Select Your Language

Notifications

webdunia
webdunia
webdunia
webdunia

ರಾವಣನನ್ನು ಆರಾಧಿಸುವ ಹಳ್ಳಿಯಿದು

ರಾವಣನನ್ನು ಆರಾಧಿಸುವ ಹಳ್ಳಿಯಿದು
ಅನಿರುದ್ಧ ಜೋಷಿ ‘ಶತಾಯು’
ಈ ಬಾರಿಯ ‘ನೀವು ನಂಬುವಿರಾ’ ಸರಣಿಯಲ್ಲಿ, ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಚಿಖಾಲಿ ಎಂಬಲ್ಲಿನ ವಿಚಿತ್ರ ಆಚರಣೆಯ ಪರಿಚಯ ಮಾಡಲಿದ್ದೇವೆ. ಇಲ್ಲಿನ ಜನರ ನಂಬಿಕೆಯಂತೆ ರಾವಣನಿಗೆ ಅವಮಾನ ಮಾಡುವುದೆಂದರೆ ಅದು ಇಡೀ ಹಳ್ಳಿಗೇ ಅಶುಭ ಶಕುನವಂತೆ.

ಚೈತ್ರ ನವರಾತ್ರಿಯ ಸಂಪ್ರದಾಯದ ಪ್ರಕಾರ, 10ನೇ ದಿನವಾದ ದಶಮಿಯಂದು ಹಳ್ಳಿಗರು ಇಲ್ಲಿ ಪೂಜಿಸುವುದು ರಾವಣನನ್ನು. ಇದೇ ಅವಧಿಯಲ್ಲಿ ರಾವಣನ ಗೌರವಾರ್ಥ ಜಾತ್ರೆಯೊಂದೂ ನಡೆಯುತ್ತದೆ. ಆ ದಿನ ಜನರು ರಾಮ-ರಾವಣ ಯುದ್ಧದ ಪ್ರಹಸನವನ್ನೂ ಮಾಡುತ್ತಾರೆ. ಈ ಸಂದರ್ಭ ಭಾರೀ ಸಂಖ್ಯೆಯಲ್ಲಿ ಜನರು ನೆರೆಯುತ್ತಾರೆ ಇಲ್ಲಿ.

ಇಲ್ಲಿರುವ ಮಂದಿರದ ಅರ್ಚಕ ಬಾಬು ಭಾಯಿ ರಾವಣ್. ಯಾವಾಗ ಅವರು ಈ ದೇವಸ್ಥಾನದ ಪೂಜೆಗೆ ಶುರುವಿಟ್ಟುಕೊಂಡರೋ ಅಂದಿನಿಂದ ಅವರ ಹೆಸರಿನೊಂದಿಗೆ ‘ರಾವಣ’ ಎಂಬ ಅಡ್ಡನಾಮವೂ ಸೇರಿಕೊಂಡು ಜನಜನಿತವಾಯಿತು. ಹಳ್ಳಿಗೆ ಯಾವುದೇ ಸಮಸ್ಯೆ ಎದುರಾದಾಗ, ಜನರು ಆತನ ಬಳಿ ಬರುತ್ತಾರೆ. ಅವರು ಬೇಡಿಕೆ ಈಡೇರುವವರೆಗೂ ರಾವಣನ ವಿಗ್ರಹದೆದುರು ಉಪವಾಸ ವ್ರತ ಮಾಡುತ್ತಾರೆ. ಈ ಗ್ರಾಮ ಮತ್ತು ಸಮೀಪದ ಹಳ್ಳಿಗಳು ನೀರಿನ ತೀವ್ರ ಕ್ಷಾಮ ಎದುರಿಸಿದ ಸಂದರ್ಭವೊಂದರಲ್ಲಿ, ಅವರು ರಾವಣ ವಿಗ್ರಹದೆದುರು ಕುಳಿತ ಅವರು ತಮ್ಮ ಪ್ರಾರ್ಥನೆ ಪ್ರಾರಂಭಿಸಿದರು. ಪವಾಡಸದೃಶವೋ ಎಂಬಂತೆ ಮೂರೇ ದಿನಗಳಲ್ಲಿ ಆ ಪ್ರದೇಶದಲ್ಲಿ ಭರ್ಜರಿ ಮಳೆ ಸುರಿಯಿತು.

ಈ ಪ್ರದೇಶದಲ್ಲಿ ರಾವಣನನ್ನು ಮಾತ್ರ ಪೂಜಿಸಲಾಗುತ್ತದೆ. ಹಲವಾರು ವರ್ಷಗಳಿಂದ ಈ ಸಂಪ್ರದಾಯ ಚಾಲ್ತಿಯಲ್ಲಿದೆ ಎನ್ನುತ್ತಾರೆ ಕೈಲಾಸ ನಾರಾಯಣ ವ್ಯಾಸ. ಅದೊಮ್ಮೆ ಅದ್ಯಾವುದೋ ಕಾರಣಕ್ಕೆ ಚೈತ್ರ ದಶಮಿಯಂದು ರಾವಣನ ಉತ್ಸವವನ್ನು ನಡೆಸಲಾಗಲಿಲ್ಲ. ಆ ಸಂದರ್ಭದಲ್ಲಿ ಇಡೀ ಹಳ್ಳಿಗೇ ಬೆಂಕಿ ಬಿದ್ದು, ಆ ಗ್ರಾಮದ ಒಂದು ಭಾಗವನ್ನಷ್ಟೇ ಉಳಿಸಿಕೊಳ್ಳಲು ಗ್ರಾಮಸ್ಥರಿಗೆ ಸಾಧ್ಯವಾಯಿತಂತೆ.
WDWD


ಸ್ಥಳೀಯರಾದ ಪದ್ಮಾ ಜೈನ್ ಕೂಡಾ ಈ ನಂಬಿಕೆಯನ್ನು ಬೆಂಬಲಿಸುತ್ತಾರೆ. ನವರಾತ್ರಿ ಕಳೆದ ದಶಮಿ ದಿನದಂದು ರಾವಣನನ್ನು ಪೂಜಿಸದೇ ಇದ್ದ ಕಾರಣ ಹಳ್ಳಿಗೆ ಒಂದಲ್ಲ, ಎರಡು ಬಾರಿ ಬೆಂಕಿ ಹತ್ತಿಕೊಂಡಿತಂತೆ. ಹಳ್ಳಿಗೆ ಬೆಂಕಿ ಹತ್ತಿಕೊಂಡಿದ್ದನ್ನು ವೀಡಿಯೋದಲ್ಲಿ ಸೆರೆಹಿಡಿಯುವ ಪ್ರಯತ್ನ ಮಾಡಲಾಗಿತ್ತಾದರೂ, ಭಾರೀ ಬಿರುಗಾಳಿಯಿಂದಾಗಿ ಅದು ಸಾಧ್ಯವಾಗಲಿಲ್ಲವಂತೆ.

ಭಾರತದಲ್ಲಿ ಮತ್ತು ನೆರೆಯ ಶ್ರೀಲಂಕಾದಲ್ಲಿ ರಾವಣನನ್ನು ಪೂಜಿಸುವುದು ಹೊಸತೇನಲ್ಲ. ರಾವಣೇಶ್ವರನಿಗೆ ಸಾಕಷ್ಟು ಮಂದಿರಗಳೂ ಇವೆ. ಆದರೆ ರಾವಣನ ಪೂಜೆ ಮಾಡದಿರುವುದಕ್ಕಾಗಿ ಇಡೀ ಹಳ್ಳಿಗೆ ಹಳ್ಳಿಗೇ ಭಸ್ಮವಾಗುವುದು ಮಾತ್ರ ತೀರಾ ಅಪರೂಪ ಮತ್ತು ಚರ್ಚೆ ಮಾಡಬೇಕಾದ ಸಂಗತಿ.

ಇದು ಮೂಢ ನಂಬಿಕೆಯೋ, ಕಾಕತಾಳೀಯವೋ? ನಿಮಗೇನು ಅನಿಸುತ್ತದೆ? ನಿಮ್ಮ ಅಭಿಪ್ರಾಯ ಬರೆದು ತಿಳಿಸಿ.

Share this Story:

Follow Webdunia kannada