ತೆಂಡೂಲ್ಕರ್ 67 ನಾಟೌಟ್; ವಿಂಡೀಸ್‌ಗೆ ಭಾರತದ ದಿಟ್ಟ ಉತ್ತರ
ಮುಂಬೈ , ಗುರುವಾರ, 24 ನವೆಂಬರ್ 2011 (17:02 IST)
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (67*), ರಾಹುಲ್ ದ್ರಾವಿಡ್ (82) ಮತ್ತು ಗೌತಮ್ ಗಂಭೀರ್ (55) ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ವೆಸ್ಟ್ಇಂಡೀಸ್ ತಂಡದ ಮೊದಲ ಇನ್ನಿಂಗ್ಸ್‌ನ ಮೊತ್ತವಾದ 590 ರನ್ನುಗಳಿಗೆ ದಿಟ್ಟ ಉತ್ತರವನ್ನೇ ನೀಡಿರುವ ಆತಿಥೇಯ ಭಾರತ ತಂಡವು ಮೂರನೇ ದಿನದಾಟದ ಅಂತ್ಯಕ್ಕೆ 80 ಓವರುಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 281 ರನ್ ಪೇರಿಸಿದೆ. ಇದೀಗ ಏಳು ವಿಕೆಟ್ ಬಾಕಿ ಉಳಿದಿರುವಂತೆಯೇ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 309 ರನ್ನುಗಳ ಹಿನ್ನಡೆ ಅನುಭವಿಸುತ್ತಿದ್ದು, ಫಾಲೋ ಆನ್ ತಪ್ಪಿಸಿಕೊಳ್ಳಲು ಇನ್ನೂ 109 ರನ್ ಗಳಿಸಬೇಕಾದ ಅಗತ್ಯವಿದೆ.
ಸಚಿನ್ ಮಹಾಶತಕದ ನಿರೀಕ್ಷೆ....ಅಂದ ಹಾಗೆ ವಿಶ್ವದೆಲ್ಲೆಡೆಯ ಕ್ರೀಡಾಭಿಮಾನಿಗಳು ಸಚಿನ್ ಮಹಾಶತಕದ ನಿರೀಕ್ಷೆಯಲ್ಲಿದ್ದು, ಶುಕ್ರವಾರವೇ ಈ ಐತಿಹಾಸಿಕ ಸಾಧನೆ ಬರೆಯಲಿದ್ದಾರೆಂದು ನಂಬಿಕೊಂಡಿದ್ದಾರೆ. ಈಗಾಗಲೇ ವಿಂಡೀಸ್ ಬೌಲರುಗಳನ್ನು ದಿಟ್ಟವಾಗಿ ಎದುರಿಸಿರುವ ಸಚಿನ್ 133 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ ಐದುಬೌಂಡರಿ ನೆರವಿನಿಂದ 67 ರನ್ ಗಳಿಸಿದ್ದು, ಶತಕದತ್ತ ದಾಪುಗಾಲನ್ನಿಟ್ಟಿದ್ದಾರೆ. ಕಲಾತ್ಮಕ ವಿವಿಎಸ್ ಲಕ್ಷ್ಮಣ್ ಜತೆ ಸೇರಿಕೊಂಡಿರುವ ಸಚಿನ್ ನಾಲ್ಕನೇ ವಿಕೆಟ್‌ಗೆ ಮುರಿಯದ 57 ರನ್ ಪೇರಿಸಿದ್ದು, ವಿಂಡೀಸ್ ಬೌಲರುಗಳನ್ನು ಕಾಡುತ್ತಿದ್ದಾರೆ. ಲಿಟ್ಲ್ ಮಾಸ್ಟರ್‌ಗೆ ಉತ್ತಮ ಸಾಥ್ ನೀಡುತ್ತಿರುವ ಲಕ್ಷ್ಮಣ್ 32 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.