Select Your Language

Notifications

webdunia
webdunia
webdunia
webdunia

ಶೈಕ್ಷಣಿಕ ಸಾಲಕ್ಕೆ ಸಬ್ಸಿಡಿ, ಮಹಿಳಾ ಕಲ್ಯಾಣ, ಉದ್ಯೋಗ ಖಾತ್ರಿ

ಶೈಕ್ಷಣಿಕ ಸಾಲಕ್ಕೆ ಸಬ್ಸಿಡಿ, ಮಹಿಳಾ ಕಲ್ಯಾಣ, ಉದ್ಯೋಗ ಖಾತ್ರಿ
ನವದೆಹಲಿ , ಸೋಮವಾರ, 6 ಜುಲೈ 2009 (13:47 IST)
73ರ ಅನುಭವಿ ಮುಖರ್ಜಿಯವರು ಯುವ ಜನಾಂಗದ ಅಭಿವೃದ್ಧಿಗೆ ಒತ್ತು ನೀಡಿದ್ದು, ಅದಕ್ಕಾಗಿ ಶೈಕ್ಷಣಿಕ ಪರಿಸ್ಥಿತಿ ಸುಧಾರಿಸಬೇಕೆಂಬುದನ್ನು ಮನಗಂಡಿದ್ದಾರೆ. ಬಡ್ಡಿರಹಿತ ಶೈಕ್ಷಣಿಕ ಸಾಲ, ಮಹಿಳೆಯರ ಸಾಕ್ಷರತೆಗೆ ಒತ್ತು, ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ಆಧುನಿಕತೆ ಮುಂತಾದ ದೂರಗಾಮಿ ಯೋಜನೆಗಳನ್ನು ಅವರು ಬಜೆಟ್‌ನಲ್ಲಿ ಪ್ರಕಟಿಸಿದ್ದಾರೆ.

ಆಧುನಿಕ ಜಗತ್ತಿನಲ್ಲಿ ಜನತೆ ಸಂಪೂರ್ಣ ಸಾಕ್ಷರರಾಗಬೇಕು ಎಂಬುದಷ್ಟೇ ಗುರಿಯನ್ನಿಟ್ಟುಕೊಳ್ಳದ ಮುಖರ್ಜಿಯವರು ಉನ್ನತ ಶಿಕ್ಷಣವು ಸುಲಭದಲ್ಲಿ ಕೈಗೆಟುಕಬೇಕೆಂಬ ನಿರೀಕ್ಷೆಯನ್ನೂ ನಿಜ ಮಾಡುವತ್ತ ಬೆರಳು ತೋರಿಸಿದ್ದಾರೆ. ಆ ನಿಟ್ಟಿನಲ್ಲಿ ಶೈಕ್ಷಣಿಕ ಸಾಲದ ಮೇಲಿನ ಸಂಪೂರ್ಣ ಬಡ್ಡಿಗೆ ಸಬ್ಸಿಡಿ ನೀಡುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಕಟಿಸಲಾಗಿದೆ. ದೇಶದ ಐದು ಲಕ್ಷ ವಿದ್ಯಾರ್ಥಿಗಳು ಇದರ ಲಾಭ ಪಡೆಯುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

ಜತೆಗೆ ನೂತನ ಎನ್‌ಐಟಿ, ಐಐಟಿಗಳ ಸ್ಥಾಪನೆಗೆ 2313 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಹೊಸ ಎನ್‌ಐಟಿಗೆಂದೇ ಪ್ರತ್ಯೇಕ 450 ಕೋಟಿ ರೂಪಾಯಿಗಳ ಪ್ರಸ್ತಾಪ ಮಾಡಲಾಗಿದೆ.

ಮಹಿಳೆಯರಿಗಾಗಿ ಸಾಕ್ಷರತಾ ಮಿಷನ್
ಮಹಿಳೆಯರ ಸಬಲೀಕರಣದತ್ತ ಮತ್ತೊಂದು ಹೆಜ್ಜೆಯನ್ನಿಟ್ಟಿರುವ ಸರಕಾರ ಮಹಿಳಾ ಸಾಕ್ಷರತೆಗೆ ರಾಷ್ಟ್ರೀಯ ಮಿಷನ್ ಸ್ಥಾಪಿಸುವ ನಿರ್ಧಾರವನ್ನೂ ತೆಗೆದುಕೊಂಡಿದೆ. ಮುಂದಿನ ಮೂರು ವರ್ಷಗಳಲ್ಲಿ ಅಕ್ಷರಸ್ಥ ಮಹಿಳೆಯರ ಸಂಖ್ಯೆ ದ್ವಿಗುಣವಾಗಬೇಕೆನ್ನುವುದು ಗುರಿ.

ಅದೇ ಹೊತ್ತಿಗೆ ಉದ್ಯೋಗ ಗಿಟ್ಟಿಸಿಕೊಳ್ಳುವಲ್ಲಿ ಎದುರಾಗುತ್ತಿರುವ ತೊಂದರೆಗಳನ್ನು, ಅರ್ಹರು ವಂಚಿತರಾಗುತ್ತಿರುವುದನ್ನು ಗಮನಿಸಿರುವ ಮುಖರ್ಜಿಯವರು ಈ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳಿಗೆ ಮುಂದಾಗಿದ್ದಾರೆ.

ಉದ್ಯೋಗ ಖಾತ್ರಿಗೆ 31100 ಸಾವಿರ ಕೋಟಿ
ಪ್ರತೀ ವರ್ಷ 1.20 ಲಕ್ಷ ಕೋಟಿ ಉದ್ಯೋಗದ ಗುರಿಯನ್ನು ಪ್ರಸಕ್ತ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಲಾಗಿದೆ. ಪೂರಕವಾಗಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ 31,100 ಕೋಟಿಯನ್ನು ಮೀಸಲಿರಿಸಲಾಗಿದೆ.

ಖಾಸಗಿ ಸಹಭಾಗಿತ್ವದಲ್ಲಿ ಆನ್‌ಲೈನ್ ಉದ್ಯೋಗ ವಿನಿಮಯ ಕಚೇರಿಯನ್ನು ಸ್ಥಾಪಿಸುವುದು ಕೂಡ ತಕ್ಷಣದ ಕ್ರಮ. ಅಲ್ಲದೆ ಉದ್ಯೋಗ ವಿನಿಮಯ ಕೇಂದ್ರ, ಕಚೇರಿಗಳನ್ನು ಆಧುನೀಕರಣಗೊಳಿಸುವ ನಿರ್ಧಾರಕ್ಕೂ ಬರಲಾಗಿದೆ.

Share this Story:

Follow Webdunia kannada