Select Your Language

Notifications

webdunia
webdunia
webdunia
webdunia

ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಜ್‌ ಕುಂದ್ರಾ ತಲೆದಂಡ ?

ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಜ್‌ ಕುಂದ್ರಾ ತಲೆದಂಡ ?
ಹೊಸದಿಲ್ಲಿ: , ಸೋಮವಾರ, 10 ಜೂನ್ 2013 (15:12 IST)
PR
PR
ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ ಭೂತಕ್ಕೆ ರಾಜಸ್ಥಾನ್‌ ರಾಯಲ್ಸ್‌ ಮತ್ತು ಅದರ ಸಹ ಒಡೆಯ ರಾಜ್‌ ಕುಂದ್ರಾ ತಲೆದಂಡ ಆಗುವುದೇ ಎಂಬುದು ಸೋಮವಾರ ನಡೆಯುವ ಬಿಸಿಸಿಐ ತುರ್ತು ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧಾರವಾಗುವ ಸಾಧ್ಯತೆ ಇದೆ.

ಸ್ಪಾಟ್‌ ಫಿಕಿಂಗ್ಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡದ ಮೂವರು ಆಟಗಾರರು ಸಿಕ್ಕಿಬಿದ್ದಿರುವುದು ಹಾಗೂ ತಂಡದ ಮಾಲಕನೇ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿರುವುದು ಪೊಲೀಸ್‌ ವಿಚಾರಣೆಯ ವೇಳೆ ಸಾಬೀತಾಗಿರುವುದು ಸೋಮವಾರ ನಡೆಯುವ ಬಿಸಿಸಿಐ ಸಭೆಯ ಮುಖ್ಯ ಅಜೆಂಡಾ ಆಗಿದೆ.

ಐಪಿಎಲ್‌ನಲ್ಲಿ ಹೇಗಾದರೂ ಮಾಡಿ ಉಳಿದುಕೊಳ್ಳಲು ಬಯಸಿರುವ ರಾಜಸ್ಥಾನ್‌ ಈಗಾಗಲೇ ಕುಂದ್ರಾ ಅವರನ್ನು ದೂರ ಸರಿಸುವ ಪ್ರಯತ್ನ ಮಾಡಿದೆ. ಇದಕ್ಕಾಗಿ ಕುಂದ್ರಾ ಅವರನ್ನು ಬಲಿಕೊಡಲೂ ತಂಡದ ಆಡಳಿತ ಮಂಡಳಿ ಸಿದ್ಧವಾಗಿದೆ. ಆದರೆ ಕಾರ್ಯಕಾರಿ ಸಮಿತಿಯಲ್ಲಿ ಏನು ನಿರ್ಧಾರವಾಗುತ್ತದೆ ಎಂದು ಊಹಿಸಲು ಕಷ್ಟ. ಅಗತ್ಯ ಬಿದ್ದರೆ ಮಾತ್ರ ಕ್ರಮ ಎಂದು ಈಗಾಗಲೇ ಬಿಸಿಸಿಐ ಮಧ್ಯಂತರ ಆಡಳಿತ ಮಂಡಳಿ ಸಮಿತಿಯ ಮುಖಂಡ ಜಗಮೋಹನ್‌ ದಾಲಿ¾ಯಾ ಸ್ಪಷ್ಟಪಡಿಸಿರುವುದರಿಂದ ಯಾವುದೇ ಮಹತ್ವದ ತೀರ್ಮಾನ ಇಲ್ಲದೇ ಸಭೆ ಮುಗಿದರೂ ಅಚ್ಚರಿ ಇಲ್ಲ.

ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಹಾಗೂ ರಾಜಸ್ಥಾನ್‌ ತಂಡದ ಸಹ ಮಾಲಕನಾಗಿರುವ ರಾಜ್‌ ಕುಂದ್ರಾ ವಿಚಾರಣೆಯ ವೇಳೆ ಐಪಿಎಲ್‌ ಪಂದ್ಯಗಳಲ್ಲಿ ತಮ್ಮದೇ ತಂಡದ ಪರ ಬೆಟ್ಟಿಂಗ್‌ ಕಟ್ಟದ್ದನ್ನು ಒಪ್ಪಿಕೊಂಡಿದ್ದಾರೆ ಎಂದು ದಿಲ್ಲಿ ಪೊಲೀಸರು ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಜಗಮೋಹನ್‌ ದಾಲಿ¾ಯ ನೇತೃತ್ವದ ಬಿಸಿಸಿಐನ ಮಧ್ಯಂತರ ಆಡಳಿತ ಮಂಡಳಿ ಅನಿವಾರ್ಯವಾಗಿ ಕಾರ್ಯಕಾರಿ ಸಮಿತಿ ಸಭೆಯನ್ನು ಕರೆದಿದೆ.

ಸಭೆಯಲ್ಲಿ ರಾಜ್‌ ಕುಂದ್ರಾ ಕುರಿತು ವಿವಾದದ ಬಗ್ಗೆ ಸವಿವರ ಚರ್ಚೆ ನಡೆಯಲಿದೆ. ತನಿಖೆ ಪೂರ್ಣಗೊಳ್ಳುವವರೆಗೂ ಕುಂದ್ರಾ ಅವರನ್ನು ಅಮಾನತುಗೊಳಿಸಬೇಕು ಎಂದು ಕೆಲವು ಸದಸ್ಯರು ಶಿಫಾರಸು ಮಾಡುವ ಸಾಧ್ಯತೆ ಇದೆ. ಒಂದು ವೇಳೆ ತನಿಖೆಯಲ್ಲಿ ತಪ್ಪಿತಸ್ಥ ಎಂದು ಸಾಬೀತಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದು. ಕ್ಲೀನ್‌ಚಿಟ್‌ ದೊರೆತರೆ ತಂಡದಲ್ಲಿ ಮುಂದುವರಿಯಬಹುದಾಗಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.

ರಾಜಸ್ಥಾನ್‌ ತಂಡದ ಮೇಲಿನ ಆರೋಪ ರುಜುವಾತಾದರೆ ಐಪಿಎಲ್‌ನಿಂದ ಹೊರಬೀಳಬೇಕಾಗುತ್ತದೆ. ಇದನ್ನು ಅರಿತ ತಂಡದ ಆಡಳಿತ ಮಂಡಳಿ ಕುಂದ್ರಾ ಅವರನ್ನು ದೂರ ಸರಿಸುವ ಪ್ರಯತ್ನ ಮಾಡಿದ್ದು, ಸಾಧ್ಯವಾದರೆ ತಂಡದಿಂದಲೇ ಹೊರಹಾಕಲು ಸಿದ್ಧಗೊಂಡಿದೆ. ಕುಂದ್ರಾ ಶೇಕಡಾ 11.7 ರಷ್ಟು ಮಾತ್ರ ಷೇರು ಹೊಂದಿದ್ದಾರೆ ಎಂದು ರಾಜಸ್ಥಾನ್‌ ತಂಡದ ಮುಖ್ಯಸ್ಥ ರಂಜಿತ್‌ ಭಾರ್ತಾಕುರ್‌ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಘು ಅಯ್ಯರ್‌ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದರು.

Share this Story:

Follow Webdunia kannada