Select Your Language

Notifications

webdunia
webdunia
webdunia
webdunia

ಸಾಫ್ಟ್‌ವೇರ್ ಇಲ್ಲದ ಕಂಪ್ಯೂಟರ್

ಸಾಫ್ಟ್‌ವೇರ್ ಇಲ್ಲದ ಕಂಪ್ಯೂಟರ್
ಚೆನ್ನೈ , ಶನಿವಾರ, 22 ನವೆಂಬರ್ 2014 (16:32 IST)
ಮೂಲತಮಿಳು: ಎಂ.ಜಿ.ಸುರೇಶ್ ಬಾಬು
ಕನ್ನಡಕ್ಕೆ : ಡಾ.ವಿ. ಗೋಪಾಲಕೃಷ್ಣ
 
ಲಂಡನ್ ಹೀಥ್ರೂ ಸ್ಪೇಸ್ ಬಸ್ ಟರ್ಮಿನಲ್‌ನಲ್ಲಿ  ಅಭಿ ಆಯಾಸಗೊಂಡು ಕಾದಿದ್ದ. ಸುಶಾ ಅದೇಕೆ ಇನ್ನೂ ಕಾಣಲಿಲ್ಲ? ಬಲಗೈ ಮಣಿಕಟ್ಟಿನತ್ತ ನೋಡಿದ. ಹೈಟೆಕ್ ಎಲೆಕ್ಟ್ರಾನಿಕ್ ಗಡಿಯಾರ ಹಸುರು ಬಣ್ಣದಲ್ಲಿ ಗಂಟೆ 1900 ಎಂದಿತು. 1830ಕ್ಕೇ ಬರಬೇಕಾಗಿದ್ದವಳು. ಮೂವತ್ತು ನಿಮಿಷ ತಡವಾದರೂ ಇನ್ನೂ ಬರಲಿಲ್ಲ. ಬೇಸರದಿಂದ ಆಕಾಶದತ್ತ ನೋಡಿದ.ನಿರಾಶನಾದ.ಕೃತಕ ದೀಪಗಳ ಸೂರ್ಯ ರಾತ್ರಿಯನ್ನು ಹಗಲಾಗಿ ಮಾಡುತ್ತಿತ್ತು.
 
ಶರವೇಗದಲ್ಲಿ ನಡೆಯುತ್ತಿರುವ ತಾಂತ್ರಿಕ ಬದಲಾವಣೆಗಳ ಪರಿಣಾಮದಿಂದ ಅರ್ಧಭಾಗದ ಜಗತ್ತು ಉಳಿದರ್ಧಭಾಗ ಸಂಪೂರ್ಣ ಬದಲಾವಣೆಯಾಗುತ್ತಿದೆ. ಮಾನವರು ಹಲವಾರು ಭಾಷೆಗಳನ್ನು ಕಲಿತುಕೊಂಡರು. ಆದರೆ ಯಾವುದರಲ್ಲಿಯೂ ಪರಿಪೂರ್ಣತೆ ಪಡೆಯಲಿಲ್ಲ. ತಾಯ್ನುಡಿಯನ್ನು ಸಹ ತಪ್ಪಾಗಿ ಪ್ರಯೋಗಿಸುತ್ತಾರೆ. ಈಗೆಲ್ಲಾ ಮನುಷ್ಯನನ್ನು ಮನುಷ್ಯನು ಆಳುತ್ತಿಲ್ಲ: ರಸ್ತೆಯ ಬದಿಯಲ್ಲಿರುವ ಸಿಗ್ನಲ್ ಮೊದಲ್ಗೊಂಡು ವಿಧಾನಸಭೆಯ ಮಸೂದೆಯವರೆಗೆ ಎಲ್ಲವೂ ಕಂಪ್ಯೂಟರನ್ನು ಕಂಡು ಹಿಡಿದ ಮನುಷ್ಯ ತನ್ನ ದೈಹಿಕ ಸೋಮಾರಿತನ ಮತ್ತು ಮಾನಸಿಕ ಸೋಮಾರಿತನದ ಪರಿಣಾಮವಾಗಿ ಕಂಪ್ಯೂಟರಿಗೆ ಶರಣಾಗಿದ್ದಾನೆ. ಈ ಮಧ್ಯೆ ಬೆಳೆದ ಬೆಳೆ ಸೂಪರ್ ಕಂಪ್ಯೂಟರ್ ಮೈತ್ರಾ ಪ್ರಪಂಚವನ್ನು ಆಳುತ್ತಿದೆ. ಎಲ್ಲವೂ ಬದಲಾವಣೆಯಾಗಿದೆ.ತಡಮಾಡುವುದನ್ನು ಮಾತ್ರ ಈ ಹೆಂಗಸರು ಬದಲಾವಣೆ ಮಾಡಿಕೊಳ್ಳಲಿಲ್ಲ.
 
ಸುಷಾ ಅದೆಲ್ಲಿ ಹೊರಟು ಹೋದಳ? ಮೈತ್ರಾವಿನ ಸ್ಯಾಟಲೈಟ್ ಕಣ್ಣುಗಳಿಗೆ ಸಿಕ್ಕಿಬಿದ್ದು ಒಂದು ಸಮಯ ಸ್ಕ್ಯಾನ್‌ಗೆ ಒಳಗಾಗಿ! ಅಬ್ಬಾ! ನೆನೆಯಲೂ ಅಸಂಭವ!ಭಯ! ವೆದರ್ ಕಂಡಿಷನ್ ತೀರಾ ಹದಗಟ್ಟು ದೇಹ ಚಳಿಯಿಂದ ಮರಗಟ್ಟಿ ಹೋಗಿದ್ದರೂ ಅವನಿಗೆ ಭಯದಿಂದಾಗಿ ಬೆವರು ಸುರಿದು ಬರಲು ಪ್ರಾರಂಭವಾಯಿತು.
 
ಟರ್ಮಿನಲ್ ಸುತ್ತ ಕಣ್ಣು ಹಾಯಿಸಿದ. ಅಲ್ಯುಮಿನಿಯಂ ಲಿಫ್ಟ್‌ಗಳು, ಫೈಬರ್ ಎಸ್ಕಲೇಟರ್‌ಗಳು ಬ್ರೂನೋ ಗ್ರಹದಿಂದ ತರಲಾದ ವಯಲೆಟ್ ಬಣ್ಣದ ಗಿಡಗಳು, ಗಾಳಿ ತುಂಬಿದ ಪಾಲಿಯಾರಿಥೆನ್ ಸೋಫಾಗಳು, ಟರ್ಮಿನಲ್‌ಗೆ ಹೊಂದಿಕೊಂಡ ಹೊರಗಿನ ರಸ್ತೆಗಳಲ್ಲಿ ಈಥನಾಲ್ ವಾಹನಗಳು. ಫೈಬರ್ ಎಸ್ಕಲೇಟರಿನಲ್ಲಿ ಒಬ್ಭ ಅಮೇರಿಕ(ಅಥವಾ ಯುರೋಪ್?) ಯುವತಿ ಮತ್ತು ನೀಗ್ರೋ ಯುವಕ ಕೈಕೈ ಹೆಗಲಮೇಲೇರಿಸಿಕೊಂಡು ಹೋಗುತ್ತಿದ್ದರು. ಹತ್ತಿರದಲ್ಲಿಯೇ ಒಬ್ಬ ಜಪಾನಿ ಯುವಕ ಒಬ್ಬ ಪಾಕಿಸ್ತಾನದ ಯುವತಿಯನ್ನು ತಪ್ಪು ತಪ್ಪಾಗಿ ತಡವುತ್ತಿದ್ದನು. ಬಿಳಿಯನು ಕಪ್ಪು ಹುಡುಗನನ್ನು ಮದುವೆಯಾಗಬೇಕು. ಇಂಡಿಯಾದವರು ಬಿಳಿಯವಳನ್ನು, ಅಸ್ಟ್ರೇಲಿಯಾದವನು ಪಿಗ್ಮಿಯವಳನ್ನು. ಅದಕ್ಕೆ ವಿರುದ್ಧವಾಗಿ ಇಂಡಿಯದವನು ಇಂಡಿಯಾದ ಹೆಣ್ಣನ್ನು ಅಥವಾ ಅಮೇರಿಕನ್ನನು ಅಮೇರಿಕದ ಹೆಣ್ಣನ್ನು ಮದುವೆಯಾಗಕೂಡದು. ಅದು ತಪ್ಪು.
 
ಬೇರೆಬೇರೆ ವರ್ಗಗಳು ಕಲೆತಾಗ ಎಲ್ಲಾ ಬಗೆಯ ಪ್ರತ್ಯೇಕತೆಗಳು ದೂರವಾಗುತ್ತವೆ.ಎಲ್ಲವನ್ನೂ ಒಳಗೊಂಡು ಒಂದೇ ಭಾಗವಾಗಿ ಬದಲಾಗುತ್ತದೆ. ಅಂತಹ ಹೊಸವರ್ಗ ಹೊಸತನವನ್ನು ಪಡೆಯುತ್ತದೆ ಎಂಬುದು ಮೈತ್ರಾವಿನ ಸಿದ್ದಾಂತ. ಆದ್ದರಿಂದ ಇಂತಿಂಥವರಿಗೆ ಇದೇ ಸರಿಯಾದ ಜೋಡಿ ಎಂದು ಕಂಪ್ಯೂಟರ್ ಆಯ್ಕೆ ಮಾಡುತ್ತದೆ. ತಾವಾಗಿಯೇ ಜನರು ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಕೂಡದು. ಆದ್ದರಿಂದ ಸಂದೇಹಕ್ಕೆಡೆಯಿಲ್ಲದೇ ಪ್ರಣಯವನ್ನು ಸಂಪೂರ್ಣವಾಗಿ ತಡೆಹಿಡಿಯಲಾಯಿತು.
 
ಆದರೆ ವಿವಾಹಕ್ಕೆ ಮುಂಚೆ ಗಂಡು,ಹೆಣ್ಣು ಡೇಟಿಂಗ್ ಇಟ್ಟುಕೊಳ್ಳಬಹುದು.ಸೆಕ್ಸ್ ಸಹ ಇಟ್ಟುಕೊಳ್ಳಬಹುದು.ಅದೇನೂ ತಪ್ಪಿಲ್ಲ. ಹಸಿವು,ನಿದ್ರೆಯಂತೆಯೇ ಸೆಕ್ಸ್ ಸಹ ಒಂದು ಅನಿವಾರ್ಯ. ಅದನ್ನು ಯಾರು ಬೇಕಾದರೂ ಯಾರಲ್ಲಿಯಾದರೂ ಇಟ್ಟುಕೊಳ್ಳಬಹುದು.ಸೆಕ್ಸ್ ಬಯಾಲಾಜಿಕಲ್ ಸಮಸ್ಯೆ. ಪ್ರತ್ಯೇಕ ವಿಷಯ.ಅದಕ್ಕೆ ವರ್ಗ ಮುಂತಾದ ಕಟ್ಟುಪಾಡಿಲ್ಲ. ಆದರೆ ಗರ್ಭಧರಿಸಿದರೆ ಅದು ಸಾಮಾಜಿಕ ಸಮಸ್ಯೆ.ಅದಕ್ಕೆ ಕಟ್ಟುಪಾಡು ಅಗತ್ಯವೆಂಬುದು ಮೈತ್ರಾನಿನ ಸಿದ್ಧಾಂತ.
 
ಮೂರು ತಿಂಗಳ ಹಿಂದೆ ಯಾವಳೋ ಒಬ್ಬ ಪೋಲೆಂಡಿನವಳೊಡನೆ ಅಥವಾ ಹಾಲೆಂಡಿನವಳೊಂದಿಗೆ ಅಭಿ ತನ್ನ ಭವಿಷ್ಯತ್ ಹೆಂಡತಿಯೆಂದು ಕಲ್ಪನೆ ಮಾಡಿಕೊಂಡಿದ್ದನು. ಒಂದು ಜನವರಿ ತಿಂಗಳ ಸಂಜೆ ಸಮಯದಲ್ಲಿ ಅದು ನಡೆದದ್ದು. ಪ್ಯಾರಿಸ್ ನಗರದಲ್ಲಿ ನಡೆದದ್ದು. ಪ್ಯಾರಿಸ್ ನಗರದ ಬೀದಿಯೊಂದ ಪ್ಲಾಟ್‌ಫಾರಂ ರೆಸ್ಟೋರೆಂಟಿನಲ್ಲಿ ಕಪ್ಪು ಕಾಫಿಯಲ್ಲಿ ಸಕ್ಕರೆ ಕ್ಯೂಬ್‌ಗಳನ್ನು ಹಾಕಿ ಸ್ಪೂನಿನಿಂದ ಕಲಕುತ್ತಿರುವಾಗ ಅಭಿ ಅವಳನ್ನು ಗಮನಿಸಿದ. ಅವಳು ತಾನೇ ತಾನಾಗಿ ಬಂದು ಅವನ ಮೇಜಿನ ಎದುರಿನಲ್ಲಿದ್ದ ಕುರ್ಚಿಯಲ್ಲಿ ಕುಳಿತಳು.ದಕ್ಷಿಣ ಭಾರತದ ಹೆಣ್ಣಿನಂತೆ ಕಂಡುಬಂದಳು. ನೇರವಾದ ಕ್ಲಾಸಿಕಲ್ ಮುಖ, ಆಕರ್ಷಕವಾದ ಚಂದನಬಣ್ಣದ ಕೈಗಳು. ಎದ್ದು ತೋರುವಂತಹ ವಿಶಾಲಎದೆ, ಗಂಡಸರಿಂದ ಹೆಚ್ಚು ಬಳಕೆಗೊಳ್ಳದವಳಂತೆ ಹೊಸತಿನಿಂದ ಕೂಡಿದವಳು.
 
ತಟ್ಟನೆ ಅವನಿಗೆ ತೋರಿತು. ನನ್ನ ಮೇಜಿನೆದುರಿನಲ್ಲಿಯೇ ಒಬ್ಬ ದೇವತೆ ಅಲ್ಲ, ಹೆಣ್ಣನ್ನು ದೇವತೆಯೆಂದೆಲ್ಲಾ ವರ್ಣಿಸುವುದನ್ನು ತಡೆಯಲಾಗಿದೆ. ತಲುಪಲು ಸಾಧ್ಯವಿಲ್ಲದ ದಡವನ್ನು ವರ್ಣಿಸಿ ಪ್ರಣಯವನ್ನು ಹುಡುಕುತ್ತಾ ಹೋಗುವುದು ಅನಾಗರಿಕತೆ ಎಂಬುದು ಮೈತ್ರಾವಿನ ಸಿದ್ಧಾಂತ.
 
ಪ್ರಣಯಕತೆಗಳು, ಕವಿತೆಗಳು ಮುಂತಾದುವನ್ನು ಬರೆಯುವುದು ಸಹ ತಡೆಯಲಾಗಿದೆ.ಈಗೆಲ್ಲವೂ ಅವುಗಳನ್ನು ಕಂಪ್ಯೂಟರ್‌ಗಳೇ ಬರೆಯುತ್ತವೆ. ಆಲ್‌ಜೀಬ್ರಾ ಈಕ್ವೇಷನ್ ರೀತಿಯಲ್ಲಿ ಅರ್ಥವಾಗದ ಕವಿತೆಗಳು.ಎದುರಿನಲ್ಲಿರುವವಳು ನಿಜವಾದ ಕವಿತೆ. ಒಳ್ಳೆಯ ಕವಿತೆ.ಸಹಜವಾದ ಕವಿತೆ ಎಂದು ಅಭಿಗೆ ತೋರಿತು. ಹೆಣ್ಣಿನೊಂದಿಗೆ ಹೃದಯಾರ್ಪಣೆ ಮಾಡಲೇ? ಮೈತ್ರಾವಿನ ಷರತ್ತುಗಳಿಗೆ ವಿರುದ್ಧವಾಗುತ್ತದೆಯಲ್ಲವೆ? ತವಕಗೊಂಡ.
 
ಅವಳು ರೋಬೋ ಬೇರರೊಂದಿಗೆ ಸ್ಯಾಂಡ್‌ವಿಚ್ಚು ಮತ್ತು ಲೆಮನ್ ಟೀ ತರಲು ಆರ್ಡರ್ ಮಾಡಿದಳು. ಆ ನಂತರ ತನ್ನ ಹ್ಯಾಂಡ್‌ಬ್ಯಾಗ್‌ನಿಂದ ಫ್ಲಾಪಿಯನ್ನು ಹಾಕಿ ಸ್ಕ್ರೀನಿನಲ್ಲಿ ಬಂದ ಏನೆನ್ನೋ ನೋಡುತ್ತಿದ್ದಳು. ಕತೆಯೋ,ಸಿನಿಮಾ ಏನೆಂದು ಅರ್ಥವಾಗಲಿಲ್ಲ. ಈಗೆಲ್ಲಾ ಪುಸ್ತಕ,ಪತ್ರಿಕೆ, ಓದುವವರು ಯಾರು? ಎಲ್ಲವೂ ಫ್ಲಾಪಿಯಲ್ಲಿಯೇ ಬರುತ್ತದೆ.ಫ್ಲಾಪಿಗಳು ಯಾವುದೆಂದು ಕಂಪ್ಯೂಟರಿನಲ್ಲಿ ಹಾಕಿ ಸ್ಕ್ರೀನಿನಲ್ಲಿ ನೋಡಬೇಕು. ಅದನ್ನು ಓದಬೇಕು.ಸಿನಿಮಾ?ಟಿ.ವಿ,ವಿಸಿಆರ್ ಏತಕ್ಕೆ?ಅವೆಲ್ಲವೂ ಹಳೆಕಾಲದ ಸಮಾಚಾರ. ಈಗ ಅವೆಲ್ಲವೂ ಕಂಪ್ಯೂಟರಿನಲ್ಲಿಯೇ ನೋಡಬಹುದು.
ಕಂಪ್ಯೂಟರ್ ಸ್ಕ್ರೀನಿನಿಂದ ತನ್ನ ನೋಟವನ್ನು ಬದಲಾಯಿಸಿ ಒಂದೆರಡು ಬಾರಿ ಅವನನ್ನು ನೋಡಿದಳು. ಅವನ ನರಗಳು ವಿದ್ಯುಚ್ಛಕ್ತಿ ಷಾಕ್ ಹೊಡೆದಂತೆ ಕಂಡುಬಂತು.
 
ಮೋಟು ಕೂದಲಿನ ಕ್ರಾಪ್ ಕತ್ತರಿಸಿಕೊಳ್ಳುವಂತಹ ಆಧುನಿಕ ಯುವತಿಯಂತೆ ಕಾಣದೆ ನೀಳವಾದ ತಲೆಗೂದಲನ್ನಿರಿಸಿಕೊಂಡಿದ್ದಳು.ಸಿಗರೇಟ್ ವಾಸನೆಯನ್ನು ಕಾಣದ ದೇಹ ಮತ್ತು ನಿಕೋಟಿನ್ ಗುರುತಿಲ್ಲದ ತುಟಿ, ಹೊಳಪಿನಿಂದ ಕೂಡಿದ ಶುದ್ಧವಾದ ಹಲ್ಲುಗಳು.ಕೃತಕ ಉಡುಗೆ ತೊಡುಗೆ ಏನನ್ನೂ ಧರಿಸದೆ ನಿಜವಾದ ಶರೀರವನ್ನು ಆಡಂಬರವಿಲ್ಲದೇ ಪ್ರದರ್ಶನ ಮಾಡುವಂತಿತ್ತು. ಕಿವಿಯಲ್ಲಿ ಪ್ಲಾಟಿನಂ ಲೋಲಕ, ಕೈಗಳಲ್ಲಿ ಪ್ಲಾಟಿನಂ ಉಂಗುರವನ್ನು ಧರಿಸಿದ್ದಳು. ಬೇಕೆಂದೇ ತಲೆಯೆತ್ತಿ ಅವನತ್ತ ದಿಟ್ಟಿಸಿ ನೋಡಿದಳು. ತನ್ನನ್ನೇ ದುರುಗುಟ್ಟುತ್ತಾ ನೋಡುತ್ತಿದ್ದ ಅವಳನ್ನು ನೋಡಿದ ಅವನ ಮುಖ ಕೆಂಪಾಯಿತು.
 
ಅವಳೊಂದಿಗೆ ಮಾತನಾಡಲು ಸಮ್ಮತಿ ಸೂಚಿಸುವಂತೆ ಅಭಿ ಮುಖವನ್ನು ತದೇಕಚಿತ್ತದಿಂದ ನೋಡಿದ. ಯಾವ ಭಾಷೆಯಲ್ಲಿ ಮಾತನಾಡುವುದು? "ನೀವು ಇಂಡಿಯಾದವರೆ?" ಎಂದು ಅಭಿ ಅವಳನ್ನು ಫ್ರೆಂಚ್‌ನಲ್ಲಿ ಕೇಳಿದ. ಅನೀಕ್ಷಿತವಾಗಿ ಮಾತನಾಡಿದ ಅವಳನ್ನು ಕಂಡು ದಿಗ್ಭ್ರಾಂತಳಾದ ಅವಳು "ಹೌದು,ನೀವು" ಎಂದು ಮರುಪ್ರಶ್ನೆ ಕೇಳಿದಳು.
"ನಾನು ಹೌದು.ತಮಿಳಿನವನು"
"ತಮಿಳ್...ತಮಿಳಾ..... ನಾನು ಸಹ ತಮಿಳು ಹುಡುಗಿಯೆ" ಎಂದು ಅವಳು ಪರವಶಳಾದಳು.
 
ಅವಳು ಪ್ಯಾರಿಸಿನ ಊಮಿಯರ್ ಸ್ಕ್ವೇರ್‌ನಲ್ಲಿರುವ ವಾಲ್ಟೇರ್ ಬಹು ಅಂತಸ್ತಿನ ಕಟ್ಟಡದಲ್ಲಿ ಇಪ್ಪತ್ತನಾಲ್ಕನೇ ಮಹಡಿಯಲ್ಲಿರುವ ಸಂಸ್ಥೆಯೊಂದರಲ್ಲಿ ಕಾರ್ಮಿಕ ನಿಪುಣ ಸಹಾಯಕಿಯಾಗಿ ಕೆಲಸಮಾಡುತ್ತಿದ್ದಳು. ಫ್ರಾನ್ಸಿನ ಪೂರ್ವದ ಗಡಿಯಲ್ಲಿ ಸ್ಟ್ರಾರ್ಸ್‌ಬರ್ಗಿನಲ್ಲಿ ಎರಡು ರೂಮ್ ಅಪಾರ್ಟ್‌ಮೆಂಟಿನ ಒಂದು ರೂಮಿನಲ್ಲಿ ವಾಸಮಾಡುತ್ತಿದ್ದಾಳೆ. ಅಪಾರ್ಟ್‌ಮೆಂಟಿನ ನಂಬರು ಹಾಗು ಫೋನೋವಿಷನ್ ನಂಬರನ್ನೂ ಹೇಳಿದಳು.
 
ಒಂದೆರಡು ಬಾರಿ ಫೋನೋವಿಷನ್‌ನಲ್ಲಿ ಮಾತನಾಡಿದ ನಂತರ ಅಭಿ ಒಮ್ಮೆ ಅವಳ ಅಪಾರ್ಟ್‌ಮೆಂಟಿಗೆ ಭೇಟಿಯಿತ್ತ. ಏಕಾಂತದಲ್ಲಿ ಹೆಚ್ಚುಕಡಿಮೆ ನಿಕಟವಾಗಿ ಅವರು ಪರಸ್ಪರ ಒಬ್ಬರ ಬಗ್ಗೆ ಮತ್ತೊಬ್ಬರು ತಿಳಿದುಕೊಂಡರು.
 
ಕೆಲವು ದಿನಗಳನಂತರ, ಪರಿಶೀಲನೆಯನಂತರ ಪರಸ್ಪರ ಭಯ ದೂರವಾದನಂತರ ಅವಳ ಅಪಾರ್ಟ್‌ಮೆಂಟಿಗೆ ಒಂದು ದಿನ ಅಭಿ ಭೇಟಿ ನೀಡಿದ. ಅವಳು ಬೇರೆಯಾದ ರೀತಿಯಲ್ಲಿ ಎದುರಿನಲ್ಲಿ ಫ್ಲಾಪಿಗಳನ್ನು ಹಾಕಿಕೊಂಡು, ಅವನ ಎದುರಿನಲ್ಲಿಯೇ ಉಡುಪುಗಳನ್ನು ಬದಲಾಯಿಸಿಕೊಂಡು ಸ್ನಾನಕ್ಕೆ ಹೊರಟಳು.
 
ದಾಸ್ತಾಮೇವ್‌ಸ್ಕಿಯ ಕರಮಾಸಾವ್ ಸಹೋದರರ( ಈ ನಾವೆಲ್‌ಗಳನ್ನು ಬಹಿಷ್ಕರಿಸಿರಲಿಲ್ಲ) ಎರಡನೆಯ ಅಧ್ಯಾಯಕ್ಕೆ ಅವನು ಪ್ರವೇಶ ಮಾಡಿದಾಗ ಅವಳು ಅರ್ಧಮರ್ಧ ಒದ್ದೆ ಉಡುಪಿನ ದೇಹದೊಂದಿಗೆ ಬಾತ್‌ರೂಮಿನಿಂದ ಹೊರಬಂದಳು. ಅವನ ಸಮೀಪದಲ್ಲಿ ಅಂಟಿಕೊಂಡು ನಿಂತುಕೊಂಡಳು.ಪ್ರಜ್ಞೆ ತಪ್ಪಿಸುವಂತಹ ಸುವಾಸನೆಯೊಂದಿಗೆ
"ಎಲ್ಲಿ ಇಟ್ಟುಕೊಳ್ಳೋಣ?ಇಲ್ಲಿಯೇ....ಅಥವಾ ಒಳಗಡೆಯ ರೂಮಿನಲ್ಲೋ?'
"ಏನನ್ನು?"
"ಸೆಕ್ಸ್"
"ವ್ಹಾಟ್?'
"ನನ್ನ ಜೊತೆಯಲ್ಲಿ ಸೆಕ್ಸ್ ಬಯಸುತ್ತೀರಾ?ಎಂದು ಕೇಳಿದೆ".
"ಅದಕ್ಕಿಂತ ಹೆಚ್ಚಿನದನ್ನು ನಿನ್ನೊಂದಿಗೆ ಬಯಸುತ್ತೇನೆ"
"ಹಾಗೆಂದರೆ?"
ಅದಕ್ಕೆ ಅವನು ಹೇಳಿದ ಪ್ರತ್ಯುತ್ತರವನ್ನು ಕೇಳಿ ಅವಾಕ್ಕಾದಳು.
"ನಿನ್ನನ್ನು ಪ್ರೇಮಿಸಲು ಇಷ್ಟ ಪಡುತ್ತೇನೆ.ಹುಡುಗಿ".
ಅವಳು ಕಲರವದಿಂದ ಆ ರೂಮಿನಲ್ಲಿ ಅಳವಡಿಸಿದ್ದ ಮೈಕ್ರೋ ಕ್ಯಾಮರಾವನ್ನು ನೋಡಿದಳು.ಅವಳನ್ನು ಅಭಿ ದರದರನೆ ಮೈತ್ರಾವಿನ ಮೈಕ್ರೋ ಕ್ಯಾಮರ ಕಣ್ಣುತಪ್ಪಿಸಿ ಬೇರೆಡೆಗೆ ಎಳೆದುಕೊಂಡು ಹೋದ.
"ಅಭಿ,ಇದು ಹೇಗೋ ಸಾಧ್ಯವಾಗುತ್ತದೆ?"
"ಅದೇಕೋ ಸಾಧ್ಯವಿಲ್ಲ ಸುಷಾ? ನಿನ್ನನ್ನು ನೆನೆದರೆ ಸಾಕು ನನ್ನಲ್ಲಿ ಪರವಶತೆಯುಂಟಾಗುತ್ತದೆ.ನಿನಗೆ?"
"ನನಗೂ ಅಷ್ಟೆ"
"ಅದರ ಹೆಸರೇ ಪ್ರಣಯ"
"ಸ್ಟುಪಿಡ್! ಅದು ಆಂಡ್ರೋಜನ್-ಎಸ್ಟ್ರೋಜನ್ ವಿಷಯ.ಪರವಶತೆಯುಂಟಾಗುವುದಿಲ್ಲ.ಹಾರ್ಮೋನ್. ಹೆಣ್ಣನ್ನು ನೋಡಿದರೆ ಗಂಡಿಗೆ, ಗಂಡನ್ನು ನೋಡಿದರೆ ಹೆಣ್ಣಿಗೆ ಆಗುವುದು ಹಾರ್ಮೋನ್ ಪ್ರಣಯವಲ್ಲ"
"ಸೆಕ್ಸ್ ಎನ್ನುವುದು ನಿನ್ನ ಬಾತ್‌ರೂಮಿನ ಸಂಗತಿಯಲ್ಲ. ಹೆಣ್ಣೆಂಬುದು ಆಶೆಯನ್ನು ತೀರಿಸುವ ಟಾಯ್‌ಲೆಟ್ ಸಹ ಅಲ್ಲ. ಪ್ರೀತಿಯಿಲ್ಲದ ಸೆಕ್ಸ್ ಸಾಫ್ಟ್‌ವೇರ್ ಇಲ್ಲದ ಕಂಪ್ಯೂಟರ್‌ಗೆ ಸಮಾನ. ಅರ್ಥವಾಯ್ತೇ?"
ಅದಷ್ಟರಲ್ಲಿ ಮೈಕ್ರೋ ಕ್ಯಾಮೆರಾದ ಎಲ್ಲೆಯನ್ನೂ ಮೀರಿ ಅವರು ಹೊರಗಡೆ ರಹಸ್ಯವನ್ನು ಮಾತನಾಡಿದುದಕ್ಕಾಗಿ ಎಲೆಕ್ಟ್ರಾನಿಕ್ಸ್ ಕಾಂಡೋರ್‌ನಿಂದ ರೇಡಿಯೋ ಮೂಲಕ ಪ್ರಶ್ನೆ ಮುಂದೆ ಬಂತು. ಸೆಕ್ಸ್ ವಿಷಯವಾದುದರಿಂದ ಅದನ್ನು ಮುಚ್ಚಿಡಲಾಯಿತು ಎಂದು ಅಭಿ ಕಾರಣವನ್ನು ತಿಳಿಸಿದ. ಸುಷಾ ಮುಗುಳ್ನಕ್ಕಳು.
 
ಅದಾದನಂತರ ಕೆಲವು ದಿನಗಳಲ್ಲಿ ಅವಳು ಅರ್ಥಮಾಡಿಕೊಂಡಳು. ಆ ತವಕ, ಆ ಸನ್ನಿವೇಶ, ಆ ಪರವಶತೆ ಇದಕ್ಕೆ ಹೆಸರು ಪ್ರಣಯ ಎಂದು. 
ಮೈತ್ರಾವಿನ ಕಾಂಡೋರ್ ಹದ್ದಿನ ಕಣ್ಣುಗಳನ್ನು,ರೂಮಿನಲ್ಲಿರುವ ಒಳರೂಮಿನಲ್ಲಿ ಅಳವಾಡಿಸಿರುವ ಹೈಟೆಕ್ ಕ್ಯಾಮರಾಗಳನ್ನು ಮರೆ ಮಾಡಿ ಅವರಿಬ್ಬರೂ ಪ್ರೀತಿಸಲಾರಂಭಿಸಿದರು.
ತಕ್ಷಣವೇ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸರಕಾರವು ಅಭಿಗೆ ಒಬ್ಭ ನೆದರ್‌ಲ್ಯಾಂಡಿನವಳನ್ನೋ, ಅಥವಾ ಸುಷುವಿಗೆ ಒಬ್ಬ ಆಸ್ಟ್ರೇಲಿಯದವನನ್ನು ಕಳುಹಿಸುವ ಮುಂಚೆ ಇವರು ಮದುವೆಯಾಗಬೇಕು.ತಡವಾದರೆ ಬಿಕ್ಕಟ್ಟುಂಟಾಗುತ್ತದೆ.
 
ಅದಕ್ಕೆ ಸರಿಯಾದ ಒಂದು ಯೋಜನೆಯನ್ನು ಅಭಿ ಹಾಕಿದ. ಅದಕ್ಕಾಗಿಯೇ ಸುಷಾವನ್ನು ಇಲ್ಲಿಗೆ ಬರಲು ಹೇಳಿದ್ದ. ಕತ್ತೆಯಂತವಳು ಇನ್ನೂ ಬರಲಿಲ್ಲ. ಶರವೇಗದಲ್ಲಿ ಸ್ಪೇಸ್ ಬಸ್ ಬಂದು ನಿಂತಿತು. ನ್ಯೂಮಾಡಿಕ್ ಬಾಗಿಲು ಬಾಯಿತೆರೆದಾಗ ಅಲ್ಯೂಮಿನಿಯಂ ನಾಲಗೆಯಂತಹ ಮೆಟ್ಟಲುಗಳು ಹೊರಗೆ ಬಾಚಿದವು. ಇಬ್ಬರು ಮೂವರು ಇಳಿದ ನಂತರ ಸುಷಾ ಇಳಿದು ಬಂದಳು. ಅಭಿಯ ಸಂತೋಷ ಸಂತೋಷದ ಜಲಪಾತವಾಯಿತು.
 
ಸುಷಾ ಅವನ ಬಳಿಗೆ ಬಂದಳು. ಕಳಾಹೀನಳಾಗಿದ್ದಳು. ಅವನ ಕೈಹಿಡಿದು ತಡವಾದುದಕ್ಕೆ ಕ್ಷಮೆ ಕೋರಿದಳು.
 
"ಏನೋ ಮುಖ್ಯವಾದ ಯೋಜನೆ ಎಂದು ಹೇಳಿದರಲ್ಲವೆ? ಅದೇನು?"
 
"ಬಾ, ಹೇಳುತ್ತೇನೆ"
 
ಪಕ್ಕದಲ್ಲಿ ಒಂದು ಕೃತಕ ಕೊಳ. ಅದರ ಬಳಿ ಒಂದು ರೆಸ್ಟೋರೆಂಟ್. ಜನ ಹೆಚ್ಚಾಗಿಲ್ಲ. ಇಲ್ಲಿಗೆ ಬಂದು ರಹಸ್ಯಗಳನ್ನು ಚರ್ಚಿಸಿ ಎಂದು ಹೇಳುವಂತೆ ಏಕಾಂತತೆ ಆವರಿಸಿತ್ತು.
 
ರೆಸ್ಟೋರೆಂಟಿನ ಒಂದು ಮೂಲೆಯ ಜಾಗದಲ್ಲಿ ಕುಳಿತು ಹತ್ತಿರ ಬಂದ ರೋಬೋವಿಗೆ ಎರಡು ಪ್ಲೇಟ್ ಕಟ್ಲೇಟ್ ಮತ್ತು ಸೋಯಾ ಬೀನ್ಸ್ ಸೂಪ್ ತರಲು ಆರ್ಡರ್ ನೀಡಿ ದುರುಗುಟ್ಟಿಕೊಂಡ ಅಭಿ ಸುಷಾವನ್ನು ನೋಡಿದ.
 
ರೇಷ್ಮೆ ಹುಳುವಿನ ರೆಕ್ಕೆಯಾಗಿ ಕಣ್ಣೆವೆಗಳು ಹೊರಳಿದಾಗ,
 
"ಏನು ಸಮಾಚಾರ" ಎಂದು ಕೇಳಿದಳು ಸುಷಾ.
 
"ನಾವು ಮದುವೆಯಾಗಲಿದ್ದೇವೆ. ಅದೂ ಸರಕಾರದ ಒಪ್ಪಿಗೆ ಪಡೆದು"
 
"ಹೇಗೆ, ಹೇಗೆ?"
 
ಜನನ ಮರಣ ಶಾಖೆಯಲ್ಲಿ ನಾನು ಕೆಲಸ ಮಾಡುತ್ತೇನಲ್ಲವೆ? ಪಕ್ಕದಲ್ಲಿ ಕುಳಿತುಕೊಳ್ಳುವ ಪ್ರೇಮ್ ಪೀಟರ್ಸ್ ನನಗೆ ಓಡಿ ಬಂದು ಹೇಳಿದ. ಒಬ್ಬ ಪೋಲಂಡಿನವಳು ಸತ್ತುಹೋದಳು. ವಯಸ್ಸು ಇಪ್ಪತ್ನಾಲ್ಕು. ನನಗೆ ಒಂದು ಯೋಚನೆ ಹೊಳೆಯಿತು ಎಂದನು. ಅದೇನು ಎಂದು ನಾನು ಕೇಳಿದೆ. ಇವಳು ಹೇಗೂ ಸತ್ತುಹೋದಳು. ಇವಳ ಹೆಸರನ್ನು ಬಳಸಿಕೊಂಡರೆ ಆಗುವುದಿಲ್ಲವೆ? ಬರೆದರೂ ಸರಿಯೇ! ಬರೆಯದಿದ್ದರೂ ಸರಿಯೆ! ಇವಳ ಹೆಸರನ್ನು ದಾಖಲು ಮಾಡದೆ ಹಾಗೆಯೇ ಬಿಟ್ಟುಬಿಡುತ್ತೇನೆ. ನಿನ್ನ ಪ್ರೇಯಸಿಯನ್ನು ಇವಳನ್ನಾಗಿ ಬದಲಾಯಿಸಿಬಿಡು. ಇವಳು ಬಿಳಿಯವಳು ಎಂದು ಹೇಳುವುದರಿಂದ ಇವಳೊಂದಿಗೆ ನೀನು ಜೋಡಿ ಸೇರುವುದಕ್ಕೆ ಸರಕಾರದ ವಿರೋಧವೇನೂ ಇರುವುದಿಲ್ಲ.
 
"ನಾನು ಯೋಚನೆ ಮಾಡಿದೆ. ತೀರ್ಮಾನಿಸಿದ್ದೇನೆ."
 
"ಏನೆಂದು?"
 
"ಅವಳ ಹೆಸರನ್ನು ಮರಣ ಪಟ್ಟಿಯಿಂದ ತೆಗೆದು ವಿವಾಹ ಜೋಡಿ ಪಟ್ಟಿಯಲ್ಲಿ ನನ್ನ ಹೆಸರಿನ ಎದುರಿನಲ್ಲಿ ಅವಳ ಹೆಸರನ್ನು ದಾಖಲು ಮಾಡಲು ಏರ್ಪಾಡು ಮಾಡಿದ್ದೇನೆ."
 
"ಆ ನಂತರ?"
 
"ನಿನ್ನ ವಿಳಾಸವನ್ನು, ನಿನ್ನ ಫೋನಾವಿಷನ್ ನಂಬರನ್ನು ಆ ಹುಡುಗಿಯ ಹೆಸರಿನಲ್ಲಿ ದಾಖಲು ಮಾಡಿದ್ದೇನೆ."
 
"ಅಯ್ಯಯ್ಯೋ!"
 
"ಇನ್ನು ಮುಂದೆ ನಿನ್ನ ಹೆಸರು ಕ್ರಿಸ್ತಾನಾ ಜಾಂಟಾನಾ ನಿನಗೆ ಮತ್ತು ನನಗೆ ಸರಕಾರದ ಅಪ್ಪಣೆಯಂತೆ ಮದುವೆಗೆ ಅನುಮತಿ ದೊರೆಯುತ್ತದೆ."
 
"ನಾನು ಅದು ಹೇಗೆ ಕ್ರಿಸ್ತಾನಾ ಜಾಂಟಾನಾ ಆಗಲು ಸಾಧ್ಯವಾಗುತ್ತದೆ?"
 
"ಅದೇಕೆ ಸಾಧ್ಯವಿಲ್ಲ? ತಲೆಗೂದಲನ್ನು ಬ್ಲೀಚ್ ಮಾಡಿಕೊಂಡುಬಿಡು. ಕಣ್ಣಿಗೆ ಕಾಂಟಾಕ್ಟ್ ಲೆನ್ಸ್ ಹಾಕು. ಪ್ಲಾಸ್ಟಿಕ್ ಸರ್ಜರಿ ಮೂಲಕ ಚರ್ಮದ ಮೇಲಿರುವ ಎಲ್ಲಾ ಪಿಗ್ಮೆಂಟ್‌ಗಳನ್ನು ತಿದ್ದು ಬೆಳ್ಳನೆಯ ಚರ್ಮವನ್ನಾಗಿ ಮಾಡಿಕೋ. ಕ್ರಿಸ್ತಾನಾ ಜಾಂಟಾನಾ ಸಿದ್ಧವಾಗುತ್ತಾಳೆ."
 
"ನನಗೆ ಭಯವಾಗುತ್ತದೆ."
 
"ಇದರಲ್ಲಿ ಭಯಪಡಲು ಏನೂ ಇಲ್ಲ".
 
ಹತ್ತು ದಿನಗಳು ಕಳೆದುವು. ಸಂಜೆ ಕೆಲಸದಿಂದ ಸಂತೋಷವಾಗಿ ತನ್ನ ಅಪಾರ್ಟ್‌ಮೆಂಟಿಗೆ ಹಿಂತಿರುಗಿದ ಅಭಿಯ ಮೇಜಿನ ಮೇಲೆ ಒಂದು ಫ್ಯಾಕ್ ಸುದ್ದಿ ಕಾದಿತ್ತು.
 
"ಶುಭಾಶಯಗಳು"
 
ನಿಮಗೂ ಈ ಕೆಳಕಂಡ ಪೌರರಿಗೂ ನಡೆದಿರುವ ವಿವಾಹದ ಒಪ್ಪಂದಕ್ಕೆ ಮೈತ್ರಾವಿನ ಹೆಸರಿನಲ್ಲಿ ನೀಡಲಾಗಿದೆ.
 
ಹೆಸರು: ಕ್ರಿಸ್ತಿನಾ ಜಾಂಟಾ
ವಯಸ್ಸು: 24
ಉದ್ಯೋಗ: ಅಣು ವಿಜ್ಞಾನಿ
ವಿಳಾಸ: ವಾರ್ಸಾ, ಪೊಲಂಡ್
ಈಗಿನ ವಿಳಾಸ: ಸ್ಟ್ರಾಸ್‌ಬರ್ಗ್, ಫ್ರಾನ್ಸ್
 
ಇನ್ನೊಂದು ವಾರದಲ್ಲಿ ಮೇಲೆ ಹೇಳಿದ ಪೌರರನ್ನು ತಮ್ಮ ಸ್ವಸ್ಥಾನಕ್ಕೆ ಕಳುಹಿಸಿಕೊಡಲಾಗುವುದು.
 
- ಐಸಾಕ್ ದೂರಾನಿ, ನಿರ್ದೇಶಕರು (ಮೈತ್ರಾವಿನ ಆಜ್ಞೆಯನುಸಾರ)
ಸಂತೋಷ ತಡೆಯಲಾರದೆ ಕುಣಿದಾಡಿದ.
 
ಆ ವಾರ ಪೂರ್ತಿಯಾಗಿ ಇಬ್ಬರೂ ಫೋನೋವಿಷನಿನಲ್ಲಿ ಮತ್ತೆ ಮತ್ತೆ ಮಾಡನಾಡುವುದೇ ಮುಖ್ಯ ಕೆಲಸವಾಯಿತು. ಕಛೇರಿ ಕೆಲಸವನ್ನು ಅವರು ಉಪಕಸುಬನ್ನಾಗಿ ಮಾಡಿಕೊಂಡತ್ತಿತ್ತು.
 
ಒಂಬತ್ತನೇ ದಿನ. ಬೆಳಗಿನ ಜಾವ (0500) ಐದು ಗಂಟೆ ಇರಬಹುದು ಬಾಗಿಲಲ್ಲಿ ಯಾರೋ ಬಂದು ಕರೆಗಂಟೆಯನ್ನು ಬಾರಿಸಿದರು.
 
ಅರೆನಿದ್ದೆಯಲ್ಲಿಯೇ, ಹಾಸಿಗೆಯಿಂದ ಮೇಲೆದ್ದು ಕುಳಿತ ಅಭಿ. ರಿಮೋಟ್ ಕಂಟ್ರೋಲ್ ಸ್ವಿಚ್ ಅದುಮಿದ. ಬಾಗಿಲಲ್ಲಿ ಒಬ್ಬ ಬಿಳಿಯವಳು ನಿಂತಿರುವುದು ಸ್ಕ್ರೀನಿನಲ್ಲಿ ತಿಳಿದುಬಂತು.
 
ಗಡಿಬಿಡಿಯಿಂದ ಬಾಗಿಲನ್ನು ತೆಗೆದ.
 
ಇಪ್ಪತ್ತು ವಯಸ್ಸಿನವಳೆಂದು ಹೇಳಬಹುದಾದ ಆದರೆ ಅದರ ಎರಡರಷ್ಟು ವಯಸ್ಸಿನವಳಂತೆ ಕೃಶ ಶರೀರದಿಂದ ಕೂಡಿದ ಒಬ್ಬ ಬಿಳಿಯವಳು.
 
"ನೀವೇ ತಾನೆ ಮಿಸ್ಟರ್ ಅಭಿ...?"
 
"ಹೌದು. ನೀವು...?"
 
"ಆಹ! ನೀನು ತುಂಬಾ ಸುಂದರನಾಗಿದ್ದೀಯೆ! ನೀನು ಅದ್ಹೇಗೆ ಇದ್ದೀಯೋ ಎಂದು ಭಯದಿಂದಲೇ ಬಂದೆ. ಒಳ್ಳೆಯದು. ನೀನು ನನಗೆ ತುಂಬಾ ಹಿಡಿಸಿದೆ."
 
ಅಭಿಯ ಹೊಟ್ಟೆಯಲ್ಲಿ ಹುಳಿಹಿಂಡಿದಂತಾಯಿತು.
 
"ನೀವು ಯಾರೆಂದು ಹೇಳಲೇ ಇಲ್ಲ?"
 
"ನಾನೊಬ್ಬ ಮೂರ್ಖಳು. ಆತುರದಲ್ಲಿ ನನ್ನ ಬಗೆಗೆ ತಿಳಿಸಲೇ ಇಲ್ಲ. ನನ್ನ ಹೆಸರು ಕ್ರಿಸ್ತಾನಾ ಜಾಂಟಾ... ನನ್ನನ್ನು ನಿನಗೆ ಹೆಂಡತಿಯನ್ನಾಗಿ ಮಾಡಿದ್ದಾರೆ." ಹೇಳುವಾಗಲೇ ಅವಳ ಮುಖದಲ್ಲಿ ನಾಚಿಕೆ ಎದ್ದು ಕಾಣುತ್ತಿತ್ತು.
 
"ನೀನು ಸತ್ತಿರುವುದಾಗಿ ಹೇಳಿದರಲ್ಲವೆ?"
 
ಗಹಗಹಿಸಿ ಕೆಕ್ಕರಿಸಿಕೊಂಡು ನಕ್ಕಳು.
 
"ಅದನ್ನು ಏನು ಕೇಳುತ್ತೀರಿ! ಪಕ್ಕದ ಫ್ಲಾಟಿನಲ್ಲಿ ಕ್ರಿಸ್ತಿನಾ ಪಾಂಡಾ ಎಂದು ಒಬ್ಬಳು ಸತ್ತುಹೋದಳು. ತಪ್ಪಾಗಿ ನಾನೇ ಸತ್ತುಹೋಗಿದ್ದೇನೆಂದು ತಿಳಿದುಕೊಂಡಿದ್ದಾರೆ. ಅದೊಂದು ತಮಾಷೆ. ನಾನೊಬ್ಬ ಇಂಡಿಯದವನನ್ನು ಮದುವೆಯಾಗಿ ಮಕ್ಕಳು ಮರಿಯನ್ನು ಸಾಕಬೇಕೆಂಬುದು ನನ್ನ ವಿಧಿ"
 
"ಹಾಗಾದರೆ ಸುಷಾ ಏನಾದಳು?"
 
"ಸುಷಾ ನೇ? ಓ ಒಬ್ಬ ಇಂಡಿಯದ ಹೆಣ್ಣು. ಅವಳೊಬ್ಬ ಹುಚ್ಚಿ. ತಾನೇ ಕ್ರಿಸ್ಟಿನಾ ಜಾಂಟಾ ಎಂದು ಕುಣಿದಾಡುತ್ತಿದ್ದಳು, ಪಾಪ".
 
"ಅವಳಿಗೇನಾಯ್ತು?" ಭಯದಿಂದ ಕೂಗಾಡಿದ ಅಭಿ.
 
"ಫೋರ್ಜರಿ ತಪ್ಪನ್ನು ಆಪಾದಿಸಿ ಅವಳನ್ನು ಅಣುಕಿರಣಗಳ ರೂಮಿನಲ್ಲಿ ತಳ್ಳಿ ಲೇಸರ್ ಕಿರಣಗಳ ಮೂಲಕ ಕೊಂದುಹಾಕಿದರು."
 
"ಅಯ್ಯಯ್ಯೋ!"
 
"ಅಷ್ಟು ಮಾತ್ರವಲ್ಲ. ಜೀವದಿಂದ ಇರುವ ಮನುಷ್ಯರನ್ನೇ ಸತ್ತುಹೋದರೆಂದು ಹೇಳಿದವನನ್ನೂ ಸೆರೆಮನೆಗೆ ಕಳುಹಿಸಿಕೊಡಲಾಯಿತು. ಸುಷಾವನ್ನು ಕ್ರಿಸ್ತಿನಾ ಜಾಂಟಾವಾಗಿ ಮಾಡಿದ ದೇಶದ್ರೋಹಿಯನ್ನು ಹುಡುಕಾಡುತ್ತಿದ್ದಾರೆ."
 
ಅಭಿಯ ಮುಖದಲ್ಲಿ ರಕ್ತ ಚಲನೆ ನಿಂತು ಹೋಯಿತು.
 
 
"ಸರಿ, ಆ ರಾದ್ದಾಂತವೆಲ್ಲಾ ಹಾಗಿರಲಿ. ನನ್ನನ್ನು ಅಪ್ಪಿಕೊಳ್ಳಿ, ಮುತ್ತು ಮಳೆ ಸುರಿಯಿರಿ" ಎಂದು ಹೇಳುತ್ತಾ ಅವನನ್ನು ಬಿಗಿಯಾಗಿ ಅಪ್ಪಿಹಿಡಿದುಕೊಂಡಳು. ಅಭಿಗೆ ಉಸಿರಾಡದಂತಾಯಿತು. ಅವಳನ್ನು ಬಲವಂತವಾಗಿ ದೂರ ಸರಿಸಿದನು.
 
"ಏನಾಯ್ತು ನಿನಗೆ?" ಕಾಳಿದಾಸ, ಕಂಬನ್ ಜನಿಸಿದ ಊರಿನವರಲ್ಲವೆ. ಹೆಣ್ಣನ್ನು ನಿರಾಕರಿಸುತ್ತಿರೇನು? ನನ್ನನ್ನು ಮುಟ್ಟು. ಕಾಳಿದಾಸನನ್ನು ಕರೆ.
 
"ಮೊದಲು ನಾನು ಪೋಲಿಸರನ್ನು ಕರೆಯುತ್ತೇನೆ"
 
"ಏಕೆ?"
 
"ಶರಣಾಗತನಾಗುವುದಕ್ಕೆ"
 
ಸೌಜನ್ಯ: ಕನಸಿನ ಲೋಕದ ನನಸು ಬರಹಗಳು, ಪುದಿಯ ಪಾರ್ವೈ, ಮೇ 1995
 
 

Share this Story:

Follow Webdunia kannada