Select Your Language

Notifications

webdunia
webdunia
webdunia
webdunia

ಯುವಿಯನ್ನು ಹಾಡಿ ಹೊಗಳಿದ ಬ್ರಿಟೀಷ್ ಮಾಧ್ಯಮಗಳು

ಯುವಿಯನ್ನು ಹಾಡಿ ಹೊಗಳಿದ ಬ್ರಿಟೀಷ್ ಮಾಧ್ಯಮಗಳು
ಲಂಡನ್ , ಶನಿವಾರ, 15 ನವೆಂಬರ್ 2008 (16:04 IST)
ಇಂಗ್ಲೆಂಡ್ ದಾಳಿಯನ್ನು ಸರಾಗವಾಗಿ ಪುಡಿಗಟ್ಟಿದ ಯುವರಾಜ್ ಸಿಂಗ್ ಬಗ್ಗೆ ಕೇವಲ ಭಾರತದ ಕ್ರಿಕೆಟ್ ಪ್ರೇಮಿಗಳಿಗಷ್ಟೇ ಅಭಿಮಾನ ಮ‌ೂಡಿರುವುದಲ್ಲ. ಇಂಗ್ಲೀಷ್ ಮಾಧ್ಯಮಗಳೂ ಈ ಬಗ್ಗೆ ಪುಟಗಟ್ಟಲೆ ಬರೆದಿವೆ. ಜತೆಗೆ ಕೆವಿನ್ ಪೀಟರ್ಸನ್ ಅವರ ಮಧುಚಂದ್ರದ ಅವಧಿ ಇಂಗ್ಲೆಂಡ್ ಕಪ್ತಾನನಾಗಿ ಮುಗಿದು ಹೋಗಿದೆ ಎಂದು ಹೇಳಿವೆ.

ಏಳು ಏಕದಿನ ಸರಣಿಯ ಮೊದಲ ಪಂದ್ಯವನ್ನು 158 ರನ್‌ಗಳ ಬೃಹತ್ ಅಂತರದಿಂದ ಕಳೆದುಕೊಂಡ ಬಗ್ಗೆ ಬ್ರಿಟೀಷ್ ಪತ್ರಿಕೆ 'ಡೈಲಿ ಮೈಲ್' ತನ್ನ ಶೀರ್ಷಿಕೆಯಲ್ಲಿ "ಇಂಗ್ಲೆಂಡನ್ನು ತದುಕಿ ಶರಣಾಗಿಸಿದ ಭಾರತ" ಎಂದು ಬರೆದಿದ್ದು, ಇಂಗ್ಲೆಂಡಿಗರು ಕಲಿಯುವುದು ತುಂಬಾ ಇದೆ ಎಂದಿದೆ.

ಯುವರಾಜ್ ಸಿಂಗ್ ಬೆನ್ನು ನೋವಿನಿಂದ ಬಳಲುತ್ತಿದ್ದರೂ ಮನಮೋಹಕವಾಗಿ ಬ್ಯಾಟ್ ಬೀಸಿ 138 ರನ್ ಗಳಿಸಿದ ಬಗ್ಗೆ ಇಂಗ್ಲೆಂಡಿನ ಜನಪ್ರಿಯ ಪತ್ರಿಕೆ 'ಡೈಲಿ ಮೈಲ್' "ನೋವಿನಿಂದ ನರಳುತ್ತಿದ್ದರೂ ಅದ್ಭುತ ಪ್ರದರ್ಶನ ತೋರಿದ ಯುವರಾಜ್ ಸಿಂಗ್ ಇಂಗ್ಲೆಂಡ್‌ನ್ನು ಬಹುದೂರ ನಿಲ್ಲಿಸಿದರು" ಎಂದು ಬಣ್ಣಿಸಿದೆ.

"ಯುವರಾಜ್ 37 ರನ್ನು ಗಳಿಸಿದ ನಂತರ ಸ್ನಾಯುಸೆಳೆತಕ್ಕೊಳಗಾದಾಗ ರನ್ನರ್ ಅನ್ನು ಕರೆಸಲಾಯಿತು. ನಂತರ ಅವರು ಏಕದಿನದಲ್ಲಿ ಎರಡನೇ ಅತಿವೇಗದ ಶತಕ ದಾಖಲಿಸಿದ ಭಾರತೀಯ ಮತ್ತು 18ನೇ ಅತಿವೇಗದ ಶತಕ ಎಂಬ ದಾಖಲೆಯನ್ನೂ ಬರೆದರು. ಆತ ಫಿಟ್ ಎನಿಸಿದ ಮೇಲೆ ಏನು ಮಾಡುತ್ತಾರೆ ಎಂಬುದು ದೇವರೇ ಬಲ್ಲ" ಎಂದು ಪತ್ರಿಕೆ ಬರೆದಿದೆ.

ದಕ್ಷಿಣ ಆಫ್ರಿಕಾದೆದುರಿನ ಏಕದಿನ ಸರಣಿಯನ್ನು ಗೆದ್ದುಕೊಂಡ ನಂತರ ಯಶಸ್ವಿಯಾಗಿದ್ದ ಹೊಸ ಕಪ್ತಾನ ಪೀಟರ್ಸನ್‌ಗೆ ಈ ಸೋಲು ನೋವಿನ ಮ‌ೂಲಕ ಎಚ್ಚೆತ್ತುಕೊಳ್ಳುವಂತೆ ಮಾಡಿದೆ ಮತ್ತು ತಂಡದ ಪ್ರತಿಯೊಬ್ಬರೂ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ ಎಂದು ಮತ್ತೊಂದು ಪತ್ರಿಕೆ 'ಡೈಲಿ ಟೆಲಿಗ್ರಾಫ್' ವರದಿ ಮಾಡಿದೆ.

"ಇಂಗ್ಲೆಂಡ್ ಕ್ರಿಕೆಟ್ ತಂಡದ ಅಧಿಕೃತ ಕಪ್ತಾನಗಿರಿ ಪೀಟರ್ಸನ್ ಕೈಗೆ ಬಂದ ನಂತರದ ಐದು ಗೆಲುವುಗಳ ಸಂದರ್ಭದಲ್ಲಿ ಅವರು ಯಾವ ತಪ್ಪುಗಳನ್ನೂ ಮಾಡಿರಲಿಲ್ಲ. ಆದರೀಗ ಅವರು ಜೀವನದ ಕಷ್ಟದ ದಿನಗಳನ್ನು ಯಾತನೆಯೊಂದಿಗೆ ಜ್ಞಾಪಿಸಿಕೊಳ್ಳಬೇಕಾಗಿದೆ" ಎಂದು ಡೈಲಿ ಟೆಲಿಗ್ರಾಫ್ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.


Share this Story:

Follow Webdunia kannada