Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ದೌರ್ಬಲ್ಯ ಪೇಸ್‌ ಬೌಲರ್‌ಗಳಲ್ಲಿ ಅಡಗಿದೆ: ಧೋನಿ

ಟೀಂ ಇಂಡಿಯಾ ದೌರ್ಬಲ್ಯ ಪೇಸ್‌ ಬೌಲರ್‌ಗಳಲ್ಲಿ ಅಡಗಿದೆ: ಧೋನಿ
ಲೀಡ್ಸ್‌ , ಭಾನುವಾರ, 7 ಸೆಪ್ಟಂಬರ್ 2014 (12:28 IST)
ತಂಡದ ಪೇಸ್‌ ಬೌಲರ್‌ಗಳಿಗೆ ಬಲವಾದ ಸಂದೇಶವೊಂದನ್ನು ರವಾನಿಸಿರುವ ನಾಯಕ ಮಹೇಂದ್ರ ಸಿಂಗ್‌ ಧೋನಿ, ಮುಂದಿನ ವರ್ಷದ ವಿಶ್ವಕಪ್‌ನಲ್ಲಿ ಭಾರತ ಪ್ರಶಸ್ತಿ ಉಳಿಸಿಕೊಳ್ಳಬೇಕಾದರೆ ಡೆತ್‌ ಓವರ್‌ ಬೌಲಿಂಗ್‌ನಲ್ಲಿ ಭಾರೀ ಮಟ್ಟದ ಸುಧಾರಣೆ ಆಗಬೇಕು ಎಂದಿದ್ದಾರೆ.
 
ಲೀಡ್ಸ್‌ನಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಇಂಗ್ಲೆಂಡಿಗೆ 41 ರನ್ನುಗಳಿಂದ ಸೋತ ಬಳಿಕ ಧೋನಿ ಟೀಮ್‌ ಇಂಡಿಯಾದ ಈ ದೌರ್ಬಲ್ಯದ ಕುರಿತು ಹೇಳಿದರು.
 
ಹೇಡಿಂಗ್ಲೆ ಅಂಗಳದಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಇಂಗ್ಲೆಂಡ್‌ 7 ವಿಕೆಟಿಗೆ 294 ರನ್‌ ಪೇರಿಸಿ ಸವಾಲೊಡ್ಡಿದರೆ, ಭಾರತ 48.4 ಓವರ್‌ಗಳಲ್ಲಿ 253ಕ್ಕೆ ಆಲೌಟ್‌ ಆಯಿತು. ಇದರೊಂದಿಗೆ ಭಾರತದ ಸರಣಿ ಗೆಲುವಿನ ಅಂತರ 3-1ಕ್ಕೆ ಇಳಿಯಿತು. ಧೋನಿ ಪಡೆ ಇಷ್ಟೇ ಅಂತರದಿಂದ ಟೆಸ್ಟ್‌ ಸರಣಿಯನ್ನು ಸೋತಿತ್ತು.
 
ಮೊದಲ 29 ಓವರ್‌ಗಳಲ್ಲಿ ಭಾರತದ ಬೌಲಿಂಗ್‌ ಬಿಗುವಿನಿಂದಲೇ ಇತ್ತು. 29 ಓವರ್‌ ಮುಕ್ತಾಯಕ್ಕೆ ಕೇವಲ 117 ರನ್‌ ಮಾತ್ರ ನೀಡಿತ್ತು. ಆದರೆ ಉಳಿದ 21 ಓವರ್‌ಗಳಲ್ಲಿ 177 ರನ್‌ ಬಿಟ್ಟುಕೊಟ್ಟಿತು. ರೂಟ್‌, ಬಟ್ಲರ್‌ ಹಾಗೂ ವೋಕ್ಸ್‌ ಸೇರಿಕೊಂಡು ಭಾರತದ ದಾಳಿಯನ್ನು ಚೆನ್ನಾಗಿ ದಂಡಿಸಿದರು. ಶತಕವೀರ ರೂಟ್‌ ಪಂದ್ಯಶ್ರೇಷ್ಠ, ಸುರೇಶ್‌ ರೈನಾ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು.
 
ವೇಗಿಗಳ ಮೇಲೆ ಹೆಚ್ಚಿನ ಹೊಣೆ
 
'ನಮ್ಮ ಡೆತ್‌ ಓವರ್‌ ಬೌಲಿಂಗ್‌ ನಿರೀಕ್ಷಿತ ಮಟ್ಟದಲ್ಲಿಲ್ಲ. ವಿಶ್ವಕಪ್‌ಗ್ೂ ಮುನ್ನ ಇದರಲ್ಲಿ ಸುಧಾರಣೆ ಅತ್ಯಗತ್ಯ. ವಿಶ್ವಕಪ್‌ ವೇಳೆ ನಾವು ನ್ಯೂಜಿಲ್ಯಾಂಡ್‌ನ‌ಲ್ಲಿ ಬಹಳಷ್ಟು ಪಂದ್ಯಗಳನ್ನು ಆಡಲಿದ್ದೇವೆ. ಅಲ್ಲಿನ ಅಂಗಳಗಳು ತೀರಾ ಚಿಕ್ಕವು. 40ನೇ ಓವರ್‌ ಬಳಿಕ ಸ್ಪಿನ್ನರ್‌ಗಳನ್ನು ದಾಳಿಗಿಳಿಸುವ ಹಾಗಿಲ್ಲ. ಇದು ವೇಗಿಗಳ ಮೇಲಿನ ಒತ್ತಡವನ್ನು ಹೆಚ್ಚಿಸುತ್ತದೆ. ಹೀಗಾಗಿ ಇವರು ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕಾಗುತ್ತದೆ...' ಎಂದು ಧೋನಿ ಅಭಿಪ್ರಾಯಪಟ್ಟರು.
 
'ಇದಕ್ಕಾಗಿ ಮುಂಬರುವ ಸರಣಿಯನ್ನು ಸಮರ್ಥ ರೀತಿಯಲ್ಲಿ ಬಳಸಿಕೊಳ್ಳಬೇಕಿದೆ. ಮುಂದಿನದು ವೆಸ್ಟ್‌ ಇಂಡೀಸ್‌ ಎದುರಿನ 5 ಪಂದ್ಯಗಳ ತವರಿನ ಮುಖಾಮುಖೀ. ಇಲ್ಲಿ ಮಂಜಿನ ಪ್ರಭಾವ ಇದ್ದೇ ಇರುತ್ತದೆ. ಯಾರ್ಕರ್‌, ರಿವರ್ಸ್‌ ಸ್ವಿಂಗ್‌ ಕಠಿನ...' ಎಂಬುದಾಗಿ ತಮ್ಮ ಪೇಸರ್‌ಗಳನ್ನು ಧೋನಿ ಎಚ್ಚರಿಸಿದರು.
 
'ಒಟ್ಟಾರೆಯಾಗಿ ನಮ್ಮ ಇಂದಿನ ಬೌಲಿಂಗ್‌ ಸಾಮಾನ್ಯ ಮಟ್ಟದಲ್ಲಿತ್ತು. ಇದು ಮುನ್ನೂರು ಪ್ಲಸ್‌ ರನ್ನಿಗೆ ಯೋಗ್ಯವಾದ ಟ್ರ್ಯಾಕ್‌ ಆಗಿತ್ತು. ಆದರೆ ಬ್ಯಾಟ್ಸ್‌ಮನ್‌ಗಳು ಕೆಟ್ಟ ಹೊಡೆತ ಬಾರಿಸಲು ಹೋಗಿ ಔಟಾದರು. ಮಧ್ಯಮ ಹಂತದಲ್ಲಿ ಕ್ಷಿಪ್ರ ಗತಿಯಲ್ಲಿ ವಿಕೆಟ್‌ಗಳು ಉರುಳಿದವು. ಅನಂತರ ನಮಗೆ ಚೇಸಿಂಗ್‌ ಸಾಧ್ಯವಾಗಲಿಲ್ಲ...' ಎಂದರು.
 
 

Share this Story:

Follow Webdunia kannada