Select Your Language

Notifications

webdunia
webdunia
webdunia
webdunia

ಮಯೂರಿ

ಮಯೂರಿ
ಚೆನ್ನೈ , ಶನಿವಾರ, 22 ನವೆಂಬರ್ 2014 (16:36 IST)
ಆ ಗ್ರೀನ್ ರೂಮಿನ ತುಂಬೆಲ್ಲ ಕಿಲಕಿಲ ಕಲರವ ತುಂಬಿಕೊಂಡಿತ್ತು. ದಾಂಡಿಯಾ ರಾಸ್‌ನ ಉಡುಗೆ ತೊಟ್ಟ ಹುಡುಗಿಯರು ಅತ್ತಿತ್ತ ಓಡಾಡುತ್ತ ತಮ್ಮ ಕಾಲ್ಗೆಜ್ಜೆ ನಾದದಿಂದ ಇನ್ನಷ್ಟು ರಿಂಗಣ ತುಂಬಿದ್ದರು. ಚೂಡಿಯಲ್ಲಿದ್ದ ಕನ್ನಡಿಗಳಲ್ಲೆಲ್ಲ ಅವರ ಸಂತಸ ಪ್ರತಿಬಿಂಬಿಸುತ್ತಿತ್ತು. ಮುಖದ ತುಂಬೆಲ್ಲ ಆಕಾಶ ಬುಟ್ಟಿಯಂತಹ ರಂಗು ಥಳಥಳಿಸುತ್ತಿತ್ತು. ಧಂಡಿಯಾಗಿದ್ದ ಅವರ ಖುಷಿಗೆ ದಾಂಡಿಯಾ ಮೆರುಗು ನೀಡಿತ್ತು.
 
ಅದಾವ ಚಿತ್ತ ಚೋರನಿಗಾಗಿ ಈ ಅಲಂಕಾರ? ಯಾವ ಮೋಹನ ಮುರಳಿಗಾಗಿ ಈ ಆಮೋದ? 
 
ಇನ್ನೇನು ಕಾರ್ಯಕ್ರಮ ಆರಂಭವಾಗಬೇಕು.
 
ಮೂರನೇ ಬೆಲ್‌ಗಾಗಿ ಎಲ್ಲರೂ ಗ್ರೀನ್ ರೂಮಿನಲ್ಲಿ ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ. ಮಯೂರಿ ತನ್ನ ಮೇಕಪ್ ಅನ್ನು ಇನ್ನೊಮ್ಮೆ ತಿದ್ದಿ ತೀಡಿಕೊಳ್ಳುತ್ತ, ತುಟಿಗೆ ಹೆಚ್ಚಾಗಿದ್ದ ರಂಗನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಳು. 
 
ಅದು ಮೂರನೇ ಬೆಲ್. ಮೊಳಗಿಯೇ ಬಿಟ್ಟಿತು ! ! !
 
ಮಯೂರಿಯ ಮೈಯಲ್ಲಿ ಅದೆಂಥದೋ ಶಕ್ತಿ ಪ್ರವಹಿಸಿದಂತಾಗಿ ರಂಗದ ಮೇಲೆ ನಿಧಾನಕ್ಕೆ ಒಂದೊಂದೇ ಅಡಿ ಇಟ್ಟಳು. ಇಡೀ ತಂಡದ ಹುಡುಗಿಯರು ಹಿಂಬಾಲಿಸಿದರು. ನೃತ್ಯದ ಲಾಲಿತ್ಯ, ಸಂಯೋಜನೆ, ಬಾಗು, ಬಳುಕುಗಳು ಎಲ್ಲರಿಗೂ ಮೋಡಿ ಮಾಡಿಬಿಟ್ಟವು. ದಾಂಡಿಯಾ ರಾಸ್...! ಪ್ರೇಕ್ಷಕರು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿತ್ತು.
 
ಕಾರ್ಯಕ್ರಮ ಮುಗಿದಾಗ ದೀರ್ಘ ಕರತಾಡನ. ಹರ್ಷೋದ್ಗಾರಗಳ ಮಳೆ. 'ಒನ್ಸ್ ಮೋರ್' ಎಂಬ ಕೂಗು. 
 
ಮಯೂರಿಗೆ ಕಂಗ್ರಾಟ್ಸ್ ಹೇಳಲು ಗ್ರೀನ್ ರೂಮಿನತ್ತ ಧಾವಿಸಿದೆ.
 
‘ಫೆಂಟಾಸ್ಟಿಕ್- ಕಂಗ್ರಾಜುಲೇಷನ್, ವೆಲ್ಡನ್ ವೆಲ್ಡನ್’ ಎಂದೆ. ಯಾಕೊ..... ಅವಳ ಕಣ್ಣುಗಳಲ್ಲಿ ನೀರು ಜಿನುಗುತ್ತಿತ್ತು!
 
ದೀರ್ಘ ಮೌನ, ಬಿಕ್ಕಳಿಕೆ....!
 
‘ಆತ ಬರಲೇ ಇಲ್ಲ’ ಎಂದು ಸುತ್ತಮುತ್ತಲೂ ನೋಡಿದಳು.
 
‘ಬಂದೇ ಬರ್ತಾರೆ ಅಂತ ನನ್ನ ಒಳಮನಸ್ಸು ಹೇಳುತ್ತಿತ್ತು. ಆದರೆ, ಬರಲೇ ಇಲ್ಲ....’ ಯಾರಾದರೂ ನೋಡಿಯಾರೆಂದು ಅತ್ತಿತ್ತ ನೋಡಿ ಕೂಡಲೇ ಕಣ್ಣು ಒರೆಸಿಕೊಂಡಳು.
 
ಯಾರು ಆತ? ನೂರಾರು ಪ್ರಶ್ನೆಗಳು. ಈಕೆಗೆ ಇನ್ನೊಬ್ಬ ಬಾಯ್ ಫ್ರೆಂಡ್ ಇರಬೇಕು.... ಅವನು ಬರದೇ ಹೋದ ಕಾರಣ ಇಷ್ಟೊಂದು ಬೇಸರಪಟ್ಟುಕೊಂಡಿದ್ದಾಳೆ! ಛೇ!! ಛೇ!! ಇಂಥ ಯಾವನೋ ಒಬ್ಬನ ಪ್ರೇಯಸಿಗಾಗಿ ನಾನು ಇಷ್ಟೊಂದು ...
 
ಎಂದೆಲ್ಲ ಯೋಚನೆ... ಅಲ್ಲಲ್ಲ... ಚಿಂತೆ ಶುರುವಾಯಿತು.
 
ಯಾರಾತ? ಎಂಬ ಮಾತು ಅದೆಷ್ಟು ಬಾರಿ ಕೇಳಿದಂತಾಯಿತು.
 
‘ಆತ, ಆ ... ಆತ ....!!!'
 
‘ಏನಿಲ್ಲ ಬಿಡು... ನನಗೆ ತಡವಾಗುತ್ತೆ...’ ಎಂದು ಹೇಳಿದವಳೇ ವಾಶ್ ಬೇಸಿನ್ ಹತ್ತಿರ ಹೋಗಿ ಮುಖಕ್ಕೆ ನೀರು ಚಿಮುಕಿಸಿಕೊಂಡವಳೇ ಅಲ್ಲಿಂದ ನಡೆದುಬಿಟ್ಟಳು!
 
* * * * *
 
ಮಯೂರಿ ಇಂಥದ್ದೇ ಒಂದು ಕಾರ್ಯಕ್ರಮದಲ್ಲಿ ಹಿಂದೆ ನನಗೆ ಪರಿಚಯವಾಗಿದ್ದಳು. ಅವಳ ಡ್ಯಾನ್ಸ್ ಕ್ಲಾಸ್ ಬಗ್ಗೆ ಆಗಾಗ ಹೇಳುತ್ತಿದ್ದಳು. ಕೆಲ ಕಾರ್ಯಕ್ರಮಗಳಿಗೆ ನನ್ನನ್ನು ಆಹ್ವಾನಿಸುತ್ತಿದ್ದಳು. ನಾನು ಅವಳ ಎಲ್ಲ ಕಾರ್ಯಕ್ರಮಗಳ ಖಾಯಂ ಪ್ರೇಕ್ಷಕನಾದೆ. ಉತ್ತಮ ಫೋಟೊಗಳು, ವ್ಯಕ್ತಿ ಚಿತ್ರಣ, ಪರಿಶ್ರಮ, ಎಲ್ಲಕ್ಕಿಂತ ಮಿಗಿಲಾಗಿ ಕಲೆಗಾಗಿ ಆಕೆ ಪಡುತ್ತಿರುವ ಶ್ರಮದ ಬಗ್ಗೆ ವಿಸ್ತೃತವಾಗಿ ಲೇಖನವೊಂದನ್ನು ಬರೆದಿದ್ದೆ. ‘ಸಮಕಾಲೀನ ನೃತ್ಯಕ್ಕಾಗಿ ಒಂದು ಅಕಾಡೆಮಿ ಸ್ಥಾಪಿಸುವ ಮಹತ್ತರ ಕನಸನ್ನು ಹೊತ್ತಿರುವ ಮಯೂರಿ, ತಮ್ಮ ಕನಸನ್ನು ನನಸು ಮಾಡುವುದಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಪ್ರಯತ್ನಕ್ಕೆ ಎಲ್ಲರ ಸಹಾಯ ಸಿಕ್ಕರೆ ನಮ್ಮ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಒಂದು ದೊಡ್ಡ ಆಸ್ತಿ ಅವರಾಗುವುದರಲ್ಲಿ ಸಂದೇಹವೇ ಇಲ್ಲ’ ಎಂದೊಮ್ಮೆ ಬರೆದಿದ್ದೆ.
 
ಪರಿಚಯ ಸ್ನೇಹಕ್ಕೆ ತಿರುಗಿತ್ತು.
 
ಒಂದು ದಿನ ಬೆಳಿಗ್ಗೆ ಏಳು ಗಂಟೆಗೆಲ್ಲ ಫೋನ್ ಮಾಡಿ ‘ಈವತ್ತು ನಿನಗೊಂದು ಸರ್ಪ್ರೈಜ್’ ಎಂದಳು. ಏನು, ಎತ್ತ ಎಂದು ವಿಚಾರಿಸುವ ಮೊದಲೇ, ‘ನಿಮ್ಮ ಮನೆಗೆ ಬರ್ತಾ ಇದ್ದೇನೆ’ ಎಂದುಬಿಟ್ಟಳು. ‘ನಾನೀಗಲೇ ಹೊರಟಿದ್ದೇನೆ- ಅರ್ಧ ಘಂಟೆಯಲ್ಲಿ ಅಲ್ಲಿರುತ್ತೇನೆ. ಬೀ ರೆಡಿ’ ಎಂದು ಹೇಳಿದವಳೇ ಫೋನಿಟ್ಟಳು. ನಾನು ಲಗುಬಗೆಯಿಂದ ಸ್ನಾನದ ಮನೆಗೆ ಹೋಗಿ, ಧಡಭಡ ಸ್ನಾನ ಮುಗಿಸಿ ಹೊರ ಬಂದರೆ- ಮನೆಯೆಲ್ಲ ಕೊಳೆ ಕೊಳೆಯಾಗಿ ಕಾಣುತ್ತಿತ್ತು. ಎಲ್ಲ ವಸ್ತುಗಳನ್ನು ಸ್ವಲ್ಪ ನೀಟಾಗಿ ಎತ್ತಿ ಇಟ್ಟು, ಬಾಗಿಲಿಗೆ ಪೈಪ್‌ನಿಂದ ನೀರು ಬಿಟ್ಟು, ಹಿಂದುಗಡೆ ಮನೆಯ ಕಪ್ಪು ಮುಖದ ಸುಂದರ ಮೈಕಟ್ಟಿನ ಜಾರ್ಜಿಯಾ ಆಂಟಿಗೆ ಮನೆಕೆಲಸದವಳನ್ನು ಕಳುಹಿಸಲು ಹೇಳಿದೆ. ಕೆಲಸದವಳು ಬಂದು ಬಿಸಿ ಬಿಸಿ ಕಾಫಿ ಮಾಡಿಕೊಟ್ಟಳು. ಅದನ್ನು ಕುಡಿಯುತ್ತ ಪೇಪರ್ ಮೇಲೆ ಕಣ್ಣಾಡಿಸುತ್ತ ಬಾಗಿಲಲ್ಲೇ ಕುರ್ಚಿ ಹಾಕಿಕೊಂಡು ಕುಳಿತಿದ್ದೆ. 
 
ಜೋರಾಗಿ ಕಾರಿನ ಹಾರ್ನ್ ಹೊಡೆದುಕೊಳ್ಳತೊಡಗಿತು.
 
ಯಾರು ನಮ್ಮ ಮನೆಯ ಮುಂದೆ ಕಾರಿನ ಹಾರ್ನ್ ಹೊಡೆಯುತ್ತಿದ್ದಾರೆ ಎಂದರೆ, ಮಯೂರಿ ಕಾರ್ ಸ್ಟಿಯರಿಂಗ್ ಹಿಡಿದು ಒಂದೇ ಸವನೇ ಹಾರ್ನ್ ಹೊಡೆಯುತ್ತಿದ್ದಳು. ನಾನು ಎದ್ದು ಅವಳೆಡೆಗೆ ಹೋಗುವಷ್ಟರಲ್ಲಿಯೇ ಅವಳೇ ಕಾರಿಳಿದು ಬಂದಳು. ಅವಳ ಉತ್ಸಾಹಕ್ಕೆ ಭೀಮ ಬಲ ಬಂದಿತ್ತು. ಅವಳ ಮುಖ ಖುಷಿಯಿಂದ ಹುಣ್ಣಿಮೆ ಚಂದ್ರನಂತಾಗಿತ್ತು. ನೀಳವಾದ ಅವಳ ಜಡೆ ಗಾಳಿಗೆ ಹಾರಾಡುತ್ತಾ ಎಂಥದ್ದೋ ಒಂದು ಆಕರ್ಷಣೆ ತಂದುಕೊಟ್ಟಿತ್ತು.
 
‘ಬೇಗ ಹೊರಡಿ, ಜಯನಗರ ಗಣಪತಿ ದೇವಸ್ಥಾನಕ್ಕೋಗಿ ಪೂಜೆ ಮಾಡಿಸಿಕೊಂಡು ಬರೋಣ’ ಎಂದು ಅವಸರ ಮಾಡಿದಳು. ಅವಳು ಕಾಫೀ ಕುಡಿಯುವುದರೊಳಗಾಗಿ ನಾನು ಸಿದ್ಧವಾಗಿದ್ದೆ. ಇಬ್ಬರೂ ಹೊರಟೆವು.
 
ಕಾರು ಜಯನಗರದ ಗಣಪತಿ ದೇವಸ್ಥಾನದತ್ತ ಓಡುತ್ತಿತ್ತು.
 
‘ಸಿಪ್ರೊ ಎಂಬ ದೊಡ್ಡ ಕಂಪೆನಿ ನನ್ನನ್ನು ಬ್ರಾಂಡ್ ಅಂಬಾಸಿಡರ್ ಅನ್ನಾಗಿ ಮಾಡಿಕೊಂಡಿದೆ. ಅದಕ್ಕಾಗಿ ಕಂಪೆನಿಯವರು ಐದು ಲಕ್ಷ ರೂಪಾಯಿ ಅಡ್ವಾನ್ಸ್ ನೀಡಿದ್ದಾರೆ. ಅಲ್ಲದೇ ಪ್ರತಿ ತಿಂಗಳೂ ಐವತ್ತು ಸಾವಿರ ರೂಪಾಯಿ ಗೌರವ ಧನ. ನಮ್ಮ ತಂಡದ ಹುಡುಗಿಯರೆಲ್ಲ ತುಂಬ ಖುಷಿಯಾಗಿದ್ದಾರೆ. ಅಲ್ಲದೇ ಇನ್ನೊಂದು ಕಂಪೆನಿಯ ಜತೆ ಆಗಲೇ ನೆಗೋಷಿಯೇಷನ್ ನಡೆಸಿದ್ದೇನೆ. ಅದೆಲ್ಲ ಸರಿ ಹೋದರೆ ಮುಂದಿನ ವರ್ಷ ನಾವು ವಿಶ್ವದ ಪ್ರಮುಖ ಆರು ದೇಶಗಳಲ್ಲಿ ಅವರ ಕಂಪೆನಿ ಪರವಾಗಿ ಪ್ರವಾಸ ಮಾಡುತ್ತೇವೆ’ ಎಂದೆನ್ನುವಾಗ ಅವಳ ಧ್ವನಿಯಲ್ಲಿ ಆನಂದಾವೇಗ ತುಂಬಿತ್ತು.
 
ಕಾರು ದೇವಸ್ಥಾನದ ಮುಂದೆ ನಿಂತಿತ್ತು.
 
ಪೂಜೆ ಸಾಂಗವಾಗಿ ನೆರವೇರಿತು. ಅರ್ಚಕರ ತಟ್ಟೆಗೆ ಸಾಕಷ್ಟು ದಕ್ಷಿಣೆ ಹಾಕಿದ ಮಯೂರಿ, ದೇವರಿಗೆ ಹೃದಯ ಪೂರ್ವಕ ನಮಸ್ಕರಿಸಿದಳು.
 
ಮಯೂರಿ ಯಾವುದೋ ಜನ್ಮದ ಗೆಳತಿಯಂತೆ ಆಗಿದ್ದಳು.
 
ಅವಳ ದಿನನಿತ್ಯದ ಓಡಾಟದಿಂದ ಹಿಡಿದು ಪ್ರತಿಯೊಂದು ಕಾರ್ಯಕ್ರಮದ ರೂಪುರೇಷೆ, ಸಂಘಟನೆ, ಪ್ರದರ್ಶನ, ಹಣಕಾಸು ವ್ಯವಹಾರ... ಹೀಗೆ ಎಲ್ಲದರಲ್ಲೂ ನನಗೆ ಪಾತ್ರ ನೀಡಿದಳು. ಪ್ರತಿಯೊಂದು ಕ್ಷಣದಲ್ಲೂ ಅವಳ ಪಕ್ಕದಲ್ಲಿರಬೇಕು. ನನ್ನ ಮತ್ತು ಅವಳ ಮನೆಯ ನಡುವಿನ ದಾರಿ ಕಿರಿದಾಯಿತು. ನಮ್ಮ ನಡುವಿನ ಅಂತರವೂ ಕಡಿಮೆಯಾಯಿತು. ‘ನಿನ್ನ ಎಕ್‌ಪರ್ಟ್ ಒಪೀನಿಯನ್ ಹೇಳಪ್ಪಾ! ಸುಮ್ನೆ ಕೊರೀಬೇಡ’ ಎಂದು ಅಲವತ್ತುಕೊಳ್ಳುತ್ತಿದ್ದಳು.
 
‘ಅವಳು ನನ್ನನ್ನು..... ಅಥವಾ ನಾನು ಅವಳನ್ನು.....’ ಎಂದು ಮನಸ್ಸು ಅವಳ ಬಗ್ಗೆ ಮಧುರವಾಗಿ ಯೋಚಿಸುತ್ತಿತ್ತು. ಆದರೆ, ತಲೆ ಮಾತ್ರ ಲೆಕ್ಕಾಚಾರ ಹಾಕಿ... ‘ಇಲ್ಲ ಆ ಇನ್ನೊಬ್ಬ! ಅದೇ ಆವತ್ತು ಡ್ಯಾನ್ಸ್ ಕಾರ್ಯಕ್ರಮಕ್ಕೆ ಬರಲಿಲ್ಲವೆಂದು ಕಾಯುತ್ತಿದ್ದಳಲ್ಲ? ಆತನ ಮೇಲೆಯೇ ಅವಳ ಪ್ರೀತಿಯೆಲ್ಲ! ನಿನ್ನ ಜೊತೆ ಬರೀ ವ್ಯವಹಾರ ಮಾತ್ರ’ ಎಂದು ಹೇಳುತ್ತಿತ್ತು.
 
* * * * *
 
ಮಯೂರಿಯ ಮನೆಯ ಮಹಡಿ ಏರಿ ಬೆಲ್ ಮಾಡಿದೆ.
 
ಅವಳಿಗೆ ಹೇಳದೇ ಬಂದುಬಿಟ್ಟಿದ್ದೆ. ಮೂರು ನಾಲ್ಕು ಬಾರಿ ನನ್ನ ಮೊಬೈಲ್‌ಗೆ ಆಕೆ ಫೋನ್ ಮಾಡಿದ್ದರೂ ಬೇಕೆಂದೇ ಸಿಕ್ಕಿರಲಿಲ್ಲ. ಇಂದು ಅವಳು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಪ್ರೋಗ್ರಾಂಗೆ ಹೋಗಿದ್ದಾಳೆ ಎಂಬುದು ಗೊತ್ತಿದ್ದೂ ಅವಳ ಮನೆಗೆ ಬಂದಿದ್ದೆ.
 
ಅವರಜ್ಜಿ ದೊಡ್ಡ ನಗುವಿನೊಂದಿಗೆ ಬಂದು ಬಾಗಿಲು ತೆರೆದರು. ಅವರ ಮುಖದ ನೆರಿಗೆಗಳು, ಹಣ್ಣಾದ ಕೂದಲುಗಳಿಂದ ಒಂದು ಸಾತ್ವಿಕ ಕಳೆ ಬಂದಿತ್ತು.
 
‘ಐಐಸಿಗೆ ನೀನು ಹೋಗಲಿಲ್ವಾ?’
 
‘ಇಲ್ಲಜ್ಜಿ. ನಂಗೆ ಇಲ್ಲೇ ಹತ್ರದಲ್ಲಿ ಬೇರೇನೋ ಕೆಲ್ಸ ಇತ್ತು- ಬಂದಿದ್ದೆ. ಆದ್ರೆ ಬಂದ್ ಕೆಲ್ಸಾನೂ ಆಗಲಿಲ್ಲ. ಅದ್ಕೆ ಇಲ್ಲಿಗೆ ಬಂದೆ’ ಎಂದು ಏನೋ ಮನಸ್ಸಿಗೆ ಬಂದ ಸಮಜಾಯಿಷಿ ಹೇಳಿದೆ.
 
‘ಓ ಹಾಗಾ?’ ಎಂದು ರಾಗ ಎಳೆದರು ಅಜ್ಜಿ.
 
‘ನಾನು ಎಷ್ಟ್ ಹೇಳ್ತೀನಿ, ಇದೆಲ್ಲಾ ಬೇಡ ಹುಡುಗೀ- ನಿಮ್ಮಪ್ಪನ ಆಸ್ತಿ ನೋಡ್ಕೊಂಡು ಹಾಯಾಗಿದ್ದುಬಿಡು ಎಂದು. ಆದ್ರೆ ಕೇಳೊಲ್ಲ ಅಂತಾಳೆ. ಅದಕ್ಕೆ ಸರಿಯಾಗಿ ನೀನೊಬ್ಬ ಸಿಕ್ಕಿದ್ದೀಯಾ! ಈಗ ಅವಳಿಗೆ ಕೆಲ್ಸಾ ಜಾಸ್ತಿ ಆಗಿಬಿಟ್ಟಿದೆಯಪ್ಪಾ! ಇನ್ನೂ ಚಿಕ್ಕ ಹುಡುಗಿ ಅವಳು. ಈಗ 24 ವರ್ಷ. ಎಲ್ಲೆಂದರಲ್ಲಿ ಒಬ್ಬಳೇ ಓಡಾಡಬೇಡ ಅಂತ ಹೇಳ್ತೀನಿ. ಆದ್ರೆ ಕೇಳೋಲ್ಲ’.
 
‘ಈಗಿನ ಹುಡುಗಿಯರು ಜೋರಾಗಿ ಇರಬೇಕು ಬಿಡಿ ಅಜ್ಜಿ. ಎಲ್ಲದ್ಕೂ ಹೆದ್ರಿಕೊಂಡು ಕೂತ್ಕೊಂಡ್ರೆ ಏನೂ ಸಾಧಿಸೋಕೆ ಆಗೋಲ್ಲ. ಅಲ್ದೆ ಒಳ್ಳೇ ಕಲಾವಿದೆ ಬೇರೆ. ಈಗ ಓಡಾಡದೇ ಇನ್ಯಾವಾಗ ಹೇಳಿ’ ಎಂದು ಲೋಕಾಭಿರಾಮವಾಗಿ ಹೇಳಿದೆ.
 
‘ಏನೋಪ್ಪ ಬೇಗ ಒಂದು ಮದ್ವೆ ಅಂತಾದ್ರೆ ಸಾಕು. ನಂಗೂ ಸಾಕ್ ಸಾಕಾಗಿ ಹೋಗಿದೆ. ಈ ಮಗೂನ ನಾನು ಎಷ್ಟೂಂತ ಸಾಕಲಿ. ನನಗೂ ವಯಸ್ಸಾಗಿ ಹೋಯಿತು...’ ಅಂತ ಸ್ವಲ್ಪ ಹೊತ್ತು ನಿಲ್ಲಿಸಿದರು ಅಜ್ಜಿ.
 
‘ಇಲ್ಲಿ ಬಾ ನಿನಗೊಂದು ಫೋಟೊ ತೋರಿಸ್ತೀನಿ. ಯಾವುದೋ ಒಬ್ಬ ಹುಡುಗನ ಫೋಟೊ ಹಾಕ್ಕೊಂಡಿದಾಳೆ ತನ್ನ ವಾರ್ಡ್‌ರೋಬಿನಲ್ಲಿ- ಅದೂ ಯಾರಿಗೂ ಕಾಣದ ರೀತಿಯಲ್ಲಿ! ಆ ಫೋಟೊದಲ್ಲಿರೋನನ್ನೇ ಮದ್ವೆ ಆಗ್ತೀನಿ ಅಂತ ಹೇಳ್ತಿರ್ತಾಳೆ!’ ಎಂದು ಅಜ್ಜಿ ಕುತೂಹಲ ಕೆರಳಿಸುವಂತೆ ಹೇಳಿದರು.
 
ವಾರ್ಡ್ರೋಬ್ ತೆಗೆದು ತೋರಿಸಿದರು.
 
ಆಶ್ಚರ್ಯ ಕಾದಿತ್ತು. ಅಲ್ಲಿ ನನ್ನ ಫೋಟೊ ಇತ್ತು. ಅದರ ಕೆಳಗೆ ‘ಐ ಲವ್ ಯು!’ ಎಂಬ ಅಕ್ಷರಗಳು ಕಂಡವು.
 
‘ಅರೆ, ಇದು ನನ್ನ ಫೋಟೊ ಅಲ್ವಾ .....’ ಎಂದು ಉದ್ಗಾರ ಹೊರಟಿತು. ತಕ್ಷಣ ತಡೆ ಹಿಡಿದುಕೊಂಡೆ!
 
ಅಜ್ಜಿ ತುಂಟತನದಿಂದ ನನ್ನ ಬದಲಾಗುತ್ತಿದ್ದ ಮುಖಭಾವವನ್ನೇ ನೋಡುತ್ತಿದ್ದರು.
 
ಮೂಕ ವಿಸ್ಮಿತನಾಗುವ ಸರದಿ ನನ್ನದಾಗಿತ್ತು.
 
ನನಗೆ ಒಂದು ಕ್ಷಣ ಆಶ್ಚರ್ಯ ಜೊತೆಗೆ ಸಂತೋಷವೂ ಆಯಿತು.
 
‘ನಿನ್ನನ್ನೇ ಮದ್ವೆ ಆಗ್ತೀನಿ ಅಂತ ಹೇಳ್ತಿರ್ತಾಳೆ. ನೀನೂ ನಮ್ ಹುಡುಗನೇ ಅಂತ ಗೊತ್ತಾಯಿತು. ಅದಕ್ಕೆ ನಾನೂ ಮೌನವಾಗಿ ಹೂಂ ಅಂದಿದ್ದೀನಿ. ಆದ್ರೆ ನಿಮ್ಮ ಅಪ್ಪಾ ಅಮ್ಮ ಒಪ್ಪಬೇಕಲ್ಲಪ್ಪಾ’ ಎಂದು ಅಜ್ಜಿ ಪ್ರೀತಿಯಿಂದ ಬೆನ್ನು ತಟ್ಟಿದರು.
 
ಮನಸ್ಸು ಎಲ್ಲೋ ಏನೋ ಯೋಚಿಸುತ್ತಿತ್ತು. ಅವಳೆಡೆಗಿನ ಒಲವು- ನನ್ನೆದೆಯೊಳಗಿನ ಪ್ರೀತಿಯ ಚಿಲುಮೆಯ ಬುಗ್ಗೆಯೇ? ಅವಳ ಸಾಂಗತ್ಯದರ್ಥ ನನ್ನರಿವಿಗೆ ಬಾರದ ಪ್ರೇಮದುನ್ಮಾದವೇ? ಎಂದು ಕೇಳಿಕೊಳ್ಳುವುದರೊಳಗೇ.....
 
..... ಅಂದು ಕಾರ್ಯಕ್ರಮ ಮುಗಿದ ಮೇಲೆ ಯಾರೋ ಒಬ್ಬ ಬರ್ತಾನೆ ಅಂತ ಕಾಯ್ತಿದ್ದಳಲ್ಲ? ಅವನು ಯಾರು? ಈಗ ನನ್ನನ್ನು ಮದ್ವೆ ಆಗ್ತೀನಿ ಅಂದ್ರೆ ಏನು? ಎಂದು ತಲೆ ಲೆಕ್ಕಾಚಾರ ಹಾಕತೊಡಗಿತು.
 
ಮೌನ ಮುರಿದು ಕೇಳಿದೆ-
 
‘ಅಜ್ಜಿ ಒಂದ್ ವಿಷಯ ಕೇಳ್ಬೇಕು. ನಿಮಗೆ ಬೇಜಾರಾಗೋಲ್ಲ ಅಂದ್ರೆ ಕೇಳ್ತೀನಿ’ ಎಂದೆ ಪೀಠಿಕೆ ಹಾಕುವಂತೆ.
 
‘ಯಾಕೆ? ಮಯೂರಿ ನಿಂಗೆ ಇಷ್ಟ ಇಲ್ವೊ?’ ಎಂದರು ಅಜ್ಜಿ.
 
‘ಅದಲ್ಲ. ಮಯೂರಿ ಅಪ್ಪ ಅಮ್ಮಾ ಎಲ್ಲಿರತಾರೆ?’
 
ಅಜ್ಜಿ ದೀರ್ಘ ನಿಟ್ಟುಸಿರು ತೆಗೆದುಕೊಂಡರು. ಯಾಕೋ ಅವರಿಗಿಷ್ಟವಿಲ್ಲದ ಪ್ರಶ್ನೆಯೇನೋ ಇದು ಅನ್ನಿಸತೊಡಗಿತು.
 
ಸ್ವಲ್ಪ ಹೊತ್ತಿನ ನಂತರ- ‘ಅದೊಂದು ದೊಡ್ ಕತೆ ಬಿಡಪ್ಪಾ’ ಎಂದರು ಅಜ್ಜಿ- ಹೇಳಲು ಇಷ್ಟವಿಲ್ಲದವರಂತೆ!
 
ನಾನೂ ಸುಮ್ಮನಾಗಿ ಬಿಟ್ಟೆ. ಕೆಲಸದ ಹುಡುಗಿ ಬಂದು ಕಾಫಿ ಕೊಟ್ಟಳು. ಯಾಂತ್ರಿಕವೆಂಬಂತೆ ಕಾಫಿ ಕಪ್ಪು ತೆಗೆದುಕೊಂಡು ಒಂದು ಗುಟುಕು ಕುಡಿದೆ. ತಲೆಯಲ್ಲಿ ಏನೇನೋ ಯೋಚನೆಗಳು.
 
‘ದೊಡ್ಡ ಕತೆ ಅಂದ್ರೆ ಏನು?’ ಎಂದು ಯೋಚಿಸಿದೆ. ಛೆ! ಹೀಗೆಲ್ಲ ಪತ್ತೆದಾರಿ ಮಾಡುವುದು ಸರಿಯಲ್ಲ. ನೇರವಾಗಿ ಇದರ ಬಗ್ಗೆ ಮಯೂರಿಯನ್ನೇ ಕೇಳುವುದು ಒಳಿತು ಎಂದು ಒಮ್ಮೆ ಅನಿಸಿತು. ಪಾಪ ಪ್ರಜ್ಞೆ ಕಾಡತೊಡಗಿತು. ಅವಳನ್ನು ಮದುವೆಯಾಗುವ ಬಯಕೆ ನನ್ನಲ್ಲಿ ಮೊದಲೇ ಉಂಟಾಗಿತ್ತೇ? ಅಥವಾ ನಾನೇ ಅವಳನ್ನು ಹೆಂಡತಿಯಾಗಿ ಸ್ವೀಕರಿಸಲು ಸಿದ್ಧವಾಗಿ ಇದ್ದೆನಾ? ಅವಳನ್ನು ಬಯಸಿದ್ದೆನಾ? ಬಯಸಿದ್ದರೆ ನೇರವಾಗಿ ಮದುವೆ ಬಗ್ಗೆ ಕೇಳಬಹುದಾಗಿತ್ತಲ್ಲ? ಅಥವಾ ಅವಳೇ ನನ್ನನ್ನು ಕೇಳಬಹುದಾಗಿತ್ತಲ್ಲ?
 
-ಎಂಬ ಪ್ರಶ್ನೆಗಳು ಮೂಡಿದವು. ಒಡನೆಯೇ- ಇದು ಇನ್ನೂ ಅಪಕ್ವ ಕಾಲ ಎನಿಸಿರಬೇಕು. ಹೀಗಾಗಿ ಅವಳು ಕೇಳಿರಲಿಕ್ಕಿಲ್ಲ. ಅಲ್ಲದೇ ಮದುವೆಯಾದ ನಂತರ ಇಂಥ ಕಲಾವಿದರಾದವರಿಗೆ ಬೇಡಿಕೆ ಕಡಿಮೆಯಾಗುವುದೂ ಉಂಟು. ಅದಕ್ಕಾಗಿ ಅವಳು ಹಾಗೆ ಮಾಡಿರಬೇಕು. ನಾನಂತೂ ಅವಳನ್ನು ಮದುವೆಯಾಗುವ ಬಗ್ಗೆ ಯೋಚನೆಯನ್ನೇ ಮಾಡಿರಲಿಲ್ಲ. ಹೀಗಿರುವಾಗ ಇಷ್ಟೆಲ್ಲಾ ಪ್ರಶ್ನೆಗಳು...? ಎನಿಸಿ ಮೈ ಬೆವರಿದಂತಾಯಿತು.
 
‘ನಿನ್ನ ಪ್ರೀತಿಸ್ತಿದೀನಿ’ ಅಂತ ಅವಳು ನನಗೆ ಯಾಕ್ ಹೇಳಲಿಲ್ಲ? ಎಂಬ ಅನುಮಾನ ಶುರುವಾಯಿತು. ನಾನಾದರೂ ಹೇಳಬಹುದಾಗಿತ್ತು. ಆದ್ರೆ ನಾನ್ಯಾಕೆ ಹೇಳಲಿಲ್ಲ? ಎಂದು ಕೇಳಿಕೊಂಡರೆ, ಅಂದು ಕಾರ್ಯಕ್ರಮ ಮುಗಿದ ಮೇಲೆ ಗ್ರೀನ್ ರೂಮಿನಲ್ಲಿ– ‘ಆತ ಬರಲೇ ಇಲ್ಲ’ ಎಂದು ಅವಳು ಅತ್ತದ್ದು ನೆನಪಾಗಿ, ಅವಳು ನನ್ನನ್ನು ಪ್ರೀತಿಸುವುದಿಲ್ಲ ಎಂದುಕೊಂಡಿದ್ದೆ ಎಂಬ ಪರಿಹಾರ ಹೊಳೆಯಿತು.
 
‘ಅಜ್ಜಿ ನನ್ನ ಪ್ರಶ್ನೆಯಿಂದ ನಿಮಗೆ ಬೇಸರ ಆಗಿದ್ದರೆ ಕ್ಷಮಿಸಿ’ ಎಂದೆ. ಅಜ್ಜಿ ದೀರ್ಘ ಉಸಿರು ಎಳೆದುಕೊಂಡು-
 
‘ಮಯೂರಿ ಅಮ್ಮ ಗೌರಿ ಅಂತ. ಆಕೆ ನನ್ನ ಒಬ್ಬಳೇ ಮಗಳು. ಒಂದಿನ ಬೈಕಿನಲ್ಲಿ ನಂದಿಬೆಟ್ಟಕ್ಕೋಗಿ ಬರುವಾಗ ಬ್ರೇಕ್ ಫೇಲಾಗಿ ಗೌರಿ ಮತ್ತು ಆಕೆ ಗಂಡ ಇಬ್ಬರೂ ಸತ್ತು ಹೋದರು. ನಮ್ಮ ಅಳಿಯ ಸ್ಥಳದಲ್ಲೇ ಸತ್ರೆ, ಗೌರಿ ಮೂರ್ ದಿನ ಬದುಕಿದ್ದು, ಆಮೇಲೆ ಆಸ್ಪತ್ರೇಲಿ ಸತ್ತುಹೋದ್ಳು. ಅದೆಲ್ಲ ನಮ್ಮ ಕರ್ಮ. ಏನ್ ಮಾಡೋದು ಹೇಳು.....’ ಎಂದು ಅಜ್ಜಿ ಹೇಳುವಾಗ ಅವರ ಮುಖದಲ್ಲಿ ಭಾವನೆಗಳ ಹೊಯ್ದಾಟ ಕಂಡುಬಂದಿತು.
 
‘ಈಗೆಷ್ಟು ವರ್ಷಾಯಿತು ಅಜ್ಜಿ?’ ಸ್ವಲ್ಪ ಮೌನದ ನಂತರ ಮೃದುವಾಗಿ ಕೇಳಿದೆ.
 
‘ಮಯೂರಿ ಇನ್ನೂ ಆರು ವರ್ಷದವಳಿದ್ದಳು. ಆಗಿನಿಂದ್ಲೂ ನಾನೇ ಈ ಮಗೂನ ಸಾಕ್ತಾ ಇದ್ದೀನಿ. ಇವರಪ್ಪನ ಆಸ್ತಿಯೆಲ್ಲಾ ಇವಳಿಗೆ ಬಂದಿದೆ. ನನಗೆ ಒಬ್ಬ ಮಗನಿದ್ದಾನೆ. ಮಯೂರಿ ಆಸ್ತಿನೆಲ್ಲ ಅವನೇ ನೋಡ್ಕೋತಾನೆ. ಆದ್ರೆ ಯಾಕೋ ಅವನೂ ಈಗೀಗ ಜಗಳ ಮಾಡ್ತಾನೆ. -ಈಗ ಹದಿನೆಂಟು ವರ್ಷದಿಂದ ಇಡೀ ಆಸ್ತಿಯನ್ನು ಒಂದು ಚೂರೂ ಮುಕ್ಕಾಗದಂತೆ ನೋಡಿಕೊಂಡು ಬಂದಿದ್ದೀನಿ. ನಾನೇ ಅವಳನ್ನ ಮದ್ವೆ ಮಾಡ್ಕೊತೀನಿ, ಈ ಆಸ್ತಿಯೆಲ್ಲ ನಮ್ಗೇ ಉಳೀತದೆ- ಅಂತಾನೆ. ಆದ್ರೆ ಇವ್ಳು ಕೇಳೋದಿಲ್ಲ. ಇಬ್ರಿಗೂ ಯಾವಾಗ್ಲೂ ಜಗಳ ಆಗ್ತಿರ್ತ್ತದೆ. ಈ ಆಸ್ತಿಯಿಂದಾಗಿ ನನಗೆ ಜೀವನವೇ ಬೇಸರ ಆಗಿ ಬಿಟ್ಟಿದೆ. ಧರ್ಮಸ್ಥಳದ ಮಂಜುನಾಥನ ಹೆಸರಿಗೆ ಎಲ್ಲಾ ಆಸ್ತೀನು ಬರ್ದು ಬಿಡು ಅಂತ ಹೇಳಾಣ ಅನ್ಸತ್ತದೆ’ ಎಂದು ಅಜ್ಜಿ ಕಣ್ಣಲ್ಲಿ ನೀರು ತಂದರು.
 
ಓ ಈತನೇ ಇರಬಹುದು- ಮಯೂರಿಯ ಗುಪ್ತ ಪ್ರಿಯಕರ; ಆದ್ರೆ ಅಜ್ಜಿ ಹೀಗೆ ಹೇಳ್ತಿದ್ದಾರಲ್ಲ? ಅಥ್ವಾ ಬೇರೆ ಯಾರನ್ನೋ ಮದ್ವೆ ಆಗುವುದಾಗಿ ಹೇಳಿರಬೇಕು. ಆದ್ರಿಂದ ಮಯೂರಿಯ ಸೋದರಮಾವ ತಾನೇ ಮದುವೆಯಾಗುವುದಾಗಿ ಹೇಳುತ್ತಿರಬೇಕು- ಎಂದು ಯೋಚನಾ ಲಹರಿ ಹರಿಯಿತು. ಛೇ! ಇದೊಳ್ಳೆ ಬಿಡಿಸಲಾರದ ಗಂಟಾಯಿತಲ್ಲ ಎಂದುಕೊಂಡೆ!
 
* * * * *
 
ನಮ್ಮ ಮದುವೆಯ ನಿಶ್ಚಯದ ಕಾರ್ಯ ಭರದಿಂದ ಸಾಗಿತು.
 
ತನ್ನ ಸೋದರಮಾವನ ವಿರೋಧದ ನಡುವೆಯೂ ನನ್ನನ್ನೇ ಮದುವೆಯಾಗುವುದಾಗಿ ಮಯೂರಿ ಹಠ ಹಿಡಿದಳು. ಅಲ್ಲದೇ, ಮದುವೆಯಂತ ಏನಾದರೂ ಆದರೆ ನಾನು ಆತನನ್ನೇ! ಇಲ್ಲದೇ ಹೋದರೆ ನನ್ನ ಹೆಣಕ್ಕೆ ತಾಳಿ ಕಟ್ಟಬೇಕಾಗುತ್ತದೆ ಎಂದು ಸೋದರಮಾವನನ್ನು ಹೆದರಿಸಿಬಿಟ್ಟಳು. ಐದೆಕ್ರೆ ಜಮೀನು ಬೇಕಾದ್ರೆ ಕೊಡ್ತೀನಿ. ಆದ್ರೆ ಮದ್ವೆ ಆಗೋ ಕನಸು ಕಾಣಬೇಡ- ಎಂದು ತನಗಿಂದಲೂ 15 ವರ್ಷ ಹಿರಿಯನಾದ ಸೋದರಮಾವನಿಗೆ ಖಡಾಖಂಡಿತವಾಗಿ ಹೇಳಿಬಿಟ್ಟಳು ಮಯೂರಿ.
 
ಅಲ್ಲದೇ ಅಪ್ಪ ಕೂಡ ನಮ್ಮ ವಿವಾಹಕ್ಕೆ ತನ್ನ ಒಪ್ಪಿಗೆಯ ಮುದ್ರೆ ಒತ್ತಿದ್ದಲ್ಲದೇ, ಮಯೂರಿ ಸೋದರಮಾವನಿಗೆ ತಿಳಿಸಿ ಹೇಳಿದರು. ಅದರಿಂದ ಅವನು ತೆಪ್ಪಗೆ ಹಿಂದಕ್ಕೆ ಸರಿದುಕೊಂಡ. ಹಲವಾರು ಕಿತಾಪತಿಗಳನ್ನು ಮಾಡಲು ಬಂದಾಗ್ಯೂ ಕೂಡ ನಾನು ನನ್ನ ಪತ್ರಿಕೆಯ ನಾಮಬಲದ ಸಹಾಯದಿಂದ ಅವುಗಳನ್ನು ತೆರೆ ಮರೆಯಲ್ಲಿದ್ದುಕೊಂಡೇ ದೂರ ಮಾಡುವಲ್ಲಿ ಯಶಸ್ವಿಯಾಗಿದ್ದೆ.
 
ಮದುವೆಯ ದಿನ. ಎರಡೂ ಕುಟುಂಬಗಳಲ್ಲಿ ಸಂಭ್ರಮ, ಸಡಗರ.
 
ವಿಶಾಲವಾದ ಮದುವೆ ಛತ್ರ. ಎರಡೂ ಕಡೆಯ ಕುಟುಂಬದವರು, ಸ್ನೇಹಿತರು, ನೆಂಟರಿಷ್ಟರು ಬಂದಿದ್ದರು. ಸಂಭ್ರಮದ ಮದುವೆ ಸಮಾರಂಭ.
 
ಸ್ವತಃ ನಾಟ್ಯರಾಣಿಯಾದ ಮಯೂರಿ, ಅಕ್ಷರಶಃ ರಂಭೆಯಂತೆ ಕಾಣುತ್ತಿದ್ದಳು. ಗುಲಾಬಿ ಬಣ್ಣದ ಸೀರೆಯುಟ್ಟು, ನೀಳ ಜಡೆಗೆ ಮೈಸೂರು ಮಲ್ಲಿಗೆಯ ದಂಡೆ ಹಾಕಿಕೊಂಡು ತೆಳು ಬಳುಕಿನ ದೇಹಸಿರಿಯಲ್ಲಿ ಬಂದು ಪಕ್ಕದಲ್ಲಿ ಕುಳಿತಾಗ ಒಳಗೊಳಗೇ ಹೆಮ್ಮೆಯಿಂದ ಬೀಗುತ್ತಿದ್ದೆ.
 
ಸರಳವಾಗಿ ಮದುವೆ ಶಾಸ್ತ್ರ ಮುಗಿಯಿತು. ತಾಳಿ ಕಟ್ಟುವಾಗ ಅರೆಕ್ಷಣ ಕಣ್ಣುಗಳು ಪರಸ್ಪರ ಸಂಧಿಸಿದವು. ಅದೇನೋ ಇಷ್ಟು ದಿನ ನೋಡಿದ್ದರೂ ಇಂದು ಆಕೆ ಭಿನ್ನವಾಗಿ ಕಾಣುತ್ತಿದ್ದಳು. ತಾಳಿ ಕಟ್ಟಿಸಿಕೊಂಡ ಮೇಲೆ ಯಾವಾಗಲೋ ಒಮ್ಮೆ ತನ್ನ ಕಣ್ಣ ಕಾಡಿಗೆಯನ್ನು ತೆಗೆದು ನನ್ನ ಕೆನ್ನೆಗೆ ಹಚ್ಚಿದಳು. ‘ದೃಷ್ಟಿಯಾದೀತು!’ ಎನ್ನುತ್ತಾ.
 
ಮದುವೆ ಕಾರ್ಯಗಳು ಮುಗಿದು ಸ್ನೇಹಿತರ ನಡುವೆ ಹರಟೆ ಹೊಡೆಯುತ್ತ ನಿಂತಿದ್ದಾಗ ಕಾಕೂ ಬಂದು ನನ್ನನ್ನು ಪಕ್ಕಕ್ಕೆ ಕರೆದು ಕಿವಿಯಲ್ಲಿ ಪಿಸುಗುಟ್ಟಿದರು- ‘ರೂಮಲ್ಲಿ ಮಯೂರಿ ಯಾಕೋ ಕಣ್ಣೀರು ಹಾಕ್ತಿದ್ದಾಳೆ ನೋಡು’.
 
ಆಕೆಯ ರೂಮಿಗೆ ತೆರಳಿದೆ. ಮುಖ ಮುಚ್ಚಿಕೊಂಡು ಬಿಕ್ಕಳಿಸುತ್ತಿದ್ದಳು. ನಾನು ಹೋದೊಡನೇ ಬಿಗಿಯಾಗಿ ತಬ್ಬಿಕೊಂಡು ಜೋರಾಗಿ ಅಳತೊಡಗಿದಳು. ಸ್ವಲ್ಪ ಅತ್ತು ಬಿಡಲಿ- ದುಗುಡ ಕಡಿಮೆಯಾದೀತು ಎಂದು ಬೆನ್ನ ಮೇಲೆ ಕೈಯಾಡಿಸಿದೆ.
 
ಬಹಳ ಹೊತ್ತು ಬಿಕ್ಕಿದ ಮೇಲೆ ನನ್ನತ್ತ ನೋಡಿದಳು. ಮತ್ತೆ ಬಳಬಳ ಕಣ್ಣೀರು ಉದುರತೊಡಗಿದವು. ನನ್ನ ಕಣ್ಣುಗಳು ಆಗಲೇ ಆರ್ತತೆಯಿಂದ ‘ಯಾಕೆ?’ ಎಂದು ಪದೇ ಪದೇ ಕೇಳುತ್ತಿದ್ದವು. ಅವುಗಳಿಗೆ ಆ ಕಡೆಯ ಕಣ್ಣುಗಳಿಂದ ನೀರುಗಳದ್ದೇ ಉತ್ತರವಾಗಿತ್ತು.
 
‘ಮದುವೆಗೆ ಬಾ ಅಂತ ಎಷ್ಟೊಂದು ಸಲ ಹೇಳಿದ್ದೆ. ಆದ್ರೆ ಆತ ಬರಲೇ ಇಲ್ಲ.....’ ಎಂದು ಮತ್ತೆ ಬಿಕ್ಕಿ ಬಿಕ್ಕಿ ಅಳತೊಡಗಿದಳು.
 
‘ಯಾವನಾತ?’ ಎಂದು ರೇಗಿ-ಕೂಗಿ ಕೇಳಬೇಕೆನಿಸಿತು. ಹಾಗೆಲ್ಲ ರೇಗಿದರೆ- ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡು ತಬ್ಬಲಿಯಾಗಿರುವ ಹುಡುಗಿಗೆ ಇನ್ನೆಷ್ಟು ನೋವಾದೀತೋ ಎಂದು ಸುಮ್ಮನಾದೆ. ‘ಯಾರಾತ?’ ಎಂದು ತನಿಖೆ ಮಾಡುವ ಮನಸ್ಸು ಬರಲಿಲ್ಲ. ಯಾರೋ ಪ್ರೀತಿಸಿ ಕೈಕೊಟ್ಟ ಹುಡುಗನಿರಬೇಕು. ತನ್ನ ಜೀವನದ ಮಹತ್ವದ ದಿನದಂದು ಅವನು ಬರಲಿ ಎಂಬ ಆಸೆ ಇರಬಹುದು. ಈಕೆ ಇಷ್ಟೊಂದು ಪ್ರೀತಿಯಿಂದ ಕರೆದರೂ ಆತ ಬಂದಿಲ್ಲ! ಹೀಗಾಗಿ ಪಾಪ ನೊಂದುಕೊಂಡಿದ್ದಾಳೆ ಎಂದು ಅವಳ ಮುಗ್ಧ ಮನಸ್ಥಿತಿಗೆ ಕನಿಕರ ಉಂಟಾಗಿ, ‘ಯಾರು ಬರದಿದ್ದರೇನು ಬಿಡು. ನಾನಿದ್ದೇನಲ್ಲ?’ ಎಂದು ಬಿಗಿಯಾಗಿ ಅಪ್ಪಿಕೊಂಡೆ.
 
ಅವಳು ಸಮಾಧಾನವಾದ ನಂತರ ಅಪ್ಪುಗೆ ಸಡಿಲಿಸಿದೆ. ಸ್ವಲ್ಪ ಸಮಯದ ನಂತರ-
 
‘ಅರೆ, ಇದು ನಮ್ಮ ಮೊಟ್ಟಮೊದಲ ಅಪ್ಪುಗೆ. ಖುಷಿಯಾದ- ಬಿಸಿಯಾದ ಹಗ್ಗಿಂಗ್ ಆಗಬೇಕಿತ್ತು. ಆದರೆ, ನಿನ್ನ ಕಣ್ಣೀರಿನಿಂದಾಗಿ ಹೀಗಾಯಿತು ನೋಡು’ ಎಂದೆ.
 
‘ನಿಮ್ಗೆ ಎಲ್ಲಾನೂ ತಮಾಷೆನೆ’ ಎಂದು ಬಹುವಚನ ಉಪಯೋಗಿಸಿದಳು ನಗುತ್ತಲೇ.
 
‘ಅರೆ, ಮೆಡಮ್ ಸಾಹೇಬರು ಬಹುವಚನ ಉಪಯೋಗಿಸ್ತಾ ಇದ್ದಾರಲ್ಲ?’
 
‘ಮಯೂರಿ- ಹಾಗೆಲ್ಲಾ ನಿಮಗೆ ತಮಗೆ ಅಂತ ಕರೀಬೇಡ. ಮೊದಲಿನಂತೆಯೆ ಹೋಗೊ ಬಾರೋ ಅಂತಾನೇ ಹೇಳು. ನಾವಿಬ್ರೂ ಎಂದಿದ್ದರೂ ಸ್ನೇಹಿತರಂತೆಯೇ ಇರೋಣ. ನಡಿ ಏಳು. ಎಲ್ರೂ ಕಾಯ್ತಿದ್ದಾರೆ. ಊಟ ಮಾಡೋಣ’ ಎಂದು ಎಬ್ಬಿಸಿ ಕರೆದುಕೊಂಡು ಹೊರಟೆ.
 
* * * * *
 
ಮದುವೆಯ ಮರುದಿನ.
 
ಬೇಗನೆ ಎದ್ದು ಅಭ್ಯಂಜನ ಇತ್ಯಾದಿ ಮುಗಿದ ಮೇಲೆ ದೇವಸ್ಥಾನಗಳಿಗೆ ಹೋಗಬೇಕು ಎಂದು ಅಮ್ಮ ಎಲ್ಲ ಸಿದ್ಧತೆ ಮಾಡುತ್ತಿದ್ದಳು. ಅಷ್ಟರಲ್ಲಿ ‘ಆಕಾಶ್- ಒಂದ್ನಿಮಿಷ’ ಎಂದು ಮಯೂರಿ ಕರೆದಳು. ಮತ್ತೆ ಅದೇ ಸುಂದರ ಅಲಂಕಾರ. ಮಲ್ಲಿಗೆಯ ಘಮ್ಮೆನ್ನುವ ಸುವಾಸನೆ ಜೊತೆಗೆ ಎಂಥದೋ ಮೈಯ ವಾಸನೆ ಮೂಗಿಗಡರಿ ಅವಳನ್ನು ಅಲ್ಲೇ ತಬ್ಬಿಕೊಂಡು ಬಿಡಬೇಕು ಎನ್ನಿಸಿತು.
 
‘ಬಾ ಬೇಗ! ಇಲ್ಲೇ ಹೋಗಿ ಬರೋಣ’ ಎಂದು ಅಕ್ಷರಶಃ ಕೈ ಹಿಡಿದು ಎಳೆದುಕೊಂಡು ಹೊರಟೇ ಬಿಟ್ಟಳು. ತಾನೇ ಕಾರು ಸ್ಟಾರ್ಟ್ ಮಾಡಿ ವೇಗವಾಗಿ ಓಡಿಸತೊಡಗಿದಳು. ಬೆಳಗಿನ ಹೊತ್ತಾದ್ದರಿಂದ ಮತ್ತು ಅಂದು ಯಾವುದೋ ಸರ್ಕಾರಿ ರಜಾ ದಿನವಾದ್ದರಿಂದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಇರಲಿಲ್ಲ.
 
ಕಾರು ಹೆಬ್ಬಾಳದ ಕಡೆ ಓಡಲಾರಂಬಿಸಿತು. ಅಲ್ಲಿಂದ ರಿಂಗ್ ರೋಡ್‌ನಲ್ಲಿ ವೈಟ್ ಫೀಲ್ಡ್ಸ್‌ನತ್ತ ಸಾಗಿತು.
 
‘ಇಷ್ಟು ದೂರ ಎಲ್ಲಿಗೆ ಹೋಗ್ತಾ ಇದ್ದೀವಿ? ಮನೇಲಿ ಎಲ್ರೂ ಕಾಯ್ತಿರತಾರೆ’ ಎಂದು ಮೂರು ನಾಲ್ಕು ಬಾರಿ ಕೇಳಿದೆ. ಸಾಲದ್ದಕ್ಕೆ ಇಬ್ಬರೂ ಮೊಬೈಲ್ ಫೋನ್ ತಂದಿರಲಿಲ್ಲ. ಪರ್ಸ್ ಕೂಡ ಇರಲಿಲ್ಲ.
 
ಸ್ವಲ್ಪ ಹೊತ್ತಿನ ನಂತರ ವೈಟ್ ಫೀಲ್ಡ್‌ನ ಒಂದು ದೊಡ್ಡ ಮನೆಯ ಮುಂದೆ ಕಾರು ನಿಲ್ಲಿಸಿದಳು. ನನ್ನತ್ತ ಗಂಭೀರ ನೋಟ ಬೀರಿದಳು.
 
‘ಒಂದ್ ನಿಮಿಷ ಇಳಿದು ಬಾ’ ಎಂದು ಕೈ ಹಿಡಿದು ಕರೆದಳು. ಅವಳ ಕರೆಯಲ್ಲಿ ಎಂಥದೋ ಶಕ್ತಿ ಆವಾಹನೆಯಾದಂತಿತ್ತು.
 
ಆ ಮನೆಯ ಮೆಟ್ಟಿಲೇರಿದೆವು. ಬೆಲ್ ಮಾಡಿದಳು. ನಾನು ಮನೆಯ ಬಾಗಿಲಿನ ಚಿತ್ತಾರ, ಹೂಕುಂಡಗಳನ್ನು ಗಮನಿಸುತ್ತಾ- ಯಾರ ಮನೆಯಿದು? ಇಷ್ಟು ಗುಟ್ಟಿನಿಂದ ಯಾಕೆ ಕರೆದುಕೊಂಡು ಬಂದಳು? ಎಂದು ದಿಗಿಲುಗೊಂಡಿದ್ದೆ.
 
ಅಷ್ಟರಲ್ಲಿ 10-12 ವರ್ಷದ ಹೆಣ್ಣು ಮಗಳೊಬ್ಬಳು ಬಂದು ಬಾಗಿಲು ತೆಗೆದಳು. ನಂತರ ಒಳಗೋಡಿ ಹೋಗಿ-
 
‘ಅಪ್ಪಾ ಮಯೂರಕ್ಕಾ ಬಂದಿದ್ದಾಳೆ’ ಎಂದಳು. ಇಬ್ಬರೂ ಮನೆಯ ಒಳಗಡಿ ಇಟ್ಟೆವು.
 
ಬೆಳ್ಳನೆಯ ದೇಹದ ತುಸು ಎತ್ತರದ ವ್ಯಕ್ತಿಯೊಬ್ಬರು ಶರ್ಟ್ ಧರಿಸುತ್ತ ಹೊರಗೆ ಬಂದರು.
 
ಮಯೂರಿ ಕೂಡಲೇ ಬಾಗಿ ಅವರ ಕಾಲಿಗೆ ನಮಸ್ಕರಿಸಲು ಮುಂದಾದಳು. ಇಬ್ಬರೂ ಬಾಗಿ ನಮ್ರತೆಯಿಂದ ನಮಿಸಿದೆವು. ಬೆನ್ನ ಮೇಲೆ ಕೈಯಿಟ್ಟು ಆಶೀರ್ವದಿಸಿದರು.
 
ಮಯೂರಿಯನ್ನು ಬಿಗಿದಪ್ಪಿ ಒಂದು ಕ್ಷಣ ಕಣ್ಣು ಮುಚ್ಚಿದರು. ಇವಳ ಕಣ್ಣುಗಳಲ್ಲಿ ನೀರು ಧಾರಾಳವಾಗಿ ಹರಿಯತೊಡಗಿದವು. ‘ನೀನು ಕೊನೆಗೂ ಬರಲಿಲ್ಲವಲ್ಲಪ್ಪಾ?’ ಎಂದಳು. ಕಣ್ಣುಗಳಲ್ಲಿ ನೀರು ಹರಿಯುತ್ತಲೇ ಇತ್ತು. ಅವರ ಕಣ್ಣುಗಳೂ ನೀರಾಡುತ್ತಿದ್ದವು. ಅವರಿಗೆ ದುಃಖ ತಡೆಯಲಾಗದೇ ಕುಸಿದರು. ಎಬ್ಬಿಸಿ ಸೋಫಾದ ಮೇಲೆ ಕುಳ್ಳಿರಿಸಿದಳು.
 
‘ನೀನು ಬರಲಿಲ್ಲಾಂತ ನಾವೇ ಇಲ್ಲಿಗೆ ಬಂದಿದ್ದೇವೆ- ನಿನ್ನ ಆಶೀರ್ವಾದ ಪಡೆಯಲು. ಎಷ್ಟೊಂದು ಹೇಳಿದ್ದೆ ನಿನಗೆ. ನಿನ್ನ ಕರುಳ ಬಳ್ಳಿಗೆ ಯಾಕೆ ಹೀಗೆ ಮೋಸ ಮಾಡಿದಿರಿ ಅಪ್ಪಾ? ಅಮ್ಮಾ ನಿಮಗೆ ಮೋಸ ಮಾಡಿರಬಹುದು. ಹಾಗಂತ ನೀವೂ ಕೂಡ ಹೀಗೆ ಮಾಡುವುದಾ? ಅದೂ ಸ್ವಂತ ಮಗಳ ಮದುವೆಗೇ ಬಾರದೇ ನೀವು ಏನು ಸಾಧಿಸಿದಿರಿ? ಹೇಳಿ ಅಪ್ಪಾ ಹೇಳಿ’ ಎಂದು ಬಿಕ್ಕಿ ಬಿಕ್ಕಿ ಅಳತೊಡಗಿದಳು.
 
ಅವರು ಆರ್ತತೆಯಿಂದ ಮಗಳತ್ತ ನೋಡಿದರು! ಮತ್ತೊಮ್ಮೆ ಮಗಳನ್ನು ಹತ್ತಿರಕ್ಕೆಳೆದುಕೊಂಡು ಹಣೆಗೆ ಮುತ್ತಿಕ್ಕಿ- ‘ಸುಖವಾಗಿರು ಮಗಳೆ- ಎಲ್ಲಿಯಾದರೂ ಸುಖವಾಗಿರು’ ಎಂದವರೇ ಒಳಗೆ ಹೋಗಿ ಬಿಟ್ಟರು.
 
ಅವಳನ್ನು ಸಂತೈಸಲು ಬೆನ್ನ ಮೇಲೆ ಕೈಹಾಕಿ ಸವರಿದೆ.
 
* * * * *
 
ರಾತ್ರಿ ಮಲಗಿದಾಗ- ಇನ್ನೂ ಮಯೂರಿ ಅನ್ಯ ಮನಸ್ಕಳಾಗಿದ್ದಳು. ಅವಳನ್ನು ಏನು ಕೇಳುವುದು? ಏನನ್ನು ಬಿಡುವುದು? ಇಷ್ಟು ದಿನ ತಂದೆ ತಾಯಿ ಇಲ್ಲದ ತಬ್ಬಲಿ ಎಂದುಕೊಂಡಿದ್ದೆನಲ್ಲ? ಅಜ್ಜಿ ಯಾಕೆ ಹಾಗೆ ಹೇಳಿದರು? ಎಂಬ ನೂರಾರು ಪ್ರಶ್ನೆಗಳು ಕೊರೆಯುತ್ತಿದ್ದವು. ಅವುಗಳನ್ನೆಲ್ಲ ಬಾಯಿ ಬಿಟ್ಟು ಕೇಳಬಾರದು. ಅವಳಿಗೆ ಇನ್ನಷ್ಟು ನೋವಾದೀತು ಎಂದು ಸುಮ್ಮನೇ ಮಲಗಿದ್ದೆ.
 
ದೀರ್ಘ ಮೌನದ ನಂತರ ಅವಳು ನಿಧಾನಕ್ಕೆ ನನ್ನ ಕೈ ಹಿಡಿದುಕೊಂಡಳು.
 
ನನ್ನ ಮೊದಲ ಡ್ಯಾನ್ಸ್ ಪ್ರೊಗ್ರಾಮಿಗೆ ಬರೋದಕ್ಕೆ ಅಪ್ಪನಿಗೆ ಹೇಳಿದ್ದೆ- ಅವರು ಬರಲಿಲ್ಲ. ನಮ್ಮ ಎಂಗೇಜ್‌ಮೆಂಟಿಗೂ ಬರಲಿಲ್ಲ. ಕೊನೆಗೆ ನಮ್ಮ ಮದುವೆಗಾದರೂ ಬರುತ್ತಾರೆ ಎಂದುಕೊಂಡಿದ್ದೆ. ಅದಕ್ಕಾಗಿ ನಾನೇ ಸ್ವತಃ ಮನೆಗೆ ಹೋಗಿ ಕರೆದಿದ್ದೆ. ಆದರೆ, ಅಪ್ಪ ಬರಲೇ ಇಲ್ಲ.
 
‘ಅವರು ನಿನ್ನ ಅಪ್ಪನೇ?’ ಇಷ್ಟು ದಿನಗಳ ಕುತೂಹಲ ಇಂದು ತಡೆಯದೇ ಹೊರಕ್ಕೆ ಬಂದುಬಿಟ್ಟಿತು.
 
‘ಹೌದು. ನನ್ನಪ್ಪ’
 
‘.....................’
 
‘ನಮ್ಮಪ್ಪ- ಅಮ್ಮ ಯಾವುದೋ ಆಕ್ಸಿಡೆಂಟಿನಲ್ಲಿ ಸತ್ತು ಹೋದರು ಎಂದು ನೀನು ಕೇಳಿರಬೇಕು. ಆದರೆ, ಅವರು ಸತ್ತು ಹೋಗಿಲ್ಲ. ಇಬ್ಬರೂ ಬದುಕಿದ್ದಾರೆ. ಆದರೆ, ನನ್ನದೇ ದೌರ್ಭಾಗ್ಯ- ಇಬ್ಬರೂ ಬದುಕಿದ್ದೂ ಅನಾಥೆಯಂತೆ ಬದುಕುತ್ತಿದ್ದೇನೆ. ಅಮ್ಮನಿಗೆ ನನ್ನಪ್ಪನೊಂದಿಗಿನ ಮದುವೆ ಇಷ್ಟ ಇರಲಿಲ್ಲವಂತೆ. ವೈದ್ಯ ವೃತ್ತಿ ಮಾಡುತ್ತಿದ್ದರೂ ಅದನ್ನು ಅಪ್ಪ ಬಲವಂತವಾಗಿ ಬಿಡಿಸಿದರಂತೆ. ಮನೆಯಲ್ಲಿಯೇ ಕ್ಲಿನಿಕ್ ನಡೆಸು ಎಂದು ಒತ್ತಾಯ. ಇಬ್ಬರಲ್ಲೂ ದಿನವೂ ಜಗಳ- ಹೊಡೆದಾಟಗಳು. ಅಪ್ಪ ಕುಡಿದು ಬರಲಾರಂಭಿಸಿದ. ಆತನ ಬಿಸಿನೆಸ್ಸಿಲ್ಲಿಯೂ ಇಳಿಕೆ ಶುರುವಾಯಿತು. ಸಿಕ್ಕಾಪಟ್ಟೆ ಲಾಸ್ ಆಗಲಾರಂಭಿಸಿತು. ಇಬ್ಬರ ಬದುಕೂ ಅಸಹನೀಯವಾಯಿತು. ಒಂದು ದಿನ ಬೆಳಿಗ್ಗೆ ಹೇಳದೇ ಕೇಳದೇ ಅಮ್ಮ ನಾಪತ್ತೆಯಾಗಿ ಬಿಟ್ಟಳು.
 
ಒಂದು ದಿನ ಕಾಗದವೊಂದು ಬಂದಿತು. ಅಮ್ಮ ಅಪ್ಪನಿಗೆ ಡೈವೋರ್ಸ್ ಕೊಟ್ಟಿದ್ದಳು. ಬರ್ಮಿಂಗ್‌ಹ್ಯಾಮ್‌ಗೆ ಹೋಗಿ ತನ್ನ ಜೊತೆಯಾಗಿ ಕೆಲಸ ಮಾಡುತ್ತಿದ್ದ ಡಾಕ್ಟರ್ ಜೊತೆಗೆ ಮದುವೆಯಾಗಿದ್ದಳು. ಆ ವೇಳೆಗಾಗಲೇ ಮೂರು ವರ್ಷದ ಪಾಪದ ಕೂಸಾಗಿದ್ದ ನನ್ನನ್ನು ತನ್ನೊಂದಿಗೆ ಕರೆದೊಯ್ಯಲು ಆ ಹೊಸ ಗಂಡ ಒಪ್ಪಲಿಲ್ಲ. ಹೀಗಾಗಿ ನನ್ನನ್ನು ಅಜ್ಜಿಯ ಹತ್ತಿರ ಬಿಟ್ಟಳು.
 
ಇತ್ತ ಅಪ್ಪ ಕುಡಿದು ಕುಡಿದು ಹಾಳಾದ. ಎಷ್ಟೋ ದಿನಗಳ ನಂತರ ಸಂಬಂಧಿಕರ್ಯಾರೋ ಒತ್ತಾಯಿಸಿ ತಮ್ಮ ಕಡೆಯ ಹುಡುಗಿಯನ್ನು ನೋಡಿ ಎರಡನೇ ಮದುವೆ ಮಾಡಿದರು. ಅದರೊಂದಿಗೆ ನನ್ನ- ಅಪ್ಪ ಅಮ್ಮ ನನ್ನ ಪಾಲಿಗೆ ಸತ್ತು ಹೋದರು. ತಾನು ಎರಡನೇ ಮದುವೆಯಾಗುವ ಮುನ್ನವೇ ಅಪ್ಪ ನನಗೆ ಒಂದಷ್ಟು ಆಸ್ತಿಯನ್ನು ಬರೆದಿದ್ದ. ಅದರ ಬಲದಿಂದ ಅಜ್ಜಿ, ಸೋದರಮಾವ ನನ್ನನ್ನ ಸಾಕಿದರು. ಇಲ್ಲದೇ ಹೋಗಿದ್ದರೆ, ನಾನು ಇಂದು ಯಾವುದೋ ಅನಾಥಾಶ್ರಮದಲ್ಲೊ, ಇನ್ನೆಲ್ಲೋ ಇರಬೇಕಾಗುತ್ತಿತ್ತು.
 
ನಿನ್ನ ಪರಿಚಯವಾಯಿತು. ನೀರೇ ಇಲ್ಲದೆ ವರ್ಷಗಟ್ಟಲೆ ಹಸಿದು ಒಣಗಿದ ನೆಲಕ್ಕೆ ತಂಪಿನ ಮಳೆಗರೆದಂತಾಯಿತು. ಒಣಗಿದ ನನ್ನ ಬಾಳಿಗೆ ನೀನು ಜೀವ ಕಳೆ ತಂದೆ. ತಂದೆ ತಾಯಿಯರಿಂದ ಸಿಗದ ಪ್ರೀತಿ, ಪ್ರೇಮ ಭದ್ರತೆಯನ್ನ ನಿನ್ನಲ್ಲಿ ಕಂಡೆ. ನಾನು ಅನಾಥಳು ಎಂದು ಗೊತ್ತಿದ್ದೂ ಪ್ರೀತಿಸಿ ಮದುವೆಯಾದೆ! ...... ಐ ಲವ್ ಯು ಆಕಾಶ್- ಐ ರಿಯಲಿ ಲವ್ ಯು’.
ಈಗವಳ ಕಣ್ಣಲ್ಲಿ ನೀರಿರಲಿಲ್ಲ. ಧನ್ಯತೆಯ ಭಾವವಿತ್ತು. ಅವಳನ್ನು ಬಾಚಿ ತಬ್ಬಿಕೊಂಡೆ. ಬಿಸಿಯುಸಿರ ತಾಕಲಾಟಗಳ ನಡುವೆ ಮಂದಹಾಸ ಬೀರಿದಳು.
 
ಇದು ನಮ್ಮ ಜನ್ಮಜನ್ಮಾಂತರಗಳ ಬಂಧವಾ?
 

Share this Story:

Follow Webdunia kannada