Select Your Language

Notifications

webdunia
webdunia
webdunia
webdunia

ಗಂಗೂಲಿ ಮನೆಯೆದುರು ಅಮೀರ್ ಖಾನ್ ಹಗಲುವೇಷ!

ಗಂಗೂಲಿ ಮನೆಯೆದುರು ಅಮೀರ್ ಖಾನ್ ಹಗಲುವೇಷ!
ಕೊಲ್ಕತ್ತಾ , ಗುರುವಾರ, 17 ಡಿಸೆಂಬರ್ 2009 (09:16 IST)
ತನ್ನ ನೂತನ ಚಿತ್ರ '3 ಈಡಿಯೆಟ್ಸ್' ಪ್ರಚಾರದಲ್ಲಿರುವ ಬಾಲಿವುಡ್ ಸ್ಟಾರ್ ಅಮೀರ್ ಖಾನ್ ಬಂಗಾಲದ ಹುಲಿ ಸೌರವ್ ಗಂಗೂಲಿ ಮನೆಗೂ ಭೇಟಿ ನೀಡಿ ಅವರನ್ನು ಮೂರ್ಖರನ್ನಾಗಿಸಿದ್ದಾರೆ. ಅಭಿಮಾನಿಯ ವೇಷದಲ್ಲಿ ಗಂಗೂಲಿ ಮನೆ ಕಡೆ ಠಳಾಯಿಸಿದ್ದ ಖಾನ್‌ರನ್ನು ಗಂಗೂಲಿ ಪತ್ನಿ ಡೋನಾ ನೋಡಿದರೂ ಗುರುತು ಹಿಡಿಯಲು ಸಾಧ್ಯವಾಗಿಲ್ಲವೆನ್ನುವುದು ವಿಶೇಷ.

ಸಿನಿಮಾದ ಪ್ರಚಾರಕ್ಕಾಗಿ ಭಾರತದ ಪ್ರಮುಖ ನಗರಗಳನ್ನು ವೇಷ ಮರೆಸಿಕೊಂಡು ಸುತ್ತಾಡುವ ಉದ್ದೇಶವಿಟ್ಟುಕೊಂಡು ಹೊರಟಿರುವ ಅಮೀರ್ ಈಗಾಗಲೇ ಹಲವು ನಗರಗಳಿಗೆ ಪ್ರದಕ್ಷಿಣೆ ಹಾಕಿದ್ದಾರೆ. ಅದೇ ರೀತಿ ಕೊಲ್ಕತ್ತಾದಲ್ಲೂ ತನ್ನ ಜಾಣ್ಮೆ ಮೆರೆದಿದ್ದರು.

ಕೆಲ ದಿನಗಳ ಹಿಂದೆ ಗಂಗೂಲಿಯವರಿಗೆ ಫೋನ್ ಮಾಡಿ, ತಾನು ನಿಮ್ಮ ಮನೆಗೆ ಒಂದೆರಡು ದಿನಗಳಲ್ಲಿ ಬರುತ್ತಿದ್ದೇನೆ ಎಂಬ ಮಾಹಿತಿ ನೀಡಿದ್ದರು. ಆದರೆ ಈ ರೀತಿ ಬರಲಿದ್ದಾರೆ ಎಂಬ ಕನಿಷ್ಠ ಊಹೆಯೂ ಗಂಗೂಲಿಗಿರಲಿಲ್ಲವಂತೆ.

ಮಂಗಳವಾರ ಮುಂಜಾನೆ ಗಂಗೂಲಿಯವರ ಬೆಹಾಲಾದಲ್ಲಿನ ಮನೆಗೆ ಅಪರಿಚಿತ ಅಭಿಮಾನಿಯ ರೂಪದಲ್ಲಿ ವಿಶೇಷ ವಿಗ್ ಧರಿಸಿದ್ದ ಅಮೀರ್ ಬಂದಿದ್ದರು. ಅದಕ್ಕೂ ಮೊದಲು ಸಿಕ್ಕಸಿಕ್ಕಲ್ಲೆಲ್ಲಾ, ಗಂಗೂಲಿ ಮನೆ ಎಲ್ಲಿ ಎಂದು ದಾರಿ ಕೇಳಿಕೊಂಡು ಅವರಿಗೂ ಚಳ್ಳೆಹಣ್ಣು ತಿನ್ನಿಸಿದ್ದರು.

ಗಂಗೂಲಿ ಮನೆಗೆ ನುಗ್ಗಲು ಯತ್ನಿಸಿದಾಗ ಗೇಟಿನಲ್ಲಿ ಸೆಕ್ಯುರಿಟಿಯವರು ಭುಜ ಹಿಡಿದು ಅನಾಮತ್ತಾಗಿ ಎಳೆದು ಹಾಕಿದ್ದರು. ಅಷ್ಟರಲ್ಲಿ 'ಅಭಿಮಾನಿ'ಯನ್ನು ಗಮನಿಸಿ ಡೋನಾ, 'ದಾದಾ ಮನೆಯಲ್ಲಿಲ್ಲ' ಎಂಬ ಮಾಹಿತಿ ನೀಡಿದ್ದರು.

ಹಾಗಾದ್ರೆ ಎಲ್ಲಿದ್ದಾರೆ ಎಂದು ಮುಖಮುಚ್ಚಿಕೊಂಡು ಅಮೀರ್ ಪ್ರಶ್ನಿಸಿದಾಗ, 'ಅವರು ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿದ್ದಾರೆ' ಎಂಬ ಉತ್ತರ ಬಂತು. ಅಷ್ಟು ಹೊತ್ತಲ್ಲಿ ಮತ್ತೊಬ್ಬ ವ್ಯಕ್ತಿ, 'ಅವರು ಜಾದವಪುರ ಯುನಿವರ್ಸಿಟಿ ಗ್ರೌಂಡ್‌ನಲ್ಲಿದ್ದಾರೆ' ಎಂದು ತಪ್ಪು ಸರಿಪಡಿಸಿದ.

ಈ ಸಂದರ್ಭದಲ್ಲಿ ಗಂಗೂಲಿಯವರು ಬಂಗಾಲ ರಣಜಿ ಟ್ರೋಫಿಗಾಗಿ ಜಾದವಪುರ ಯುನಿವರ್ಸಿಟಿ ಸಾಲ್ಟ್ ಲೇಕ್ ಕ್ಯಾಂಪಸ್ ಗ್ರೌಂಡ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದರು.

ಗಂಗೂಲಿ ಮನೆಯಲ್ಲಿಲ್ಲ ಎಂಬುದು ಖಚಿತವಾದ ನಂತರ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಅಮೀರ್ ಮರಳಿದರು. ನಂತರ ರಾತ್ರಿ ಪತ್ನಿ ಕಿರಣ್ ಜತೆಗೂಡಿ ನೇರವಾಗಿ ಗಂಗೂಲಿಯವರನ್ನು ಭೇಟಿಯಾದರು. ಮುಂಜಾನೆ ಇದೇ ಮನೆಗೆ ಆಗಂತುಕನ ವೇಷದಲ್ಲಿ ಬಂದ ವಿಚಾರವನ್ನೂ ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಿ ಗಂಗೂಲಿಯವರ ಹುಬ್ಬೇರಿಸಿದರು 'ಈಡಿಯೆಟ್' ಖಾನ್

Share this Story:

Follow Webdunia kannada