ದೆಹಲಿ: ಹೊಸದಾಗಿ ಮೋದಿಯವರ 2.0 ಸಂಪುಟ ಸೇರಿರುವ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಗುರುವಾರದಂದು ಸುಮಾರು 23 ಸಾವಿರ ಕೋಟಿ ಮೊತ್ತದ ತುರ್ತು ಪ್ಯಾಕೇಜ್ ಘೋಷಣೆ ಮಾಡಿದರು. ನಮ್ಮ ಸರ್ಕಾರವು ಒಗ್ಗೂಡಿ ಸಮಸ್ಯೆಯ ವಿರುದ್ದ ಹೋರಾಡುವುದರಲ್ಲಿ ನಂಬಿಕೆ ಇಟ್ಟಿದ್ದು ರಾಜ್ಯಗಳ ಜೊತೆ ಒಗ್ಗೂಡಿ ಈ ಸಮಸ್ಯೆ ಬಗೆಹರಿಸಲಿದ್ದೇವೆ ಎಂದರು. 9 ತಿಂಗಳ ಸಮಯದಲ್ಲಿ ನಾವು ಆದಷ್ಟು ತುರ್ತಾಗಿ ಕೆಲಸ ಮಾಡುತ್ತೇವೆ. ನಮ್ಮ ಮುಂದಿರುವ ಸವಾಲು ಎಂದರೆ ಅಗತ್ಯವಿರುವ ರಾಜ್ಯಗಳಿಗೆ ಕೈಲಾದಷ್ಟು ಸಹಾಯ ಮಾಡುವುದು ಹಾಗೂ ಕಷ್ಟ ಕಾಲದಲ್ಲಿ ಅವರ ಜೊತೆ ನಿಲ್ಲುವುದಾಗಿದೆ ಎಂದು ನುಡಿದರು.
ಕೋವಿಡ್ ಎರಡನೇ ಅಲೆಗೆ ದೇಶದವು ತತ್ತರಿಸಿ ಹೋಗಿದ್ದು ಸಾಕಷ್ಟು ಹಾನಿಯಾಗಿದೆ ಆದ ಕಾರಣ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ಹಣವನ್ನು ಜಂಟಿಯಾಗಿ ವಿನಿಯೋಗಿಸಲಿವೆ ಎಂದು ಮಾಂಡವೀಯ ಅವರು ಹೇಳಿದರು.
ಮೂರನೇ ಅಲೆಯನ್ನು ನಿಭಾಯಿಸಲು ನಿಮ್ಮ ಸರ್ಕಾರ ಸಿದ್ದವಾಗಿದೆಯೇ ಎನ್ನುವ ಪ್ರಶ್ನೆಗೆ, 736 ಜಿಲ್ಲೆಗಳಲ್ಲಿ ಮಕ್ಕಳ ಆರೈಕೆ ಕೇಂದ್ರ ಹಾಗೂ 20 ಸಾವಿರ ತುರ್ತು ನಿಗಾ ಘಟಕಗಳನ್ನು ಹೊಂದಿರುವ ಹಾಸಿಗೆಗಳನ್ನು ಕೋವಿಡ್ ರಿಲೀಫ್ ಫಂಡ್ ಅಡಿಯಲ್ಲಿ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು.