Webdunia - Bharat's app for daily news and videos

Install App

ಗಡಿಯಾರ ಮನುಷ್ಯರು

Webdunia
ಶನಿವಾರ, 22 ನವೆಂಬರ್ 2014 (16:24 IST)
ತಮಿಳುಮೂಲ: ಎಂ.ಜಿ.ಸುರೇಶ್
ಕನ್ನಡಕ್ಕೆ: ಡಾ. ವಿ. ಗೋಪಾಲಕೃಷ್ಣ
 
ಭಾಸ್ಕರನ್ ತೀವ್ರವಾಗಿ ಯೋಚನೆ ಮಾಡಿಯೇ ಆ ತೀರ್ಮಾನಕ್ಕೆ ಬಂದಿದ್ದ. ಬೇರೆ ದಾರಿಯೇ ಇಲ್ಲ. ಆ ಕೇಂದ್ರ ಸರಕಾರದ ಧನಸಹಾಯದ ಫೈಲನ್ನು ಹರಿದು ಹಾಕಿಬಿಡುವುದು ಒಂದು ಬುದ್ದಿವಂತಿಕೆಯ ಕೆಲಸ.
 
ಐದೂವರೆ ಗಂಟೆಗೆ  ಆಫೀಸು ಮುಗಿಯುತ್ತದೆ. ಪಕ್ಕದ ಸೀಟಿನ ಹೆಲನ್ ಪ್ರಮೀಳಾ ತನ್ನ ಅಗಾಧವಾದ ಶರೀರವನ್ನು ಹೊತ್ತುಕೊಂಡು ಹೊರಟುಬಿಡುತ್ತಾಳೆ. ಎದಿರು ಸೀಟು ಸುಬ್ರಹ್ಮಣ್ಯನೂ ಅಷ್ಟೇ. ಕಂದವೇಲುವೂ ಹಾಗೆಯೇ ಐದು ನಿಮಿಷ ಮುಂಚಿತವಾಗಿಯೇ ಹಾರಿ ಹೋಗಿ ಬಿಡುತ್ತಾರೆ. 
 
ಐದೂವರೆಯಾದ ಮರು ನಿಮಿಷವೇ ಸೆಕ್ಷನ್ ಪೂರ್ತಿಯಾಗಿ ಖಾಲಿಯಾಗಿ ಬಿಡುತ್ತದೆ. ಫೈಲನ್ನು ಡಿಸ್‌ಪೋಸ್(?) ಮಾಡುವುದೇ ಸರಿ.
ಗಡಿಯಾರದತ್ತ ನೋಡಿದ. ಗಂಟೆ ಐದು ಇಪ್ಪತ್ತೇಳು ಆಗಿತ್ತು. ಮೂರು ನಿಮಿಷ! ಆನಂತರ ಎಲ್ಲವೂ ಸರಿಯಾಗಿರುತ್ತದೆ. ಟೇಬಲಿನತ್ತ ನೋಡಿದ. ಕೇಂದ್ರ ಧನಸಹಾಯದ ಆ ಫೈಲು ಕಾದಿತ್ತು.
 
ಸೆಕ್ಷನ್ ಏನೋ ಗಲಿಬಿಲಿಯಾಗಿತ್ತು. ಇವನನ್ನು ವಿನಾ ಬೇರೆಲ್ಲರೂ 'ಬಿಸಿ'ಯಾಗಿ ಅವರವರ ಕೆಲಸದಲ್ಲಿ ನಿರತರಾಗಿದ್ದರು. ಇವನಿಗೆ ಯಾವುದರಲ್ಲಿಯೂ ಗಮನವಿರಲಿಲ್ಲ. ಐದೂವರೆ ಗಂಟೆಯಾಗಲು ಕಾಯುತ್ತಿದ್ದ.
ಗಾಳಿಯಲ್ಲಿ ಫೈಲಿನಲ್ಲಿದ್ದ ಕಾಗದಗಳು ಪಟಪಟವೆಂದುವು. ನೀಲಿ, ಕೆಂಪು. ಹಸಿರು ಮಸಿಗಳಲ್ಲಿ ಅಲ್ಲೆಲ್ಲಾ ಬರಹಗಳಿಂದ ಮತ್ತು ಸಹಿಗಳಿಂದ ಮುಚ್ಚಿಹೋಗಿದ್ದುವು.
ಪ್ರತಿಯೊಂದು ಪಂಚವಾರ್ಷಿಕ ಯೋಜನೆಯ ಸಮಯದಲ್ಲಿ ಇದ್ದಕ್ಕಿದ್ದಂತೆ ಮೊಳೆತುಕೊಳ್ಳುವ ಅಸಂಖ್ಯಾತ ಸರಕಾರಿ ಕಛೇರಿಗಳಲ್ಲಿ ಅದೂ ಒಂದು. ಅರ್ಧಾಣೆ ಸಂಬಳವಾದರೂ ಸರಕಾರದ ಕೆಲಸವೇ ಒಳ್ಳೆಯದು ಎಂಬ ಜನರ ನಂಬಿಕೆಯಂತೆ ಭಾಸ್ಕರನು ಒಬ್ಬನಾಗಿದ್ದ. ಬೇರೆಲ್ಲೂ ಕೆಲಸ ದೊರೆಯದ ಕಾರಣ ಈ ಉದ್ಯೋಗಕ್ಕೆ ಅಂಟಿಕೊಂಡವನು. ಒಂದು ಸರ್ಕಾರದ ಆಸ್ಪತ್ರೆಯನ್ನು ನಿರ್ವಹಿಸುವ ಆ ಕಛೇರಿಯಲ್ಲಿ ಇವನಂತೆಯೇ ಹಲವಾರು ಬಲಿಪಶುಗಳಾಗಿ ಕೆಲಸಮಾಡುತ್ತಿದ್ದರು. ಆ ಆಸ್ಪತ್ರೆಯಲ್ಲಿ ಕೆಲಸ ಮಾಡುವವರ ಸಂಬಳ,ಲೀವ್ ಮತ್ತಿತರ ಆಸ್ಪತ್ರೆಗೆ ಸಂಬಂಧಪಟ್ಟ ಉಪಕರಣಗಳನ್ನು ಖರೀದಿಸುವುದು ಮುಂತಾದ 'ಲೊಟ್ಟು ಲೊಸಗು' ಕೆಲಸಗಳೆಲ್ಲವೂ ಈ ಕಛೇರಿಯ ದಿನನಿತ್ಯದ ಜವಾಬ್ದಾರಿಯಲ್ಲಿ ಮುಖ್ಯವಾದವು. ಬೆಲೆಕೊಟ್ಟು ಖರೀದಿಸಿದ ಉಪಕರಣಗಳನ್ನು ಪರಿಶೀಲಿಸುವುದು, ರಿಪೇರಿ ಮಾಡಬೇಕಾದ ಸಾಮಾನುಗಳನ್ನು ಸಂಬಂಧಪಟ್ಟ ಕಂಪನಿಗಳಿಗೆ ಕಳುಹಿಸಿಕೊಡುವುದು, ಅಲ್ಲದೇ ಆಸ್ಪತ್ರೆಯ ಉಪಕರಣಗಳಲ್ಲದೇ ಅವು ದೊರೆಯುವ ಸ್ಥಳಗಳನ್ನು ಪರಾಮರ್ಶನೆ ಮಾಡುವುದು ಇವು ಇವನ ಕೆಲಸ. ಆ ಕಛೇರಿಯಲ್ಲಿ ಇವನು ಮಾಡುವ ಕೆಲಸವನ್ನು ಕಡೆಗಣಿಸಿ ನೋಡಲಾಗುತ್ತಿತ್ತು. ಏಕೆಂದರೆ ಈ ಕೆಲಸಗಳಲ್ಲಿ 'ಅಂಟು' ಕಾಣಲು ಸಾಧ್ಯವಿಲ್ಲ. ಅಂಟು ನೋಡಲು ಸಾಧ್ಯವಿಲ್ಲದ ಕೆಲಸಗಳು ಬಹುಮಟ್ಟಿಗೆ ಎಲ್ಲವೂ ಕೆಳಮಟ್ಟದವರಿಗಾಗಿ ಹೇಳಿ ಸೃಷ್ಟಿಸಲಾಗಿವೆ. ಕೆಲಸ ಮಾಡುವವರ ಟಿ.ಎ.ಬಿಲ್, ಲೋನ್, ಅಡ್ವಾನ್ಸ್ ಮುಂತಾದವುಗಳನ್ನಾದರೂ ಗಮನಿಸಿದರೆ ಪ್ರತಿಯೊಂದು ಬಿಲ್ಲಿಗೂ ಹತ್ತು, ಹದಿನೈದು ಪರ್‌ಸೆಂಟು 'ಅಂಟ'ನ್ನು ಕಾಣಲು ಸಾಧ್ಯವಿದೆ. ಆಸ್ಪತ್ರೆಯ ಉಪಕರಣಗಳನ್ನು ಖರೀದಿಸುವ ಕ್ಲರ್ಕ್ ಆಗಿದ್ದರೆ ಪ್ರತಿಯೊಂದು ಕಂಪನಿಯ ಮುಖಾಂತರ ಕನಿಷ್ಠವಾದ ಕಮಿಷನ್ನಾದರೂ ಹೊಡೆಯಬಹುದು. ಇವನ ಸೀಟಿನಲ್ಲಿ ಕಮಿಷನ್ ಹೊಡೆಯಲು ಅವಕಾಶವಿಲ್ಲ. ಇದು ಒಂದು ಕಡೆಯ ದರ್ಜೆ ಸೀಟು, ಹೀನಾಯವಾದದ್ದು.
 
ಕಛೇರಿಯಲ್ಲಿ ಯಾವನೊಬ್ಬ ಬಡಪಾಯಿ ಅಮಾಯಕ, ಗತಿಕೆಟ್ಟವನು ಸಿಕ್ಕಿದರೆ ಅವನ ತಲೆಗೆ ಈ ಸೀಟನ್ನು ಕಟ್ಟಲಾಗುವುದು. ಸದ್ಯಕ್ಕೆ ಈ ಗತಿಕೆಟ್ಟವನು ಭಾಸ್ಕರನ್.
 
ಭಾಸ್ಕರನ್ ಒಂದು ರೀತಿಯ ಮನುಷ್ಯ. ಲಂಚ ಅದು ಇದು ಎಂದು ಓಡಾಡದೇ ಇರುವಂತಹ ಕೇಸ್. ತಾನುಂಟು ತನ್ನು ಕೆಲಸವುಂಟು ಎಂದು ಇರುವವನು. ಆದ್ದರಿಂದಲೇ ಇತರರ ನವೀನ ದೃಷ್ಟಿಗೆ ಮತ್ತು ಗೇಲಿಗೆ ಗುರಿಯಾಗಿದ್ದಾನೆ. ತನ್ನ ಸಹೋದ್ಯೋಗಿಗಳು ಸಕಲ ಸೌಕರ್ಯದಿಂದ ಇದ್ದರೆ ತಾನು ಮಾತ್ರ ತನ್ನ ಸಂಬಳವನ್ನು ಮಾತ್ರ ನಂಬಿರುವುದರಿಂದ ಕಾಲಕಳೆಯದೆ ದಿಗ್ಭ್ರಮೆಗೊಂಡ ಮನುಷ್ಯನಾಗಿದ್ದಾನೆ. ಯಾವುದೇ ಲೋನ್ ಬಿಡದೆ ಅರ್ಜಿ ಹಾಕಿ, ಆಫೀಸಿನಲ್ಲಿಯೂ ಯಾರೊಬ್ಬರನ್ನೂ ಬಿಡದೇ ಎಲ್ಲರ ಬಳಿಯೂ ಸಾಲ ಪಡೆದು ಸಹೋದ್ಯೋಗಿಗಳಿಗೂ ಸಾಲಗಾರನಾಗಿದ್ದಾನೆ. ತಿಂಗಳ ಸಂಬಳದಲ್ಲಿ ಡಿಡಕ್ಷನ್ ಹೋಗಿ ಬರುವ ನಾನ್ನೂರು ಚಿಲ್ಲರೆಯಲ್ಲಿ ಇನ್ನೂರು ಚಿಲ್ಲರೆ ಬಾಡಿಗೆಗೆ, ಎಲೆಕ್ಟ್ರಿಕ್ ಬಿಲ್ ಮುಂತಾದವು ಕಳೆದು ಇತರ ಬಿಲ್ಲುಗಳಿಗಾಗಿ, ಸಾಲ ಪಡೆದೂ ಪಡೆದೂ ದಿವಾಳಿಯಾಗಿದ್ದಾನೆ. ದಿವಾಳಿಯೆದ್ದಿರುವ ಇವನ ಸಹಾಯಕ್ಕೆ ಅಥವಾ ಕುಟುಂಬದವರ ನೆರವಿಗೆ ಯಾವ ಕಂಪನಿಯೂ ಸರಕಾರವೂ ನೆರವು ನೀಡುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿದ್ದಾನೆ ಭಾಸ್ಕರನ್. ಬರುವ ಸಂಬಳ ಸಾಲದು, ಗಿಂಬಳ ತೆಗೆದುಕೊಳ್ಳಲು ಧೈರ್ಯವಿಲ್ಲ. ಕಷ್ಟಕ್ಕೆ ಸಿಲುಕಿದ ಸಮಯದಲ್ಲಿ ಅದು ಹೇಗೋ ಧೈರ್ಯ ಸ್ವಲ್ಪ ಮಟ್ಟಿಗೆ ಬರುತ್ತದೆ. ಅಂತಹ ಸಮಯದಲ್ಲಿ ಅಧಿಕಾರಿಗಳು ಒಳ್ಳೆಯ ಸೀಟಿನಲ್ಲಿ ಕುಳಿತುಕೊಳ್ಳಲು ಬಿಡುವುದಿಲ್ಲ. ಫಲವತ್ತಾದ ಸೀಟುಗಳಲ್ಲಿ ಸೀನಿಯರ್‌ಗಳು ಕುಳಿತುಕೊಂಡ ಬಳಿಕ ಉಳಿದ ಸೀಟುಗಳು ತಾನೆ ಇವನಂತಹ ಜೂನಿಯರ್‌ಗಳಿಗೆ ದೊರೆಯುವುದು?
 
ಹೀಗೆ ಅನೇಕ ವರ್ಷಗಳನ್ನು ಕಳೆದ ಮೇಲೆ ಭಾಸ್ಕರನ್ ಸಂಪಾದಿಸಿದ್ದು ಒಬ್ಬ ಸಿಡುಕು ಹೆಂಡತಿ ಮತ್ತು ಒಬ್ಬ ಹೆಣ್ಣುಮಗು. ಜೊತೆಗೆ ಬಣ್ಣ ಬದಲಾಯಿಸಿದ್ದ ಪ್ಯಾಂಟು, ಷರ್ಟುಗಳು. ಒಡವೆಗಳನ್ನು ಮಾರವಾಡಿಯಲ್ಲಿ ಅಡವಿರಿಸಿದ್ದ ಬಿಲ್‌ಗಳು ಮತ್ತು ಸುತ್ತಮುತ್ತಲಿನ ಸಾಲಗಳು, ಮುಂತಾದವು. ಸಂಬಳ ದೊರೆತ ಮೊದಲನೇ ದಿನವೇ ಸಾಲಕ್ಕೆ ಧಾರೆಯೆರೆದು ಮಾರನೆಯ ದಿನ ಬಸ್ ಚಾರ್ಜಿಗೆ ಚಿಲ್ಲರೆ ಹುಡುಕಾಡುವ ಈ ಅವಸ್ಥೆ ಇನ್ನೂ ಅದೆಷ್ಟು ದಿನಗಳವರೆಗೆ? ಭಾಸ್ಕರನು ಯೋಚಿಸಿದ. ಹಲವು ತಿಂಗಳ ಕಾಲ ಯೋಚಿಸಿದ ನಂತರ ಒಂದು ಯೋಚನೆ ಹೊಳೆಯಿತು.
 
ಆ ಯೋಚನೆಯಂತೆಯೇ ಆ ಫೈಲ್ ಒಂದನ್ನು ಚೂರುಚೂರು ಮಾಡಿದ್ದು. ಭಾಸ್ಕರನಿಗೆ ಈಗ ಬರುವ ಸಂಬಳ ಒಟ್ಟು ತಿಂಗಳಿಗೆ ಒಂಬೈನೂರು ಚಿಲ್ಲರೆ. ಅದರಲ್ಲಿ ಕಡಿತ ಹೋದನಂತರ ಕೈಗೆ ಬರುವುದು ನಾನ್ನೂರು ಚಿಲ್ಲರೆ. ಒಂದು ವೇಳೆ ಕೆಲಸದಲ್ಲಿ ಏನಾದರೂ ತಪ್ಪು ನಡೆದರೆ, ಅದಕ್ಕಾಗಿ ಸಸ್ಪೆಂಡ್ ಆದರೆ ಸಬ್‌ಸಿಸ್ಟೆನ್ಸ್ ಅಲೋಯನ್ಸ್ ಎಂಬ ಹೆಸರಿನಲ್ಲಿ ಸುಮಾರು ಅರ್ಧ ಸಂಬಳ ಎಂದರೆ ನಾನ್ನೂರು ಚಿಲ್ಲರೆ ದೊರೆಯುತ್ತದೆ. ಅಂದರೆ ಕೆಲಸಕ್ಕೆ ಹೋಗದೆಯೇ ಅದೇ ಸಂಬಳವನ್ನು ಪಡೆಯಬಹುದು. ಸಸ್ಪೆನ್‌ಷನ್ ಕನಿಷ್ಠ ಆರು ತಿಂಗಳಿಂದ ಒಂದು ವರ್ಷದವರೆಗೆ ಆಗಬಹುದು. ಅದಷ್ಟು ಕಾಲವೂ ಸಂಬಳವನ್ನು ಪಡೆಯುತ್ತಾ ಇರಬಹುದು. ಸಾಲವನ್ನು ಹಿಂತಿರುಗಿಸುವಂತೆ ಸಾಲಗಾರರು ಸಸ್ಪೆಂಡ್ ಸಮಯದಲ್ಲಿಯೂ ಪೀಡಿಸಬಹುದು. ಕೆಲವುದಿನಗಳಾದರೂ ಆಫೀಸಿನ ಪೀಡೆ ಮತ್ತು ಸಾಲಗಾರನ ಬಾಧೆ ತಪ್ಪಿಸಿಕೊಳ್ಳಬಹುದು. ದಿನನಿತ್ಯ ಆಫೀಸಿಗೆ ಹೋಗಿಬರಲು ಬಸ್‌ಛಾರ್ಜು,ಕಾಫಿ ಮುಂತಾದ ಖರ್ಚುಗಳು ಸಂಪೂರ್ಣವಾಗಿ ಉಳಿತಾಯವಾಗುತ್ತದೆ.
 
ಈ ಮೇಲೆ ಹೇಳಿದ ಆಲೋಚನೆಗನುಗುಣವಾಗಿ ಭಾಸ್ಕರನ್ ತಾನು ಸಸ್ಪೆಂಡ್ ಆಗುವುದು ಒಳ್ಳೆಯದೆಂದು ತೀರ್ಮಾನಿಸಿದ. ಒಂದು ಸಣ್ಣ ಮೆಮೋ ತೆಗೆದುಕೊಳ್ಳುವುದಕ್ಕೆ ಸಹ ಹೆದರುತ್ತಿದ್ದ, ಹಿಂದು ಮುಂದೆ ನೋಡಿ ಸಾಯುತ್ತಿದ್ದ ಸರಕಾರದ ಗುಮಾಸ್ತರಿಗೆ ಮಧ್ಯದಲ್ಲಿ ಸಸ್ಪೆಂಡ್ ಮಾಡಲಾರರೆಂದು ಹೇಗೋ ಅದು ಆಗುವ ಮಾತಲ್ಲವೆಂದು ತನ್ನ ದುರಾದೃಷ್ಟವನ್ನು ಶಪಿಸಿದ ಭಾಸ್ಕರನ್.
 
ಆದ್ದರಿಂದ ಏನಾದರೂ ಆಗಲಿ ಸಸ್ಪೆಂಡ್ ಆಗಲೇಬೇಕು. ಅದಕ್ಕೆ ಅಗತ್ಯವಿರುವ ಏನಾದರೂ ಒಂದು ತಪ್ಪನ್ನು ಮಾಡಲೇ ಬೇಕೆಂದು ನಿರ್ಧರಿಸಿದ. ಏನು ಮಾಡಬಹುದು? ಹೆಲೆನ್ ಪ್ರಮೀಳಾವಿನ ಕೈ ಹಿಡಿದು ಎಳೆದಾಡಿದರೆ ಹೇಗೆ? ಅಯ್ಯೋ ದೇವರೆ! ಕುಯ್ಯೋ ಮರ್ರೋ ಎಂದು ಕೂಗಾಡದೆ ಅವಳು ಒಪ್ಪಿಗೆ ಕೊಟ್ಟು ತೊಲಗಿದರೆ ಆಗ ಏನು ಮಾಡುವುದು? ಈಗಾಗಲೇ ಒಂದು ದೃಷ್ಟಿಯಲ್ಲಿ ನೆಟ್ಟ ದೃಷ್ಟಿಯಿಂದ ನೋಡುತ್ತಿರುತ್ತಾಳೆ! ಸರಿ ಹಾಗಾದರೆ ಬೇರೇನು ದಾರಿ? ಫೈಲ್ ಯಾವುದಾದರೂ ಮುಚ್ಚಿಟ್ಟರೆ! ಅದು ಇಲ್ಲದಂತೆಯೇ ಮಾಡಿದರೆ?ಯಾವುದಾದರೂ ಫೈಲನ್ನು ಹರಿದು ಹಾಕಿ ಆ ಫೈಲು ಕಾಣಲಿಲ್ಲವೆಂದು ಹೇಳಿಬಿಡಬಹುದಲ್ಲವೇ? ಅದೇ ಸರಿಯೆನಿಸುತ್ತದೆ. ಒಂದು ಫೈಲನ್ನು ಹರಿದುಹಾಕಬೇಕು. ಆನಂತರ ಫೈಲು ಕಾಣಲಿಲ್ಲವೆಂದು ಹೇಳಿ ಸಸ್ಪೆಂಡ್ ಆಗಬೇಕು. ಸಸ್ಪೆನ್‌ಷನ್ ಗಡುವು ಮುಗಿಯುವುದರೊಳಗಾಗಿ ಆಫೀಸಿನಲ್ಲಿ ಹೊಸದೊಂದು ಫೈಲನ್ನು ಸೃಷ್ಟಿಮಾಡುತ್ತಾರೆ. ಆಗ ಕೆಲಸಕ್ಕೆ ಪುನಃ ಹಾಜರಾಗಿ ಆ ಫೈಲಿನ ಕೆಲಸವನ್ನು ಮತ್ತೆ ಪ್ರಾರಂಭಿಸಬಹುದಲ್ಲವೇ? ಯಾವ ಫೈಲನ್ನು ಹರಿದುಹಾಕುವುದು? ಫೈಲನ್ನು ಹರಿದುಹಾಕಬೇಕೆಂಬ ಯೋಚನೆ ಬಂದ ಕೂಡಲೆ ಅವನ ಮನಸ್ಸಿಗೆ ಹೊಳೆದದ್ದು ಮೊದಲು ಕೇಂದ್ರ ಸರಕಾರದ ಸಹಾಯಧನ ಫೈಲ್. ಅದಕ್ಕೆ ಕಾರಣವಿತ್ತು. ಹರಿದು ಹಾಕಬೇಕಾದಂತಹ ಅರ್ಹತೆಯಿರುವ ಇತರ ಫೈಲುಗಳು ಸರಕಾರಕ್ಕೆ ಸಂಬಂಧಪಟ್ಟವಂತಹವು ಅನೇಕವಿದ್ದವು. ಅವೆಲ್ಲವುಗಳಿಗಿಂತಲೂ ಇದಕ್ಕೆ ಹೆಚ್ಚಿನ ಅರ್ಹತೆಯಿತ್ತು. ಅದೊಂದು ಸ್ವಾರಸ್ಯಕರ ವಿಷಯ.
 
ಕೆಲವು ವರ್ಷಗಳ ಹಿಂದೆ ಒಬ್ಬ ಪ್ರಮುಖರು ಒಂದು ಅಪಘಾತದಲ್ಲಿ ಸಿಕ್ಕಿಕೊಂಡರು. ಅಂತಹ ಪರಿಸ್ಥಿತಿಯಲ್ಲಿ ಈ ಆಸ್ಪತ್ರೆಯಲ್ಲಿ ಅವರು ಅಡ್ಮಿಟ್ ಆದರು. ಆಕ್ಸಿಡೆಂಟಿನ ಪರಿಣಾಮವಾಗಿ ಅವರಿಗೆ ಅದಾವುದೋ ಬಾಯಿ ತಿರುಗದ ಲ್ಯಾಟಿನ್ ಪದದ ಉಚ್ಚಾರಣೆಯ ಒಂದು ಖಾಯಿಲೆ ಅವರಿಗೆ ತಗುಲಿತ್ತು. ಖಾಸಗಿ ಆಸ್ಪತ್ರೆಯೊಂದರಲ್ಲಿ ಆ ಲ್ಯಾಟಿನ್ ವ್ಯಾಧಿಗೆ ಪರಮವೈರಿಯಾಗಿ ಜಪಾನಿನ ಹೆಸರಿನಲ್ಲಿ ಒಂದು ಎಲೆಕ್ಟ್ರಾನಿಕ್ ಯಂತ್ರವಿತ್ತು. ಈ ಆಸ್ಪತ್ರೆಯಲ್ಲಿರುವ ಯಂತ್ರಗಳನ್ನೇ ಸರಿಯಾಗಿ ಬಳಸುವುದಿಲ್ಲ. ಇಂತಹ ಸ್ಥಿತಿಯಲ್ಲಿ ಹೊಸದಾಗಿ ಕಂಡುಹಿಡಿದ ಜಪಾನ್ ಯಂತ್ರಕ್ಕೆ ಯೋಗವಾದರೂ ಎಲ್ಲಿ? ಆ ಯಂತ್ರ ಈ ಆಸ್ಪತ್ರೆಯಲ್ಲಿ ಇಲ್ಲವೆಂದು ತಿಳಿದ ಆ ಮುಖಂಡರು ಯಾವುದೋ ಬೇರೊಂದು ಕಾರಣ ಸೂಚಿಸಿ ಈ ಆಸ್ಪತ್ರೆಯಿಂದ ನುಸುಳಿಕೊಂಡು ಹೊರಟು ಹೋದರು. ತನ್ನ ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಮನಗಂಡ ಆ ಪ್ರಮುಖರು ತಾನು ಚೇತರಿಸಿಕೊಂಡನಂತರ ಈ ಆಸ್ಪತ್ರೆಗೆ ಅವರು ಈ ಎಲೆಕ್ಟ್ರಾನಿಕ್ ಯಂತ್ರವನ್ನು ಉಚಿತವಾಗಿ ಕೊಡಿಸುವುದಾಗಿ ತೀರ್ಮಾನಿಸಿದರು. ಆಸ್ಪತ್ರೆಗೆ ಯಂತ್ರವು ದೊರಕಿದಂತಾಗುತ್ತದೆ ಮತ್ತು ತನಗೆ ಜನರ ಮೆಚ್ಚುಗೆಯೂ ದೊರೆಯುತ್ತದೆ. ಅದಕ್ಕಿಂತ ಮಿಗಿಲಾಗಿ ವರಮಾನ ತೆರಿಗೆಯಲ್ಲಿ ಸಾಕಷ್ಟು ರಿಯಾಯ್ತಿಯೂ ದೊರೆಯುತ್ತದೆ ಎಂದು ಮುಂತಾಗಿ ಯೋಚಿಸಿದರು.
 
ಈ ಯೋಚನೆಯಂತೆಯೇ ಆ ಮುಖಂಡರು ಕೆಲವು ಲಕ್ಷ ರೂಪಾಯಿಗಳ ಬೆಲೆಬಾಳುವ ಒಂದು ಯಂತ್ರವನ್ನು ಖರೀದಿಸಿ ಆಸ್ಪತ್ರೆಗೆ ದಾನ ಮಾಡಿದರು. ಇದಾದನಂತರವೇ ವ್ಯವಹಾರ ಪ್ರಾರಂಭವಾದದ್ದು. ಯಂತ್ರ ತಯಾರಿಸುವ ಕಂಪನಿ ಹಣವನ್ನು ವಸೂಲುಮಾಡಿಕೊಂಡನಂತರ ಯಂತ್ರದ ಡೆಲಿವರಿಯನ್ನು ತೆಗೆದುಕೊಳ್ಳಬೇಕೆಂದು ಕೋರಿ ಆಸ್ಪತ್ರೆಗೆ ಬಹಳ ಹಿಂದೆಯೇ ಬರೆದಿತ್ತು. ವರ್ಷಗಳು ಕಳೆದರೂ ಸರಕಾರದ ಆಸ್ಪತ್ರೆ ಆ ಯಂತ್ರದ ಡೆಲಿವರಿಯನ್ನು ಪಡೆಯಲಿಲ್ಲ. ಈ ವಿಚಾರದಲ್ಲಿ ಕೆಲವು ಲಕ್ಷ ಬೆಲೆ ಬಾಳುವ ಯಂತ್ರವನ್ನು ಒಬ್ಬ ಖಾಸಗಿ ವ್ಯಕ್ತಿಯ ಮುಖಾಂತರ ದಾನವಾಗಿ ಪಡೆಯಬಹುದೇ ಎಂದು ಸೆಕ್ರೆಟೇರಿಯಟ್ಟನ್ನು ಸರಕಾರಿ ಆಸ್ಪತ್ರೆ ವಿವರವನ್ನು ಕೋರಿತು.
 
ಅದಕ್ಕೆ ಸರಿಯಾದ ಉತ್ತರ ಬರೆಯಲು ತಿಳಿಯದ ಸೆಕ್ರೆಟರಿಯೇಟ್ ಕೇಂದ್ರ ಸರಕಾರಕ್ಕೆ ಬರೆದು ತನ್ನ ಅಭಿಪ್ರಾಯವನ್ನು ತಿಳಿಸುವಂತೆ ಕೋರಿಕೆ ಸಲ್ಲಿಸಿತು. ಕೇಂದ್ರ ಸರಕಾರವಾದರೋ ಇತರ ರಾಜ್ಯ ಸರಕಾರಗಳಿಗೆ ಈ ವಿಚಾರವನ್ನು ಬರೆದು ಇಂತಹ ಸಂದರ್ಭದ ಉದಾಹರಣೆಗಳಿದ್ದರೆ ವಿವರಗಳನ್ನು ಕೂಡಲೇ ತಿಳಿಸಬೇಕೆಂದು ಬರೆಯಲಾಯಿತು. ಆ ಸರಕಾರ ಕೈಗೊಂಡ ಕ್ರಮವನ್ನು ಕುರಿತು ವಿವರವಾಗಿ ಬರೆಯಲು ಆ ಪತ್ರದಲ್ಲಿ ಬರೆಯಲಾಗಿತ್ತು. ಅವರಿಗೆ ಅಂತಹ ಉದಾಹರಣೆ ದೊರೆಯದೆ ಮೌನವಾಗಿದ್ದು ಬಿಟ್ಚರು. ಈ ಬಗ್ಗೆ ಒಂದು ಟಿಪ್ಪಣಿಯನ್ನಾದರೂ ಬರೆಯಲು ಕೋರಿ ಕೇಂದ್ರ ಸರಕಾರ ಮತ್ತೆ ಎಚ್ಚರಿಸಿತು. ಹೀಗಾಗಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳ ನಡುವೆ ಪತ್ರಗಳು ಹೋಗಿ ಬರುತ್ತಿದ್ದವು. ನೆನಪಿನ ಪತ್ರಗಳನ್ನು ಬರೆದದ್ದರಿಂದ ಒಂದೊಂದು ರಾಜ್ಯ ಸರಕಾರದಿಂದ ಕಾಲು ಕಿಲೋ ಭಾರದ ಬೆಲೆಬಾಳುವ ಫೈಲುಗಳು ಬರಲು ಮೊದಲಾಯಿತು. ಇಷ್ಟಾದರೂ ಇದಕ್ಕೆ ಯಾರೂ ಇನ್ನೂ ಪರಿಹಾರ ಕಂಡುಹಿಡಿಯಲಾಗಲಿಲ್ಲ.
 
ಈ ಮಧ್ಯೆ ವರ್ಷಗಳು ಕಳೆದ ಪರಿಣಾಮವಾಗಿ ಉಪಯೋಗವಿಲ್ಲದೆ ಆ ಯಂತ್ರವು ಕೆಟ್ಟು ಹೋಗಿ ರಿಪೇರಿಯಾಯ್ತು. ಇನ್ನು ಆ ಯಂತ್ರವನ್ನು ಡೆಲಿವರಿ ಪಡೆದರೂ ಉಪಯೋಗವಿಲ್ಲದೆ ಮೂಲೆಗೆ ಹಾಕಬೇಕಾದಂತಹ ಪರಿಸ್ಥಿತಿಯುಂಟಾಯಿತು. ಉಚಿತವಾಗಿ ದೊರೆತ ಈ ಯಂತ್ರವನ್ನು ಡೆಲಿವರಿ ತೆಗೆದುಕೊಳ್ಳಲು ಕೆಲವು ವರ್ಷಗಳವರೆಗೆ ತಡಮಾಡಿದ ಈ ಕೆಂಪುಪಟ್ಟಿ ಸರಕಾರದ ಅಧಿಕಾರದ ವರ್ಗ ಇನ್ನೂ ಹಣ ತೆತ್ತು ಯಂತ್ರವನ್ನು ಖರೀದಿಸುವುದೆಂದರೆ ಇನ್ನು ಏನೆಲ್ಲವನ್ನೂ ಅಹಿತಕರ ಕೆಲಸಗಳನ್ನು ಮಾಡುತ್ತದೆಯೋ? ಈ ಅಧಿಕಾರ ವರ್ಗವನ್ನು ಈ ಆಸ್ಪತ್ರೆಯನ್ನೂ ನಂಬಿ ಬಾಳುವ ಬಡಪಾಯಿ ಜನರ ಬಗೆಗೆ ಭಾಸ್ಕರನ್ ಪರಿತಾಪಪಟ್ಟ. ಯಾರೋ ಯಾರಿಗೋ ದಾನ ನೀಡಿದ ಯಂತ್ರಕ್ಕೂ ಕೇಂದ್ರ ಸರಕಾರಕ್ಕೂ ಯಾವ ಸಂಬಂಧ? ಅದು ಹೇಗೋ ಆ ಫೈಲನ್ನು ನೋಡಿದಾಗಲೆಲ್ಲಾ ಸರಕಾರದ ಯಂತ್ರದ ಮೂರ್ಖತನದ ಬಗೆಗೆ ಅವನಿಗೆ ಸಿಟ್ಟು ಬರುತ್ತದೆ. ಇದೀಗ ಆ ಫೈಲನ್ನು ಹರಿದು ನಾಶಪಡಿಸುವದರಲ್ಲಿ ಅವನಿಗೆ ಒಂದು ರೀತಿಯಲ್ಲಿ ಆತ್ಮ ತೃಪ್ತಿಯೂ ಅದರ ಮೇಲಿನ ಕೋಪಕ್ಕೆ ಬೇರೊಂದು ಕಾರಣವೂ ಸಿಗುತ್ತದೆ.
 
ಆಯಿತು. ಗಂಟೆ ಐದೂವರೆಯಾಯ್ತು. ನಿರೀಕ್ಷಿಸಿದಂತೆಯೇ ಕೆಲಸಗಳು ನಡೆದು ಮುಗಿದಿತ್ತು.
 
ಆಫೀಸಿನಲ್ಲಿ ಎಲ್ಲೆಲ್ಲೂ ಒಂದೇ ಮಾತು. ಅದರ ಮುಖ್ಯ ವಿಷಯ ಭಾಸ್ಕರನ್ ಎಂಬ ಕ್ಲಾರ್ಕ್ ಮುಖ್ಯವಾದ ಒಂದು ಫೈಲನ್ನು ಕಳೆದುಹಾಕಿದ್ದಾನಂತೆ. ಆಫೀಸಿನ ಎದುರಿನಲ್ಲಿರುವ ಮರದಡಿಯ ನೆರಳಿನಲ್ಲಿ, ಪೆಟ್ಟಿಗೆ ಅಂಗಡಿ, ಟೀ ಅಂಗಡಿ ಮುಂದೆಲ್ಲಾ ನಿಂತು ಸಹೋದ್ಯೋಗಿಗಳು ಗುಸುಗುಸು ಮಾತನಾಡಿದರು. ಪಾಪ ಅವನ ಕಷ್ಟದ ಕಾಲ. ಏನು ಶಿಕ್ಷೆ ದೊರೆಯುತ್ತದೆಯೇ? ಒಂದು ವೇಳೆ ಕಮಿಷನ್ನಿಗೆ ಆಶೆಪಟ್ಟು ಸೆಕ್ಷನ್ ಸೂಪರಿಂಟೆಂಡ್ ಫೈಲನ್ನು ಬಚ್ಚಿಟ್ಟಿದ್ದು ಭಾಸ್ಕರನ್ ಮೇಲೆ ದೂರು ಹೊರೆಸಿದ್ದಾರೆಯೋ ಏನೋ ಎಂದು ಮುಂತಾಗಿ ಚರ್ಚೆಗಳು ನಡೆದವು. ಇಂತಹ ವಿಷಯಗಳು ತಮಗೆ ವಿದ್ಯೆಯಂತೆ ಮುಂದಿನ ದಿನಗಳಲ್ಲಿ ತಮಗೆ ಇವೆಲ್ಲವೂ ಮಾರ್ಗದರ್ಶಿಯಾಯ್ತು ಎಂದು ಮುಂತಾಗಿ ಮಾತನಾಡಿಕೊಂಡ ಅವರಿಗೆ ಭಾಸ್ಕರನ ಉದ್ದೇಶ ತಿಳಿದಿರಲಿಲ್ಲ.
 
ಎಲ್ಲಾ ವಿಧಿಗಳು ನಡೆದು ಮುಗಿದುವು. ಭಾಸ್ಕರನನ್ನು ಫೈಲ್ ಕೇಳಲಾಗಿ ಅವನು ಕೊಡಲಿಲ್ಲ. ಮೆಮೋ ಕೊಡಲಾಯ್ತು, ವಿಚಾರಣೆ ನಡೆಯಿತು, ತಪ್ಪನ್ನು ಹೊರಿಸಿದ್ದಾಯ್ತು. ಈ ಮಧ್ಯೆ ಅವನು ಶಿಕ್ಷೆಗಾಗಿ ಎದುರು ನೋಡುತ್ತಿದ್ದಾನೆ.
 
ವಿಚಾರಣೆಯ ಸಮಯದಲ್ಲಿ "ದಯವಿಟ್ಟು ನನ್ನನ್ನು ಸಸ್ಪೆಂಡ್ ಮಾತ್ರ ಮಾಡಬೇಡಿ" ಎಂದು ಮೇಲಧಿಕಾರಿಗಳಲ್ಲಿ ಪದೇ ಪದೇ ಬೇಡಿಕೊಂಡ. ಸರಕಾರಿ ಕಛೇರಿಗಳಲ್ಲಿ ಸಾಧಾರಣ ಅಧಿಕಾರಿಗಳು ಯಾವುದನ್ನೂ ಬೇಡವೆಂದು ಮತ್ತೆ ಮತ್ತೆ ಅಂಗಲಾಚಿ ಕೇಳುತ್ತಾರೆಯೋ ಅದನ್ನೇ ಮಾಡಿ ಮುಗಿಸುತ್ತಾರೆ. ಯಾವ ಊರಿಗಾದರೂ ಟ್ರಾನ್ಸ್‌ಫರ್ ಬೇಕಾದರೆ ಟ್ರಾನ್ಸ್‌ಫರ್ ಬೇಡವೆಂದು ಅಂಗಲಾಚಬೇಕು. ವೇಲೂರಿಗೆ ಟ್ರಾನ್ಸ್‌ಫರ್ ಬೇಡ ಎಂದು ಮೊರೆಯಿಟ್ಟರೆ ವೇಲೂರಿಗೆ ಕೂಡಲೆ ಟ್ರಾನ್ಸ್‌ಫರ್ ದೊರೆಯುತ್ತದೆ. ಈ ಸೂತ್ರದ ಹಿನ್ನೆಲೆಯಲ್ಲಿಯೇ ಭಾಸ್ಕರನ್ ಸಸ್‌ಪೆನ್‌ಷನ್ ಕುರಿತು ಭಯಗೊಂಡವನಂತೆ ನಟಿಸಿದ್ದ.
 
 ಪ್ರತಿಯೊಂದು ನಿಮಿಷವೂ ಸಸ್‌ಪೆನ್‌ಷನ್ ಆರ್ಡರಿಗಾಗಿ ನಿರೀಕ್ಷಿಸುತ್ತಿದ್ದ ಭಾಸ್ಕರನ್ ಆತರಾತುರವಾಗಿ ತನ್ನ ಕೆಲಸಗಳನ್ನು ಮುಗಿಸಿಕೊಂಡಿದ್ದ. ಸಸ್‌ಪೆನ್‌ಷನ್ ನಂತರ ಕೆಲಸವನ್ನು ಅರ್ಧದಲ್ಲಿ ಬಿಟ್ಟು ಓಡಿಹೋದನೆಂಬ ಅಪವಾದ ಬೇಡವಲ್ಲವೇ?
 
"ಸಾರ್"
 
ಧ್ವನಿ ಕೇಳಿಸಿಕೊಂಡ ಭಾಸ್ಕರನ್. ಕತ್ತೆತ್ತಿ ನೋಡಿದ. ಅವನಿಗೆ ಸಂತೋಷವಾಗಿ ಬಾಯಿಮಾತು ನಿಂತುಹೋಗಿತ್ತು. ಕೈಯಲ್ಲಿ ಏನೋ ಆರ್ಡರ್ ಹಿಡಿದು ಪ್ಯೂನ್ ನಿಂತಿದ್ದಾನೆ. ಕೈಚಾಚಿ ಆರ್ಡರನ್ನು ತೆಗೆದುಕೊಂಡ ಭಾಸ್ಕರನ್ ಕುತೂಹಲದಿಂದ ಅದನ್ನು ಬಿಡಿಸಿ ನೋಡಿದ.
 
"ಮೇಲ್ಕಂಡ ತಪ್ಪು ಆಪಾದನೆ ರೀತ್ಯಾ ಸರಕಾರಿ ಅಧಿಕಾರಿಗಳ ಸನ್ನಡತೆಯ ವಿಧಿಯಂತೆ ಹಾಗೂ ಉಪವಿಧಿಗಳಿಗನುಸಾರ ಶ್ರೀ ಭಾಸ್ಕರನ್, ಜ್ಯೂನಿಯರ್ ಗುಮಾಸ್ತರ ಬಗೆಗೆ ಇದ್ದ ಆಪಾದನೆಗಳನ್ನು ಪರಿಶೀಲಿಸಿ ಈ ಕೆಳಕಂಡ ರೀತಿಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಅದರಂತೆ ಅವರ ಸಂಬಳದಲ್ಲಿ ನಾಲ್ಕು ಬಡ್ತಿಗಳನ್ನು ಅದರ ಮೊತ್ತವನ್ನು ಸಂಬಳದಲ್ಲಿ ಹಿಡಿದುಕೊಳ್ಳಲಾಗುತ್ತದೆ."
 
ಇನ್ನು ಮುಂದೆ ಅವನಿಂದ ಓದಲಾಗಲಿಲ್ಲ. ದೇಹವೆಲ್ಲವೂ ಬೆವರಿತು.
ಆಹಾ! ದೇವರೆ! ಸಸ್ಪೆಂಡ್ ಮಾಡುವುದಕ್ಕೆ ಬದಲಾಗಿ ಇನ್‌ಕ್ರಿಮೆಂಟ್ ಕಡಿಮೆ ಮಾಡಿದಿರಲ್ಲಾ! ಇನ್‌ಕ್ರಿಮೆಂಟ್ ಸೇರಿ ಸಂಬಳ ಪಡೆದರೂ ಸಾಲುತ್ತಿರಲಿಲ್ಲ. ಅದೂ ಕಟ್ ಆಯ್ತು ಎಂದರೆ.
 
ಮತ್ತೆ ಆರ್ಡರನ್ನು ಓದಲು ಪ್ರಯತ್ನಿಸಿದ. ಅದನ್ನು ಓದುವ ಮೊದಲೇ ಅವನು ದಿಗ್ಭ್ರಾಂತನಾಗಿ ಸತ್ತು ಹೋಗಿದ್ದ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments