Select Your Language

Notifications

webdunia
webdunia
webdunia
webdunia

ಹಳ್ಳಿಯತ್ತ ಮುಖ ಮಾಡಿದ ಪ್ರಣಬ್ ಬಜೆಟ್

ಹಳ್ಳಿಯತ್ತ ಮುಖ ಮಾಡಿದ ಪ್ರಣಬ್ ಬಜೆಟ್
ನವದೆಹಲಿ , ಸೋಮವಾರ, 6 ಜುಲೈ 2009 (14:14 IST)
ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ನಲುಗಿರುವ ಭಾರತದ ಆರ್ಥಿಕತೆಯ ಪುನಶ್ಚೇತನಕ್ಕಾಗಿ - ಆದಷ್ಟು ಶೀಘ್ರವಾಗಿ ವಾರ್ಷಿಕ ಜಿಡಿಪಿ ಅಭಿವೃದ್ಧಿ ದರವನ್ನು ಶೇ.9ಕ್ಕೇರುವಂತೆ ಮಾಡುವುದು, ಸಮಗ್ರ ಪ್ರಗತಿಯ ಅಜೆಂಡಾವನ್ನು ಮತ್ತಷ್ಟು ಆಳಕ್ಕೆ ವಿಸ್ತರಿಸುವುದು, ಹಾಗೂ ಸರಕಾರವನ್ನು ಬಲಪಡಿಸಿಕೊಂಡು, ವಿತರಣಾ ವ್ಯವಸ್ಥೆಯನ್ನು ಸುಧಾರಿಸುವುದು - ಎಂಬ ಈ ಮೂರು ಅಗತ್ಯ ಅಂಶಗಳ ಮೇಲೆ ಬೆಳಕು ಚೆಲ್ಲಿರುವ ಕೇಂದ್ರದ ಯುಪಿಎ ಸರಕಾರದ 2009-10 ಆಯವ್ಯಯ ಮುಂಗಡ ಪತ್ರವು ಜನ ಸಾಮಾನ್ಯರನ್ನು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದರೆ, ಕಾರ್ಪೊರೇಟ್ ವಲಯದಲ್ಲಿ ನಿರಾಸೆಗೆ ಕಾರಣವಾಗಿಸಿತು.

ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಈ ಕ್ಷೇತ್ರಕ್ಕೆ ಸಾಕಷ್ಟು ನಿಧಿ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ, ತ್ವರಿತ ಅನುಷ್ಠಾನಕ್ಕೆ ಬೇಕಾದ ಅಡೆತಡೆಗಳನ್ನು ನಿವಾರಿಸಲು ಸೋಮವಾರ ವಿತ್ತ ಸಚಿವ ಪ್ರಣಬ್ ಮುಖರ್ಜಿ ಮಂಡಿಸಿದ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ.

ಮುಂದಿನ ಐದು ವರ್ಷಗಳಲ್ಲಿ ದೇಶವನ್ನು ಸ್ಲಂ-ರಹಿತ ಆಗಿಸುವ ನಿಟ್ಟಿನಲ್ಲಿ ಹೊಸದಾದ ರಾಜೀವ್ ಆವಾಸ್ ಯೋಜನೆ, ರಾಷ್ಷ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಗೆ ಅನುದಾನ ಶೇ.23 ಹೆಚ್ಚಳ, ಜವಾಹರಲಾಲ್ ನೆಹರು ರಾಷ್ಟ್ರೀಯ ನಗರ ಪುನರ್ನವೀಕರಣ ಮಿಶನ್‌ಗೆ ಶೇ.87 ಮತ್ತು ವಿದ್ಯುತ್ ಅಭಿವೃದ್ಧಿ ಮತ್ತು ಸುಧಾರಣಾ ಕಾರ್ಯಕ್ರಮಕ್ಕೆ ಶೇ.160ರಷ್ಟು ಬಜೆಟ್ ಅನುದಾನ ಹೆಚ್ಚಿಸಲಾಗಿದೆ.

ದೀರ್ಘ ದೂರದ ಅನಿಲ ಹೆದ್ದಾರಿ ಎಂಬ ಹೊಸ ಯೋಜನೆಯ ಅಭಿವೃದ್ಧಿ ಸರಕಾರವು ನೀಲನಕಾಶೆ ಸಿದ್ಧಪಡಿಸಲಿದ್ದು, ಇದರ ಮೂಲಕ ದೇಶದ ಉದ್ದಗಲಕ್ಕೂ ಅನಿಲ ವಿತರಣೆಯು ಸುಲಲಿತವಾಗಿಸುವ ಯೋಜನೆ ಪ್ರಕಟಿಸಲಾಗಿದೆ.

ಕೃಷಿ ಸಾಲ ವಿತರಣಾ ಮಿತಿಯನ್ನು ಕಳೆದ ವರ್ಷ ಇದ್ದ 2.87 ಲಕ್ಷ ಕೋಟಿಯಿಂದ 3.25 ಲಕ್ಷ ಕೋಟಿಗೆ ಏರಿಸಲಾಗಿದೆ. ಕೃಷಿ ಸಾಲ ಮನ್ನಾ ಯೋಜನೆಯ ಅಡಿಯಲ್ಲಿ ಕಳೆದ ಬಜೆಟ್‌ನಲ್ಲಿನ 71 ಸಾವಿರ ಕೋಟಿ ರೂ. ಅನುಷ್ಠಾನಗೊಳಿಸಲಾಗಿದ್ದು, ಶೇ.75 ಹೆಚ್ಚುವರಿ ಉಳಿಕೆಯ ಮರುಪಾವತಿಯ ಗಡುವನ್ನು 2009ರ ಡಿಸೆಂಬರ್‌ವರೆಗೆ ವಿಸ್ತರಿಸಲಾಗಿದೆ. ಮಹಾರಾಷ್ಟ್ರದಲ್ಲಿ ಸಾಲ ಪಡೆದಿದ್ದೂ, ಕೃಷಿ ಸಾಲ ಮನ್ನಾ ಯೋಜನೆಯಡಿ ಗುರಿತಿಸಲ್ಪಡದ ರೈತರಿಗೆ ಯಾವ ರೀತಿಯಲ್ಲಿ ನೆರವು ನೀಡಬಹುದೆಂಬುದನ್ನು ತಿಳಿಯಲು ಟಾಸ್ಕ್ ಫೋರ್ಸ್ ಒಂದನ್ನು ರಚಿಸಲಾಗುತ್ತದೆ.

ಅಂತೆಯೇ, ಆಹಾರ ಭದ್ರತಾ ಮಸೂದೆಯನ್ನು ಶೀಘ್ರವೇ ಜನರೆದುರು ಚರ್ಚೆಗೆ ಮತ್ತು ಅಭಿಪ್ರಾಯ ತಿಳಿದುಕೊಳ್ಳಲು ತೆರೆದಿಡಲಾಗುತ್ತದೆ ಎಂದು ವಿತ್ತ ಸಚಿವರು ಪ್ರಕಟಿಸಿದರು.

ಈ ಪ್ರಸ್ತಾಪಿತ ಮಸೂದೆಯ ಪ್ರಕಾರ, ಗ್ರಾಮೀಣ ಅಥವಾ ನಗರ ಪ್ರದೇಶದಲ್ಲಿ ಬಡತನ ರೇಖೆಯಿಂದ ಕೆಳಗಿರುವ ಪ್ರತಿಯೊಂದು ಕುಟುಂಬವು ತಿಂಗಳಿಗೆ ತಲಾ 3 ರೂಪಾಯಿ ದರದಲ್ಲಿ 20 ಕಿಲೋ ಅಕ್ಕಿ ಅಥವಾ ಗೋಧಿ ಪಡೆಯಲಿದೆ.

ಆಮ್ ಆದ್ಮೀ ಬಗೆಗಿನ ಕಾರ್ಯಕ್ರಮಗಳ ಕುರಿತು ಮತ್ತಷ್ಟು ಮಾಹಿತಿ ನೀಡಿದ ಮುಖರ್ಜಿ, ಭಾರತ ನಿರ್ಮಾಣ ಯೋಜನೆಯ ಮಿತಿಯನ್ನು ಶೇ.45ರಷ್ಟು ಹೆಚ್ಚಿಸಲಾಗುತ್ತದೆ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಶೇ.144, ಪ್ರಧಾನಮಂತ್ರಿ ಗಾರಮ ಸಡಕ್ ಯೋಜನೆಗೆ ಶೇ.59, ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆಗೆ ಶೇ.27 ಮತ್ತು ಇಂದಿರಾ ಆವಾಸ್ ಯೋಜನೆಗೆ ಶೇ.63ರಷ್ಟು ಅನುದಾನ ಹೆಚ್ಚಿಸಲಾಗುತ್ತದೆ ಎಂದರು.

ಇದರೊಂದಿಗೆ, 2000 ಕೋಟಿ ರೂಪಾಯಿ ವೆಚ್ಚದಲ್ಲಿ ಗ್ರಾಮೀಣ ವಸತಿ ನಿಧಿ ಹಾಗೂ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯೆಂಬ ಹೊಸ ಯೋಜನೆಯಡಿ ಶೇ.50ಕ್ಕಿಂತ ಹೆಚ್ಚು ಪರಿಶಿಷ್ಟ ಜಾತಿ ಜನಸಂಖ್ಯೆಯಿರುವ 1000 ಹಳ್ಳಿಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ.

Share this Story:

Follow Webdunia kannada