Select Your Language

Notifications

webdunia
webdunia
webdunia
webdunia

ಇಂಗ್ಲೆಂಡ್‌ಗೆ ಮೂರು ವಿಕೆಟ್ ಗೆಲುವು

ಇಂಗ್ಲೆಂಡ್‌ಗೆ ಮೂರು ವಿಕೆಟ್ ಗೆಲುವು
ಮ್ಯಾಂಚೆಸ್ಟರ್ , ಶುಕ್ರವಾರ, 31 ಆಗಸ್ಟ್ 2007 (11:03 IST)
ಮ್ಯಾಂಚೆಸ್ಟರ್‌ನಲ್ಲಿ ಗುರುವಾರ ನಡೆದ ನಾಲ್ಕನೆ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್ ಭಾರತ ತಂಡವನ್ನು ಮೂರು ವಿಕೆಟ್‌ಗಳಿಂದ ಸೋಲಿಸಿದೆ. ಒಂದು ಹಂತದಲ್ಲಿ ಇಂಗ್ಲೆಂಡ್‌ 24 ಓವರುಗಳಲ್ಲಿ 114 ರನ್‌ಗೆ ಏಳು ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ದವಡೆಯಲ್ಲಿತ್ತು.

ಆದರೆ ರವಿ ಬೊಪಾರಾ ಮತ್ತು ಸ್ಟಾರ್ಟ್ ಬ್ರಾಡ್ ಉತ್ತಮ ಜತೆಯಾಟದಿಂದ 48 ಓವರ್‌ಗೆ 213 ರನ್ ಗಳಿಸಿ ಇಂಗ್ಲೆಂಡನ್ನು ಗೆಲುವಿನ ದಡಕ್ಕೆ ಮುಟ್ಟಿಸಿದರು. ಬೊಪಾರಾ ಮತ್ತು ಬ್ರಾಡ್ ಅವರು ಬಾರಿಸಿದ 99 ರನ್, 8ನೇ ವಿಕೆಟ್ ಜತೆಯಾಟದ ಅತ್ಯಧಿಕ ಮೊತ್ತವೆನಿಸಿದೆ.

ಒಂದು ಹಂತದಲ್ಲಿ ಜಯದ ಹೊಸ್ತಿಲಲ್ಲಿದ್ದ ಭಾರತಕ್ಕೆ ಬೊಪಾರಾ ಮತ್ತು ಬ್ರಾಡ್ ಜತೆಯಾಟ ಮುರಿಯಲು ವಿಫಲವಾಗಿ ಗೆಲುವು ಕೈಜಾರಿಹೋಗಿ, ಕೈಗೆ ಬಂದ ತುತ್ತು ಬಾಯಿಗೆ ಸಿಗದಂತಾಯಿತು. ಬೊಪಾರಾ ಮತ್ತು ಬ್ರಾಡ್ ಜತೆಯಾಟದಲ್ಲಿ ಕ್ರಮವಾಗಿ 43 ಮತ್ತು 45 ರನ್ ಗಳಿಸಿದರು. ಪಂದ್ಯದ ಕೊನೆಯ ಕ್ಷಣಗಳಲ್ಲಿ ಭಾರತಕ್ಕೆ ಆಕ್ರಮಣಕಾರಿ ಮನೋಭಾವದ ಕೊರತೆ ಕಂಡುಬಂತು.

ಇಂಗ್ಲೆಂಡ್ ಮೊದಲ ಓವರಿನಲ್ಲೇ ಆರಂಭಿಕ ಆಟಗಾರ ಅಲೈಸ್ಟರ್ ಕುಕ್ ವಿಕೆಟ್ ಕಳೆದುಕೊಂಡು ದುರ್ಬಲ ಆಟ ಆರಂಭಿಸಿತು. ಕುಕ್‌ ಸೊನ್ನೆಗೆ ಔಟಾದ ಬಳಿಕ ಎರಡನೇ ವಿಕೆಟ್ ಉರುಳಲು ಹೆಚ್ಚು ಸಮಯ ಬೇಕಾಗಲಿಲ್ಲ. ಇನ್ನೊಬ್ಬ ಆರಂಭ ಆರಂಭ ಆಟಗಾರ ಮ್ಯಾಟ್ ಪ್ರಿಯರ್ ನಾಲ್ಕನೆ ಓವರಿನಲ್ಲಿ ತನ್ನ ವಿಕೆಟ್ ಕಳೆದುಕೊಂಡರು.

15ನೇ ಓವರಿನಲ್ಲಿ ಪೀಟರ್‌ಸನ್ ಅಗರ್ಕರ್ ಬಾಲಿಗೆ ಔಟಾದಾಗ ಭಾರತ ಪಾಳೆಯದಲ್ಲಿ ಗೆಲುವಿನ ಮಿಂಚು ಮೂಡಿತು. ಫ್ಲಿಂಟಾಫ್ ಅಗರ್ಕರ್ ಬೌಲಿಂಗ್‌ನಲ್ಲಿ ಯುವರಾಜ್‌ಗೆ ಕ್ಯಾಚ್ ಕೊಟ್ಟಾಗ ಇಂಗ್ಲೆಂಡ್ ಸ್ಕೋರ್ 95 ರನ್. ಅರ್ಧದಷ್ಟು ಆಟಗಾರರು ಪೆವಿಲಿಯನ್ ಹಾದಿ ಹಿಡಿದಿದ್ದರು. ಆದರೆ ಭಾರತದ ಗೆಲುವಿನ ಆಸೆ ಹೆಚ್ಚು ಕಾಲ ಉಳಿಯಲಿಲ್ಲ.

ಇಂಗ್ಲೆಂಡ್ ಏಳು ವಿಕೆಟ್ ಕಳೆದುಕೊಂಡು ತೀವ್ರ ಬಿಕ್ಕಟ್ಟಿನಲ್ಲಿದ್ದಾಗ ಆಪದ್ಬಾಂಧವರಂತೆ ಬಂದ ಬೊಪಾರಾ ಮತ್ತು ಬ್ರಾಡ್ ವೀರೋಚಿತ ಬ್ಯಾಟಿಂಗ್ ಪ್ರದರ್ಶಿಸಿ ಇಂಗ್ಲೆಂಡನ್ನು ಗೆಲುವಿನ ದಡಕ್ಕೆ ಮುಟ್ಟಿಸುವ ಮೂಲಕ ಆತಿಥೇಯ ತಂಡ 7 ಪಂದ್ಯಗಳ ಸರಣಿಯಲ್ಲಿ 3-1 ಮುನ್ನಡೆ ಸಾಧಿಸಿತು.

ಇದಕ್ಕೆ ಮುಂಚೆ ಭಾರತ 49.4 ಓವರುಗಳಿಗೆ 212 ರನ್ ಗಳಿಸಿ ನೀರಸ್ ಬ್ಯಾಟಿಂಗ್ ಪ್ರದರ್ಶಿಸಿತ್ತು. ಭಾರತದ ಬ್ಯಾಟಿಂಗ್‌ನಲ್ಲಿ ಸ್ಥಿರತೆ ಇಲ್ಲದೇ ಒಂದರ ಹಿಂದೊಂದು ವಿಕೆಟ್‌ಗಳನ್ನು ಒಪ್ಪಿಸಿತು.

Share this Story:

Follow Webdunia kannada