Select Your Language

Notifications

webdunia
webdunia
webdunia
webdunia

ಭಾರತದ ನಿಖರ ದಾಳಿಗೆ ವಿಂಡೀಸ್ ತತ್ತರ; ಟಾರ್ಗೆಟ್ 212

ಭಾರತದ ನಿಖರ ದಾಳಿಗೆ ವಿಂಡೀಸ್ ತತ್ತರ; ಟಾರ್ಗೆಟ್ 212
ಕಟಕ್ , ಮಂಗಳವಾರ, 29 ನವೆಂಬರ್ 2011 (17:56 IST)
PTI


ವೇಗಿಗಳು ಸೇರಿದಂತೆ ಸ್ಪಿನ್ನರುಗಳ ನಿಖರ ದಾಳಿಗೆ ಕುಸಿತ ಕಂಡಿರುವ ಪ್ರವಾಸಿ ವೆಸ್ಟ್‌ಇಂಡೀಸ್ ತಂಡವು ಇಲ್ಲಿ ಆತಿಥೇಯ ಭಾರತ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು, ನಿಗದಿತ 50 ಓವರುಗಳಲ್ಲಿ ಒಂಬತ್ತು ವಿಕೆಟುಗಳ ನಷ್ಟಕ್ಕೆ 211 ರನ್ ಗಳಿಸಲಷ್ಟೇ ಶಕ್ತವಾಗಿದೆ.

ಪ್ರಾರಂಭದಲ್ಲಿ ವಿನಯ್ ಕುಮಾರ್, ಉಮೇಶ್ ಯಾದವ್ ಮತ್ತು ವರುಣ್ ಆರೋನ್ ಸೇರಿದ ಭಾರತದ ತ್ರಿವಳಿ ವೇಗದ ಪಡೆಯು ಅನನುಭವಿ ಎನಿಸಿಕೊಂಡಿತ್ತು. ಆದರೆ ವೇಗಿಗಳು ಸಂಘಟಿಸಿದ್ದ ಪ್ರಭಾವಿ ದಾಳಿಯ ನೆರವಿನಿಂದ ಪ್ರವಾಸಿಗರನ್ನು ಆರಂಭದಲ್ಲೇ ಕಟ್ಟಿಹಾಕುವಲ್ಲಿ ಭಾರತ ಯಶಸ್ವಿಯಾಗಿತ್ತು. ಮೊದಲ ಮೂರು ವಿಕೆಟುಗಳನ್ನು ಹಂಚಿಕೊಂಡ ಈ ಮೂವರು ವೇಗಿಗಳು ವಿಂಡೀಸ್ ಅಗ್ರ ಕ್ರಮಾಂಕಕ್ಕೆ ಕಡಿವಾಣ ಹಾಕಿದರು.

ಮೊದಲ ಹತ್ತು ಓವರುಗಳಲ್ಲಿಯೇ ಆಡ್ರಿಯಾನ್ ಭರತ್ (17), ಲಿಂಡಲ್ ಸಿಮನ್ಸ್ (19) ಮತ್ತು ಮಾರ್ಲನ್ ಸಾಮ್ಯುವೆಲ್ಸ್ (10) ವಿಕೆಟುಗಳನ್ನು ಕಳೆದುಕೊಂಡ ವಿಂಡೀಸ್ ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜತೆಗೂಡಿದ ಟೆಸ್ಟ್ ಸರಣಿಯ ವಿಂಡೀಸ್‌ನ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ಡ್ಯಾರೆನ್ ಬ್ರಾವೋ ಮತ್ತು ಡಾಜ್ಜಾ ಹೈಯಾಟ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡುವ ಯತ್ನ ಮಾಡಿದರು.

ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 75 ರನ್ನುಗಳ ಮಹತ್ವದ ಜತೆಯಾಟ ನೀಡಿದರು. ಆದರೆ 31 ರನ್ ಗಳಿಸಿದ್ದ ಹೈಯಾಟ್ ಹೆಚ್ಚು ಹೊತ್ತು ನಿಲ್ಲಲಿಲ್ಲ. ಇದಾದ ಬೆನ್ನಲ್ಲೇ ಕ್ರೀಸಿನಲ್ಲಿ ಸಾಕಷ್ಟು ಹೊತ್ತು ಬೆವರಿಳಿಸಿಕೊಂಡ ಕೀರಾನ್ ಪೊಲಾರ್ಡ್ ದುಬಾರಿಯಾಗಿ ವಿಕೆಟ್ ತೆತ್ತುವ ಮೂಲಕ ನಿರಾಸೆ ಅನುಭವಿಸಿದರು. 33 ಎಸೆತಗಳನ್ನು ಎದುರಿಸಿದ್ದ ಪೊಲಾರ್ಡ್ 13 ರನ್ ಗಳಿಸಲಷ್ಟೇ ಶಕ್ತವಾದರು.

ಇನ್ನೊಂದು ತುದಿಯಿಂದ ಆಕರ್ಷಕ ಅರ್ಧಶತಕ ಬಾರಿಸಿದ ಡ್ಯಾರೆನ್ ಬ್ರಾವೋ ವಿಂಡೀಸ್ ಮೊತ್ತವನ್ನು 150ರ ಗಡಿ ದಾಟಿಸಿದರು. 74 ಎಸೆತಗಳನ್ನು ಎದುರಿಸಿದ್ದ ಬ್ರಾವೋ ಆರು ಬೌಂಡರಿಗಳ ನೆರವಿನಿಂದ 60 ರನ್ ಗಳಿಸಿದ್ದರು.

ಇದಾದ ಬೆನ್ನಲ್ಲೇ ಪಟಪಟನೇ ವಿಕೆಟುಗಳನ್ನು ಕಳೆದುಕೊಂಡ ವಿಂಡೀಸ್ ಧಿಡೀರ್ ಕುಸಿತವನ್ನು ಕಂಡಿತ್ತು. ಒಂದು ಹಂತದಲ್ಲಿ 154/4 ಎಂಬಲ್ಲಿದ್ದ ಕೆರೆಬಿಯನ್ ತಂಡವು 183 ರನ್‌ಗಳಾಗುವಷ್ಟರಲ್ಲಿ ಎಂಟು ವಿಕೆಟುಗಳನ್ನು ಕಳೆದುಕೊಂಡಿತ್ತು. ಈ ಹಂತದಲ್ಲಿ 22 ರನ್ನುಗಳ ಮಹತ್ವದ ನೆರವು ನೀಡಿದ ಆಂಡ್ರೆ ರಸ್ಸೆಲ್ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಉಳಿದಂತೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ರಾಮ್‌ದಿನ್ (14), ನಾಯಕ ಡ್ಯಾರೆನ್ ಸಮ್ಮಿ (0), ಕೆಮರ್ ರೂಚ್ (12*) ಮತ್ತು ಆಂಟನಿ ಮಾರ್ಟಿನ್ (3*) ರನ್ ಗಳಿಸಿದರು.

ಅಂತಿಮವಾಗಿ ವಿಂಡೀಸ್ ತಂಡವು ಒಂಬತ್ತು ವಿಕೆಟ್ ನಷ್ಟಕ್ಕೆ 211 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಭಾರತದ ಪರ ಉಮೇಶ್ ಯಾದವ್ ಮತ್ತು ವರುಣ್ ಆರೋನ್ ತಲಾ ಎರಡು ಹಾಗೂ ವಿನಯ್ ಕುಮಾರ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಸುರೇಶ್ ರೈನಾ ತಲಾ ಒಂದು ವಿಕೆಟ್ ಕಿತ್ತರು.

Share this Story:

Follow Webdunia kannada