Webdunia - Bharat's app for daily news and videos

Install App

ರೋಹಿತ್ ಶರ್ಮಾ ಅಮೋಘ ಆಟ; ಭಾರತಕ್ಕೆ ಒಂದು ವಿಕೆಟ್ ಜಯ

Webdunia
ಬುಧವಾರ, 30 ನವೆಂಬರ್ 2011 (10:21 IST)
WD


ತೀವ್ರ ಪೈಪೋಟಿಯಿಂದ ಸಾಗಿದ ವೆಸ್ಟ್‌ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಂತೂ ಒಂದು ವಿಕೆಟ್ ಅಂತರದ ಜಯ ದಾಖಲಿಸುವಲ್ಲಿ ಆತಿಥೇಯ ಭಾರತ ತಂಡ ಯಶಸ್ವಿಯಾಗಿದೆ. ಇದರೊಂದಿಗೆ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದ ಮುನ್ನಡೆ ದಾಖಲಿಸಿಕೊಂಡಿದೆ.

ಪಂದ್ಯದ ಸ್ಟಾರ್ ಎನಿಸಿಕೊಂಡ ರೋಹಿತ್ ಶರ್ಮಾ ಅಮೋಘ 72 ರನ್ ಬಾರಿಸುವ ಮೂಲಕ ಲೊ ಸ್ಕೋರಿಂಗ್ ಮ್ಯಾಚ್‌ನಲ್ಲಿ ಭಾರತಕ್ಕೆ ಗೆಲುವಿನ ಹಾದಿ ತೋರಿಸಿದರು. ಒಂದು ಹಂತದಲ್ಲಿ ವಿಂಡೀಸ್ ಗೆಲುವು ಖಚಿತವೆನಿಸಿದ್ದರೂ ಅಂತಿಮ ವಿಕೆಟ್‌ಗೆ ಗೆಲುವಿಗೆ ಬೇಕಾದ 12 ರನ್ನುಗಳನ್ನು ಪೇರಿಸಿದ ಬೌಲರುಗಳಾದ ವರುಣ್ ಆರೋನ್ ಮತ್ತು ಉಮೇಶ್ ಯಾದವ್ ಭಾರತಕ್ಕೆ ರೋಚಕ ಗೆಲುವು ಒದಗಿಸಿಕೊಡುವಲ್ಲಿ ನೆರವಾದರು.

212 ರನ್ನುಗಳ ಗುರಿ ಬೆನ್ನತ್ತಿದ್ದ ಭಾರತ ತಂಡವು 59 ರನ್ನುಗಳಾಗುವಷ್ಟರಲ್ಲಿ ಅಗ್ರ ಕ್ರಮಾಂಕದ ಎಲ್ಲ ಐದು ವಿಕೆಟುಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ತಂಡಕ್ಕೆ ಬಿರುಸಿನ ಆರಂಭವೊದಗಿಸಿದ್ದ ನಾಯಕ ವೀರೇಂದ್ರ ಸೆಹ್ವಾಗ್ (20), ಪಾರ್ಥಿವ್ ಪಟೇಲ್ (12), ಗೌತಮ್ ಗಂಭೀರ್ (4), ವಿರಾಟ್ ಕೊಹ್ಲಿ (3) ಮತ್ತು ಸುರೇಶ್ ರೈನಾ (5) ಅಲ್ಪ ಮೊತ್ತದಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದ್ದರು.

ಈ ಹಂತದಲ್ಲಿ ಜತೆಗೂಡಿದ ರೋಹಿತ್ ಮತ್ತು ರವೀಂದ್ರ ಜಡೇಜಾ ಭಾರತಕ್ಕೆ ಆಸರೆಯಾದರು. ಇವರಿಬ್ಬರು ಆರನೇ ವಿಕೆಟ್‌ಗೆ 83 ರನ್ನುಗಳ ಮಹತ್ವದ ಜತೆಯಾಟ ನೀಡುವ ಮೂಲಕ ತಂಡವನ್ನು ಅಪಾಯದಿಂದ ಪಾರು ಮಾಡುವ ಯತ್ನ ಮಾಡಿದರು.

ಈ ನಡುವೆ ಜಡೇಜಾ (38) ವಿಕೆಟ್ ಪಡೆದ ಕೀರಾನ್ ಪೊಲಾರ್ಡ್ ಮತ್ತೆ ಪಂದ್ಯದಲ್ಲಿ ಹಿಡಿತ ಸಾಧಿಸುವಲ್ಲಿ ನರೆವಾದರು. ಇದಾದ ಬೆನ್ನಲ್ಲೇ ರವಿಚಂದ್ರನ್ ಅಶ್ವಿನ್ (6) ಮತ್ತೊಮ್ಮೆ ರನೌಟ್ ಬಲೆಗೆ ಸಿಲುಕಿದರು.

ಆದರೆ ಮತ್ತೊಂದು ಬದಿಯಿಂದ ತಂಡಕ್ಕೆ ಆಸರೆಯಾಗಿದ್ದ ರೋಹಿತ್ ಶರ್ಮಾ ಮಾತ್ರ ಏಕಾಂಕಿ ಹೋರಾಟವನ್ನು ಮುಂದುವರಿಸಿದರು. ಆಕರ್ಷಕ ಅರ್ಧಶತಕ ಬಾರಿಸಿದಿ ರೋಹಿತ್ 72 ರನ್ ಗಳಿಸಿದರು.

ಇವರಿಗೆ ಉತ್ತಮ ಸಾಥ್ ನೀಡಿದ ಕರ್ನಾಟಕದ ವಿನಯ್ ಕುಮಾರ್ 18 ರನ್ನುಗಳ ಮಹತ್ವದ ನೆರವು ನೀಡಿದರು. ಆದರೆ ಅಂತಿಮ ಹಂತದಲ್ಲಿ ರೋಹಿತ್ ಹಾಗೂ ವಿನಯ್ ವಿಕೆಟುಗಳು ಬೆನ್ನು ಬೆನ್ನಿಗೆ ಪತನವಾಗುತ್ತಿದ್ದಂತೆಯೇ ಭಾರತದ ಗೆಲುವಿನ ಆಸೆ ಬಹುತೇಕ ಕಣ್ಮರೆಯಾಗಿತ್ತು.

ಆದರೆ ಬೌಲಿಂಗ್‌ನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಿರುವ ಯುವ ವೇಗಿಗಳಾದ ವರುಣ್ ಆರೋನ್ ಮತ್ತು ಉಮೇಶ್ ಯಾದವ್ ತಲಾ ಒಂದು ಬೌಂಡರಿಗಳನ್ನು ಬಾರಿಸುವ ಮೂಲಕ ಭಾರತಕ್ಕೆ ರೋಚಕ ಗೆಲುವು ಒದಗಿಸಕೊಟ್ಟರು. ತಲಾ ಆರು ರನ್ ಗಳಿಸಿದ ಅವರಿಬ್ಬರು ಅಜೇಯರಾಗುಳಿದರು.

ಅಂತಿಮವಾಗಿ ವಿಂಡೀಸ್ ಒಡ್ಡಿದ ಸವಾಲನ್ನು ಭಾರತ ಇನ್ನೂ ಏಳು ಎಸೆತಗಳು ಬಾಕಿ ಉಳಿದಿರುವಂತೆಯೇ ಒಂಬತ್ತು ವಿಕೆಟ್ ನಷ್ಟಕ್ಕೆ ತಲುಪಿತು. ವಿಂಡೀಸ್ ಪರ ಕೆಮರ್ ರೂಚ್ ಮೂರು ಹಾಗೂ ರಸ್ಸೆಲ್ ಎರಡು ವಿಕೆಟುಗಳನ್ನು ಕಬಳಿಸಿದರು.

PTI


ಭಾರತದ ನಿಖರ ದಾಳಿಗೆ ವಿಂಡೀಸ್ ತತ್ತರ...
ಇದಕ್ಕೂ ಮೊದಲು ವೇಗಿಗಳ ಹಾಗೂ ಸ್ಪಿನ್ನರುಗಳ ನಿಖರ ದಾಳಿಗೆ ಕುಸಿತ ಕಂಡಿದ್ದ ಪ್ರವಾಸಿ ವೆಸ್ಟ್‌ಇಂಡೀಸ್ ತಂಡವು ನಿಗದಿತ 50 ಓವರುಗಳಲ್ಲಿ ಒಂಬತ್ತು ವಿಕೆಟುಗಳ ನಷ್ಟಕ್ಕೆ 211 ರನ್ ಗಳಿಸಲಷ್ಟೇ ಶಕ್ತವಾಗಿತ್ತು.

ಪ್ರಾರಂಭದಲ್ಲಿ ವಿನಯ್ ಕುಮಾರ್, ಉಮೇಶ್ ಯಾದವ್ ಮತ್ತು ವರುಣ್ ಆರೋನ್ ಸೇರಿದ ಭಾರತದ ತ್ರಿವಳಿ ವೇಗದ ಪಡೆಯು ಅನನುಭವಿ ಎನಿಸಿಕೊಂಡಿತ್ತು. ಆದರೆ ವೇಗಿಗಳು ಸಂಘಟಿಸಿದ್ದ ಪ್ರಭಾವಿ ದಾಳಿಯ ನೆರವಿನಿಂದ ಪ್ರವಾಸಿಗರನ್ನು ಆರಂಭದಲ್ಲೇ ಕಟ್ಟಿಹಾಕುವಲ್ಲಿ ಭಾರತ ಯಶಸ್ವಿಯಾಗಿತ್ತು. ಮೊದಲ ಮೂರು ವಿಕೆಟುಗಳನ್ನು ಹಂಚಿಕೊಂಡ ಈ ಮೂವರು ವೇಗಿಗಳು ವಿಂಡೀಸ್ ಅಗ್ರ ಕ್ರಮಾಂಕಕ್ಕೆ ಕಡಿವಾಣ ಹಾಕಿದರು.

ಮೊದಲ ಹತ್ತು ಓವರುಗಳಲ್ಲಿಯೇ ಆಡ್ರಿಯಾನ್ ಭರತ್ (17), ಲಿಂಡಲ್ ಸಿಮನ್ಸ್ (19) ಮತ್ತು ಮಾರ್ಲನ್ ಸಾಮ್ಯುವೆಲ್ಸ್ (10) ವಿಕೆಟುಗಳನ್ನು ಕಳೆದುಕೊಂಡ ವಿಂಡೀಸ್ ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜತೆಗೂಡಿದ ಟೆಸ್ಟ್ ಸರಣಿಯ ವಿಂಡೀಸ್‌ನ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ಡ್ಯಾರೆನ್ ಬ್ರಾವೋ ಮತ್ತು ಡಾಜ್ಜಾ ಹೈಯಾಟ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡುವ ಯತ್ನ ಮಾಡಿದರು.

ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 75 ರನ್ನುಗಳ ಮಹತ್ವದ ಜತೆಯಾಟ ನೀಡಿದರು. ಆದರೆ 31 ರನ್ ಗಳಿಸಿದ್ದ ಹೈಯಾಟ್ ಹೆಚ್ಚು ಹೊತ್ತು ನಿಲ್ಲಲಿಲ್ಲ. ಇದಾದ ಬೆನ್ನಲ್ಲೇ ಕ್ರೀಸಿನಲ್ಲಿ ಸಾಕಷ್ಟು ಹೊತ್ತು ಬೆವರಿಳಿಸಿಕೊಂಡ ಕೀರಾನ್ ಪೊಲಾರ್ಡ್ ದುಬಾರಿಯಾಗಿ ವಿಕೆಟ್ ತೆತ್ತುವ ಮೂಲಕ ನಿರಾಸೆ ಅನುಭವಿಸಿದರು. 33 ಎಸೆತಗಳನ್ನು ಎದುರಿಸಿದ್ದ ಪೊಲಾರ್ಡ್ 13 ರನ್ ಗಳಿಸಲಷ್ಟೇ ಶಕ್ತವಾದರು.

ಇನ್ನೊಂದು ತುದಿಯಿಂದ ಆಕರ್ಷಕ ಅರ್ಧಶತಕ ಬಾರಿಸಿದ ಡ್ಯಾರೆನ್ ಬ್ರಾವೋ ವಿಂಡೀಸ್ ಮೊತ್ತವನ್ನು 150ರ ಗಡಿ ದಾಟಿಸಿದರು. 74 ಎಸೆತಗಳನ್ನು ಎದುರಿಸಿದ್ದ ಬ್ರಾವೋ ಆರು ಬೌಂಡರಿಗಳ ನೆರವಿನಿಂದ 60 ರನ್ ಗಳಿಸಿದ್ದರು.

ಇದಾದ ಬೆನ್ನಲ್ಲೇ ಪಟಪಟನೇ ವಿಕೆಟುಗಳನ್ನು ಕಳೆದುಕೊಂಡ ವಿಂಡೀಸ್ ಧಿಡೀರ್ ಕುಸಿತವನ್ನು ಕಂಡಿತ್ತು. ಒಂದು ಹಂತದಲ್ಲಿ 154/4 ಎಂಬಲ್ಲಿದ್ದ ಕೆರೆಬಿಯನ್ ತಂಡವು 183 ರನ್‌ಗಳಾಗುವಷ್ಟರಲ್ಲಿ ಎಂಟು ವಿಕೆಟುಗಳನ್ನು ಕಳೆದುಕೊಂಡಿತ್ತು. ಈ ಹಂತದಲ್ಲಿ 22 ರನ್ನುಗಳ ಮಹತ್ವದ ನೆರವು ನೀಡಿದ ಆಂಡ್ರೆ ರಸ್ಸೆಲ್ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಉಳಿದಂತೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ರಾಮ್‌ದಿನ್ (14), ನಾಯಕ ಡ್ಯಾರೆನ್ ಸಮ್ಮಿ (0), ಕೆಮರ್ ರೂಚ್ (12*) ಮತ್ತು ಆಂಟನಿ ಮಾರ್ಟಿನ್ (3*) ರನ್ ಗಳಿಸಿದರು.

ಅಂತಿಮವಾಗಿ ವಿಂಡೀಸ್ ತಂಡವು ಒಂಬತ್ತು ವಿಕೆಟ್ ನಷ್ಟಕ್ಕೆ 211 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಭಾರತದ ಪರ ಉಮೇಶ್ ಯಾದವ್ ಮತ್ತು ವರುಣ್ ಆರೋನ್ ತಲಾ ಎರಡು ಹಾಗೂ ವಿನಯ್ ಕುಮಾರ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಸುರೇಶ್ ರೈನಾ ತಲಾ ಒಂದು ವಿಕೆಟ್ ಕಿತ್ತರು.

ವೆಬ್ದುನಿಯಾವನ್ನು ಓದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments