Select Your Language

Notifications

webdunia
webdunia
webdunia
webdunia

ಮನುಷ್ಯನಿಗೆ ಶ್ರೀಮಂತಿಕೆಯ ಅಗತ್ಯವಿದೆಯಾ....?

ಮನುಷ್ಯನಿಗೆ ಶ್ರೀಮಂತಿಕೆಯ ಅಗತ್ಯವಿದೆಯಾ....?
ನಾಗೇಂದ್ರ ತ್ರಾಸಿ

ND
ಜೀವನದಲ್ಲಿ ಮನುಷ್ಯನಿಗೆ ಶ್ರೀಮಂತಿಕೆಯ ಅಗತ್ಯವಿದೆಯೇ? ಬಡವರು, ಮಧ್ಯಮ ವರ್ಗದವರಿಗೆ ಇಂತಹದ್ದೊಂದು ಭಾವನೆ ಆಗಾಗಾ ಕಾಡುತ್ತಿರುತ್ತದೆ. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಆಸೆ ಇದ್ದೇ ಇರುತ್ತದೆ. ಸಂಸಾರ ಎಂದ ಮೇಲೆ ಮನುಷ್ಯನಾದವನಿಗೆ ದಿನನಿತ್ಯದ ವಸ್ತುಗಳ ಅಗತ್ಯವಿರುವಂತೆ, ಟಿವಿ, ಫೋನ್, ಮೊಬೈಲ್, ವಾಹನ, ಚಿನ್ನ, ಬೆಳ್ಳಿ, ಸೋಫಾ, ಡೈನಿಂಗ್ ಟೇಬಲ್ ಹೀಗೆ...ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಅವೆಲ್ಲದರ ನಡುವೆ ಮಾರುಕಟ್ಟೆಯಲ್ಲಿ ಹೊಸ ನಮೂನೆಯ ವಸ್ತುಗಳ ಬಂದಾಗ ಮನೆಯಲ್ಲಿದ್ದ ವಸ್ತುಗಳು ಹಳೆಯದಾಯಿತು ಎಂದು ಭಾವಿಸುತ್ತೇವೆ. ಆಗ ಮತ್ತೆ ಹಳೆಯ ವಸ್ತುಗಳ ಜಾಗದಲ್ಲಿ ಹೊಸ ವಸ್ತುಗಳು ಬಂದು ಸೇರುತ್ತವೆ. ಇದರ ಹೊರತಾಗಿಯೂ ಇಂದು ವ್ಯಾಪಾರೀಕರಣ, ಕೊಳ್ಳುಬಾಕತನದ ಪ್ರಭಾವ ಹೆಚ್ಚಿದ ಪ್ರತೀಕ ಎಂಬಂತೆ ವಾಸ್ತು ದೋಷ ಕಾಲಿಟ್ಟಿದೆ. ಇದರಿಂದಾಗಿ ಕಟ್ಟಿದ ಹೊಸ ಮನೆಯ ವಾಸ್ತು ದೋಷ ನಿವಾರಣೆಗಾಗಿ ನಿವೇಶನದ ಪುನರ್ ನವೀಕರಣ. ಇಂಟಿರಿಯರ್ ಡೆಕೋರೇಷನ್ ಕೂಡ ಸಾಕಷ್ಟು ಹೆಚ್ಚು ಪ್ರಭಾವ ಬೀರಿದೆ ಎಂದರೆ ತಪ್ಪಾಗಲಾರದು. ಮಲಗುವ ಕೋಣೆಗೊಂದು ಬಣ್ಣ, ಅದಕ್ಕೆ ಹೊಂದಿಕೆಯಾಗುವ ಸೋಫಾ, ಬೆಡ್, ವಿದ್ಯುತ್ ದೀಪ, ಹಾಲ್, ಡೈನಿಂಗ್ ಹಾಲ್, ಅಡುಗೆ ಮನೆ ಎಲ್ಲವೂ ಬಣ್ಣ, ಬಣ್ಣಗಳಲ್ಲಿ ಕಂಗೊಳಿಸಬೇಕೆಂಬ ಇರಾದೆಯೂ ಹೆಚ್ಚುತ್ತಿದೆ.

ಇವೆಲ್ಲ ಸರಿ...ಮನೆ ಎಂದ ಮೇಲೆ ಅವೆಲ್ಲ ಬೇಕಪ್ಪಾ...ಒಟ್ಟಾರೆ ಅಬ್ಬೇಪಾರಿ ತರಹ ಬದುಕಲು ಸಾಧ್ಯವೇ ಎಂಬ ಕುಹಕದ ಮಾತುಗಳೂ ಕೇಳಿಬರುತ್ತದೆ. ಹೋಗಲಿ ಅವೆಲ್ಲ ಕಿರಿಕಿರಿ ಇಲ್ಲ ಅಂದರೂ ಸಹ. ನೋಡಿ ನಮ್ಮ ಅಕ್ಕ-ಭಾವನ ಮನೆ ಹೇಗಿದೆ? ಅಬ್ಬಾ ಎಷ್ಟು ದೊಡ್ಡ ಬಂಗ್ಲೆ ...ಕಾರಿದೆ...ಪ್ಲಾಸ್ಮಾ ಟಿವಿ ಇದೆ, ಕಂಪ್ಯೂಟರ್ ಇದೆ, ಮನೆಯಲ್ಲಿ ಕೈಗೊಂದು-ಕಾಲಿಗೊಂದು ಆಳಿದ್ದಾರೆ. ತಂಗಿ ಮನೆಯೊ, ಅಣ್ಣ, ಅತ್ತಿಗೆ, ಮಾವ ಹೀಗೆ....ಒಬ್ಬರು ಮತ್ತೊಬ್ಬರತ್ತ ಬೆರಳು ತೋರಿಸಿ ನಮ್ಮನ್ನು ನಾವೇ ಹಂಗಿಸಿಕೊಳ್ಳುವ ಅಥವಾ ಹಂಗಿಸುವ ಪರಿಪಾಠಕ್ಕೇನೂ ಕೊರತೆ ಇಲ್ಲ. ಇದೇನು ನಮ್ಮ ಕರ್ಮ ಜೀವಮಾನ ಇಡೀ ಇದೇ ನಾಯಿಪಾಡು ಆಯ್ತು. ನೆಟ್ಟಗೆ ಒಂದು ಗ್ಯಾಸ್ ಕನೆಕ್ಷನ್ ಇಲ್ಲ, ಟಿವಿ ಇಲ್ಲ, ಕಾರಿಲ್ಲ, ಬೈಕ್ ಇಲ್ಲಾ, ಚೆಂದದ ಮನೆ ಇಲ್ಲ, ಒಳ್ಳೆ ಅಂಗಿ, ಸೀರೆ...ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಯಾಕೆಂದರೆ ಮನುಷ್ಯನ 'ಬೇಕು' ಎಂಬ ಆಸೆಗಳಿಗೆ ಮಿತಿಯೇ ಇಲ್ಲ.

ಸಮಾಜದಲ್ಲಿ ಶ್ರೀಮಂತರಿಗೆ ಮಾತ್ರ ಗೌರವ, ಪ್ರತಿಷ್ಠೆ, ಹೆಸರು, ಮನ್ನಣೆ ದೊರೆಯುವುದೇ? ಜನಸಾಮಾನ್ಯರಿಗೆ ಗೌರವ, ಪ್ರತಿಷ್ಠೆ ಎಲ್ಲಿ ದೊರೆಯುತ್ತೆ ಸ್ವಾಮಿ? ಪೊಲೀಸ್ ಠಾಣೆಗೆ ಹರಕು-ಮುರುಕು ಅಂಗಿ-ಪಂಚೆ ಉಟ್ಟು ಹೋದ್ರೆ ನಮ್ಮನ್ನು ಎಷ್ಟು ಕೀಳಾಗಿ ಕಾಣ್ತಾರೆ. ಅದೇ ಠಾಕು-ಠೀಕಾಗಿ ಹೋಗಿ, ಕುರ್ಚಿ ತೋರಿಸಿ ಕುತ್ಕೂಳ್ಳಿ ಸರ್ ಎಂದು ಉಪಚರಿಸಿ ಟೀ ಕೊಟ್ಟು ಕಳುಹಿಸುತ್ತಾರೆ. ಅದು ಪೊಲೀಸ್ ಠಾಣೆಯೇ ಆಗಬೇಕೆಂದಿಲ್ಲ, ಯಾವುದೇ ಕಚೇರಿ ಇರಲಿ ನಮ್ಮಂತಹ ಬಡವರಿಗೆ ಯಾರು ಮರ್ಯಾದೆ ಕೊಡ್ತಾರೆ ಸ್ವಾಮಿ...ಎಂಬಂತಹ ಅಸಮಾಧಾನದ ಮಾತುಗಳು ಹೆಚ್ಚಾಗಿಯೇ ಕೇಳುತ್ತೇವೆ. ಇಲ್ಲವೇ ಒಂದಲ್ಲ ಒಂದು ಸಂದರ್ಭದಲ್ಲಿ ನಾವೇ ಆಗಲಿ, ನಮ್ಮ ಮನೆಯವರೇ ಇಂತಹದ್ದೊಂದು ಅವಮಾನದ ಪ್ರಸಂಗವನ್ನು ಎದುರಿಸಿರುತ್ತೇವೆ. ಹಾಗಂತ ಬಡವರಿಗೆ, ಮಧ್ಯಮ ವರ್ಗದವರಿಗೆ ಕವಡೆ ಕಾಸಿನ ಕಿಮ್ಮತ್ತೇ ಇಲ್ಲ ಅಂತ ನಾನು ವಾದಿಸುತ್ತಿಲ್ಲ. ಸರ್ವೆ ಸಾಮಾನ್ಯವಾಗಿ ಸಮಾಜದಲ್ಲಿ ಅಂತಹದ್ದೊಂದು ಬೆಳವಣಿಗೆ ಚಾಲ್ತಿಯಲ್ಲಿದೆ. ಆಯ್ಯೋ ನಾವು ಬಡವರು, ಮಧ್ಯಮ ವರ್ಗಕ್ಕೆ ಬೆಲೆಯೇ ಸಿಕ್ಕುತ್ತಿಲ್ಲ ಅಂತ ಯಾರೂ ಕೂಗಿ ಹೇಳದಿದ್ದರೂ ಸಹ ಸಮಾಜದಲ್ಲಿನ ಆಗು-ಹೋಗುಗಳ ಬಗೆಗಿನ ಚಿತ್ರಣ ಈ ತಾರತಮ್ಯವನ್ನು ಸಾರಿ ಹೇಳುತ್ತವೆ.

ಹಾಗಾದ್ರೆ ಮನುಷ್ಯನಿಗೆ ಶ್ರೀಮಂತಿಕೆ ಅಗತ್ಯವೇ ? ಆ ಕಾರಣಕ್ಕಾಗಿಯೇ ಇಂದು ಮಧ್ಯಮ ವರ್ಗದ ಜನ ಶ್ರೀಮಂತಿಕೆಯ ಮುಖವಾಡ ಧರಿಸಿ ಬದುಕನ್ನು ಸಾಗಿಸುತ್ತಿದ್ದಾರೆಯೇ? ಹೌದು, ಯಾಕೆಂದರೆ ಹಾಸಿಗೆ ಇದ್ದಷ್ಟು ಕಾಲು ಚಾಚು ಎಂದು ನಮ್ಮ ಹಿರೀಕರ ಗಾದೆ ಮಾತು ಸುಳ್ಳಲ್ಲ. ಆದರೆ ಏನ್ಮಾಡೋದು ಪೈಪೋಟಿ, ಅಹಂ, ಪ್ರತಿಷ್ಠೆಗಳು ಹೆಚ್ಚಾದಾಗ ಶ್ರೀಮಂತಿಕೆಯ ಬೆನ್ನು ಹತ್ತುವುದು ಕೂಡ ಆಧುನಿಕ ಸಮಾಜದ ಫ್ಯಾಶನ್ ಆಗಿಬಿಟ್ಟಿದೆ. ಅದಕ್ಕಾಗಿಯೇ ಸಾಲ ಮಾಡಿಯಾದ್ರೂ ತುಪ್ಪ ತಿನ್ನಬೇಕು ಎಂಬುದನ್ನೇ ಮಧ್ಯಮ ವರ್ಗದ ಜನ ಸೇರಿದಂತೆ ಸಾಮಾನ್ಯರೂ ಕೂಡ ವೇದವಾಕ್ಯ ಎಂಬಂತೆ ಅನುಸರಿಸುತ್ತಿರುವುದನ್ನು ಕಾಣುತ್ತೇವೆ.

ನಲ್ವತ್ತು ವರ್ಷದ ಹಿಂದಿನ ಬದುಕಿಗೂ, ಇಂದಿನ ಬದುಕಿಗೂ ಅಜಗಜಾಂತರ ವ್ಯತ್ಯಾಸವಿದೆ. 25 ವರ್ಷಗಳ ಹಿಂದೆ ಅಂಚೆಕಚೇರಿಯಲ್ಲಿ ಪೋಸ್ಟ್ ಮ್ಯಾನ್ ಆಗಿದ್ದವರು ತಿಂಗಳಿಗೆ ಇನ್ನೂರೋ, ಮುನ್ನೂರು ರೂಪಾಯಿ ಸಂಪಾದಿಸಿ ಕಷ್ಟವೋ...ಸುಖವೋ ಸಂಸಾರ ನಡೆಸುತ್ತಿದ್ದರು. ಇಂದು ಅದೇ ಪೋಸ್ಟ್‌ಮ್ಯಾನ್ ಹುದ್ದೆಯಲ್ಲಿರುವವನಿಗೆ ನಾಲ್ಕೈದು ಸಾವಿರ ರೂಪಾಯಿ ಸಂಬಳ ಬರುತ್ತದೆ. ಇದು ಕೇವಲ ಉದಾಹರಣೆಯಷ್ಟೇ ಕೇವಲ ಪೋಸ್ಟ್‌ಮ್ಯಾನ್ ಹುದ್ದೆ ಮಾತ್ರವಲ್ಲ, ಪ್ರತಿಯೊಂದು ಹುದ್ದೆಯಲ್ಲಿರುವವರ (ಕೆಲವೊಂದು ಹೊರತುಪಡಿಸಿ) ಸಂಬಳ ಜಾಸ್ತಿಯಾಗಿದೆ. ಅದೇ ರೀತಿ ದೈನಂದಿನ ಬಳಕೆಯ ವಸ್ತುಗಳ ಬೆಲೆ, ದಿನಸಿ ಬೆಲೆ ಏರಿಕೆಯಾಗಿವೆ. ಜೊತೆಗೆ ಪ್ರತಿಷ್ಠೆಯೂ ಹೆಚ್ಚಾಗತೊಡಗಿದೆ. ಆದಾಯ ಕಡಿಮೆ ಇದ್ದರೂ ಕೂಡ ಮನುಷ್ಯನು ಬಯಕೆಗಳ ಈಡೇರಿಕೆಗಾಗಿ ಸಾಲ, ಅದನ್ನು ತೀರಿಸಲು ಮತ್ತೊಂದು ಸಾಲ....ಹೀಗೆ ಜೀವನ ಹೋರಾಟದಲ್ಲಿಯೇ ಕಳೆಯುಂತಾಗುತ್ತಿದೆ.

ಬಡವ-ಶ್ರೀಮಂತ ಎಂಬ ತಾರತಮ್ಯ ಇಂದಿಗೂ ಮುಂದುವರಿದಿದೆ. ಈ ತಾರತಮ್ಯವೇ ಇಂದು ಅನಾಹುತಕ್ಕೆ ಎಡೆಮಾಡಿಕೊಡುತ್ತಿದೆ. ದಿಢೀರ್ ಶ್ರೀಮಂತಿಕೆಯ ಕನಸು ಮನುಷ್ಯನನ್ನು ಅಡ್ಡಹಾದಿಗೆ ಎಳೆಯುತ್ತಿರುವುದನ್ನು ಕಾಣುತ್ತಿದ್ದೇವೆ. ಹಾಗಾದರೆ ಮಧ್ಯಮ ವರ್ಗ, ಜನಸಾಮಾನ್ಯರಲ್ಲಿ ಕೀಳರಿಮೆ ಉಂಟು ಮಾಡುತ್ತಿದೆಯೇ? ನಾವು ಬದುಕಿನಲ್ಲಿ ಮೇಲೇರಬೇಕು...ಚೆಂದದ ಮನೆ ಕಟ್ಟಬೇಕು, ಬಾಡಿಗೆ ಮನೆ ಸಹವಾಸ ಬಿಡಬೇಕು, ಮಗ, ಮಗಳಿಗೊಂದು ಒಳ್ಳೆ ಸಂಬಂಧ ನೋಡಿ ಮದುವೆ ಮಾಡಬೇಕು...ಇವೆಲ್ಲ ಮನುಷ್ಯನಲ್ಲಿ ಸಹಜವಾಗಿಯೇ ಇರುವ ಆಸೆ, ಆಕಾಂಕ್ಷೆಗಳು. ಆದರೆ ಶ್ರೀಮಂತಿಕೆಯ ಪ್ರದರ್ಶನ, ಪ್ರತಿಷ್ಠೆಯ ಬೆನ್ನತ್ತಿ ಸಾಲದ ಶೂಲಕ್ಕೆ ಸಿಲುಕಿ ನರಳುವ ಬದುಕು ಬೇಕೆ? ಸಮಾಜದಲ್ಲಿನ ಬೇಕು, ಬೇಡ, ಅನುಕರಣೆಗಳಿಂದ ನಮ್ಮಲ್ಲಿಯ ಬಹುಜನ ಶ್ರೀಮಂತರಾಗಿದ್ದಾರೆ. ಸಮಾಜ ಹಾಗೂ ನಾವು ನಮ್ಮಲ್ಲಿ ಸೃಷ್ಟಿಸಿಕೊಂಡಿರುವ ಅತ್ಯಾಶೆ, ಕೋಪ, ದ್ವೇಷ, ಹೊಟ್ಟೆಕಿಚ್ಚು ಇವೆಲ್ಲವುಗಳಲ್ಲಿಯೂ ನಾವು ಶ್ರೀಮಂತರಾಗುತ್ತಿದ್ದೇವೆ!. ಆ ನೆಲೆಯಲ್ಲಿ ಸಮಾಜದ ಶ್ರೀಮಂತಿಕೆಯ, ಬೂಟಾಟಿಕೆಯ ರೀತಿ-ನೀತಿಗಳನ್ನು ಎಲ್ಲಿಯವರೆಗೆ ಅನುಸರಿಸುವೆವೋ ಅಲ್ಲಿಯವರೆಗೂ ಬದುಕು ರಣಾಂಗಣವಾಗಿರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ...

Share this Story:

Follow Webdunia kannada