Select Your Language

Notifications

webdunia
webdunia
webdunia
webdunia

ಇಂಗ್ಲೆಂಡ್ ವಿರುದ್ಧದ ತವರಿನ ಏಕದಿನ ಸರಣಿಗೂ ಸಚಿನ್ ಅಲಭ್ಯ?

ಇಂಗ್ಲೆಂಡ್ ವಿರುದ್ಧದ ತವರಿನ ಏಕದಿನ ಸರಣಿಗೂ ಸಚಿನ್ ಅಲಭ್ಯ?
ನವದೆಹಲಿ , ಬುಧವಾರ, 28 ಸೆಪ್ಟಂಬರ್ 2011 (10:58 IST)
ಇತ್ತೀಚೆಗಷ್ಟೇ ಆಂಗ್ಲರ ನಾಡಿನಲ್ಲಿ ಭಾರಿ ಮುಖಭಂಗ ಎದುರಿಸಿದ್ದ ಟೀಮ್ ಇಂಡಿಯಾ ಮತ್ತದೇ ಇಂಗ್ಲೆಂಡ್ ಸವಾಲನ್ನು ಸ್ವದೇಶದಲ್ಲಿ ಎದುರಿಸಲಿದೆ. ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಟೂರ್ನಮೆಂಟ್ ಬೆನ್ನಲ್ಲೇ ನಡೆಯುವ ಐದು ಪಂದ್ಯಗಳ ಈ ಟೂರ್ನಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸೇರಿದಂತೆ ಪ್ರಮುಖ ಆಟಗಾರರ ಲಭ್ಯತೆಯ ಬಗ್ಗೆ ಅನುಮಾನಗಳು ಎದ್ದಿವೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಇಂಗ್ಲೆಂಡ್ ಸರಣಿಯುದ್ಧಕ್ಕೂ ಭಾರತ ಗಾಯಾಳುಗಳ ಸಮಸ್ಯೆಗೆ ತುತ್ತಾಗಿತ್ತು. ಏಕದಿನ ಸರಣಿಯಲ್ಲಂತೂ ತಂಡವು ಪ್ರಮುಖ ಏಳು ಆಟಗಾರರ ಅನುಪಸ್ಥಿತಿಯನ್ನು ಎದುರಿಸಿತ್ತು. ಇದು ತಂಡದ ಪ್ರದರ್ಶನ ಮೇಲೆ ಭಾರಿ ಪರಿಣಾಮ ಬೀರಿತ್ತಲ್ಲದೆ ಒಂದೇ ಒಂದು ಪಂದ್ಯವನ್ನು ಗೆಲ್ಲಲಾಗದೇ ಬರಿಗೈಯಲ್ಲಿ ತವರಿಗೆ ಮರಳುವಂತಾಗಿತ್ತು.

ಇದೀಗ ಸ್ವದೇಶದಲ್ಲಿ ಮತ್ತದೇ ಆಂಗ್ಲರ ವಿರುದ್ಧ ನಡೆಯಲಿರುವ ಟೂರ್ನಿಯಲ್ಲಿ ಸೇಡು ತೀರಿಸಿಕೊಳ್ಳುವ ಅವಕಾಶ ಭಾರತಕ್ಕಿದೆ. ಇದರಂತೆ ಮೊದಲೆರಡು ಪಂದ್ಯಗಾಗಿನ ಟೀಮ್ ಇಂಡಿಯಾದ ಆಯ್ಕೆಯು ಸೆಪ್ಟೆಂಬರ್ 29ರಂದು ಚೆನ್ನೈನಲ್ಲಿ ನಡೆಯಲಿದೆ.

ಆದರೆ ಮಹೇಂದ್ರ ಸಿಂಗ್ ಧೋನಿ ಬಳಗ ಮಾತ್ರ ಮತ್ತದೇ ಗಾಯದ ಸಮಸ್ಯೆಯಿಂದ ಬಳಲುತ್ತಿದೆ. ಸಚಿನ್ ಸೇರಿದಂತೆ ಆಲ್‌ರೌಂಡರ್ ಯುವರಾಜ್ ಸಿಂಗ್ ಸಹ ಏಕದಿನ ಸರಣಿಗೆ ಅಲಭ್ಯರಾಗುವ ಸಾಧ್ಯತೆಯಿದೆ. ಕಾಲ್ಬೆರಳಿನ ಗಾಯಕ್ಕೆ ತುತ್ತಾಗಿದ್ದ ಸಚಿನ್ ಏಕದಿನ ಸರಣಿಯಿಂದ ಹೊರಗುಳಿಯುವ ಸಾಧ್ಯತೆಯಿದೆ. ಇಂಗ್ಲೆಂಡ್ ವಿರುದ್ಧಧ ಟೆಸ್ಟ್ ಸರಣಿ ವೇಳೆ ಕೈಬೆರಳಿಗೆ ಗಾಯಮಾಡಿಕೊಂಡಿದ್ದ ಯುವರಾಜ್ ಸಿಂಗ್ ಸಹ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರಿಬ್ಬರ ಲಭ್ಯತೆಯ ಬಗ್ಗೆ ಅನುಮಾನ ಕಾಡತೊಡಗಿವೆ.

ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಹಾಗೂ ರೋಹಿತ್ ಶರ್ಮಾ ಲಭ್ಯತೆಯ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಭುಜ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವೀರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರೋಹಿತ್ ಶರ್ಮಾ ಫಿಟ್‌ನೆಸ್ ಬಗ್ಗೆಯೂ ಅನುಮಾನಗಳಿದ್ದು, ಒಂದು ವೇಳೆ ಮೂರನೇ ಏಕದಿನ ಪಂದ್ಯ ವೇಳೆ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಸೆಹ್ವಾಗ್ ಚೆಂಡನ್ನು ತ್ರೋ ಮಾಡುವ ಮೂಲಕ ಅಭ್ಯಾಸ ಆರಂಭಿಸಿದ್ದಾರೆ. ಆದರೆ ದೆಹಲಿಯ ಈ ಸ್ಫೋಟಕ ದಾಂಡಿಗ ಇನ್ನೂ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಶೇಕಡಾ ನೂರರಷ್ಟು ಫಿಟ್ ಆಗಿರದ ಹೊರತು ಆತುರದಿಂದ ತಂಡಕ್ಕೆ ಸೇರಿಸಿಕೊಳ್ಳುವ ಅಗತ್ಯವಿಲ್ಲ ಎಂಬುದು ಟೀಮ್ ಮ್ಯಾನೇ‌ಜ್‌ಮೆಂಟ್‌ನ ನಿಲುವಾಗಿದೆ. ಹೀಗಾಗಿ ಇಂಗ್ಲೆಂಡ್ ಅಥವಾ ವೆಸ್ಟ್‌ಇಂಡೀಸ್ ಸರಣಿ ವೇಳೆ ತಂಡವನ್ನು ಸೇರಿಕೊಳ್ಳಲಿದ್ದಾರೆಯೇ ಎಂಬುದು ಇನ್ನೂ ನಿರ್ಧಾರವಾಗಿಲ್ಲ.

ಒಟ್ಟಾರೆಯಾಗಿ ಸಂಪೂರ್ಣ ಬಲ ಹೊಂದಿರುವ ಇಂಗ್ಲೆಂಡ್ ತಂಡವು ಮತ್ತೊಮ್ಮೆ ಯುವ ಪಡೆಗಳಿಂದ ತುಂಬಿರುವ ಟೀಮ್ ಇಂಡಿಯಾದ ಸವಾಲನ್ನು ಎದುರಿಸಲಿದೆ. ಸೆಪ್ಟೆಂಬರ್ 29ರಂದು ಆಯ್ಕೆ ಸಮಿತಿ ಸಭೆ ಸೇರುವಾಗ ಮತ್ತೆ ಅಜಿಂಕ್ಯಾ ರಹಾನೆ ಹಾಗೂ ಮನೋಜ್ ತಿವಾರಿ ಹೆಸರುಗಳು ಚರ್ಚೆಯಲ್ಲಿ ಕೇಳಿಬರಲಿವೆ. ಒಂದು ವೇಳೆ ಸೆಹ್ವಾಗ್ ಅಲಭ್ಯರಾದರೆ ಗೌತಮ್ ಗಂಭೀರ್ ಜತೆ ತಂಡದ ಇನ್ನಿಂಗ್ಸ್ ಆರಂಭಿಸುವ ಅವಕಾಶ ಪಾರ್ಥಿವ್ ಪಟೇಲ್ ಅವರಿಗೆ ದೊರಕಲಿದೆ. ಮಧ್ಯಮ ಕ್ರಮಾಂಕವನ್ನು ವಿರಾಟ್ ಕೊಹ್ಲಿ, ಸುರೇಶ್ ರೈನಾ ಹಾಗೂ ಮಹೇಂದ್ರ ಸಿಂಗ್ ಧೋನಿ ನಿಭಾಯಿಸಲಿದ್ದು, ರವೀಂದ್ರ ಜಡೇಜಾ ಆಲ್‌ರೌಂಡರ್ ಸ್ಥಾನಕ್ಕೆ ಆಯ್ಕೆಯಾಗಲಿದ್ದಾರೆ.

ಬೌಲಿಂಗ್ ವಿಭಾಗಕ್ಕೆ ಬಂದರೆ ಮೂವರು ಸ್ಪಿನ್ನರುಗಳು ಹಾಗೂ ನಾಲ್ಕು ವೇಗಿಗಳ ಯೋಜನೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಆರ್. ಅಶ್ವಿನ್ ಜತೆ ಒಬ್ಬ ಸ್ನಿನ್ನರ್ ಜವಾಬ್ದಾರಿಯನ್ನು ಜಡೇಜಾ ನಿಭಾಯಿಸಲಿದ್ದಾರೆ. ಅಲ್ಲದೆ ಹೊಟ್ಟೆ ನೋವಿನಿಂದ ಪೂರ್ಣವಾಗಿ ಚೇತರಿಸಿಕೊಂಡಿರುವ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ತಮ್ಮ ಪುನರಾಗಮನವನ್ನು ಎದುರು ನೋಡುತ್ತಿದ್ದಾರೆ. ಆದರೆ ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ ಅವರಂತಹ ಬೌಲರುಗಳಿಂದಲೂ ಭಜ್ಜಿ ಅವರಿಗೆ ತೀವ್ರ ಪೈಪೋಟಿ ಎದುರಾಗಲಿದೆ.

ಆದರೆ ತಂಡದ ಮೂಲಗಳ ಪ್ರಕಾರ ವೇಗದ ಬೌಲಿಂಗ್ ವಿಭಾಗದ ಆಯ್ಕೆ ಇನ್ನೂ ಆಂತಕದಲ್ಲಿ ಮುಂದುವರಿದಿದೆ. ಪ್ರವೀಣ್ ಕುಮಾರ್ ತಂಡದ ಪ್ರಮುಖ ಅಸ್ತ್ರವಾದರೆ ಇತರ ಬೌಲರುಗಳ ಬಗ್ಗೆ ಯಾವುದೇ ಸೂಚನೆ ದೊರೆತಿಲ್ಲ. ಯುವ ವೇಗಿಗಳಾದ ವರುಣ್ ಅರೋಣ್ ಹಾಗೂ ಉಮೇಶ್ ಯಾದವ್ ತಮ್ಮ ಆಯ್ಕೆಗಾಗಿ ತುದಿಗಾಲಲ್ಲಿ ನಿಂತಿದ್ದಾರೆ. ಜಹೀರ್ ಖಾನ್ ಹಾಗೂ ಮುನಾಫ್ ಪಟೇಲ್ ಅನುಪಸ್ಥಿತಿಯಲ್ಲಿ ಅನುಭವಿ ಆಶಿಶ್ ನೆಹ್ರಾ ಅವರಿಗೂ ಮಣೆ ಹಾಕುವ ಸಾಧ್ಯತೆಯಿದೆ.

ದೀರ್ಘ ಸಮಯದ ನಂತರ ತಂಡಕ್ಕೆ ಪುನರಾಗಮನ ಮಾಡಿಕೊಂಡರೂ ವೈಫಲ್ಯ ಕಂಡಿದ್ದ ಆರ್‌ಪಿ ಸಿಂಗ್ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಭಾರಿ ಪೈಪೋಟಿ ನಡೆಸಬೇಕಾಗುತ್ತದೆ. ಕರ್ನಾಟಕ ವೇಗಿ ವಿನಯ್ ಕುಮಾರ್ ಸಹ ಇಂಗ್ಲೆಂಡ್‌ನಲ್ಲಿ ಕೆಟ್ಟ ಸರಣಿಯನ್ನು ಅನುಭವಿಸಿದ್ದರು. ಒಟ್ಟಿನಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯು ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಉತ್ತಮ ವೇದಿಕೆಯಾಗಿರಲಿದೆ ಎಂದು ತಂಡದ ಮೂಲಗಳು ತಿಳಿಸುತ್ತಿವೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

Follow Webdunia kannada