Select Your Language

Notifications

webdunia
webdunia
webdunia
webdunia

ಖ್ಯಾತ ಹಿನ್ನೆಲೆ ಗಾಯಕ ಮನ್ನಾ ಡೇಗೆ ದಾದಾಸಾಹೇಬ ಫಾಲ್ಕೆ ಪ್ರಶಸ್ತಿ

ಖ್ಯಾತ ಹಿನ್ನೆಲೆ ಗಾಯಕ ಮನ್ನಾ ಡೇಗೆ ದಾದಾಸಾಹೇಬ ಫಾಲ್ಕೆ ಪ್ರಶಸ್ತಿ
ನವದೆಹಲಿ , ಬುಧವಾರ, 30 ಸೆಪ್ಟಂಬರ್ 2009 (14:33 IST)
IFM
'ಶೋಲೇ' ಚಿತ್ರದ 'ಏ ದೋಸ್ತೀ ಹಮ್ ನಹೀ...'ಯಾಗಲೀ, 'ಪಡೋಸನ್' ಚಿತ್ರದ 'ಏಕ್ ಚತುರ ನಾರ್...' ಹಾಡಾಗಲೀ, ಅಥವಾ ಇಂತಹ ಸಾಲು ಸಾಲು ಕ್ಲಾಸಿಕ್ ಹಿಟ್ ಹಾಡುಗಳನ್ನು ನೀಡಿದ ಮನ್ನಾ ಡೇಯನ್ನು ಯಾರು ಮರೆತಾರು? ಹೌದು. ಭಾರತೀಯ ಶಾಸ್ತ್ರೀಯ ಸಂಗೀತವನ್ನು ಪಾಶ್ಚಾತ್ಯ ಪಾಪ್ ಸಂಗೀತದೊಂದಿಗೆ ಮಿಳಿತಗೊಳಿಸಿ ಸಿನಿಮಾ ಸಂಗೀತಕ್ಕೆ ಬೇರೆಯೇ ಸ್ಪರ್ಶ ನೀಡಿದ ಹಿಂದಿ ಹಾಗೂ ಬಂಗಾಳಿ ಚಿತ್ರರಂಗದ ಅದ್ಭುತ ಕಂಠದ, ಬದುಕಿದ್ದಾಗಲೇ ದಂತಕಥೆಯಾಗಿ ಹೋದ ಗಾಯಕ, ಸಂಗೀತ ನಿರ್ದೇಶಕ ಮನ್ನಾ ಡೇಗೆ ಸಿನಿಮಾ ಜಗತ್ತಿನ ದೇಶದ ಅತ್ಯಂತ ಪ್ರತಿಷ್ಠಿತ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ಸಂದಿದೆ.

ವಾರ್ತಾ ಮತ್ತು ಪ್ರಚಾರ ಇಲಾಖೆ ಮೂಲಗಳ ಪ್ರಕಾರ, 2007ನೇ ಸಾಲಿನ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿಗೆ ಮನ್ನಾ ಡೇ ಆಯ್ಕೆಯಾಗಿದ್ದಾರೆ. ಐದು ಮಂದಿಯನ್ನೊಳಗೊಂಡ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿಗೆ ಮನ್ನಾ ಡೇ ಅವರನ್ನು ಆಯ್ಕೆ ಮಾಡಿದೆ. ಅ.21ರಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಮನ್ನಾ ಡೇ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. 1950ರಿಂದ 1970ರವರೆಗೆ ಅಕ್ಷರಶಃ ಹಿಂದಿ ಚಿತ್ರರಂಗದ ಗಾಯನ ಪ್ರಪಂಚವನ್ನಾಳಿದ ಈ ಮನ್ನಾಡೇ, ಸಾಲು ಸಾಲು ಮಧುರ ಗೀತೆಗಳನ್ನು ಜನಮಾನಸದಲ್ಲಿ ಅನುರಣಗೊಳಿಸಿದ್ದಾರೆ.

ಸುಮಾರು 3,500ಕ್ಕೂ ಗೀತೆಗಳನ್ನು ಹಾಡಿರುವ 90 ವರ್ಷದ ಈ ಗಾಯಕ ಮನ್ನಾ ಡೇ ಮೂಲತಃ ಕೋಲ್ಕತ್ತಾದವರು. ಪ್ರಬೋಧ್ ಚಂದ್ರ ಡೇ ಎಂಬ ಬಾಲಕ ಇಂದು ಗಾಯನ ಪ್ರಪಂಚದಲ್ಲಿ ಮನ್ನಾ ಡೇಯಾಗಿಯೇ ಖ್ಯಾತಿ. ಮಹಮ್ಮದ್ ರಫಿ, ಕಿಶೋರ್ ಕುಮಾರ್, ಮುಖೇಶ್ ಅವರೊಂದಿಗೆ ಹಿಂದಿ ಚಿತ್ರರಂಗದ ಗಾಯನ ಪ್ರಪಂಚವನ್ನೇ ಅಕ್ಷರಶಃ ಆಳಿದ ಮನ್ನಾ ಡೇ ಅವರ ಹಾಡುಗಳು ಇಂದಿಗೂ ಜನಜನಿತ. ಶಾಲಾ ದಿನಗಳಲ್ಲಿ ಬಾಕ್ಸಿಂಗ್ ಪಟುವಾಗಿದ್ದ ಮನ್ನಾ, ತನ್ನ ಮಾವನ ಬಳಿಯಿಂದ ಸಂಗೀತ ಕಲಿಯುತ್ತಿದ್ದರು. ಹಾಗಾಗಿ ಸಂಗೀತದ ಒಲವು ಬಾಲ್ಯದಲ್ಲೇ ಮೊಳಕೆಯೊಡೆಯಿತು.

ಆದರೆ ಅವರ ಸಂಗೀತ ಪ್ರೇಮ, ವೃತ್ತಿ ಬದುಕಾಗಿದ್ದು 1942ರಲ್ಲಿ ಮಾವ ಕೃಷ್ಣಚಂದ್ರ ಡೇ ಜತೆಗೆ ಮುಂಬೈಗೆ ಬಂದಾಗಲೇ. ಸಚಿನ್ ದೇವ್ ಬರ್ಮನ್ ಜತೆಯಲ್ಲಿ ಸಹಾಯಕನಾಗಿ ಸೇರಿದ ಮನ್ನಾ 1943ರಲ್ಲಿ 'ತಮನ್ನಾ' ಚಿತ್ರಕ್ಕಾಗಿ ಹಾಡುವ ಮೂಲಕ ಹಿನ್ನೆಲೆ ಗಾಯಕರಾದರು. ಕೆಲವು ವರ್ಷಗಳ ನಂತರ ತಾನೇ ಸ್ವತಂತ್ರವಾಗಿ ಸಂಗೀತ ನಿರ್ದೇಶಕನಾಗಿ ಗಟ್ಟಿ ಹೆಜ್ಜೆಯೂರಿದರು.

ಕೇರಳದ ಸುಲೋಚನಾರನ್ನು 1953ರಲ್ಲಿ ಮದುವೆಯಾದ ಮನ್ನಾಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಸಾಲು ಸಾಲು ಪ್ರಶಸ್ತಿಗಳನ್ನು ಪಡೆದ ಮನ್ನಾ ಬತ್ತಳಿಕೆಯಲ್ಲಿ ಪದ್ಮಭೂಷಣ, ಪದ್ಮಶ್ರೀ ಸೇರಿದಂತೆ ಹಲವು ರಾಜ್ಯ ಪ್ರಶಸ್ತಿಗಳೂ, ಗೌರವ ಡಾಕ್ಟರೇಟ್‍‌ಗಳೂ ಸೇರಿವೆ. ಈಗ ದಾದಾ ಸಾಹೇಬ ಫಾಲ್ಕೆ ಎಂಬ ಭಾರತೀಯ ಸಿನಿಮಾ ಜಗತ್ತಿನ ಅತ್ಯುನ್ನತ ಪ್ರಶಸ್ತಿಯೂ ಸಂದಿದೆ.

ಹಿಂದಿ ಚಿತ್ರಗಳಿಗೆ ಹಿನ್ನೆಲೆ ಗಾಯಕರಾದ ಮೇಲೆ ಸುಮಾರು 50ವರ್ಷಗಳ ಕಾಲ ಮುಂಬೈನಲ್ಲಿ ನೆಲೆಸಿದ ಇವರು ತೀರಾ ಇತ್ತೀಚಿನ ವರ್ಷಗಳಿಂದ ಬೆಂಗಳೂರಿನ ಕಲ್ಯಾಣ ನಗರದಲ್ಲಿ ಶಾಂತಿಯುತ ಜೀವನ ನಡೆಸುತ್ತಿದ್ದಾರೆ.

Share this Story:

Follow Webdunia kannada