Select Your Language

Notifications

webdunia
webdunia
webdunia
webdunia

‘ಗಾಯ್ ಗೌರಿ’ : ಜಾಬುವಾದ ವಿಚಿತ್ರ ಪದ್ಧತಿ

‘ಗಾಯ್ ಗೌರಿ’ : ಜಾಬುವಾದ ವಿಚಿತ್ರ ಪದ್ಧತಿ
WD
ಭಾರತ ಹಲವು ನಿಗೂಢತೆಗಳನ್ನು ವಿಶೇಷತೆಗಳನ್ನು ಒಡಲಲ್ಲಿಟ್ಟುಕೊಂಡಿರುವ ರಾಷ್ಟ್ರ. ಹಲವಾರು ನಂಬಿಕೆಗಳು, ಸಂಪ್ರದಾಯಗಳು ಇಲ್ಲಿ ಮೇಳೈಸಿವೆ. ಆದರೆ ನಂಬಿಕೆ ಎಂಬುದು ಕುರುಡು ನಂಬಿಕೆಯಾಗಿ ಪರಿವರ್ತನೆಯಾದಾಗ ಮಾತ್ರ ಈ ಸಂಪ್ರದಾಯಗಳು ಮೂಢನಂಬಿಕೆ ಎಂದು ಕರೆಯಲ್ಪಡುತ್ತವೆ. ಈ ಬಾರಿಯ “ನೀವು ನಂಬುವಿರಾ” ಸಂಚಿಕೆಯಲ್ಲಿ ನಾವು ನಿಮ್ಮ ಮುಂದೆ ಮಧ್ಯಪ್ರದೇಶದ ಬುಡಕಟ್ಟು ಜನರ ವಿಚಿತ್ರ ಪದ್ಧತಿಯನ್ನು ಬಿಚ್ಚಿಡುತ್ತಿದ್ದೇವೆ. ಇದು “ಗಾಯ್ ಗೌರಿ”. ಹಿಂದಿಯಲ್ಲಿ ಗಾಯ್ ಅಂದರೆ ಹಸು.

ಭಾರತದಲ್ಲಿ ಹಸುವನ್ನು ಪವಿತ್ರ ಎಂದು ಪರಿಗಣಿಸಿ ಅದಕ್ಕೆ ಮಾತೃ ಸ್ಥಾನ ನೀಡಲಾಗಿದೆ. ಬುಡಕಟ್ಟು ಜನ ಜೀವನವು ನಿಂತಿರುವುದೇ ಈ ಗೋವುಗಳ ಲಾಲನೆ, ಪಾಲನೆಯಿಂದ. ಅವುಗಳೇ ಅವರಿಗೆ ಜೀವನಾಧಾರವೂ ಕೂಡ. ತಾಯಿ ಅಥವಾ ಗೋ ಮಾತೆಗೆ ಗೌರವ ಸಲ್ಲಿಸಿ, ಆಕೆಯ ಆಶೀರ್ವಾದ ಪಡೆಯುವ ನಿಟ್ಟಿನಲ್ಲಿ ಈ ಬುಡಕಟ್ಟು ಜನತೆ ಗಾಯ್ ಗೌರಿ ಹಬ್ಬವನ್ನು ಆಚರಿಸುತ್ತಾರೆ. ಪ್ರತಿವರ್ಷ ದೀಪಾವಳಿ ಮರುದಿನ ಅಂದರೆ ಗೋಪೂಜೆಯಂದು ಇದನ್ನು ಆಚರಿಸಲಾಗುತ್ತದೆ.

webdunia
WD
ಆದಿನ ಹಳ್ಳಿಗರು ತಮ್ಮ ತಮ್ಮಲ್ಲಿದ್ದ ಗೋವುಗಳನ್ನು ಸ್ನಾನ ಮಾಡಿಸಿ ಅವುಗಳನ್ನು ಅಲಂಕರಿಸುತ್ತಾರೆ. ಈ ಹಸುಗಳ ಮಂದೆಯನ್ನು ಆ ಬಳಿಕ ಸ್ಥಳೀಯ ಗೋವರ್ಧನ ಮಂದಿರಕ್ಕೆ ಕರೆತರಲಾಗುತ್ತದೆ. ದೇವರಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಹಳ್ಳಿಗರು ತಮ್ಮ ಹಸುಗಳೊಂದಿಗೆ ದೇವಸ್ಥಾನಕ್ಕೆ ಐದು ಸುತ್ತು ಪರಿಕ್ರಮ ಬರುತ್ತಾರೆ.

ಆದರೆ ವಿಶೇಷ ಎಂದರೆ ಗೋವುಗಳು ಪರಿಕ್ರಮ ಬರುತ್ತಿರುವಾಗ ಅಲ್ಲಿದ್ದ ಜನತೆ ಈ ದಾರಿಯಲ್ಲಿ ಮಲಗಿ ಗೋಮಾತೆಯ ಆಶೀರ್ವಾದ ಪಡೆಯಲು ಯತ್ನಿಸುತ್ತಾರೆ... ಅಂದರೆ ಈ ಗೋವುಗಳು ಮಲಗಿದ್ದವರನ್ನು ತುಳಿದುಕೊಂಡೇ ಮುಂದೆ ಸಾಗುತ್ತವೆ.

webdunia
WD
ತಮ್ಮ ಕುಟುಂಬ ಸುಖ ಸಮೃದ್ಧಿಗಾಗಿ ಈ ಪ್ರದೇಶದ ಬುಡಕಟ್ಟು ಜನತೆ ಈ ಪದ್ಧತಿ ಅನುಸರಿಸುತ್ತಾರೆ. ಪ್ರತಿವರ್ಷವೂ ಹಲವರು ಗಾಯಗೊಂಡಿದ್ದರೂ, ಯಾರಿಗೂ ಉತ್ಸಾಹ ಕುಗ್ಗಿಲ್ಲ. ಈ ಅಪಾಯಕಾರಿ ಸಂಪ್ರದಾಯ ಯಾವುದೇ ಎಗ್ಗಿಲ್ಲದೆ ಮುಂದುವರಿಯುತ್ತದೆ. ಈ ವಿಧಿಯಲ್ಲಿ ಪಾಲ್ಗೊಳ್ಳುವ ಮುನ್ನ ಅವರು ದಿನವಿಡೀ ಉಪವಾಸ ಮಾಡಿರುತ್ತಾರೆ.

ಈ ಸಂದರ್ಭ ಹಲವಾರು ಭಕ್ತರು ಗಾಯಗೊಂಡಿರುವುದನ್ನು ನಾವು ಕಂಡಿದ್ದೇವೆ. ಆದರೆ ಅವರ ಉತ್ಸಾಹಕ್ಕೆ ಯಾವುದೇ ಭಂಗ ಬರುವುದಿಲ್ಲ. ಅವರು ಅದೇ ಭಕ್ತಿಯಿಂದ ಹಸುಗಳ ಹಾದಿಯಲ್ಲಿ ಅಡ್ಡಲಾಗಿ ಮಲಗುತ್ತಾರೆ.

webdunia
WD
ಈ ಹಬ್ಬದಲ್ಲಿ ಭಾಗವಹಿಸಿದ ಜನತೆ ಜೀವನದಲ್ಲಿ ಯಾವುದೇ ಸಂಕಷ್ಟವನ್ನೂ ಸಮರ್ಥವಾಗಿ ಎದುರಿಸುತ್ತಾರೆ, ಕಷ್ಟಗಳೇ ಬರುವುದಿಲ್ಲ ಎಂದು ದೇವಾಲಯದ ಅರ್ಚಕರು ಆತ್ಮವಿಶ್ವಾಸದಿಂದ ನುಡಿಯುತ್ತಾರೆ.

ಗ್ರಾಮಸ್ಥರಿಗೆ ಈ ಪದ್ಧತಿಯ ಮೇಲೆ ಅಪಾರ ನಂಬಿಕೆ. ಗೋವುಗಳ ಪಾದಗಳು ತಮ್ಮ ಶರೀರವನ್ನು ಸ್ಪರ್ಶಿಸಿದಾಗ, ತಮ್ಮ ತಾಯಿಯ ಪಾದಸ್ಪರ್ಶವಾದ ಅನೂಹ್ಯ ಅನುಭವವನ್ನು ಅವರು ಪಡೆದು ಧನ್ಯತಾ ಭಾವ ಹೊಂದುತ್ತಾರೆ. ಈ ಆಶೀರ್ವಾದ ಪಡೆಯುವುದಕ್ಕಾಗಿ ಅವರು ಯಾವುದೇ ನೋವು ಸಹಿಸುವುದಕ್ಕೂ ಹಿಂಜರಿಯುವುದಿಲ್ಲ.

ಇಷ್ಟೇ ಆದರೆ ಪರವಾಗಿರಲಿಲ್ಲ. ಆದರೆ ಇದು ಅಪಾಯಕಾರಿ ರೂಪ ತಳೆಯುವುದು ಯಾವಾಗ ಗೊತ್ತೇ? ಕೆಲವು ಕಿಡಿಗೇಡಿಗಳು ಈ ಹಸುಗಳ ಮಂದೆಯ ನಡುವೆ ಕೊಬ್ಬಿದ ಗೂಳಿಗಳನ್ನೂ ಸೇರಿಸಿರುತ್ತಾರೆ! ಮತ್ತೆ ಕೆಲವರು ಹಸುಗಳು ಯದ್ವಾ ತದ್ವಾ ಓಡುವಂತಾಗಲು ಅವುಗಳ ಬಾಲಕ್ಕೆ ಪಟಾಕಿಯನ್ನೂ ಕಟ್ಟಿ ಸಿಡಿಸುತ್ತಾರೆ! ಇನ್ನೂ ದೊಡ್ಡ ಸಂಗತಿಯೆಂದರೆ, ಇಂಥ ಒಂದು ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳುವವರು ಹೆಚ್ಚಿನವರು ಕಂಠಪೂರ್ತಿ ಮದಿರೆ ಏರಿಸಿರುತ್ತಾರೆ.

ಯಾವುದೇ ಜನಜಂಗುಳಿ, ಕಾಲ್ತುಳಿತ ನಡೆಯುವುದನ್ನು ತಪ್ಪಿಸಲು ಪ್ರತಿವರ್ಷವೂ ಪೊಲೀಸ್ ಪಡೆಗಳನ್ನು ಇಲ್ಲಿ ನಿಯೋಜಿಸಲಾಗುತ್ತದೆ. ಆದರೆ ಜನತೆಯ ನಂಬಿಕೆಯೆದುರು ಅವರು ಕೂಡ ನಿಸ್ಸಹಾಯಕರು.

ಇಂಥ ಪದ್ಧತಿಗಳ ಬಗ್ಗೆ ನಿಮಗೇನನ್ನಿಸುತ್ತದೆ? ಗೋವುಗಳ ಪಾದಸ್ಪರ್ಶದಿಂದ ಜನತೆಗೆ ನಿಜಕ್ಕೂ ಆಶೀರ್ವಾದ ದೊರೆಯುತ್ತದೆಯೇ ಅಥವಾ ಇದು ಕೇವಲ ಮೂಢ ನಂಬಿಕೆಯೇ? ನಮಗೆ ಬರೆದು ತಿಳಿಸಿ.

Share this Story:

Follow Webdunia kannada