Select Your Language

Notifications

webdunia
webdunia
webdunia
webdunia

ಯಾರಿಗೆ ಬಂತು ಸ್ವಾತಂತ್ರ್ಯ; ರಾಷ್ಟ್ರ, ರಾಜ್ಯದ ಹಿತಕಾಪಾಡುವವರು ಯಾರು?

ಯಾರಿಗೆ ಬಂತು ಸ್ವಾತಂತ್ರ್ಯ; ರಾಷ್ಟ್ರ, ರಾಜ್ಯದ ಹಿತಕಾಪಾಡುವವರು ಯಾರು?
ನಾಗೇಂದ್ರ ತ್ರಾಸಿ
WD
ಭಾರತಕ್ಕೆ ಸ್ವಾತಂತ್ರ್ಯ ದೊರೆತು 65 ವರ್ಷಗಳು ಕಳೆದಿವೆ. ಆದರೆ ನಮ್ಮ ಬೃಹತ್ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಲವು ಸಮಸ್ಯೆಗಳು ಪೆಡಂಭೂತವಾಗಿ ಬೆಳೆದಿದೆ. ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಭಾರತ ಸೂಪರ್ ಪವರ್ ಆಗಿದೆ. ಜನಸಾಮಾನ್ಯರ, ರೈತರ ಕಣ್ಣೀರು ಒರೆಸುವಲ್ಲಿ ಸಫಲರಾಗಿದ್ದೇವೆ ಎಂದು ಬೀಗುವಂತಿಲ್ಲ. ಕಳೆದ ಆರೂವರೆ ದಶಕಗಳಲ್ಲಿನ ಸಿಂಹಾವಲೋಕನ ಮಾಡಿದಲ್ಲಿ ನಾವಿನ್ನೂ ಕುಂಟುತ್ತಾ ಸಾಗುತ್ತಿರುವುದು ಕಣ್ಣಿಗೆ ರಾಚುತ್ತದೆ.

ಭ್ರಷ್ಟಾಚಾರ ಕ್ಯಾನ್ಸರ್‌ನಂತಾಗಿದೆ. ರೈತ ದೇಶದ ಬೆನ್ನುಲುಬು ಅಂತ ಹೇಳುತ್ತಲೇ ವೋಟು ಗಿಟ್ಟಿಸಿಕೊಂಡರೆ ಹೊರತು ಅನ್ನದಾತರ ಕಷ್ಟಗಳನ್ನು ಕೇಳುವವರು ಯಾರು ಎಂಬಂತಾಗಿದೆ. ವಿದ್ಯುತ್ ಸಮಸ್ಯೆ, ಗಡಿ ವಿವಾದ, ಭಯೋತ್ಪಾದನೆ, ನಕ್ಸಲಿಸಂ...ಹೀಗೆ ಪಟ್ಟಿ ಬೆಳೆಯುತ್ತಲೇ ಇದೆ. ಪ್ರತಿಯೊಂದು ರಾಜಕೀಯ ಪಕ್ಷಗಳು ವೋಟ್ ಬ್ಯಾಂಕ್ ರಾಜಕಾರಣದಲ್ಲೇ ಮುಂದುವರಿಯುತ್ತಿವೆ ವಿನಃ ಜನಪರ ಕಾಳಜಿಯಾಗಲಿ, ದೇಶಪ್ರೇಮ ಲವಲೇಶವೂ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.

ಬಣ ರಾಜಕೀಯ, ಜಾತಿ ರಾಜಕೀಯ, ಓಲೈಕೆ ರಾಜಕಾರಣ, ಕುರ್ಚಿ ರಾಜಕಾರಣಗಳೇ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ತುಂಬಿ ತುಳುಕುತ್ತಿವೆ. ಯಾವ ರಾಜಕೀಯ ಪಕ್ಷಗಳಿಗೂ ಸಮಸ್ಯೆಯನ್ನು ಪರಿಹರಿಸುವ ಇಚ್ಛಾಶಕ್ತಿ ಇಲ್ಲ ಎಂಬುದು ಹಲವು ವಿಧದಲ್ಲಿ ಸಾಬೀತಾಗಿದೆ. ಅದರಲ್ಲಿಯೂ ಮತದಾರರಾದ ನಾವೂ ಕೂಡ ತಪ್ಪಿತಸ್ಥರೇ ಆಗಿದ್ದೇವೆ. ಹಣ ಪಡೆದು ಮತ ಚಲಾಯಿಸುವ ಮತದಾರರು, ಪಡಪೋಶಿಯನ್ನ ಪ್ರತಿನಿಧಿಯನ್ನಾಗಿ ಆರಿಸುವ ನಾವು...ಇಂತಹವರಿಂದ ಏನನ್ನ ನಿರೀಕ್ಷಿಸಲು ಸಾಧ್ಯ?

ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯ ನಂತರ ಈ ಭರತ ಭೂಮಿಯಲ್ಲಿ ಹಲವು ಚಳವಳಿಗಳು ನಡೆದಿವೆ. ಅವುಗಳು ಯಶಸ್ವಿಯೂ ಆಗಿವೆ. ಆದರೆ ದೇಶದಲ್ಲಿ ಗ್ರಾಮ ಪಂಚಾಯ್ತಿಯಿಂದ ಹಿಡಿದು ಕೇಂದ್ರದವರೆಗೆ ವ್ಯಾಪಿಸಿರುವ ಲಂಚಾವತಾರದ ವಿರುದ್ಧ ಜನಸಾಮಾನ್ಯರಿಂದ ಹಿಡಿದು ಪ್ರತಿಯೊಬ್ಬರೊಳಗೂ ಒಂದು ಅಸಮಾಧಾನದ ಕಿಡಿ ಇದ್ದಿತ್ತು. ಅದಕ್ಕೆ ಪೂರಕ ಎಂಬಂತೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಮತ್ತು ತಂಡ ಹೋರಾಟಕ್ಕಿಳಿಯುವ ಮೂಲಕ ಭರವಸೆಯ ಕಿರಣ ಮೂಡಿಸಿತ್ತು. ಆದರೆ ಅಣ್ಣಾ ತಂಡದೊಳಗಿನ ಭಿನ್ನಮತ, ಸರ್ವಾಧಿಕಾರಿ ಧೋರಣೆಯಿಂದಾಗಿ ಕೂಸು ಹುಟ್ಟುವ ಮುನ್ನವೇ ಬಲವಂತದ ಗರ್ಭಪಾತ ಎಂಬಂತೆ ಅಣ್ಣಾ ಹೋರಾಟ ಅರ್ಧಕ್ಕೆ ನಿಂತುಬಿಟ್ಟಿದೆ. ಇದೀಗ ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧ ಯೋಗ ಗುರು ಬಾಬಾ ರಾಮದೇವ್ ಅಖಾಡಕ್ಕೆ ಇಳಿದಿದ್ದಾರೆ. ಅಣ್ಣಾ ಹಜಾರೆ ಸೇರಿದಂತೆ ಅಣ್ಣಾ ತಂಡದ ಸದಸ್ಯರ ವಿರುದ್ಧ(ಹೆಗ್ಡೆಯನ್ನು ಹೊರತು ಪಡಿಸಿ) ಒಬ್ಬೊಬ್ಬರ ಮೇಲೂ ಒಂದೊಂದು ತೆರನಾದ ಆರೋಪ ಹೊರಿಸಲಾಗಿ ಅವರನ್ನೂ ತಪ್ಪಿತಸ್ಥರನ್ನಾಗಿ ಮಾಡುವ ಹುನ್ನಾರ ನಡೆದಿದೆ. ಇದೀಗ ಬಾಬಾ ಸರದಿ, ಬಾಬಾ ವಿರುದ್ಧವೂ ಸಾಕಷ್ಟು ಆರೋಪಗಳಿವೆ. ಆದರೆ ಆಡಳಿತಾರೂಢ ಪಕ್ಷವಾಗಲಿ, ನಮ್ಮನ್ನಾಳುವ ಜನಪ್ರತಿನಿಧಿಗಳು ಜಾಣ ಕಿವುಡರಂತೆ ವರ್ತಿಸುತ್ತಿದ್ದಾರೆ.

ಭ್ರಷ್ಟಾಚಾರ ಸೇರಿದಂತೆ ಹಲವು ವಿಧದ ಚಳವಳಿಗಳನ್ನು ವ್ಯವಸ್ಥಿತವಾಗಿಯೇ ಹತ್ತಿಕ್ಕಲಾಗುತ್ತಿದೆ. ಈ ನೆಲದಲ್ಲಿ ಬೃಹತ್ ಚಳವಳಿಯ ಮೂಲಕ ಏನನ್ನಾದರೂ ಸಾಧಿಸುತ್ತೇವೆ ಎಂಬುದು ಮೂರ್ಖತನವಾದೀತು. ಯಾಕೆಂದರೆ ಅಂತಹ ವ್ಯಕ್ತಿ ಮತ್ತು ಶಕ್ತಿ ಯಾರಲ್ಲಿದೆ ಎಂಬುದು ಪ್ರಶ್ನೆ? ಈಗಾಗಲೇ ಅಣ್ಣಾ ತಂಡ ಮತ್ತು ಬಾಬಾ ತಂಡದ ನಡುವೆಯೇ ಸ್ಪರ್ಧೆ ಏರ್ಪಟ್ಟಿದೆ! ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಪ್ರಭು. ಹಾಗಾಗಿ ಮತದಾರರು ಮತ್ತಷ್ಟು ಪ್ರಜ್ಞಾವಂತರಾಗಬೇಕು. ಆ ನಿಟ್ಟಿನಲ್ಲಿ ಸಮಸ್ಯೆಗಳ ನಿವಾರಣೆ ಮತ್ತು ರಾಷ್ಟ್ರದ, ರಾಜ್ಯದ ಹಿತಕಾಪಾಡುವ ಜನಪ್ರತಿನಿಧಿಗಳ ಆಯ್ಕೆಯ ಬಗ್ಗೆ ಗಂಭೀರ ಚಿಂತನೆ ನಡೆಸಲು ಇದು ಸಕಾಲವಾಗಿದೆ.

Share this Story:

Follow Webdunia kannada