮತ್ತು ಅಸಮಾನತೆಯನ್ನು ಮಾತ್ರ ಪ್ರಶ್ನಿಸಿದ್ದೆ ಎಂದು ಹೇಳಿದ್ದಾರೆ.

ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ಹಿರಿಯ ಪುತ್ರರಾಗಿರುವ ಅಳಗಿರಿ ಅವರು ಪಕ್ಷ ವಿರೋಧಿ ಚಟುವಟಿಕೆಯ ಹಿನ್ನಲೆಯಲ್ಲಿ ಕಳೆದ ಜನವರಿಯಲ್ಲಿ ಪಕ್ಷದಿಂದ ಉಚ್ಛಾಟನೆಗೊಂಡಿದ್ದರು. ಕರುಣಾನಿಧಿ ಅವರ ವಾರಸುದಾರ ಎಂದೇ ಬಿಂಬಿತರಾಗಿದ್ದ ತಮ್ಮ ಸಹೋದರ ಎಂ.ಕೆ.ಸ್ಟಾಲಿನ್ ಅವರಿಗೆ ಜೀವ ಬೆದರಿಕೆ ಒಡ್ಡಿದ್ದ ಅಳಗಿರಿ ಅವರು ಕರುಣಾನಿಧಿ ಅವರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಬೆಳವಣಿಗೆಯ ನಂತರ ಸುದ್ದಿಗೋಷ್ಠಿ ನಡೆಸಿದ್ದ ಕರುಣಾನಿಧಿ ಅವರು ತಮ್ಮ ಮಗ ಅಳಗಿರಿ ಅವರನ್ನು ಡಿಎಂಕೆ ಪಕ್ಷದಿಂದ ಉಚ್ಛಾಟನೆ ಮಾಡಿರುವುದಾಗಿ ಹೇಳಿದ್ದರು.

Share this Story:

Follow Webdunia kannada