ದುಬೈ: ಪಾಕಿಸ್ತಾನ ವಿರುದ್ಧ ಕ್ರಿಕೆಟ್ ಸರಣಿ ಆಡದ ಟೀಂ ಇಂಡಿಯಾ ಮಹಿಳಾ ತಂಡದ ಮೇಲೆ ಐಸಿಸಿ ಶಿಕ್ಷೆ ವಿಧಿಸಿರುವುದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದೆ. ಇದರೊಂದಿಗೆ ಮತ್ತೊಮ್ಮೆ ಐಸಿಸಿ ಮತ್ತು ಬಿಸಿಸಿಐ ನಡುವೆ ತಿಕ್ಕಾಟ ಆರಂಭವಾಗುವ ಸೂಚನೆ ಎದುರಾಗಿದೆ.
ಮಹಿಳಾ ತಂಡ ಆಗಸ್ಟ್ ನಿಂದ ಅಕ್ಟೋಬರ್ ನಡುವೆ ಉಭಯ ದೇಶಗಳ ನಡುವಿನ ಸರಣಿ ಆಡುವುದೆಂದು ಒಪ್ಪಂದವಾಗಿತ್ತು. ಆದರೆ ಉರಿ ದಾಳಿ ಹಿನ್ನಲೆಯಲ್ಲಿ ಸರಣಿಯಲ್ಲಿ ಪಾಲ್ಗೊಳ್ಳಲು ಭಾರತ ಒಪ್ಪಲಿಲ್ಲ.ಹೀಗಾಗಿ ಮಹಿಳಾ ಚಾಂಪಿಯನ್ಸ್ ಶಿಪ್ ಕ್ರಿಕೆಟ್ ನಲ್ಲಿ ಭಾರತ ತಂಡ 6 ಅಂಕ ಕಳೆದುಕೊಳ್ಳಲಿದೆ. ಪುರುಷರ ಕ್ರಿಕೆಟ್ ತಂಡದ ನಡುವೆಯೂ ಸರಣಿ ನಿಗದಿಯಾಗಿದ್ದು, ಅದರಲ್ಲೂ ಭಾರತ ಪಾಲ್ಗೊಳ್ಳಲು ಒಪ್ಪುತ್ತಿಲ್ಲ.
ಹೀಗಾಗಿ ಮಹಿಳಾ ತಂಡದ ವಿರುದ್ಧ ಐಸಿಸಿ ಬ್ರಹ್ಮಾಸ್ತ್ರ ಮಾಡಿದೆ. ಇದು ಬಿಸಿಸಿಐ ಅಧಿಕಾರಿಗಳನ್ನು ಕೆರಳಿಸಿದೆ. “ಭಾರತ ಮತ್ತು ಪಾಕಿಸ್ತಾನ ನಡುವೆ ಸಂಬಂಧ ಸರಿಯಿಲ್ಲ. ಯಾವುದೇ ಕ್ರಿಕೆಟ್ ಸರಣಿ ನಡೆಯಬೇಕಾದರೂ, ಸರ್ಕಾರದ ಒಪ್ಪಿಗೆ ಬೇಕು ಎಂಬುದು ಗೊತ್ತಿರುವ ಭಾರತದವರೇ ಮುಖ್ಯಸ್ಥರಾಗಿರುವ ಐಸಿಸಿ ಈ ತೀರ್ಮಾನ ತೆಗೆದುಕೊಂಡಿರುವುದು ಒಪ್ಪುವಂತದ್ದಲ್ಲ. ಇದು ಮತ್ತೊಮ್ಮೆ ಐಸಿಸಿ ಮುಖ್ಯಸ್ಥ ಶಶಾಂಕ್ ಮನೋಹರ್ ಮತ್ತು ಬಿಸಿಸಿಐ ನಡುವಿನ ಪರೋಕ್ಷ ತಿಕ್ಕಾಟ ಎಂದೂ ಹೇಳಲಾಗುತ್ತಿದೆ.
ಇದರಿಂದ ಕೆರಳಿರುವ ಬಿಸಿಸಿಐ ಮುಂದಿನ ವರ್ಷ ನಡೆಯಲಿರುವ ಪುರುಷರ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ಬಹಿಷ್ಕರಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ವಿಚಿತ್ರವೆಂದರೆ ಬಿಸಿಸಿಐ ಮಾಜಿ ಅಧ್ಯಕ್ಷರೂ ಆಗಿರುವ ಶಶಾಂಕ್ ಮನೋಹರ್ ಐಸಿಸಿ ಅಧ್ಯಕ್ಷರಾದ ಮೆಲೆ ಭಾರತೀಯ ಕ್ರಿಕೆಟ್ ಮಂಡಳಿ ಮತ್ತು ಐಸಿಸಿ ನಡುವಿನ ಸಂಬಂಧ ಹಳಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ