ಬೆಂಗಳೂರು: ಆರ್ ಟಿಐ ಅಥವಾ ಮಾಹಿತಿ ಹಕ್ಕು ಕಾಯಿದೆ 2005 ರ ಪ್ರಕಾರ ಸರ್ಕಾರದ ದಾಖಲೆಗಳ ಬಗ್ಗೆ ನಾವು ಮಾಹಿತಿ ಪಡೆಯಲು ಹಕ್ಕುದಾರರಾಗಿರುತ್ತೇವೆ. ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ, ಶುಲ್ಕವೆಷ್ಟು ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.
2005 ರ ಅಕ್ಟೋಬರ್ ನಲ್ಲಿ ಕೇಂದ್ರ ಸರ್ಕಾರ ಮಾಹಿತಿ ಹಕ್ಕು ಕಾಯಿದೆ ಜಾರಿಗೆ ತಂದಿತ್ತು. ಸರ್ಕಾರಿ ಸಂಸ್ಥೆಗಳಲ್ಲಿ ಪಾರದರ್ಶಕತೆ ತರುವುದು ಈ ಕಾಯಿದೆಯ ಉದ್ದೇಶವಾಗಿದೆ. ಇದರನ್ವಯ ಸಾಮಾನ್ಯ ನಾಗರಿಕರು ಸರ್ಕಾರದ ಯೋಜನೆ ಯಾವ ಹಂತ ತಲುಪಿದೆ, ಸರ್ಕಾರದ ಖರ್ಚು ವೆಚ್ಚ, ಯೋಜನೆಗಳ ವಿವರ ಇತ್ಯಾದಿಗಳನ್ನು ಅರ್ಜಿ ಸಲ್ಲಿಸಿ ವಿವರ ಪಡೆಯಬಹುದಾಗಿದೆ.
ಯಾವೆಲ್ಲಾ ಮಾಹಿತಿಗಳು ಸಿಗುತ್ತದೆ?
ಸರ್ಕಾರದಿಂದ ಮಾಹಿತ ಅಥವಾ ಕಾಮಗಾರಿಗೆ ಸಂಬಂಧಿಸಿದ ಖರ್ಚು ವೆಚ್ಚ ಇತ್ಯಾದಿ ವಿವರಗಳು, ಸರ್ಕಾರ ಹೊರಡಿಸಿದ ಜಿಒಗಳ ನಕಲು ಪ್ರತಿ ಕೇಳಬಹುದು, ಸರ್ಕಾರಿ ದಾಖಲೆಗಳ ಪರಿಶೀಲನೆಗೆ ಅವಕಾಶವಿದೆ, ರಸ್ತೆ, ಸೇತುವೆ, ಕಟ್ಟಡ ಸೇರಿದಂತೆ ಯಾವುದೇ ಕಾಮಗಾರಿಗಳ ನಿರ್ಮಾಣ, ಅದರ ಖರ್ಚು ವೆಚ್ಚಗಳ ವಿವರಗಳನ್ನು ಈ ಹಕ್ಕಿನಡಿ ಕೇಳಬಹುದಾಗಿದೆ. ಅರ್ಜಿ ಸಲ್ಲಿಸಿದ 30 ದಿನಗಳೊಳಗಾಗಿ ನಿಮಗೆ ಮಾಹಿತಿ ನೀಡಬೇಕಾಗುತ್ತದೆ. ಆದರೆ ದೇಶದ ಭದ್ರತೆ, ಗೌಪ್ಯತೆ ಕುರಿತಾದ ಕೆಲವೊಂದು ವಿಚಾರಗಳ ಬಗ್ಗೆ ಮಾಹಿತಿ ಕೇಳುವಂತಿಲ್ಲ.
ಆರ್ ಟಿಐ ಅಡಿ ಅರ್ಜಿ ಸಲ್ಲಿಸಲು ಪ್ರತೀ ಅರ್ಜಿಗೆ 10 ರೂ. ಶುಲ್ಕ ನೀಡಬೇಕು. ರಾಜ್ಯ ಅಥವಾ ಕೇಂದ್ರ ಸರ್ಕಾರದ ವಿವರಗಳಿಗೆ ಪ್ರತೀ ಪುಟಕ್ಕೆ 2 ರೂ.ನಂತೆ ಶುಲ್ಕ ಪಾವತಿಸಬೇಕು.
ಎಲ್ಲಿ ಅರ್ಜಿ ಸಲ್ಲಿಸಬೇಕು?
ಆರ್ ಟಿಐ ಅರ್ಜಿಯನ್ನು ಅಂಚೆ ಕಚೇರಿಯಲ್ಲಿ ಪಡೆದು ಆರ್ ಟಿಐ ಕೌಂಟರ್ ನಲ್ಲಿ ನೀಡಬಹುದು ಅಥವಾ ಆನ್ ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು.
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು https://rtionline.gov.in ಎಂಬ ವಿಳಾಸಕ್ಕೆ ಲಾಗಿನ್ ಆಗಬೇಕು.