33ರ ಹರೆಯಕ್ಕೆ ಕಾಲಿಟ್ಟ ಮುಂಚೂಣಿಯ ವೇಗಿ ಜಹೀರ್ ಖಾನ್
ನವದಹೆಲಿ , ಶುಕ್ರವಾರ, 7 ಅಕ್ಟೋಬರ್ 2011 (12:25 IST)
11
ವರ್ಷಗಳ ಅಂತರಾಷ್ಟ್ರೀಯ ಕ್ರಿಕೆಟ್ ಅನುಭವ ಹೊಂದಿರುವ ಈ ಬರೋಡಾ ವೇಗಿ, 2000ನೇ ಇಸವಿಯಲ್ಲಿ ಅಕ್ಟೋಬರ್ನಲ್ಲಿ ಕೀನ್ಯಾ ವಿರುದ್ಧ ಏಕದಿನ ಕ್ರಿಕೆಟ್ಗೆ ಪಾದರ್ಪಣೆ ಮಾಡಿದ್ದರು. ಅಲ್ಲಿಂದೀಚೆಗೆ ತಮ್ಮ ಕೆರಿಯರ್ನಲ್ಲಿ ಹಲವು ಏರುಬೀಳು, ಫಿಟೆನೆಸ್ ಹಾಗೂ ಗಾಯದ ಸಮಸ್ಯೆಗಳನ್ನು ಎದುರಿಸಿದ್ದ ಜಹೀರ್, ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲುವ ಮೂಲಕ ಒಬ್ಬ ಪರಿಪೂರ್ಣ ಸ್ವಿಂಗ್ ಬೌಲರ್ ಆಗಿ ಮೂಡಿ ಬರುವಲ್ಲಿ ಯಶಸ್ವಿಯಾಗಿದ್ದರು. ಎರಡೂ ದಿಕ್ಕುಗಳಿಗೆ ಸ್ವಿಂಗ್ ಮಾಡಬಲ್ಲ ಸಾಮರ್ಥ್ಯವುಳ್ಳ ಜಹೀರ್ ಖಾನ್ ಅವರ ಇದೇ ಕೌಶಲ್ಯವನ್ನು ಪಾಕಿಸ್ತಾನದ ದಿಗ್ಗಜ ವೇಗಿ ವಾಸೀಮ್ ಅಕ್ರಂ ಸೇರಿದಂತೆ ಅನೇಕ ಮಾಜಿ ಕ್ರಿಕೆಟಿಗರು ಮುಕ್ತಕಂಠವಾಗಿ ಪ್ರಶಂಸಿಸಿದ್ದರು. ಏಕದಿನಕ್ಕೆ ಕಾಲಿರಿಸಿದ್ದ ಒಂದೇ ತಿಂಗಳೊಳಗೆ ಟೆಸ್ಟ್ ಸರಣಿಗೂ ಪಾದರ್ಪಣೆ ಮಾಡಿಕೊಂಡಿದ್ದ ಜಹೀರ್, ಸೌರವ್ ಗಂಗೂಲಿ ನಾಯಕತ್ವದಲ್ಲಿ ಜಾವಗಲ್ ಶ್ರೀನಾಥ್ ಹಾಗೂ ಅಜಿತ್ ಅಗರ್ಕರ್ ಅವರಂತಹ ಅನುಭವಿ ಬೌಲರುಗಳ ಜತೆ ಕೆಲಸ ಮಾಡುವ ಅದೃಷ್ಟ ಪಡೆದಿದ್ದರು. ಆ ಪಂದ್ಯದಲ್ಲಿ ಮೂರು ವಿಕೆಟುಗಳನ್ನು ಕಬಳಿಸಿದ್ದ ಜಹೀರ್ ಗಮನಾರ್ಹ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದರು. ಹಲವು ಬಾರಿ ಸ್ನಾಯು ಸೆಳೆತದ ಜೊತೆ ಹೋರಾಡಿ ಬಂದಿದ್ದ ಜಹೀರ್ ಖಾನ್ ಅವರಿಗೆ 2003-04ರ ಅವಧಿ ಪರೀಕ್ಷೆಯ ಕಾಲಘಟ್ಟವಾಗಿತ್ತು. ಈ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದಲೂ 'ಬಿ' ಗ್ರೇಡ್ನಿಂದ 'ಸಿ' ದರ್ಜೆಗೆ ಹಿಂಬಡ್ತಿಯನ್ನೂ ಪಡೆದಿದ್ದರು. ಇದರಂತೆ 2005ರಲ್ಲಿ ತಂಡದಿಂದಲೂ ಹೊರಗಟ್ಟಲಾಗಿತ್ತ.ು ಆದರೆ ಕ್ರಿಕೆಟ್ಗೆ ಮೂಲತತ್ವಕ್ಕೆ ಅಂಟಿಕೊಂಟಿದ್ದ ಜಹೀರ್, ದೇಶಿಯ ಕ್ರಿಕೆಟ್ನಲ್ಲಿ ಬರೋಡಾದಿಂದ ಮುಂಬೈಗೆ ಸ್ಥಳಾಂತರವಾದರು. 2006-07ರ ರಣಜಿ ಅವಧಿಯಲ್ಲಿ ಬಂಗಾಳ ವಿರುದ್ಧದ ಮೊದಲ ಪಂದ್ಯದಲ್ಲೇ ಒಂಬತ್ತು ವಿಕೆಟುಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಕೌಂಟಿ ಕ್ರಿಕೆಟ್ ಸಹ ಒಬ್ಬ ಪರಿಪೂರ್ಣ ಬೌಲರ್ ಆಗಿ ಮೂಡಿಬರಲು ಜಹೀರ್ಗೆ ನೆರವಾಗಿತ್ತು. 2006ರಲ್ಲಿ ವಾರ್ಕ್ಸ್ಟೆರ್ಶೈರ್ ಪರ ಡೆಬ್ಯುಟ್ ಮಾಡಿದ್ದ ಜಹೀರ್, ಚೊಚ್ಚಲ ಪಂದ್ಯದಲ್ಲೇ 10 ವಿಕೆಟುಗಳನ್ನು ಕಬಳಿಸಿದರು. ಇದು 100 ವರ್ಷದ ಇತಿಹಾಸದಲ್ಲೇ ವಾರ್ಕ್ಸ್ಟೆರ್ಶೈರ್ ಬೌಲರ್ ಒರ್ವನಿಂದ ಡೆಬ್ಯುಟ್ ಪಂದ್ಯದಲ್ಲೇ ದಾಖಲಾದ ಹತ್ತು ವಿಕೆಟುಗಳ ಸಾಧನೆಯಾಗಿದೆ. ರಾಷ್ಟ್ರೀಯ ತಂಡಕ್ಕೆ ಭರ್ಜರಿ ಪುನರಾಗಮನ ಮಾಡಿಕೊಂಡಿದ್ದ ಜಹೀರ್, ವಿಕೆಟ್ ಟೆಕಿಂಗ್ ಬೌಲರ್ ಎನಿಸಿಕೊಂಡರು. ತಂಡದ ಪಾಲಿಗೆ ನಿರ್ಣಾಯಕ ಪಾತ್ರ ವಹಿಸುತ್ತಿದ್ದ ಜಹೀರ್, ಸ್ಲಾಗ್ ಓವರುಗಳಲ್ಲೂ ಅದ್ಭುತ ದಾಳಿ ಸಂಘಟಿಸಿದರು. ಇದರ ಪರಿಣಾಮವೆಂಬಂತೆ ಭಾರತ 28 ವರ್ಷಗಳ ನಂತರ ವಿಶ್ವಕಪ್ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಪ್ರಸ್ತುತ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಜಹೀರ್, ಇಂಗ್ಲೆಂಡ್ ಪ್ರವಾಸಕ್ಕೆ ಅಲಭ್ಯರಾಗಿದ್ದಾರೆ. ಆದರೆ ಮುಂಬರುವ ಆಸ್ಟ್ರೇಲಿಯಾ ಪ್ರವಾಸದ ವೇಳೆ ಪುನರಾಮನ ಮಾಡಿಕೊಳ್ಳುವ ಭರವಸೆಯಲ್ಲಿದ್ದಾರೆ.