Select Your Language

Notifications

webdunia
webdunia
webdunia
webdunia

ಜಿಂಬಾಬ್ವೆಯಲ್ಲಿ ತಮ್ಮ ಆಲ್‌ರೌಂಡ್ ಕೌಶಲ್ಯ ಪ್ರದರ್ಶನಕ್ಕೆ ಸ್ಟುವರ್ಟ್ ಬಿನ್ನಿ ನಿರ್ಧಾರ

ಜಿಂಬಾಬ್ವೆಯಲ್ಲಿ ತಮ್ಮ ಆಲ್‌ರೌಂಡ್ ಕೌಶಲ್ಯ ಪ್ರದರ್ಶನಕ್ಕೆ ಸ್ಟುವರ್ಟ್ ಬಿನ್ನಿ ನಿರ್ಧಾರ
ಮುಂಬೈ , ಮಂಗಳವಾರ, 7 ಜುಲೈ 2015 (14:05 IST)
ಭಾರತದ ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ ಮುಂಬರುವ ಜಿಂಬಾಬ್ವೆ ವಿರುದ್ಧ ಕ್ರಿಕೆಟ್ ಸರಣಿಯಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ತಮ್ಮ ಕೌಶಲ್ಯ ತೋರಿಸುವ  ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಭಾರತ ತಂಡ ಜಿಂಬಾಬ್ವೆಗೆ ಮಂಗಳವಾರ ಬೆಳಿಗ್ಗೆ ಮೂರು ಏಕದಿನ ಪಂದ್ಯಗಳನ್ನು ಮತ್ತು ಎರಡು ಟ್ವೆಂಟಿ 20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲು ತೆರಳಿದೆ.
 
ಈ ಕ್ಷಣದಲ್ಲಿ ನಾನು ಪ್ರವಾಸದ ಭಾಗವಾಗಿದ್ದಕ್ಕೆ ಸಂತೋಷವಾಗಿದೆ. ನಾನು ಚೆಂಡನ್ನು ಸ್ವಿಂಗ್ ಮಾಡಲು ಕಾತುರದಿಂದ ಕಾಯುತ್ತಿದ್ದು, ಏಕ ದಿನ ಪಂದ್ಯಗಳಲ್ಲಿ ಬೌಲರ್‌ಗೆ ಚೆಂಡು ಸ್ವಿಂಗ್ ಮಾಡುವುದು ಮುಖ್ಯ ಅಂಶವಾಗಿದೆ ಎಂದು ಬಿನ್ನಿ ಹೇಳಿದರು.
 
ಅನುಷ್ಠಾನಕ್ಕೆ ತಂದಿರುವ ಹೊಸ ಏಕದಿನ ಪಂದ್ಯಗಳ ನಿಯಮಗಳನ್ನು ಕುರಿತು ಮಾತನಾಡುತ್ತಾ, ಬೌಲಿಂಗ್‌ಗೆ ಸಂಬಂಧಿಸಿದಂತೆ ವೃತ್ತದ ಹೊರಗೆ ಐವರು ಫೀಲ್ಡರ್‌ಗಳಿರುವುದು ಒಳ್ಳೆಯ ಸಂಗತಿ. ವೃತ್ತದ ಹೊರಗೆ ಐವರು ಫೀಲ್ಡರ್‌ಗಳಿರುವುದರಿಂದ ನಾವು ಟೈಟ್ ಲೈನ್ ಬೌಲಿಂಗ್ ಮಾಡಬೇಕಾಗುತ್ತದೆ ಎಂದು ಬಿನ್ನಿ ಹೇಳಿದರು.
 
ಬ್ಯಾಟಿಂಗ್‌ಗೆ ಸಂಬಂಧಿಸಿದಂತೆ ವೃತ್ತದ ಒಳಗೆ ನಾಲ್ವರು ಫೀಲ್ಡರ್‌ಗಳಿರುತ್ತಾರೆ. ಆದ್ದರಿಂದ ನಾವು ಬೌಂಡರಿ ಬಾರಿಸಲು ಗ್ಯಾಪ್‌ಗಾಗಿ ಹುಡುಕಬೇಕಾಗುತ್ತದೆ. ಈ ನಿಯಮಗಳಿಂದ ಬ್ಯಾಟ್ಸ್‌ಮನ್‌ನಿಂದ ಸ್ವಲ್ಪ ಮಟ್ಟಿನ ಸ್ವಾತಂತ್ರ್ಯವನ್ನು ಕಸಿಯಲಾಗಿದೆ ಎಂದು ಕರ್ನಾಟಕ ಕ್ರಿಕೆಟರ್ ಹೇಳಿದರು.  ಸ್ಟುವರ್ಟ್ ಬಿನ್ನಿ ವಿಶ್ವಕಪ್ 15 ಆಟಗಾರರ ತಂಡದಲ್ಲಿದ್ದರೂ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ನನಗೆ ಅವಕಾಶ ಸಿಗುತ್ತದೋ ಇಲ್ಲವೋ ಎಂದು ನಾನು ಚಿಂತೆ ಮಾಡುವುದಿಲ್ಲ. ದೇಶಕ್ಕಾಗಿ ನನಗೆ ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೆ ಆಡುವುದು ನನ್ನ ಕೆಲಸ ಎಂದು ಬಿನ್ನಿ ಹೇಳಿದರು.

ತಮ್ಮ ವೃತ್ತಿಜೀವನದ ಆರಂಭದಿಂದ ನನಗೆ ದಕ್ಷಿಣ ಆಫ್ರಿಕಾದ ಮಹಾನ್ ಆಟಗಾರ ಜಾಕ್ವೆಸ್ ಕ್ಯಾಲೀಸ್ ಅವರು ಆದರ್ಶವಾಗಿದ್ದಾರೆ. ಅವರು ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೆ ನಾನು ಕೆಳಕ್ರಮಾಂಕದಲ್ಲಿ ಆಡುತ್ತೇನೆ. ನಮ್ಮ ಪಾತ್ರಗಳು ಭಿನ್ನವಾಗಿದ್ದರೂ 10-12 ವರ್ಷಗಳ ತನಕ ಅಂತಾರಾಷ್ಟ್ರೀಯ ಕ್ರಿಕೆಟ್‌‌ನಲ್ಲಿ ಯಶಸ್ವಿಯಾದ ವ್ಯಕ್ತಿ ನನಗೆ ಆದರ್ಶಪ್ರಾಯರು ಎಂದು ಬಿನ್ನಿ ಹೇಳಿದರು. 
 
 ಪ್ರವಾಸಕ್ಕೆ ಮುಂಚೆ ಆತ್ಮವಿಶ್ವಾಸದಿಂದ ಕೂಡಿರುವ ಬಿನ್ನಿ, ನನಗೆ ಅವಕಾಶ ಸಿಕ್ಕಿದರೆ ಅತ್ಯುತ್ತಮ ಪ್ರದರ್ಶನ ನೀಡುತ್ತೇನೆ. ಆದರೆ ಜಿಂಬಾಬ್ವೆಯಲ್ಲಿ ವಿಕೆಟ್ ಹೇಗೆ ವರ್ತಿಸುತ್ತದೆಂದು ಗೊತ್ತಿಲ್ಲ. ದಕ್ಷಿಣ ಆಫ್ರಿಕಾದ ವಿಕೆಟ್ ರೀತಿಯಲ್ಲಿರುತ್ತದೆ ಎಂದು ನಾನು ಕೇಳಿದ್ದೇನೆ ಎಂದು ಹೇಳಿದರು.

Share this Story:

Follow Webdunia kannada