Select Your Language

Notifications

webdunia
webdunia
webdunia
webdunia

ಸಚಿನ್ ಎಲ್ಲೆಡೆಯೂ ಸಲ್ಲುವ 'ಟ್ರಂಪ್ ಕಾರ್ಡ್': ಜಾಂಟಿ ರೋಡ್ಸ್

ಸಚಿನ್ ಎಲ್ಲೆಡೆಯೂ ಸಲ್ಲುವ 'ಟ್ರಂಪ್ ಕಾರ್ಡ್': ಜಾಂಟಿ ರೋಡ್ಸ್
ಮುಂಬೈ , ಗುರುವಾರ, 20 ಅಕ್ಟೋಬರ್ 2011 (19:14 IST)
ಹೈದರಾಬಾದ್ ಹಾಗೂ ದೆಹಲಿಯಲ್ಲಿ ನಡೆದ ಮೊದಲ ಎರಡು ಏಕದಿನ ಕ್ರಿಕೆಟ್ ಪಂದ್ಯಗಳಿಗೆ ಪ್ರೇಕ್ಷಕರ ಹಾಜರಾತಿ ಕಡಿಮೆ ಇರುವುದಕ್ಕೆ ಸಚಿನ್ ತೆಂಡುಲ್ಕರ್ ಅವರಂತಹಾ ಆಟಗಾರರು ಇಲ್ಲದಿರುವುದೇ ಕಾರಣವೇ ಹೊರತು, ಅತಿಯಾದ ಕ್ರಿಕೆಟ್ ಪಂದ್ಯಾವಳಿಗಳು ಇದಕ್ಕೆ ಕಾರಣ ಅಲ್ಲ ಎಂದು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಅಭಿಪ್ರಾಯಪಟ್ಟಿದ್ದು, ಸಚಿನ್ ಎಲ್ಲೆಲ್ಲೂ ಸಲ್ಲುವ ಕ್ರಿಕೆಟಿಗ ಎಂದು ನುಡಿದಿದ್ದಾರೆ.

"ಭಾರತೀಯರು ತಮ್ಮ ತಂಡ ವಿಜಯಿಯಾಗಲು ಇಷ್ಟ ಪಡುತ್ತಾರೆ. ಅವರು ಸತತ ಎರಡು ಪಂದ್ಯಗಳಲ್ಲಿ ಜಯ ಗಳಿಸಿದ್ದಾರೆ. ನೀವೀಗ ಪ್ರೇಕ್ಷಕರು ಕ್ರಿಕೆಟಿನತ್ತ ಬರುತ್ತಿರುವುದನ್ನು ಕಾಣಬಹುದು. ಇಂಗ್ಲೆಂಡ್‌ನಲ್ಲಿ ಸರಣಿ ವೈಟ್‌ವಾಶ್ ಆಗಿರುವುದನ್ನು ಮರೆತು, ಭಾರತ ಪ್ರವಾಸಕ್ಕೆ ಬಂದಿರುವ ಇಂಗ್ಲೆಂಡ್ ತಂಡಕ್ಕೂ ಅದೇ ಗತಿಯನ್ನು ಭಾರತ ತಂಡವು ಕಾಣಿಸಬೇಕೆಂಬುದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಬಯಕೆಯಾಗಿರಬಹುದು" ಎಂದು ರೋಡ್ಸ್ ಹೇಳಿದರು.

ಜಾಂಟಿ ರೋಡ್ಸ್ ಅವರು ದಕ್ಷಿಣ ಆಫ್ರಿಕಾ ಪರ 245 ಏಕದಿನ ಮತ್ತು 50 ಟೆಸ್ಟ್ ಪಂದ್ಯಗಳಲ್ಲಿ ಅನುಕ್ರಮವಾಗಿ 5,935 ಮತ್ತು 2,532 ರನ್ ಗಳಿಸಿದ್ದರು.

ತೆಂಡುಲ್ಕರ್ ಈ ಸರಣಿಯಲ್ಲಿ ಆಡದಿರುವುದು ಕೂಡ ಪ್ರೇಕ್ಷಕರ ಕೊರತೆಗೆ ಕಾರಣವಾಗಿರಬಹುದು. ನಾವು (ಮುಂಬೈ ಇಂಡಿಯನ್ಸ್) ದೆಹಲಿಯಲ್ಲಿ ಪಂದ್ಯವಾಡುತ್ತಿದ್ದಾಗ, ಸಚಿನ್ ಹೊರಗೆ ಬಂದಾಕ್ಷಣ, ಜನರ ಕೇಕೆ, ಗದ್ದಲ ಮೇರೆ ಮೀರಿತ್ತು. ಚೆನ್ನೈಯಲ್ಲಿ ನಾವು ಆಡಿದಾಗ, ಅವರು ಸಚಿನ್‌ರನ್ನು ಪರದೆಯಲ್ಲಿ ತೋರಿಸಿದಾಗಲೇ ಅವರೆಲ್ಲಾ ಹುಚ್ಚೆದ್ದು ಕುಣಿಯುತ್ತಾ ಮುಂಬೈ ತಂಡವನ್ನು ಬೆಂಬಲಿಸುತ್ತಿದ್ದರು ಎಂದು ಜಾಂಟಿ ನೆನಪಿಸಿಕೊಂಡಿದ್ದಾರೆ.

ಸಚಿನ್ ಎಲ್ಲಿಯೇ ಆಡಲಿ, ಹೇಗೆ ಬೇಕಾದರೂ ಆಡಲಿ, ಅವರೊಬ್ಬ 'ಟ್ರಂಪ್ ಕಾರ್ಡ್' ಎಂದು ಶ್ಲಾಘಿಸಿದ ಜಾಂಟಿ ರೋಡ್ಸ್, ಟೆಸ್ಟ್ ಮತ್ತು ಏಕದಿನ ಪಂದ್ಯಗಳಿಗೆ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಅನುಸರಿಸುತ್ತಿರುವ ಪ್ರತ್ಯೇಕ ನಾಯಕತ್ವದ ಸೂತ್ರವು ಭಾರತಕ್ಕೆ ಸೂಕ್ತವಾಗಲಾರದು ಎಂದು ಅಭಿಪ್ರಾಯಪಟ್ಟರು.

ಯಾರೋ ಒಬ್ಬರು ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂಬ ಕಾರಣಕ್ಕೆ ನೀವು ಯಾರನ್ನೋ ಕ್ಯಾಪ್ಟನ್ ಆಗಿ ಮಾಡುವಂತಿಲ್ಲ ಎಂದ ಅವರು, ಮಹೇಂದ್ರ ಸಿಂಗ್ ಧೋನಿಗೆ ವಿಶ್ರಾಂತಿ ಬೇಕೆಂದಾದರೆ, ಭಾರತವು ಯಾರನ್ನಾದರೂ ಖಂಡಿತಾ ನಿಯೋಜಿಸಬಹುದು ಎಂದು ಹೇಳಿದ್ದಾರೆ.

ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಉತ್ತಮವಾಗಿ ಮುನ್ನಡೆಸಿ ಅನುಭವವಿರುವ ವಿರಾಟ್ ಕೋಹ್ಲಿ ಮತ್ತು ಗೌತಮ್ ಗಂಭೀರ್‌ರಂತಹ ಉತ್ತಮ ಆಟಗಾರು ತಂಡದಲ್ಲಿದ್ದು, ಅವರು ಧೋನಿಯ ಸ್ಥಾನ ತುಂಬಬಹುದು ಎಂದೂ ಜಾಂಟಿ ರೋಡ್ಸ್ ಅನಿಸಿಕೆ ವ್ಯಕ್ತಪಡಿಸಿದರು.

Share this Story:

Follow Webdunia kannada