Select Your Language

Notifications

webdunia
webdunia
webdunia
webdunia

ಧೋನಿ ಮತ್ತೆ ಅಭಿಮಾನಿಗಳ ಹೃದಯ ಗೆಲ್ಲುತ್ತಾರಂತೆ..!

ಧೋನಿ ಮತ್ತೆ ಅಭಿಮಾನಿಗಳ ಹೃದಯ ಗೆಲ್ಲುತ್ತಾರಂತೆ..!
ಲಂಡನ್ , ಬುಧವಾರ, 17 ಜೂನ್ 2009 (11:37 IST)
ವಿಶ್ವಕಪ್‌ನಿಂದ ಅವಮಾನಕಾರಿಯಾಗಿ ದಬ್ಬಿಸಿಕೊಂಡಿರುವ ಹಾಲಿ ಚಾಂಪಿಯನ್ ಭಾರತದ ಕಪ್ತಾನ ಮಹೇಂದ್ರ ಸಿಂಗ್ ಧೋನಿ ತವರಿನ ಅಭಿಮಾನಿಗಳ ಆಕ್ರೋಶದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲವಂತೆ; ಬಿದ್ದಾಗ ಗುದ್ದುವ ಅಭಿಮಾನಿಗಳ ಮನಸ್ಸನ್ನು ಅತ್ಯುತ್ತಮ ಪ್ರದರ್ಶನದ ಮೂಲಕ ಮತ್ತೆ ಗೆಲ್ಲುವ ವಿಶ್ವಾಸ ಅವರದ್ದು.

"ನಾವು ಅತ್ಯುತ್ತಮ ಪ್ರದರ್ಶನ ನೀಡುವಾಗ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತದೆ. ಅದೇ ನಮ್ಮಿಂದ ಅದು ಸಾಧ್ಯವಾಗದೇ ಇದ್ದಾಗ ತೀವ್ರತರವಾದ ಟೀಕಾಸ್ತ್ರಗಳನ್ನೆಸೆಯುತ್ತಾರೆ-- ಇದು ಭಾರತ. ಇಂತವುಗಳನ್ನೆಲ್ಲ ನಾನು ಆಟದ ಭಾಗ ಮತ್ತು ಪ್ರಕ್ರಿಯೆ ಎಂದು ಭಾವಿಸುತ್ತೇನೆ ಮತ್ತು ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ" ಎಂದು ಪಂದ್ಯಕ್ಕೂ ಮೊದಲು ಮಾತನಾಡುತ್ತಾ ಧೋನಿ ತಿಳಿಸಿದ್ದರು.

ಪರಾಜಯಗೊಂಡ ತಂಡದ ನಾಯಕನಾಗಿರುವ ಕಾರಣಕ್ಕೆ ಅಭಿಮಾನಿಗಳು ನೇರ ಧೋನಿಯವರನ್ನೇ ಗುರಿ ಮಾಡಿಕೊಂಡು ಪ್ರತಿಭಟನೆ, ಪ್ರತಿಕೃತಿ ದಹನವನ್ನು ಮಾಡುತ್ತಿದ್ದಾರೆ. ಜತೆಗೆ ಅವರ ನಾಯಕತ್ವವನ್ನೂ ಪ್ರಶ್ನಿಸುತ್ತಿದ್ದಾರೆ.

ಆದರೆ ಇಂತಹ ಪರಿಸ್ಥಿತಿಯನ್ನು ಬದಲಾಯಿಸುವ ಭರವಸೆ ಧೋನಿಯದ್ದು. ಮುಂದೆ ಶ್ರೇಷ್ಠ ಪ್ರದರ್ಶನ ನೀಡುವ ಮೂಲಕ ಪಂದ್ಯಗಳನ್ನು ಗೆದ್ದುಕೊಂಡು ಅಭಿಮಾನಿಗಳ ಹೃದಯಕ್ಕೆ ಮರಳಿ ಲಗ್ಗೆಯಿಡುತ್ತೇವೆ ಎನ್ನುತ್ತಾರೆ.

"ನಮ್ಮಿಂದ ಮುಂದಕ್ಕೆ ಕೆಲವು ಶ್ರೇಷ್ಠ ನಿರ್ವಹಣೆಗಳು ಬಂದಾಗ ಅವರು ಖಂಡಿತಾ ನಮ್ಮ ಬಗ್ಗೆ ಮತ್ತೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಎಂಬ ಭರವಸೆ ನನಗಿದೆ" ಎಂದು ರಾಂಚಿ ಹುಡುಗ ತಿಳಿಸಿದ್ದಾರೆ.

ಪ್ರೇಕ್ಷಕರ ಬೆಂಬಲದ ಬಗ್ಗೆ ಪ್ರಶ್ನಿಸಿದಾಗ ಧೋನಿ, "ಇಂಗ್ಲೆಂಡ್‌ನಲ್ಲಿ ಆಡುವಾಗ ನಮಗೆ ಯಾವತ್ತೂ ಬೆಂಬಲದ ಕೊರತೆಯಾಗಿಲ್ಲ. ಈ ಬಾರಿಯೂ ಅದೇ ನಡೆದಿದೆ. ಆದರೆ ನಾವು ಪಂದ್ಯಗಳನ್ನು ಗೆಲ್ಲಬೇಕು; ಇಲ್ಲದೆ ಹೋದರೆ ಆಟದ ಅಂತ್ಯದಲ್ಲಿ ನಮ್ಮ ವಿರುದ್ಧವೇ ಅವರು ತಿರುಗಿ ಬೀಳುತ್ತಾರೆ" ಎಂದರು.

ಟ್ವೆಂಟಿ-20 ವಿಶ್ವಕಪ್ ಸೋಲಿನ ಹಿನ್ನಲೆಯಲ್ಲಿ ಧೋನಿ ಸೇರಿದಂತೆ ಟೀಮ್ ಇಂಡಿಯಾ ಹಲವು ಆಟಗಾರರ ಪ್ರತಿಕೃತಿಗಳನ್ನು ದಹಿಸಿದ್ದಲ್ಲದೆ ದೇಶದಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಈ ಹಿನ್ನಲೆಯಲ್ಲಿ ಧೋನಿಯವರ ಕುಟುಂಬಿಕರಿಗೆ ಗರಿಷ್ಠ ಭದ್ರತೆಯನ್ನೂ ನೀಡಲಾಗಿತ್ತು.

Share this Story:

Follow Webdunia kannada