Select Your Language

Notifications

webdunia
webdunia
webdunia
webdunia

ಬ್ರಿಟೀಷ್ ಮಾಧ್ಯಮಗಳಿಂದ ಸಚಿನ್ ಪ್ರಶಂಸೆ

ಬ್ರಿಟೀಷ್ ಮಾಧ್ಯಮಗಳಿಂದ ಸಚಿನ್ ಪ್ರಶಂಸೆ
ಲಂಡನ್ , ಮಂಗಳವಾರ, 16 ಡಿಸೆಂಬರ್ 2008 (16:40 IST)
ಸಚಿನ್ ತೆಂಡೂಲ್ಕರ್ ಇಂಗ್ಲೆಂಡ್ ತಂಡವನ್ನು ಹೊಸಕಿ ಹಾಕಿದರು ಎಂದು ಬ್ರಿಟೀಷ್ ಮಾಧ್ಯಮಗಳು ಒಕ್ಕೊರಲಿನಿಂದ ಶ್ಲಾಘಿಸಿದ್ದು, ಇಂಗ್ಲೆಂಡ್ ತಂಡದ ಬೌಲಿಂಗ್ ವೈಫಲ್ಯವನ್ನು ಕಟುವಾಗಿ ಟೀಕಿಸಿವೆ.

ಚೆನ್ನೈಯಲ್ಲಿ ದಾಖಲಿಸಿದ ಮೊದಲ ಟೆಸ್ಟ್ ಜಯ ಕ್ರಿಕೆಟ್ ಇತಿಹಾಸದಲ್ಲೇ ಗಮನಾರ್ಹವಾಗಿದ್ದು, ಭಾರತವು ನಂಬರ್ ವನ್ ಸ್ಥಾನದತ್ತ ದಾಪುಗಾಲು ಹಾಕುತ್ತಿರುವ ಮುನ್ಸೂಚನೆ ಎಂಬಂತಹ ವರದಿಗಳನ್ನು ಮಾಧ್ಯಮಗಳು ಬೊಟ್ಟು ಮಾಡಿವೆ.

ಮಂಬೈ ಹತ್ಯಾಕಾಂಡದಿಂದ ತೆಂಡೂಲ್ಕರ್ ಅವರ ಭಾವನಾತ್ಮಕ ಸಂಬಂಧದ ಪ್ರಚೋದನೆ ಅಂತಿಮ ಹಂತದಲ್ಲಿ ಬ್ಯಾಟಿನ ಮ‌ೂಲಕ ಕೆಲಸ ಮಾಡಿದ್ದು, ಅವರ ಮಗಳು ಹೋಗುವ ಶಾಲೆಯಲ್ಲಿನ ವಿದ್ಯಾರ್ಥಿಗಳ ಇಬ್ಬರು ಹೆತ್ತವರು ಕೂಡ ಉಗ್ರರ ದಾಳಿಗೆ ಬಲಿಯಾಗಿದ್ದನ್ನು ಪಂದ್ಯ ಮುಗಿದ ನಂತರ ಬಹಿರಂಗಗೊಳಿಸಿದ್ದರು.

"ಭಾರತವು ಪಂದ್ಯವನ್ನು ಬೇರೆಯದೇ ಆದ ರೀತಿಯಲ್ಲಿ ಕೊಂಡೊಯ್ದಿತು. ಐದನೇ ದಿನ 387 ರನ್ನುಗಳನ್ನು ಯಶಸ್ವಿಯಾಗಿ ಬೆಂಬತ್ತುವ ಮ‌ೂಲಕ ಟೆಸ್ಟ್ ಇತಿಹಾಸದಲ್ಲೇ ನಾಲ್ಕನೇ ಅತಿ ಹೆಚ್ಚಿನ ಚೇಸ್ ಮಾಡಿದ ದಾಖಲೆ, ಉಪಖಂಡದಲ್ಲಿ ಅತಿ ಹೆಚ್ಚು ರನ್ ಚೇಸ್ ಮಾಡಿದ ದಾಖಲೆ ಬರೆದು ಎದುರಾಳಿಗಳನ್ನು ಧೂಳೀಪಟ ಮಾಡಲಾಯಿತು" ಎಂದು ಇಂಗ್ಲೆಂಡ್‌ನ ಮಾಜಿ ಆಟಗಾರ ಡರೆಕ್ ಪ್ರಿಂಗಲ್ 'ಡೈಲೀ ಟೆಲಿಗ್ರಾಫ್' ಪತ್ರಿಕೆಯ ಅಂಕಣವೊಂದರಲ್ಲಿ ಹೇಳಿದ್ದಾರೆ.

"ಮೊದಲ ಟೆಸ್ಟ್‌ನಲ್ಲಿ ದಾಖಲಿಸಿದ 41ನೇ ಶತಕವನ್ನು ಮುಂಬೈ ಘಟನೆಯ ಸಂತ್ರಸ್ತರಿಗೆ ಸಮರ್ಪಿಸಿದ ನಂತರ ಸಚಿನ್ ತೆಂಡೂಲ್ಕರ್ ಅವರ ಖ್ಯಾತಿ ಭಾರತೀಯರ ಮನಸ್ಸಿನಲ್ಲಿ ಗಾಢವಾಗಿ ಅಚ್ಚೊತ್ತಲಿದೆ" ಎಂದು ಇಂಗ್ಲೆಂಡ್‌ನ ಮಾಜಿ ಕಪ್ತಾನ ಮೈಕ್ ಆರ್ಥರ್‌ಟನ್ 'ದಿ ಟೈಮ್ಸ್'ನಲ್ಲಿ ಬರೆದಿದ್ದಾರೆ.

ಇಂಗ್ಲೆಂಡ್ ಭಾರತ ಪ್ರವಾಸ ಮಾಡಿರುವುದು ಉತ್ತಮ ಕೆಲಸವೆಂದು ಪ್ರಶಂಸಿಸಿರುವ ಅವರು, ಚೆನ್ನೈಯ ಎಂ.ಎ. ಚಿದಂಬರಮ್ ಕ್ರೀಡಾಂಗಣ ನಾಲ್ಕನೇ ಮ‌ೂರು ಭಾಗದಷ್ಟು ತುಂಬಿರುವುದು ಸ್ವಾಗತದ ಚಿಹ್ನೆ ಎಂದು ಹೇಳಿದ್ದಾರೆ.

"ಅಂತಹಾ ಘಟನೆಯ ನಂತರವೂ ಬಿಗಿ ಭದ್ರತೆಯಲ್ಲಿ ನಡೆಯುತ್ತಿದ್ದ ಪಂದ್ಯಕ್ಕೆ ಸುಮಾರು 95 ಸಾವಿರದಷ್ಟು ಪ್ರೇಕ್ಷಕರು ಬಂದಿದ್ದಾರೆಂದರೆ ಭಾರತದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಇನ್ನೂ ಭವಿಷ್ಯವಿದೆ ಎಂಬುದನ್ನು ನಿರೂಪಿಸಿದಂತಾಗಿದೆ" ಎಂದು 'ದಿ ಗಾರ್ಡಿಯನ್' ವರದಿ ಮಾಡಿದೆ.

"ಮುಂಬೈ ಹತ್ಯಾಕಾಂಡದ ಬಗೆಗಿದ್ದ ಸಚಿನ್ ತೆಂಡೂಲ್ಕರ್ ಅಸಮಾಧಾನ ಚೆನ್ನೈ ಟೆಸ್ಟ್‌ನಲ್ಲಿ ಸ್ಪಷ್ಟವಾಗಿ ಗೋಚರಿಸಿತ್ತು. ಉಗ್ರರೆಡೆಗಿದ್ದ ತಿರಸ್ಕಾರದ ಮಾತುಗಳು ದೇಶವನ್ನು ಎಚ್ಚರಿಸುವಂತಿತ್ತು" ಎಂದು ಪತ್ರಿಕೆ ಹೇಳಿದೆ.

ಅದೇ ಹೊತ್ತಿಗೆ ಚೆಪೌಕ್ ಪಿಚ್ ಒಡೆದು ಹೋಗಿ ಗುಂಡಿಗಳಾಗಿದ್ದವು ಎಂದಿರುವ ಪತ್ರಿಕೆ, "ಅವರ ವಿಜಯಕ್ಕೆ ಈ ಪ್ರಶ್ನೆ ಹೊರತಾಗಿದೆಯಾದರೂ ಪಿಚ್ ಮಾತ್ರ ಭಾರತದ ಇತ್ತೀಚಿನ ಚಂದ್ರಯಾನ ನೌಕೆ ಕಳುಹಿಸಿದ ಚಿತ್ರಗಳಂತಿತ್ತು. ಬಹುಶಃ ಭಾರತ ಸರಕಾರ ಚೆಪೌಕ್ ಪಿಚ್‌ ಚಿತ್ರಗಳನ್ನೇ ಕಳುಹಿಸಿರಬೇಕು. ಹಾಗಾಗಿ ಚಂದ್ರಯಾನದ ಬಗ್ಗೆ ನಂಬಿಕೆಯ ಪ್ರಶ್ನೆಗಳೆದ್ದಿದ್ದವು" ಎಂದು ವ್ಯಂಗ್ಯವಾಡಿದೆ.

ಆರಂಭದಿಂದಲೇ ಪ್ರಬಲವಾಗಿ ಮ‌ೂಡಿ ಬಂದಿದ್ದ ತಂಡ ಕೊನೆಗೆ ಟೆಸ್ಟ್ ಹಿಡಿತ ಕಳೆದುಕೊಂಡದ್ದಕ್ಕೆ ಇಂಗ್ಲೆಂಡ್ ತಂಡವನ್ನೂ ಮಾಧ್ಯಮಗಳು ತೆಗಳಿವೆ. "ಕೊನೆಯ ಎರಡು ದಿನ ಪಂದ್ಯದಲ್ಲಿ ತಮ್ಮ ಹಿಡಿತವನ್ನು ಕಳೆದುಕೊಂಡು ಟೆಸ್ಟ್ ಸೋಲುಂಡ ಇಂಗ್ಲೆಂಡ್ ತಂಡ ತಮ್ಮನ್ನು ತಾವೇ ಟೀಕಿಸಿಕೊಳ್ಳಬೇಕಿದೆ" ಎಂದು 'ದಿ ಡೈಲೀ ಟೆಲಿಗ್ರಾಫ್' ಹೇಳಿದೆ.

ಅದೇ ರೀತಿ 'ದಿ ಗಾರ್ಡಿಯನ್' ಕೂಡ ಇಂಗ್ಲೆಂಡ್ ಬೌಲರುಗಳನ್ನು ಹಿಗ್ಗಾಮುಗ್ಗಾ ಹೀಗಳೆದಿದೆ. ಅಲ್ಲಿನ ಬೌಲರುಗಳ ಬಗ್ಗೆಯೇ ಸಂಶಯ ವ್ಯಕ್ತಪಡಿಸಿರುವ ಪತ್ರಿಕೆ, ಏಕದಿನದಲ್ಲಿ 5-0ಯಿಂದ ಸೋಲುಂಡದ್ದು, ಟೆಸ್ಟ್ ಪಂದ್ಯವನ್ನು ಕೊನೆ ಹಂತದಲ್ಲಿ ಕಳೆದುಕೊಂಡದನ್ನು ಎದುರಿಗಿಟ್ಟಿದೆ.

Share this Story:

Follow Webdunia kannada