Webdunia - Bharat's app for daily news and videos

Install App

ಸರಣಿಗೆ ಚೈತನ್ಯ ತುಂಬಲು ಗೆಲ್ಲಲೇಬೇಕಿರುವ ಭಾರತ

Webdunia
ಶನಿವಾರ, 7 ನವೆಂಬರ್ 2009 (15:46 IST)
PTI
ಪ್ರಸಕ್ತ ಪ್ರವಾಸೀ ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ ಕೈಗೆ ಬಂದ ತುತ್ತು ಚೆಲ್ಲುವ ಪರಿಪಾಠವನ್ನು ಎರಡು ಬಾರಿ ಪ್ರದರ್ಶಿಸಿದ್ದ ಟೀಂ ಇಂಡಿಯಾ ಪಡೆ, 7 ಪಂದ್ಯಗಳ ಸರಣಿಯಲ್ಲಿ 2-3 ಅಂತರದಿಂದ ಹಿನ್ನಡೆಯಲ್ಲಿದ್ದು, ಭಾನುವಾರ ಹಗಲು ನಡೆಯುವ 6ನೇ ಪಂದ್ಯವನ್ನು ಗೆದ್ದು, ಸರಣಿಯನ್ನು ಜೀವಂತವಾಗಿಡುವ ಪ್ರಯತ್ನದಲ್ಲಿದೆ.

ಈ ಪಂದ್ಯದಲ್ಲಿ ಮಾಡುವ ಯಾವುದೇ ತಪ್ಪು ಕೂಡ ಪ್ರವಾಸಿಗರ ವಶಕ್ಕೇ ಸರಣಿ ಹೋಗುವಂತೆ ಮಾಡಬಹುದು ಎಂಬುದರ ಕುರಿತು ಟೀಂ ಇಂಡಿಯಾ ಸದಸ್ಯರಿಗೆ ಅರಿವಿದ್ದಿರಬಹುದು. ಭಾರತ ಈ ಸರಣಿಯನ್ನು ಗೆಲ್ಲಬೇಕಿದ್ದರೆ ಭಾನುವಾರದ ಮತ್ತು ಮುಂಬೈಯಲ್ಲಿ ನಡೆಯುವ ಪಂದ್ಯಗಳೆರಡನ್ನೂ ಗೆಲ್ಲಬೇಕು.

ಆದರೆ, ಮಹೇಂದ್ರ ಸಿಂಗ್ ಧೋನಿ ಪಡೆಗೆ ಇದೇನೂ ಸುಲಭದ ತುತ್ತಲ್ಲ. ಘಟಾನುಘಟಿ ಬ್ಯಾಟ್ಸ್‌ಮನ್‌ಗಳ ವೈಫಲ್ಯ, ಸಚಿನ್ ಇದ್ದರೆ ಮಾತ್ರ ನಾವಿದ್ದೇವೆ, ತೆಂಡ್ಲ್ಯಾ ಔಟಾದರೆ ನಾವೂ ಔಟ್ ಎಂಬ ಮನೋಭಾವ, ಬೌಲರುಗಳ ದಾಳಿಯಲ್ಲಿ ನಿಖರತೆಯ ಕೊರತೆ ಮತ್ತು ಮಾಮೂಲಿ ಎನಿಸಿಬಿಟ್ಟಿರುವ ಫೀಲ್ಡಿಂಗ್ ವೈಫಲ್ಯ, ಇವೆಲ್ಲವುಗಳನ್ನು ಮೆಟ್ಟಿ ನಿಂತರೆ, ಅದಕ್ಕಿಂತ ಹೆಚ್ಚಾಗಿ ಕ್ಷೇತ್ರ ರಕ್ಷಕರ ನಿಯೋಜನೆ, ತತ್‌ಕ್ಷಣದ ಕಾರ್ಯತಂತ್ರಗಳು ಸರಿ ದಾರಿಯಲ್ಲಿ ಮುನ್ನಡೆದರೆ ಭಾರತಕ್ಕೆ ಗೆಲುವು ಕಷ್ಟಸಾಧ್ಯವೇನಲ್ಲ.

ಅತ್ತ ಕಡೆ, ಅರ್ಧದಷ್ಟು ಆಟಗಾರರು ಗಾಯಾಳುಗಳ ಪಟ್ಟಿಯಲ್ಲಿದ್ದರೂ ಆಸ್ಟ್ರೇಲಿಯಾ ಧೃತಿಗೆಟ್ಟಿಲ್ಲ. ವಿಶೇಷವಾಗಿ ಎರಡು ಬಾರಿ ಅಂತಿಮ ಕ್ಷಣದಲ್ಲಿ ರೋಚಕ ಗೆಲುವನ್ನು ತಮ್ಮದಾಗಿಸಿಕೊಂಡ ಬಳಿಕ ಅವರ ಆತ್ಮವಿಶ್ವಾಸ ಹೆಚ್ಚಿದೆ.

ಆದರೆ, ಗೆಲ್ಲಲೇಬೇಕಿರುವ ಪಂದ್ಯಕ್ಕೆ ತಮ್ಮ ತಂಡದ ಮೇಲೆ ಒತ್ತಡ ಹೆಚ್ಚಿದೆ ಎಂಬುದನ್ನು ಧೋನಿ ಒಪ್ಪುತ್ತಿಲ್ಲ. ಪ್ರತಿಯೊಂದು ಪಂದ್ಯದಲ್ಲೂ ಒತ್ತಡವಿರುತ್ತದೆ, ಇದರಲ್ಲೇನೂ ವಿಶೇಷವಿಲ್ಲ ಎಂದು ಮಾತು ಹಾರಿಸಿಬಿಡುತ್ತಾರೆ ಧೋನಿ.

ಆದರೆ, ಟೀಂ ಇಂಡಿಯಾಕ್ಕೆ ನಿಜಕ್ಕೂ ಚಿಂತೆ ಹಚ್ಚಿಕೊಂಡಿರುವುದು ಬೌಲಿಂಗ್ ವಿಭಾಗದಲ್ಲಿ. ಕಳೆದ ಪಂದ್ಯದಲ್ಲಿ ಆರಂಭಿಕರಿಬ್ಬರು ಆರ್ಭಟಿಸುವ ಮೂಲಕ 350ರವರೆಗೂ ಮೊತ್ತ ಪೇರಿಸಿಕೊಳ್ಳುವಂತೆ ಆಗುವಲ್ಲಿ ಪಿಚ್ ನೆರವಿನ ಜೊತೆಗೆ ಬೌಲಿಂಗ್ ದೌರ್ಬಲ್ಯವೂ ಇತ್ತೆಂಬುದು ಒಪ್ಪತಕ್ಕ ಸಂಗತಿ. ಹಿಂದಿನ ಪಂದ್ಯಗಳಲ್ಲಿ ಮಿಂಚಿದ್ದ ಆಶಿಶ್ ನೆಹ್ರಾ, ಪ್ರವೀಣ್ ಕುಮಾರ್ ಮತ್ತು ಫಾರ್ಮಿನಲ್ಲಿಲ್ಲದ ಇಶಾಂತ್ ಶರ್ಮಾ ಜಾಗದಲ್ಲಿ ಸ್ಥಾನ ಪಡೆದ ಮುನಾಫ್ ಪಟೇಲ್ ಅವರಂತೂ ಹೈದರಾಬಾದಿನಲ್ಲಿ ದಯನೀಯವಾಗಿ ದಂಡಿಸಿಕೊಂಡಿದ್ದರು. ಸರಣಿಯಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದ ರವೀಂದ್ರ ಜಡೇಜಾ ಕೂಡ ಪರಿಣಾಮಕಾರಿಯಾಗುವಲ್ಲಿ ವಿಫಲರಾಗಿದ್ದರು. ಆದರೆ ಒಂದು ಆಶಾವಾದವೆಂದರೆ, ಹರಭಜನ್ ಸಿಂಗ್ ಸ್ಪಿನ್ ಕೈಚಳಕವನ್ನು ಮತ್ತೆ ತೋರಲಾರಂಭಿಸಿದ್ದಾರೆ.

ಬೌಲಿಂಗ್ ವಿಭಾಗದ ದೌರ್ಬಲ್ಯಗಳು ಮಾತ್ರವೇ ಸಾಲದೆಂಬಂತೆ, ಬ್ಯಾಟಿಂಗಿನ ಅಸ್ಥಿರತೆಯ ಬಗೆಗೂ ಟೀಂ ಇಂಡಿಯಾಗೆ ಆತಂಕವಿದೆ. ಸಚಿನ್ ಅಷ್ಟೊಂದು (141 ಎಸೆತಗಳಲ್ಲಿ 175 ರನ್) ಅಬ್ಬರಿಸಿ, ವಿಜಯದ ತುತ್ತನ್ನು ಕೈಗೆ ತೆಗೆದುಕೊಟ್ಟಿದ್ದರಾದರೂ, ಉಳಿದ ಬ್ಯಾಟ್ಸ್‌ಮನ್‌ಗಳು ಅದನ್ನು ಬಾಯಿಗೆ ತರುವಲ್ಲಿ ವಿಫಲರಾಗಿದ್ದರು. ರೋಚಕ ಅಂತ್ಯ ಕಂಡ ಎರಡೂ ಪಂದ್ಯಗಳಲ್ಲಿ ಭಾರತದ ಬೌಲರುಗಳು ಬ್ಯಾಟು ಹಿಡಿಯುವುದು ಹೇಗೆಂಬುದೇ ತಿಳಿದಿಲ್ಲವೆಂಬಂತೆ ಆಟವಾಡಿರುವುದು ತೀರಾ ನಿರಾಶಾದಾಯಕ ಸಂಗತಿ. ಅದಕ್ಕೇ ಈಗ, ಆಲ್‌ರೌಂಡರುಗಳೇ ಬೇಕು ಎಂಬ ಕೂಗೆದ್ದಿರುವುದು.

ಮುನಾಫ್ ಯಾವುದೇ ಪ್ರಭಾವ ಬೀರಲು ವಿಫಲರಾದ ಹಿನ್ನೆಲೆಯಲ್ಲಿ ಇಶಾಂತ್ ಮರಳಿ ತಂಡ ಸೇರಿಕೊಳ್ಳಬಹುದು. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಇರಲಾರದು. ಆದರೆ, ವೀರೇಂದ್ರ ಸೆಹ್ವಾಗ್ ಅವರು ಅಭ್ಯಾಸಕ್ಕೆ ಆಗಮಿಸದೇ ಇರುವುದರಿಂದ ಅವರ ಲಭ್ಯತೆ ಬಗ್ಗೆಯೂ ಸಂದೇಹ ಮೂಡಿದೆ. ಸೇಹ್ವಾಗ್ ಉತ್ತಮವಾಗಿ ಸ್ಫೋಟಕ ಆರಂಭ ನೀಡುತ್ತಾರಾದರೂ, ಅವರು ಕನಿಷ್ಠ 15 ಓವರು ನಿಂತರೆ ಬಹುಶಃ ಉಳಿದ ಬ್ಯಾಟುಗಾರರಿಗೆ ಆತ್ಮವಿಶ್ವಾಸ ಬರಬಹುದೇನೋ...

ಇನ್ನೊಂದೆಡೆ ರಿಕಿ ಪಾಂಟಿಂಗ್ ಪಡೆ, 1-2 ಇದ್ದ ಸರಣಿಯನ್ನು 3-2 ಮಾಡಿಕೊಂಡಿರುವುದರ ಬಗ್ಗೆ ಸಂಪೂರ್ಣ ತೃಪ್ತಿಯಿಂದಿದೆ. ಅಗ್ರ ಆಟಗಾರಲ್ಲದಿದ್ದರೂ ಈ ಸಾಧನೆ ಮಾಡಿರುವುದು ಪಾಂಟಿಂಗ್ ಆತ್ಮವಿಶ್ವಾಸ ಹೆಚ್ಚಿಸಿದೆ. ಮೈಕೆಲ್ ಕ್ಲಾರ್ಕ್, ಬ್ರಾಡ್ ಹಡ್ಡಿನ್, ಕ್ಯಾಲಮ್ ಫರ್ಗ್ಯುಸನ್, ನಥಾನ್ ಬ್ರಾಕೆನ್, ಬ್ರೆಟ್ ಲೀ, ಜೇಮ್ಸ್ ಹೋಪ್ಸ್, ಟಿಮ್ ಪಾಯ್ನೆ, ಪೀಟರ್ ಸಿಡ್ಲ್, ಮಾಯ್ಸಸ್ ಹೆನ್ರಿಕ್ಸ್ ಅವರ ಹೊರತಾಗಿಯೂ ಆಸೀಸ್ ಪಡೆ ಭಾರತದ ನೆಲದಲ್ಲೇ ಭಾರತವನ್ನು ಬಗ್ಗು ಬಡಿಯುತ್ತಿರುವುದು ಪಾಂಟಿಂಗ್ ಮುಖದಲ್ಲಿ ನಗುವಿಗೆ ಕಾರಣವಾಗಿದೆ. ಮತ್ತೊಂದೆಡೆಯಿಂದ ರನ್ ಹಸಿವೆಯ ಹೆಬ್ಬುಲಿಯಂತಾಗಿಬಿಟ್ಟಿರುವ ಸಚಿನ್ ತೆಂಡುಲ್ಕರ್ ಅವರ ಬ್ಯಾಟಿಂಗ್ ವೈಖರಿ ಬಗ್ಗೆ ಆತಂಕವೂ ಇದ್ದೇ ಇದೆ.

ಪಂದ್ಯದ ಆರಂಭ: ಬೆಳಿಗ್ಗೆ 9 ಗಂಟೆ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments