Select Your Language

Notifications

webdunia
webdunia
webdunia
webdunia

ಹೃದಯ ವೈಶಾಲ್ಯತೆ ಮೆರೆದ ಎಬಿ ಡಿವಿಲಿಯರ್ಸ್

ಹೃದಯ ವೈಶಾಲ್ಯತೆ ಮೆರೆದ ಎಬಿ ಡಿವಿಲಿಯರ್ಸ್
ಪುಣೆ , ಶುಕ್ರವಾರ, 22 ಮೇ 2015 (09:36 IST)
ವಿಶ್ವ ಶ್ರೇಷ್ಠ ಬ್ಯಾಟಿಂಗ್ ದಾಂಡಿಗರಲ್ಲಿ ಒಬ್ಬರಾದ ಎಬಿ ಡಿವಿಲಿಯರ್ಸ್ ಕೇವಲ ತವರಿನಲ್ಲಷ್ಟೇ ಅಭಿಮಾನಿಗಳನ್ನು ಹೊಂದಿಲ್ಲ, ಭಾರತದಲ್ಲಿಯೂ ಸಹ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಅವರ ತಂಡ ವಿಶ್ವ ಕಪ್‌ನಿಂದ ಸೋತು ಹೊರಬಿದ್ದಾಗ ಎಬಿಡಿ ಮೈದಾನದಲ್ಲಿ ಕುಸಿದು ಕುಳಿತು ಅತ್ತಿದ್ದರು. ಇದನ್ನು ಕಂಡು ಮಮ್ಮಲ ಮರುಗಿದ್ದ ಭಾರತದಲ್ಲಿನ ಅವರ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋವನ್ನು ಪ್ರಕಟಿಸಿ ಅನುಕಂಪವನ್ನು, ಬೆಂಬಲವನ್ನು ವ್ಯಕ್ತಪಡಿಸಿದ್ದರು. ಎಬಿಡಿ ಇಷ್ಟು ಜನಪ್ರಿಯರಾಗಲು ಅವರ ಬ್ಯಾಟ್ ಅಷ್ಟೇ ಕಾರಣವಲ್ಲ. ಹೃದಯವಂತಿಕೆಯಿಂದಲೂ ಸಹ ಅವರು ಎಲ್ಲರ ಮನಗೆಲ್ಲುತ್ತಾರೆ. 

ಇದಕ್ಕೊಂದು ತಾಜಾ ಉದಾಹರಣೆ ಕಳೆದ ಬುಧವಾರ ನಡೆಯಿತು. ರಾಜಸ್ಥಾನ ರಾಯಲ್ಸ್ ವಿರುದ್ಧದ ಐಪಿಎಲ್‌ನ ಮಹತ್ವದ  ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು 71 ರನ್‌ಗಳಿಂದ ಸೋಲಿಸಿತು. ಬೆಂಗಳೂರು ತಂಡದ ಈ ಗೆಲುವಿಗೆ ಕಾರಣ ಎಬಿಡಿವಿಲಿಯರ್ಸ್ ಮತ್ತು ಮನ್‌ದೀಪ್ ಸಿಂಗ್ ಗಳಿಸಿದ ಅಮೋಘ ಅರ್ಧಶತಕಗಳು. 
 
66 ರನ್ ಗಳಿಸಿದ್ದ ಎಬಿಡಿವಿಲಿಯರ್ಸ್ ಅವರನ್ನು ಪಂದ್ಯ ಶ್ರೇಷ್ಠ ಎಂದು ಘೋಷಿಸಲಾಯಿತು. ಆದರೆ, ಎಬಿಡಿ ಮೆನ್ ಆಫ್ ದಿ ಮ್ಯಾಚ್ ಗೌರವವನ್ನು ಮನ್‌ದೀಪ್ ಸಿಂಗ್ ಅವರಿಗೆ ನೀಡಿದರು. "ನನ್ನ ಪ್ರಕಾರ  ಮನ್‌ದೀಪ್ ಸಿಂಗ್ ಅವರಿಗೆ ಈ ಗೌರವ ಸಲ್ಲಬೇಕು. ಹಾಗಾಗಿ ನಾನಿದನ್ನು ಅವರಿಗೆ ನೀಡುತ್ತೇನೆ", ಎಂದು ಎಬಿಡಿ ಉದಾರತೆಯನ್ನು ಮೆರೆದರು.
 
ಒಂದು ಹಂತದಲ್ಲಿ 2 ವಿಕೆಟ್ ಕಳೆದುಕೊಂಡು 46 ರನ್ ಗಳಿಸಿದ್ದ ಬೆಂಗಳೂರು ತಂಡಕ್ಕೆ  ಮನ್‌ದೀಪ್ ಸಿಂಗ್  ಮತ್ತು ಡಿ ವಿಲಿಯರ್ಸ್ 113 ರನ್ ಜೊತೆಯಾಟವಾಡಿ ತಮ್ಮ ತಂಡ 180 ರನ್ ಮೊತ್ತವನ್ನು ಕಲೆಹಾಕಲು ನೆರವಾದರು. ಮನ್‌ದೀಪ್ ಸಿಂಗ್ 34 ಎಸೆತಗಳಿಗೆ ಅಜೇಯ 54 ರನ್ ಬಾರಿಸಿದ್ದರು. ಡಿವಿಲಿಯರ್ಸ್ ಸ್ಕೋರಿನಲ್ಲಿ 4 ಸಿಕ್ಸರ್ ಮತ್ತು ನಾಲ್ಕು ಬೌಂಡರಿಗಳಿದ್ದವು. ಮನ್‌ದೀಪ್ 7 ಬೌಂಡರಿಗಳು ಮತ್ತು 2 ಸಿಕ್ಸರ್ ಸಿಡಿಸಿದ್ದರು. 

Share this Story:

Follow Webdunia kannada