Select Your Language

Notifications

webdunia
webdunia
webdunia
webdunia

ಬಾಂಗ್ಲಾವನ್ನು 107 ರನ್‌ಗಳಿಂದ ಮಣಿಸಿದ ಲಂಕಾ

ಬಾಂಗ್ಲಾವನ್ನು 107 ರನ್‌ಗಳಿಂದ ಮಣಿಸಿದ ಲಂಕಾ
ಢಾಕಾ , ಶನಿವಾರ, 3 ಜನವರಿ 2009 (19:53 IST)
ಎರಡು ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಬಾಂಗ್ಲಾದೇಶದ ವಿರುದ್ಧ 107 ರನ್‌ಗಳ ಭರ್ಜರಿ ಅಂತರದಿಂದ ಶ್ರೀಲಂಕಾ ಗೆದ್ದುಕೊಂಡಿದೆ. ಅಶ್ರಫುಲ್ (101), ಶಾಕಿಬ್ (96), ಮುಸಾಫಿರ್ (61) ಅತ್ಯುತ್ತಮ ಆಟವಾಡಿದರೂ ಟೆಸ್ಟನ್ನು ತಮ್ಮ ಕಡೆ ಸೆಳೆದುಕೊಳ್ಳುವಲ್ಲಿ ವಿಫಲರಾದರು.

ಬಾಂಗ್ಲಾದೇಶ- ಶ್ರೀಲಂಕಾ ಟೆಸ್ಟ್ ಸರಣಿಯ ಮೊದಲ ಟೆಸ್ಟ್‌ನ ಕೊನೆಯ ದಿನದಾಟ ಇಂದು ಢಾಕಾದಲ್ಲಿ ನಡೆಯಿತು. ಶ್ರೀಲಂಕಾ ನೀಡಿದ್ದ 521ರ ಗುರಿಯನ್ನು ಬೆನ್ನತ್ತುವಲ್ಲಿ ಉತ್ತಮ ಪ್ರದರ್ಶನ ತೋರಿದರೂ ಬಾಂಗ್ಲಾ ಗೆಲುವು ಸಾಧಿಸಲಾಗಲಿಲ್ಲ. ಸರಣಿಯ ಮೊದಲ ಟೆಸ್ಟನ್ನು 107 ರನ್‌ಗಳ ಅಂತರದಿಂದ ಮಡಿಲಿಗೆ ಹಾಕಿಕೊಂಡಿರುವ ಶ್ರೀಲಂಕಾ 1-0 ಅಂತರದಲ್ಲಿದೆ.

ಎರಡೂ ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ (ಮೊದಲ ಇನ್ನಿಂಗ್ಸ್ 26 ರನ್; 5 ವಿಕೆಟ್ ಹಾಗೂ ಎರಡನೇ ಇನ್ನಿಂಗ್ಸ್ 96 ರನ್; 1 ವಿಕೆಟ್) ನೀಡಿರುವ ಬಾಂಗ್ಲಾದೇಶದ ಶಾಕಿಬ್ ಅಲ್ ಹಸನ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನಾಲ್ಕನೇ ದಿನದಂತ್ಯಕ್ಕೆ ಉತ್ತಮ ಜತೆಯಾಟ ನೀಡುತ್ತಿದ್ದ ಕಪ್ತಾನ ಮೊಹಮ್ಮದ್ ಅಶ್ರಫುಲ್ ಅರ್ಧಶತಕ (70) ಹಾಗೂ ಶಾಕಿಬ್ ಅಲ್ ಹಸನ್ 34 ರನ್ ಗಳಿಸಿದ್ದರು. ಆ ಮ‌ೂಲಕ ಬಾಂಗ್ಲಾ 5 ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿತ್ತು. ಇಂದು ಬ್ಯಾಟಿಂಗ್ ಮುಂದುವರಿಸಿದ ಜೋಡಿ ಶ್ರೀಲಂಕಾ ಬೌಲರುಗಳನ್ನು ಬಹಳಷ್ಟು ಹೊತ್ತು ದಂಡಿಸಿ ಗೆಲುವಿನತ್ತ ಸಾಗುವ ಲಕ್ಷಣಗಳನ್ನು ತೋರಿಸಿದ್ದರೂ ಸಫಲತೆ ಕಾಣಲಿಲ್ಲ. ಅಶ್ರಫುಲ್ ಆಕರ್ಷಕ ಶತಕ (101) ಗಳಿಸುವಷ್ಟರಲ್ಲಿ ವಾಸ್ ಎಸೆತಕ್ಕೆ ವಿಕೆಟ್ ಒಪ್ಪಿಸಿದರು. ಬೆನ್ನಿಗೆ ಶಾಕಿಬ್ ಅಲ್ ಹಸನ್ ಶತಕದಂಚಿನಲ್ಲಿ (96) ಎಡವಿ ಪ್ರಸಾದ್‌ಗೆ ಬಲಿಯಾದರು. ಮುಸಾಫಿರ್ ರಹೀಮ್ ಅರ್ಧಶತಕ (61) ದಾಖಲಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರೆ, ಮುಶರಫೆ ಮೊರ್ತಾಜ (2), ಮಹಬುಬುಲ್ ಅಲಮ್ (2) ನಿರಾಸೆ ಮ‌ೂಡಿಸಿದರು. ಸಾಹದತ್ ಹೊಸೈನ್ ಯಾವುದೇ ರನ್ ಗಳಿಸದೆ ಅಜೇಯರಾಗುಳಿದರು. ಆ ಮ‌ೂಲಕ ಬಾಂಗ್ಲಾದೇಶ ತನ್ನೆಲ್ಲಾ ವಿಕೆಟುಗಳನ್ನು ಕಳೆದುಕೊಂಡು 126.2 ಓವರುಗಳಲ್ಲಿ 413 ರನ್ ಗಳಿಸಿತ್ತು. ಶ್ರೀಲಂಕಾ ನೀಡಿದ್ದ 521ರ ಗುರಿಯನ್ನು ತಲುಪಲು ವಿಫಲವಾಗಿ 107 ರನ್ನುಗಳ ಅಂತರದಿಂದ ಮೊದಲ ಟೆಸ್ಟನ್ನು ಬಾಂಗ್ಲಾ ಕೈ ಚೆಲ್ಲಿದೆ.

ಶ್ರೀಲಂಕಾ ಪರ ಮುತ್ತಯ್ಯ ಮುರಳೀಧರನ್ 4, ಧಮ್ಮಿಕಾ ಪ್ರಸಾದ್ 3 ಹಾಗೂ ಚಮಿಂಡಾ ವಾಸ್ 1 ವಿಕೆಟ್ ಪಡೆದರು. ಮುರಳೀಧರನ್ ಮೊದಲ ಇನ್ನಿಂಗ್ಸಿನಲ್ಲಿ 6 ವಿಕೆಟ್ ಪಡೆದು ಮಿಂಚಿದ್ದರು.

ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ 293 ಮತ್ತು 405/6
ಬಾಂಗ್ಲಾದೇಶ 178 ಮತ್ತು 413

Share this Story:

Follow Webdunia kannada